AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೊದಲ ಆಟದಲ್ಲೇ ಭವ್ಯಾ ಎದುರು ಸೋತು ಅಳುತ್ತಾ ಕುಳಿತ ಶೋಭಾ ಶೆಟ್ಟಿ

ದೊಡ್ಡದಾಗಿ ಆರ್ಭಟಿಸುತ್ತಾ ಬಿಗ್ ಬಾಸ್ ಮನೆಗೆ ಬಂದ ಶೋಭಾ ಶೆಟ್ಟಿ ಅವರು ಆಟದಲ್ಲಿ ಎಡವಿದ್ದಾರೆ. ಮಾತನಾಡಿದ್ದಕ್ಕೆ ತಕ್ಕಂತೆ ಅವರು ಆಟದಲ್ಲಿ ಅಬ್ಬರಿಸಿಲ್ಲ. ಭವ್ಯಾ ಎದುರು ಶೋಭಾ ಶೆಟ್ಟಿ ಸೋತಿದ್ದಾರೆ. ಸೋತ ಬಳಿಕ ಅವರು ಅಳುತ್ತಾ ಕುಳಿತಿದ್ದಾರೆ. ಬಿಗ್ ಬಾಸ್ ಮನೆಗೆ ವೈಲ್ಡ್​ ಕಾರ್ಡ್​ ಮೂಲಕ ಬಂದ ಬಳಿಕ ಮೊದಲ ಆಟದಲ್ಲೇ ಶೋಭಾ ಶೆಟ್ಟಿಗೆ ಸೋಲಾಗಿದೆ.

ಮೊದಲ ಆಟದಲ್ಲೇ ಭವ್ಯಾ ಎದುರು ಸೋತು ಅಳುತ್ತಾ ಕುಳಿತ ಶೋಭಾ ಶೆಟ್ಟಿ
ಶೋಭಾ ಶೆಟ್ಟಿ
ಮದನ್​ ಕುಮಾರ್​
|

Updated on: Nov 20, 2024 | 10:50 PM

Share

‘ಬಿಗ್ ಬಾಸ್ ಕನ್ನಡ ಸೀಸನ್​ 11’ ಆಟದಲ್ಲಿ 52 ದಿನಗಳು ಕಳೆದಿವೆ. 50ನೇ ದಿನಕ್ಕೆ ಇಬ್ಬರು ವೈಲ್ಡ್ ಕಾರ್ಡ್​ ಮೂಲಕ ಎಂಟ್ರಿ ನೀಡಿದರು. ಈಗಾಗಲೇ ಬೇರೆ ಬೇರೆ ರಿಯಾಲಿಟಿ ಶೋಗಳಲ್ಲಿ ಅನುಭವ ಪಡೆದಿರುವ ರಜತ್ ಮತ್ತು ಶೋಭಾ ಶೆಟ್ಟಿ ಅವರು ಈಗ ‘ಬಿಗ್ ಬಾಸ್ ಕನ್ನಡ ಸೀಸನ್ 11’ ಶೋಗೆ ಬಂದಿದ್ದಾರೆ. ದೊಡ್ಮನೆಗೆ ಬರುವಾಗ ಶೋಭಾ ಶೆಟ್ಟಿ ಅವರು ಭಾರಿ ಮಾತುಗಳನ್ನು ಆಡಿದ್ದರು. ಜೋರು ಧ್ವನಿಯಲ್ಲಿ ಕಿರುಚಾಡುತ್ತಾ ಎಲ್ಲರಿಗೂ ನಡುಕ ಹುಟ್ಟಿಸಲು ಪ್ರಯತ್ನಿಸಿದ್ದರು. ಆದರೆ ಆಟದಲ್ಲಿ ಅವರಿಗೆ ಹಿನ್ನಡೆ ಆಗಿದೆ. ತಮಗೆ ಸಿಕ್ಕ ಮೊದಲ ಆಟದಲ್ಲಿ ಅವರು ಸೋಲು ಕಂಡಿದ್ದಾರೆ.

ಎರಡು ತಂಡಗಳಾಗಿ ಈ ಆಟ ಆಡಬೇಕಿತ್ತು. ಈ ಟಾಸ್ಕ್​ನಲ್ಲಿ ಒಂದು ತಂಡವನ್ನು ಭವ್ಯಾ ಮುನ್ನಡೆಸಿದರೆ, ಇನ್ನೊಂದು ತಂಡವನ್ನು ಶೋಭಾ ಶೆಟ್ಟಿ ಮುನ್ನಡೆಸಿದರು. ಆಟದ ಮಧ್ಯದಲ್ಲಿ ಶೋಭಾ ಶೆಟ್ಟಿ ಅವರು ಎಡವಿ ಬಿದ್ದರು. ಎತ್ತರದಿಂದ ಬಿದ್ದರೂ ಕೂಡ ಅವರು ಆಟ ನಿಲ್ಲಿಸಲಿಲ್ಲ. ದೇವರ ಸ್ಮರಣೆ ಮಾಡುತ್ತಾ ಆಟ ಮುಂದುವರಿಸಿದರು. ಹಾಗಿದ್ದರೂ ಕೂಡ ಅವರಿಗೆ ಗೆಲವು ಸಿಗಲಿಲ್ಲ.

ಅಂತಿಮವಾಗಿ ಭವ್ಯಾ ಅವರ ತಂಡ ಈ ಟಾಸ್ಕ್​ನಲ್ಲಿ ಗೆಲುವು ಸಾಧಿಸಿತು. ಶೋಭಾ ಶೆಟ್ಟಿ ಅವರು ಸೋಲು ಕಂಡರು. ಸೋತ ಬಳಿಕ ಶೋಭಾ ಶೆಟ್ಟಿ ಅವರಿಗೆ ಸಿಕ್ಕಾಪಟ್ಟೆ ಬೇಸರ ಆಯಿತು. ಒಬ್ಬರೇ ಕುಳಿತು ಅಳಲು ಆರಂಭಿಸಿದರು. ಆಗ ಉಗ್ರಂ ಮಂಜು ಮುಂತಾದವರು ಬಂದು ಸಮಾಧಾನ ಮಾಡಿದರು. ಜೋರು ಜೋರಾಗಿ ಜಗಳ ಮಾಡುತ್ತಿದ್ದ ಶೋಭಾ ಶೆಟ್ಟಿ ಅವರು ಕೇವಲ ಒಂದು ಟಾಸ್ಕ್ ಸೋತಿದ್ದಕ್ಕೆ ಕಣ್ಣೀರು ಹಾಕಿದಾಗ ಎಲ್ಲರೂ ಅಚ್ಚರಿ ಆಯಿತು.

ಇದನ್ನೂ ಓದಿ: ಬಿಗ್ ಬಾಸ್ ಮನೆಗೆ ಕಾಲಿಡುತ್ತಲೇ ವಿಶೇಷ ಅಧಿಕಾರ ಪಡೆದ ರಜತ್, ಶೋಭಾ ಶೆಟ್ಟಿ

ಸೋತಿದ್ದಾರೆ ಎಂದಮಾತ್ರಕ್ಕೆ ಶೋಭಾ ಶೆಟ್ಟಿ ಅವರ ಆಟ ಕಳಪೆ ಆಗಿತ್ತು ಎಂದರ್ಥವಲ್ಲ. ಅವರು ಸೋತಿರುವುದು ಸಣ್ಣ ಅಂತರದಲ್ಲಿ. ಆಟದ ನಡುವೆ ಅಡೆತಡೆ ಬಂದರೂ ಕೂಡ ಭವ್ಯಾ ಅವರ ಸರಿಸಮನಾಗಿ ಗೇಮ್ ಫಿನಿಶ್ ಮಾಡಲು ಶೋಭಾ ಶೆಟ್ಟಿ ಪ್ರಯತ್ನಿಸಿದರು. ಅದಕ್ಕಾಗಿ ಎಲ್ಲರೂ ಅವರಿಗೆ ಮೆಚ್ಚುಗೆ ಸೂಚಿಸಿದರು. ಎದುರಾಳಿ ತಂಡದಲ್ಲಿ ಇದ್ದ ಭವ್ಯಾ ಕೂಡ ಶೋಭಾಗೆ ಭೇಷ್​ ಎಂದರು. ಮುಂದಿನ ದಿನಗಳಲ್ಲಿ ಶೋಭಾ ಅವರ ಆಟ ಯಾವ ರೀತಿ ಇರಲಿದೆ ಎಂಬುದನ್ನು ಕಾದುನೋಡಬೇಕು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.