ಖ್ಯಾತ ನಟಿ ಶ್ರುತಿ ಹಾಸನ್ ಹೆಗಲೇರಲಿದೆ ಬಿಗ್ ಬಾಸ್ ನಿರೂಪಣೆ?
ಕಳೆದ ನಾಲ್ಕು ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಮಲ್ ಹಾಸನ್ ಅವರು ಈ ಸೀಸನ್ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದರು. ಸಿನಿಮಾ ಕೆಲಸ, ಪ್ರವಾಸದ ಮಧ್ಯೆಯೂ ಅವರು ‘ಬಿಗ್ ಬಾಸ್’ ಶೂಟಿಂಗ್ ತಪ್ಪಿಸುತ್ತಿರಲಿಲ್ಲ.
ನಟ ಕಮಲ್ ಹಾಸನ್ (Kamal Hassan) ಅವರಿಗೆ ಕೊವಿಡ್ (Covid 19) ಸೋಂಕು ತಗುಲಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ. ಅವರಿಗೆ ಅನಾರೋಗ್ಯ ಆಗಿರುವುದರಿಂದ ‘ವಿಕ್ರಮ್’ ಸಿನಿಮಾ ಕೆಲಸಗಳು ವಿಳಂಬವಾಗಿದೆ. ಇದರ ಜತೆಗೆ ‘ತಮಿಳು ಬಿಗ್ ಬಾಸ್ 5’ ನಿರೂಪಣೆ ಯಾರು ಮಾಡಲಿದ್ದಾರೆ ಎನ್ನುವ ಪ್ರಶ್ನೆಯೂ ಮೂಡಿದೆ. ಈ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ವಾಹಿನಿ ಅವರು ಈ ಬಗ್ಗೆ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗುತ್ತಿದೆ.
ಕಳೆದ ನಾಲ್ಕು ಸೀಸನ್ಗಳನ್ನು ಯಶಸ್ವಿಯಾಗಿ ನಡೆಸಿಕೊಟ್ಟ ಕಮಲ್ ಹಾಸನ್ ಅವರು ಈ ಸೀಸನ್ಅನ್ನು ಅದ್ಭುತವಾಗಿ ನಡೆಸಿಕೊಡುತ್ತಿದ್ದರು. ಸಿನಿಮಾ ಕೆಲಸ, ಪ್ರವಾಸದ ಮಧ್ಯೆಯೂ ಅವರು ‘ಬಿಗ್ ಬಾಸ್’ ಶೂಟಿಂಗ್ ತಪ್ಪಿಸುತ್ತಿರಲಿಲ್ಲ. ಇದು ನಡೆದುಕೊಂಡು ಬಂದೇ ಇತ್ತು. ಆದರೆ, ಈ ಬಾರಿ ಕಮಲ್ ಹಾಸನ್ಗೆ ಕೊವಿಡ್ ಕಾಣಿಸಿಕೊಂಡಿದೆ. ಇದರಿಂದ ಚೇತರಿಸಿಕೊಳ್ಳೋಕೆ ಎರಡು ವಾರವಾದರೂ ಬೇಕು. ಕೊರೊನಾದಿಂದ ಗುಣಮುಖರಾದರೂ ಏಕಾಏಕಿ ಸಿನಿಮಾ ಕೆಲಸಗಳಿಗೆ ತೆರಳೋಕೆ ಸಾಧ್ಯವಾಗುವುದಿಲ್ಲ. ಸ್ವಲ್ಪ ವಿಶ್ರಾಂತಿ ಪಡೆಯಬೇಕಾಗುತ್ತದೆ. ಹೀಗಾಗಿ, ಬಿಗ್ ಬಾಸ್ ನಿರೂಪಣೆಯಿಂದ ಕೆಲ ಕಾಲ ದೂರ ಉಳಿಯುವುದು ಅವರಿಗೆ ಅನಿವಾರ್ಯವಾಗಿದೆ. ಈ ಕಾರಣಕ್ಕೆ ವಾಹಿನಿಯವರು ಪರ್ಯಾಯ ವ್ಯವಸ್ಥೆ ಹುಡುಕಿದ್ದಾರೆ.
ಕಮಲ್ ಹಾಸನ್ ಮಗಳು ಶ್ರುತಿ ಹಾಸನ್ಗೆ ನಿರೂಪಣೆಯ ಜವಾಬ್ದಾರಿ ನೀಡಲಾಗಿದೆ ಎನ್ನಲಾಗುತ್ತಿದೆ. ಕಮಲ್ ಹಾಸನ್ ಬರುವವರೆಗೂ ಶ್ರುತಿ ಅವರೇ ಬಿಗ್ ಬಾಸ್ ನಿರೂಪಣೆ ನೋಡಿಕೊಳ್ಳುತ್ತಾರೆ ಎನ್ನಲಾಗುತ್ತಿದೆ. ಶ್ರುತಿ ಅವರು ಸ್ಟಾರ್ ನಟನ ಮಗಳಾದರೂ ತಮ್ಮದೇ ಟ್ಯಾಲೆಂಟ್ ಮೂಲಕ ಅವರು ಗುರುತಿಸಿಕೊಂಡಿದ್ದಾರೆ. ಅವರ ಅಭಿಮಾನಿ ಬಳಗ ದೊಡ್ಡದಿದೆ. ಹೀಗಾಗಿ, ಶ್ರುತಿಗೆ ಮಣೆ ಹಾಕಲಾಗಿದೆ ಎಂದು ತಿಳಿದು ಬಂದಿದೆ. ಈ ಬಗ್ಗೆ ವಾಹಿನಿ ಶೀಘ್ರವೇ ಘೋಷಣೆ ಮಾಡುವ ಸಾಧ್ಯತೆ ಇದೆ.
ಈಚೆಗಷ್ಟೇ ಕಮಲ್ ಹಾಸನ್ ಅಮೆರಿಕಕ್ಕೆ ಪ್ರವಾಸ ಹೋಗಿದ್ದರು. ಅಲ್ಲಿಂದ ಮರಳಿದ ಮೇಲೆ ಸಣ್ಣ ಪ್ರಮಾಣದ ಕೊವಿಡ್ ಲಕ್ಷಣಗಳು ಅವರಿಗೆ ಕಾಣಿಸಿಕೊಂಡಿತ್ತು. ಹೀಗಾಗಿ, ಆಸ್ಪತ್ರೆಗೆ ಹೋಗಿ ಪರೀಕ್ಷೆ ಮಾಡಿಸಿದ್ದರು ಕಮಲ್. ಈ ವೇಳೆ ಕೊರೊನಾ ಪಾಸಿಟಿವ್ ಆಗಿರುವುದು ಖಚಿತಗೊಂಡಿದೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದ ಕಮಲ್ ‘ಅಮೆರಿಕದಿಂದ ವಾಪಸ್ ಬಂದ ಬಳಿಕ ನನಗೆ ಸಣ್ಣದಾಗಿ ಕೆಮ್ಮು ಆರಂಭವಾಗಿತ್ತು. ಪರೀಕ್ಷೆ ಮಾಡಿಸಿದ ನಂತರ ಇದು ಕೋವಿಡ್-19 ಪಾಸಿಟಿವ್ ಎಂಬುದು ತಿಳಿದುಬಂತು. ನಾನೀಗ ಆಸ್ಪತ್ರೆಯಲ್ಲಿ ಐಸೋಲೇಟ್ ಆಗಿದ್ದೇನೆ. ಒಂದು ಅರಿವಾಗಿದ್ದೇನೆಂದರೆ, ಈ ಮಹಾಮಾರಿ ನಮ್ಮನ್ನು ಬಿಟ್ಟು ಇನ್ನೂ ಹೋಗಿಲ್ಲ. ನಾವೆಲ್ಲ ಸುರಕ್ಷಿತವಾಗಿ ಇರಬೇಕಿದೆ’ ಎಂದಿದ್ದರು ಕಮಲ್.
ಇದನ್ನೂ ಓದಿ: ಕಮಲ್ ಹಾಸನ್ ಆರೋಗ್ಯ ಸ್ಥಿತಿ ಈಗ ಹೇಗಿದೆ? ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ವೈದ್ಯರು
‘ಬಿಗ್ ಬಾಸ್ ಸೀಸನ್ 5’ ಕಮಲ್ ಹಾಸನ್ ಪಡೆಯುತ್ತಿರೋ ಸಂಭಾವನೆ ಎಷ್ಟು?