‘ಮೂವ್ ಆನ್ ಆಗಲೇಬೇಕು’; ಬಿಗ್ ಬಾಸ್ ನಿರೂಪಣೆ ಬಗ್ಗೆ ಮೌನಮುರಿದ ಸುದೀಪ್
‘ಹಿಂದಿ ಬಿಗ್ ಬಾಸ್ ಒಟಿಟಿ ಸೀಸನ್ 3’ ರಿಯಾಲಿಟಿ ಶೋನ ಸಲ್ಮಾನ್ ಖಾನ್ ನಡೆಸಿಡಿಕೊಡಬೇಕಿತ್ತು. ಆದರೆ, ಅನಿಲ್ ಕಪೂರ್ ಅವರನ್ನು ಕರೆತರಲಾಗಿದೆ. ತಮಿಳಿನ ಬಿಗ್ ಬಾಸ್ಗೆ ನಟ ಕಮಲ್ ಹಾಸನ್ ಅವರು ಗುಡ್ಬೈ ಹೇಳಿದ್ದಾರೆ. ಅದೇ ರೀತಿ ಕನ್ನಡದಲ್ಲೂ ನಿರೂಪಕರನ್ನು ಬದಲಿಸುವ ಆಲೋಚನೆ ವಾಹಿನಿಯವರಿಗೆ ಬಂದಿದೆ ಎಂದು ವರದಿ ಆಗಿತ್ತು. ಇದಕ್ಕೆ ಸುದೀಪ್ ಸ್ಪಷ್ಟನೆ ನೀಡಿದ್ದಾರೆ.
ಸುದೀಪ್ ಅವರು ಬಿಗ್ ಬಾಸ್ ನಡೆಸಿಕೊಡುವುದಿಲ್ಲ ಎನ್ನುವ ಮಾತು ಇತ್ತೀಚೆಗೆ ವೈರಲ್ ಆಗಿತ್ತು. ವಾಹಿನಿಯವರು ಸುದೀಪ್ನ ಹೊರಗಿಡುವ ಪ್ರಯತ್ನ ಮಾಡುತ್ತಿದ್ದಾರೆ ಎಂದೆಲ್ಲ ಹೇಳಲಾಗಿತ್ತು. ಈ ಮಧ್ಯೆ ಸುದೀಪ್ ಅವರು ಪ್ರೋಮೋ ಶೂಟ್ ಮುಗಿಸಿದ್ದಾರೆ ಎಂದು ಕೂಡ ಹೇಳಲಾಯಿತು. ಈ ಬಗ್ಗೆ ಸುದೀಪ್ ಅವರೇ ಸ್ಪಷ್ಟನೆ ಕೊಟ್ಟಿದ್ದಾರೆ. ಅವರು ಅಡ್ಡಗೋಡೆಯ ಮೇಲೆ ದೀಪ ಇಟ್ಟಿದ್ದಾರೆ.
‘ಮಾತುಕತೆ ನಡೆಯುತ್ತಿದೆ. 10 ವರ್ಷ ಬಿಗ್ ಬಾಸ್ಗೆ ಡೆಡಿಕೇಟ್ ಮಾಡಿದ್ದೀನಿ. ಬಿಗ್ ಬಾಸ್ ದೊಡ್ಡ ಶ್ರಮ. ಎಲ್ಲರಿಗೂ ನಾನು ನಡೆಸಿಕೊಟ್ಟಿದ್ದೇನೆ ಅನ್ನೋದಷ್ಟೇ ಗೊತ್ತಿದೆ. ಹೇಗೆ ನಿಂತು ಇರ್ತೀನಿ ಗೊತ್ತಾ? ಮ್ಯಾಕ್ಸ್ ಸಿನಿಮಾ ರಾತ್ರಿ ಶೂಟ್ ನಡೆದಿತ್ತು. ಬೆಳಿಗ್ಗೆ 3:30 ಗಂಟೆಗೆ ಮ್ಯಾಕ್ಸ್ ಶೂಟ್ ಮುಗಿಯುತ್ತಿತ್ತು. ವಿಮಾನ ಲೇಟ್ ಆಗುತ್ತದೆ ಎನ್ನುವ ಕಾರಣಕ್ಕೆ ಚಾಟೆರ್ಡ್ ಫ್ಲೈಟ್ ಬಾಡಿಗೆಗೆ ತೆಗೆದುಕೊಂಡಿದ್ದೆ. ಅದು ನನ್ನದೇ ದುಡ್ಡಲ್ಲಿ. ಅಲ್ಲಿಂದ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಬಂದು ಅಲ್ಲಿಂದ ನೇರವಾಗಿ ಮನೆಗೆ ಬರುತ್ತಿದ್ದೆ. ನಂತರ ಬಿಗ್ ಬಾಸ್ ಸೆಟ್ಗೆ ಹೋಗುತ್ತಿದ್ದೆ’ ಎಂದಿದ್ದಾರೆ ಅವರು.
‘ಬೆಳಿಗ್ಗೆ ಬಿಗ್ ಬಾಸ್ ಶೂಟ್ಗೆ ನಿಂತರೆ ಮಧ್ಯಾಹ್ನದವರೆಗೆ ಶೂಟ್ ಮಾಡುತ್ತಿದ್ದೆ. ಆ ಬಳಿಕ 2 ಗಂಟೆ ಗ್ಯಾಪ್. ನಂತರ ಮತ್ತೊಂದು ಎಪಿಸೋಡ್ ಶೂಟ್ ಮಾಡುತ್ತಿದ್ದೆ. ಆ ಬಳಿಕ ರಾತ್ರೋರಾತ್ರಿ ಚೆನ್ನೈಗೆ ಹೋಗುತ್ತಿದ್ದೆ. ಅಲ್ಲಿಂದ ಮಹಾಬಲಿಪುರಂಗೆ ಹೋಗುತ್ತಿದ್ದೆ. ಹೋದ ತಕ್ಷಣ ಶೂಟ್ ಶುರುವಾಗುತ್ತಿತ್ತು. ನನಗೆ ಸಿನಿಮಾಗೆ ನ್ಯಾಯ ಕೊಡಲ, ಶೋಗೆ ನ್ಯಾಯ ಕೊಡಲ ಎನಿಸುತ್ತಿತ್ತು. ಶೋನ ಎಂಜಾಯ್ ಮಾಡಿದ್ದೇನೆ, ಆಸಕ್ತಿಯೂ ಇದೆ. ಆದರೆ, ಕೆಲವೊಮ್ಮೆ ಮೂವ್ ಆನ್ ಆಗಲೇಬೇಕು. ನನಗೆ ಮಾಡೋಕೆ ಇಂಟ್ರೆಸ್ಟಿಲ್ಲ, ಅವರಿಗೆ ನಾನು ಬೇಡ ಎಂದಲ್ಲ. ಇದೆಲ್ಲ ಕಾಂಟ್ರವರ್ಸಿ. ಬಿಗ್ ಬಾಸ್ ವಿಚಾರ ಬಂದಾಗ ಅವರೇ ಹೇಳಬಹುದು’ ಎಂದಿದ್ದಾರೆ.
ಇದನ್ನೂ ಓದಿ: ಸುದೀಪ್ ಬಿಗ್ ಬಾಸ್ ತೊರೆದರೆ ಯಾರಿಗೆ ನಷ್ಟ? ಆಗುವ ಪರಿಣಾಮಗಳೇನು?
‘ಬೇರೇ ಕಲಾವಿದರನ್ನು ಹುಡುಕಲಾಗುತ್ತಿದೆ ಎಂಬ ಮಾತು ಇದೆಯಲ್ಲ’ ಎಂದು ಕೇಳಲಾಯಿತು. ಈ ಬಗ್ಗೆಯೂ ಸುದೀಪ್ ಮಾತನಾಡಿದ್ದಾರೆ. ‘ಅವರು ಬೇರೆಯವರನ್ನು ಹುಡುಕಲಿ ಎಂದು ನಾನು ಬಯಸುತ್ತಿದ್ದೇನೆ’ ಎಂದಿದ್ದಾರೆ ಅವರು. ‘ಅಮ್ಮ ನಿನ್ನ ಅಡುಗೆ ಬೇಡ, ಖಾರ ಆಗುತ್ತಿದೆ ಎಂದು ಹೇಳಿದಾಗ ಅವರು ಅಡುಗೆ ಮಾಡೋದು ನಿಲ್ಲಿಸಲ್ಲ. ಕಡಿಮೆ ಖಾರ ಹಾಕಿ ಅಡುಗೆ ಮಾಡಿಕೊಡಬಹುದು’ ಎಂದಿದ್ದಾರೆ ಸುದೀಪ್.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 12:02 pm, Sat, 31 August 24