‘ಪುಟ್ಟನ ಮಕ್ಕಳು’ ಧಾರಾವಾಹಿಂದ ಹೊರಬಂದ ಸಂಜನಾ, ಸ್ನೇಹಾ ಪಾತ್ರ ಅಂತ್ಯ
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಲ್ಲಿ ಸ್ನೇಹಾ ನಿಧನ ಹೊಂದಿದ್ದಾಳೆ. ಅಸಲಿಗೆ ಸ್ನೇಹಾ ಪಾತ್ರ ನಿರ್ವಹಿಸುತ್ತಿದ್ದ ನಟಿ ಸಂಜನಾ ಬುರ್ಲಿ ಧಾರಾವಾಹಿಯಿಂದ ಹೊರನಡೆದಿದ್ದಾರೆ. ತಮ್ಮ ಈ ನಿರ್ಣಯದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಸಂಜನಾ ಹಂಚಿಕೊಂಡಿದ್ದಾರೆ.
ಉಮಾಶ್ರೀ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವ ‘ಪುಟ್ಟಕ್ಕನ ಮಕ್ಕಳು’ ಕನ್ನಡದ ಅತ್ಯಂತ ಜನಪ್ರಿಯ ಧಾರಾವಾಹಿ. ಕಳೆದ ಮೂರು ವರ್ಷಗಳಿಂದಲೂ ಈ ಧಾರಾವಾಹಿ ಪ್ರಸಾರವಾಗುತ್ತಿದ್ದು, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯ ಎಲ್ಲ ಪಾತ್ರಗಳು ಕನ್ನಡ ಪ್ರೇಕ್ಷಕರಿಗೆ ಅತ್ಯಂತ ಆಪ್ತವಾಗಿವೆ. ಅದರಲ್ಲಿಯೂ ಪುಟ್ಟಕ್ಕನ ಮಕ್ಕಳಾದ ಸ್ನೇಹಾ, ಸಹನಾ ಮತ್ತು ಸುಮಾ ಪಾತ್ರಗಳಂತೂ ಪ್ರೇಕ್ಷಕರ ಮೆಚ್ಚಿನ ಪಾತ್ರಗಳಾಗಿದ್ದವು. ಅದರಲ್ಲಿಯೂ ಸ್ನೇಹಾ ಪಾತ್ರ ಧಾರಾವಾಹಿಯ ಅತ್ಯಂತ ಪ್ರಮುಖ ಪಾತ್ರವಾಗಿತ್ತು. ಈ ಪಾತ್ರವನ್ನು ನಿರ್ವಹಿಸುತ್ತಿದ್ದ ಸಂಜನಾ ಬುರ್ಲಿ, ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಯಿಂದ ಹೊರ ನಡೆದಿದ್ದಾರೆ.
‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ಕತೆಯಲ್ಲಿ ಸ್ನೇಹಾಳ ಪಾತ್ರ ಅಪಘಾತಕ್ಕೆ ಈಡಾಗಿದೆ ನಿಧನ ಹೊಂದಿದೆ. ನಿನ್ನೆ (ಅಕ್ಟೋಬರ್ 26) ಪ್ರಸಾರವಾದ ಎಪಿಸೋಡ್ನಲ್ಲಿ ಸ್ನೇಹಾಳ ಅಂತ್ಯಕ್ರಿಯೆಯನ್ನು ಸಹ ಮಾಡಲಾಗಿದೆ. ಅದೇ ಧಾರಾವಾಹಿಯ ಸಹನಾ ಪಾತ್ರವೂ ಸಹ ನಿಧನ ಹೊಂದಿದೆ ಎಂದು ತೋರಿಸಲಾಗಿತ್ತು, ಆದರೆ ಆ ಬಳಿಕ ಸಹನಾ ಜೀವಂತವಾಗಿದ್ದಾಳೆ ಎಂದು ತೋರಿಸಲಾಯ್ತು. ಆದರೆ ಸ್ನೇಹಾ ಪಾತ್ರದಲ್ಲಿ ಹಾಗೆ ಆಗಲು ಸಾಧ್ಯವಿಲ್ಲ. ಏಕೆಂದರೆ ಸ್ನೇಹಾ ಪಾತ್ರ ನಿರ್ವಹಿಸುತ್ತಿದ್ದ ಸಂಜನಾ ಬುರ್ಲಿ ಧಾರಾವಾಹಿಯಿಂದ ಹೊರನಡೆದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದೀರ್ಘ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ.
‘ಕಳೆದ ಮೂರು ವರ್ಷಗಳಿಂದ ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿ ನನ್ನ ಜೀವನದ ಭಾಗವಾಗಿತ್ತು. ಆದರೆ ಎಲ್ಲ ಒಳ್ಳೆಯ ವಿಷಯಗಳಿಗೂ ಕೊನೆ ಎಂಬುದು ಇರುತ್ತದೆ, ಹಾಗೆಯೇ ನನ್ನ ಈ ಜರ್ನಿಯೂ ಕೊನೆ ಆಗಿದೆ. ಸ್ನೇಹಾ ಪಾತ್ರವನ್ನು ನಿರ್ವಹಿಸುವುದು ಕಳೆದ ಮೂರು ವರ್ಷಗಳಿಂದಲೂ ನನ್ನ ವೃತ್ತಿ ಜೀವನದ ಭಾಗವಾಗಿತ್ತು. ಸ್ನೇಹಾ ಪಾತ್ರದಲ್ಲಿ ನಟಿಸಿದ್ದಕ್ಕೆ ನನಗೆ ಬಹಳ ಹೆಮ್ಮೆ ಇದೆ. ಆ ಪಾತ್ರ ನನಗೆ ನೀಡಿದ್ದಕ್ಕೆ ನಾನು ಇಡೀ ವಿಶ್ವ, ಧಾರಾವಾಹಿ ತಂಡ ಹಾಗೂ ಜೀ ಕನ್ನಡ ಚಾನೆಲ್ಗೆ ಧನ್ಯವಾದ ಹೇಳುತ್ತೇನೆ’ ಎಂದಿದ್ದಾರೆ ಸ್ನೇಹಾ.
ಇದನ್ನೂ ಓದಿ:‘ಪುಟ್ಟಕ್ಕನ ಮಕ್ಕಳು’: ಅಪಘಾತದಲ್ಲಿ ಸ್ನೇಹಾ ಮರಣ; ಕೊನೆ ಆಯಿತು ಸಂಜನಾ ಬುರ್ಲಿ ಪಾತ್ರ
ಮಹತ್ವಾಕಾಂಕ್ಷಿ, ಆತ್ಮವಿಶ್ವಾಸಿ ಮತ್ತು ಬೆಂಕಿಯಂಥಹಾ ವ್ಯಕ್ತಿತ್ವದ ಸ್ನೇಹಾ ಪಾತ್ರಕ್ಕೆ ನಾನು ವಿದಾಯ ಹೇಳಲೇ ಬೇಕಿದೆ. ಸ್ನೇಹಾ ಪಾತ್ರದಿಂದ ಹೊರಗೆ ಬರಬೇಕಾದ ಸಮಯ ಬಂದಾಗಿದೆ. ಭಾರವಾದ ಹೃದಯದಿಂದ ನಾನು ‘ಪುಟ್ಟಕ್ಕನ ಮಕ್ಕಳು’ ಧಾರಾವಾಹಿಗೆ ವಿದಾಯ ಹೇಳುತ್ತಿದ್ದೇನೆ. ನಿರ್ಲಕ್ಷ್ಯ ಮಾಡಲಾಗದ ಕೆಲವು ವೈಯಕ್ತಿಕ ಕಾರಣಿಗಳಿಗಾಗಿ ಹಾಗೂ ಬಂದು ನಿಂತಿರುವ ಕೆಲವು ಸವಾಲುಗಳನ್ನು ಎದುರಿಸಲು ನಾನು ಈ ಧಾರಾವಾಹಿಂದ ಹೊರಗೆ ಬರಲೇ ಬೇಕಾಗಿದೆ’ ಎಂದಿದ್ದಾರೆ.
‘ಧಾರಾವಾಹಿಯ ಕತೆಯಲ್ಲಿ ನನ್ನ ಪಾತ್ರ ಸಾಯುವುದನ್ನು ನೋಡಿ ಹಲವರು ಬೇಸರ ವ್ಯಕ್ತಪಡಿಸಿದ್ದೀರಿ. ದುಃಖಿತರಾಗಿದ್ದೀರಿ, ನಾನು ಪಾತ್ರಕ್ಕೆ ಹಾಕಿದ ಶ್ರಮಕ್ಕೆ ಪರ್ಯಾಯ ಇಲ್ಲವೆಂಬುದಕ್ಕೆ ಅದು ಸಾಕ್ಷಿ. ಆದರೆ ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳೋಣ. ಮುಂದಿನ ದಿನಗಳಲ್ಲಿ ಅಭಿಮಾನಿಗಳನ್ನು ಭಿನ್ನ ಪಾತ್ರದ ಮೂಲಕ ಭೇಟಿ ಆಗುವ ವಿಶ್ವಾಸ ನನಗೆ ಇದೆ. ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದ ಜನ ನನಗೆ ನೀಡಿರುವ ಪ್ರೀತಿ, ಪ್ರೋತ್ಸಾಹಕ್ಕೆ ನಾನು ಚಿರಋಣಿ, ನನ್ನ ಮುಂದಿನ ಪ್ರಯತ್ನಗಳಿಗೂ ಇದೇ ರೀತಿಯ ಪ್ರೀತಿ, ಗೌರವ ಸಿಗುತ್ತದೆ ಎಂಬ ವಿಶ್ವಾಸ ನನಗೆ ಇದೆ’ ಎಂದಿದ್ದಾರೆ ಸಂಜನಾ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ