
‘ಬಿಗ್ ಬಾಸ್ ಕನ್ನಡ ಸೀಸನ್ 12’ ಶೋ ತುಂಬಾ ಜನಪ್ರಿಯತೆ ಪಡೆಯಿತು. ಈ ಶೋನಲ್ಲಿ ಸ್ಪರ್ಧಿಸಿದ್ದ ಡಾಗ್ ಬ್ರೀಡರ್ ಸತೀಶ್ ಅವರು ಗಿಲ್ಲಿ ನಟನ ಅಭಿಮಾನಿಗಳ ಕೆಂಗಣ್ಣಿಗೆ ಗುರಿ ಆಗಿದ್ದರು. ಅವರ ವಿರುದ್ಧ ಗಿಲ್ಲಿ (Gilli Nata) ಅಭಿಮಾನಿಗಳು ಗರಂ ಆಗಿದ್ದರು. ಕೆಲವರು ಸತೀಶ್ ಅವರಿಗೆ ಕೊಲೆ ಬೆದರಿಕೆ ಹಾಕುವ ಮಟ್ಟಕ್ಕೆ ಹೋಗಿದ್ದರು. ಅಂಥವರ ವಿರುದ್ಧ ಸತೀಶ್ ಅವರು ಕಾನೂನು ಕ್ರಮ ತೆಗೆದುಕೊಂಡಿದ್ದಾರೆ. ಹಲವರ ವಿರುದ್ಧ ದೂರು ನೀಡಿದ್ದಾರೆ. ಆ ಪೈಕಿ ಒಂದಷ್ಟು ಜನರನ್ನು ಬಂಧಿಸಲಾಗಿದೆ. ಈ ಕುರಿತು ಸ್ವತಃ ಸತೀಶ್ ಮಾಹಿತಿ ನೀಡಿದ್ದಾರೆ.
‘ಎಷ್ಟೇ ಟ್ರೋಲ್ ಮಾಡಿದರೂ ನನಗೆ ಏನೂ ಅನಿಸಲ್ಲ. ಆದರೆ ತೀರಾ ಪರ್ಸನಲ್ ಆಗಿ ಕೊಲೆ ಬೆದರಿಕೆ ಹಾಕಿದವರ ಮೇಲೆ ಕೇಸ್ ಹಾಕಿದ್ದೇನೆ. 80 ಜನರ ಮೇಲೆ ಕೇಸ್ ಹಾಕಿದ್ದೇನೆ. ಅದರಲ್ಲಿ 8 ಜನರು ಅರೆಸ್ಟ್ ಆಗಿದ್ದಾರೆ. ಯಲಹಂಕ ಗುರು ಎಂಬುವವರು ಎ1. ಅವರ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಅವರು ಸ್ಟೇಷನ್ ಬೇಲ್ ಪಡೆದುಕೊಂಡಿದ್ದಾರೆ’ ಎಂದಿದ್ದಾರೆ ಸತೀಶ್.
‘ಅವರನ್ನು ಕೋರ್ಟ್ಗೆ ಎಳೆಯುತ್ತಿದ್ದೇನೆ. ಅಲ್ಲದೇ, ಅವರ ಮೇಲೆ 1 ಕೋಟಿ ರೂಪಾಯಿಗೆ ಮಾನನಷ್ಟ ಮೊಕದ್ದಮೆ ಹಾಕುತ್ತೇನೆ. ವೈಟ್ಫೀಲ್ಡ್ ಕಡೆಯ ಯುವಸಾಮ್ರಾಟ್ ಎಂಬುವವರ ಕೂಡ ಅರೆಸ್ಟ್ ಆಗಿದ್ದಾರೆ. ಮಂಡ್ಯದಲ್ಲಿ ಇರುವ ಇನ್ನೊಬ್ಬರು ಕೊಲೆ ಬೆದರಿಕೆ ಹಾಕಿದ್ದಾರೆ. ಅವರ ಮೇಲೆ ಪ್ರತ್ಯೇಕ ಕೇಸ್ ಹಾಕುತ್ತೇನೆ’ ಎಂದು ಸತೀಶ್ ಹೇಳಿದ್ದಾರೆ.
‘ಬಿಗ್ ಬಾಸ್ ಕುರಿತು ನನ್ನ ಅನಿಸಿಕೆ ಹೇಳಿದ್ದೆ. ಅಶ್ವಿನಿ ಗೌಡ, ರಕ್ಷಿತಾ ಶೆಟ್ಟಿಗೆ ವೋಟ್ ಹಾಕಿ, ಸರಿಯಾಗಿ ಆಡುವವರನ್ನು ವಿನ್ ಮಾಡಿ ಅಂತ ನಾನು ಹೇಳಿದ್ದೆ. ಅದಕ್ಕಾಗಿ ಗಿಲ್ಲಿ ಫ್ಯಾನ್ಸ್ ಕೊಲೆ ಬೆದರಿಕೆ ಹಾಕಿದ್ದರು. ಚಾಮರಾಜಪೇಟೆ ಠಾಣೆಯಲ್ಲಿ ದೂರು ಕೊಟ್ಟಿದ್ದೆ. ಅದಕ್ಕಾಗಿ 8 ಜನರನ್ನು ಅರೆಸ್ಟ್ ಮಾಡಲಾಗಿದೆ. ಇನ್ನೂ ಯಾರಾದರೂ ಮಾತನಾಡಿದರೆ ಅವರ ಮೇಲೂ ಕೇಸ್ ಹಾಕುತ್ತೇನೆ’ ಎಂದಿದ್ದಾರೆ ಸತೀಶ್.
ಇದನ್ನೂ ಓದಿ: ಗಿಲ್ಲಿ ಮೇಲಿನ ಅಭಿಮಾನದಿಂದ ವೇದಿಕೆಗೆ ನುಗ್ಗಿದ ಫ್ಯಾನ್ಸ್; ವಿಡಿಯೋ ನೋಡಿ
‘ಎಲ್ಲರಿಗೂ ನಾನು ಸರ್ ಅಂತ ಗೌರವ ಕೊಟ್ಟು ಮಾತನಾಡುತ್ತೇನೆ. ಅರೆಸ್ಟ್ ಆಗಿರುವ ವ್ಯಕ್ತಿಯನ್ನೂ ಹಾಗೆಯೇ ಮಾತನಾಡಿಸಿದ್ದೇನೆ. ಸೋಶಿಯಲ್ ಮೀಡಿಯಾದ ಹೆಸರನ್ನೇ ಹಾಳು ಮಾಡಿದ್ದಾರೆ. ಯಾರಿಗೋಸ್ಕರವೋ ಅವರು ಅನುಭವಿಸುವಂತೆ ಆಗಿದೆ. ಈಗ ಅವರ ಪರವಾಗಿ ಯಾರೂ ಬರಲ್ಲ’ ಎಂದು ಕ್ಯಾಡಬಾಮ್ಸ್ ಸತೀಶ್ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.