ಜಗದೀಶ್ ಇದ್ದಾಗ ಜಗಳ, ಹನುಮಂತ ಬಂದ್ಮೇಲೆ ನಗು: ಬದಲಾಯ್ತು ಬಿಗ್ ಬಾಸ್ ಮನೆ
ಹನುಮಂತ ಬಂದ ನಂತರ ಬಿಗ್ ಬಾಸ್ ಮನೆಯಲ್ಲಿ ನಗು ತುಂಬಿದೆ. ದೊಡ್ಮನೆಯ ವಾತಾವರಣ ಬದಲಾಗಿದೆ. ಜಗದೀಶ್ ಇದ್ದಾಗ ಕೇವಲ ಜಗಳವೇ ಆವರಿಸಿತ್ತು. ಆದರೆ ಹನುಮಂತ ಅವರ ಮುಗ್ಧತೆಯಿಂದ ಇನ್ನುಳಿದ ಸ್ಪರ್ಧಿಗಳ ಮುಖದಲ್ಲಿ ನಗು ಮೂಡುವಂತಾಗಿದೆ. ಮುಂದಿನ ದಿನಗಳಲ್ಲಿ ಹನುಮಂತ ಯಾವ ರೀತಿ ಇರುತ್ತಾರೆ ಎಂಬುದನ್ನು ನೋಡಲು ವೀಕ್ಷಕರು ಕಾದಿದ್ದಾರೆ.
ವೈಲ್ಡ್ ಕಾರ್ಡ್ ಮೂಲಕ ಸಿಂಗರ್ ಹನುಮಂತ ಬಿಗ್ ಬಾಸ್ ಮನೆಗೆ ಬಂದಿದ್ದಾರೆ. ಅವರು ಎಂಟ್ರಿ ನೀಡಿದ ಬಳಿಕ ಮನೆಯಲ್ಲಿ ಸಾಕಷ್ಟು ಬದಲಾವಣೆ ಆಗಿದೆ. ಜಗದೀಶ್ ಇದ್ದಾಗ ಮಾತು ಮಾತಿಗೂ ಜಗಳ ಮಾಡುತ್ತಿದ್ದ ಮನೆ ಮಂದಿ ಈಗ ಹನುಮಂತನ ಮಾತು ಕೇಳಿ ನಕ್ಕು ನಲಿಯುತ್ತಿದ್ದಾರೆ. ಹಳ್ಳಿಯಿಂದ ಬಂದ ಹನುಮಂತ ಅವರು ಪ್ಯಾಟೆ ಮಂದಿಯ ಜೀವನ ಶೈಲಿಗೆ ಹೊಂದಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಅವರು ಪೆದ್ದು ಪೆದ್ದಾಗಿ ಆಡುವಾಗ ವೀಕ್ಷಕರಿಗೂ ನಗು ಬರುತ್ತಿದೆ. ಹನುಮಂತನಿಗೆ ಗೊತ್ತಿಲ್ಲದ ವಿಚಾರಗಳನ್ನು ಇನ್ನುಳಿದವರು ಹೇಳಿಕೊಡುತ್ತಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಕ್ಯಾಪ್ಟನ್ ಆಗಲು ಸಿಕ್ಕಾಪಟ್ಟೆ ಕಷ್ಟಪಡಬೇಕು. ಆದರೆ ಹನುಮಂತ ಸುಲಭವಾಗಿ ಕ್ಯಾಪ್ಟನ್ ಸ್ಥಾನಕ್ಕೆ ಏರಿದ್ದಾರೆ. ಹಂಗಾಮಿ ಕ್ಯಾಪ್ಟನ್ ಆದರೂ ಕೂಡ ಅವರಿಗೆ ವಿಶೇಷ ಸವಲತ್ತುಗಳು ಸಿಕ್ಕಿವೆ. ಕ್ಯಾಪ್ಟನ್ ರೂಮ್ನಲ್ಲಿ ಅವರು ಹಾಯಾಗಿ ಮಲಗಿದ್ದಾರೆ. ಮುಂದಿನ ವಾರದ ಕ್ಯಾಪ್ಟೆನ್ಸಿ ಟಾಸ್ಕ್ಗೆ ಯಾರು ಅರ್ಹರು ಎಂಬುದನ್ನು ತೀರ್ಮಾನಿಸುವ ಅಧಿಕಾರವೂ ಹನುಮಂತನಿಗೆ ನೀಡಲಾಗಿದೆ.
ಬರುಬರುತ್ತಿದ್ದಂತೆಯೇ ಹನುಮಂತನಿಗೆ ಹಲವು ಜವಾಬ್ದಾರಿ ನೀಡಲಾಗಿದೆ. ಅದರಿಂದಾಗಿ ಅವರಿಗೆ ಸ್ವಲ್ಪ ಗಲಿಬಿಲಿ ಆಗಿದೆ. ‘ನಾನು ಕ್ಯಾಪ್ಟನ್ ಸ್ಥಾನಕ್ಕೆ ರಾಜಿನಾಮೆ ನೀಡುತ್ತೇನೆ’ ಎಂದು ಅವರು ಹೇಳಿದ್ದಾರೆ. ಹಾಗೆಲ್ಲ ಮಾಡುವಂತಿಲ್ಲ ಎಂದು ಶಿಶಿರ್ ಅವರು ಹೇಳಿದ್ದಾರೆ. ಕ್ಯಾಪ್ಟನ್ ಆದ್ದರಿಂದ ಹಗಲು ಹೊತ್ತಿನಲ್ಲೇ ಮಲಗುತ್ತೇನೆ ಎಂದು ಹನುಮಂತ ಹೇಳಿದ್ದಾರೆ. ಹಾಗೆಲ್ಲ ಮಾಡುವಂತಿಲ್ಲ ಎಂದು ಇನ್ನುಳಿದವರು ಬುದ್ಧಿ ಹೇಳಿದ್ದಾರೆ.
ಇದನ್ನೂ ಓದಿ: Bigg Boss Kannada: ಜಗದೀಶ್ ಬಳಿಕ ಬಿಗ್ ಬಾಸ್ ಮನೆಯಲ್ಲಿ ಹನುಮಂತನ ಹವಾ ಶುರು
ಸ್ವಿಮಿಂಗ್ ಪೂಲ್ನಲ್ಲಿಯೇ ಸ್ನಾನ ಮಾಡುತ್ತೇನೆ ಎಂದು ಹನುಮಂತ ನೀರಿಗೆ ಇಳಿಯುತ್ತಾರೆ. ವೆಸ್ಟರ್ನ್ ಟಾಯ್ಲೆಟ್ ಹೇಗೆ ಬಳಸಬೇಕು ಎಂಬುದನ್ನು ಅವರಿಗೆ ಧನರಾಜ್ ಹೇಳಿಕೊಡುತ್ತಾರೆ. ಇಂಥ ಹಲವು ಸಂಗತಿಗಳಿಂದ ನಗು ಹರಡುತ್ತಿದೆ. ಹನುಮಂತ ಅವರ ಗ್ರಾಮೀಣ ಸೊಗಡಿನ ಭಾಷೆ ಗಮನ ಸೆಳೆಯುತ್ತಿದೆ. ಉತ್ತರ ಕರ್ನಾಟಕದವರಾದ ಅವರು ಫಿಕ್ಟರ್ ಇಲ್ಲದೇ ಆಡುವ ಕೆಲವು ಮಾತುಗಳು ಕೂಡ ನಗು ಉಕ್ಕಿಸುತ್ತಿವೆ. ಮುಂದಿನ ದಿನಗಳಲ್ಲಿ ಅವರ ಆಟ ಹೇಗಿರಲಿದೆ ಎಂಬುದನ್ನು ನೋಡಿ ತಿಳಿಯಬೇಕು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.