ಸೀರಿಯಲ್ ನಟಿ ತುನಿಶಾ ಶರ್ಮಾ ಅವರ ನಿಧನದ (Tunisha Sharma Death) ಬಳಿಕ ಅವರ ಮಾಜಿ ಪ್ರಿಯಕರ ಶೀಜಾನ್ ಖಾನ್ ಅವರಿಗೆ ಕಾನೂನಿನ ಸಂಕಷ್ಟ ಎದುರಾಗಿದೆ. ತುನಿಶಾ ಶರ್ಮಾ ಅವರ ಆತ್ಮಹತ್ಯೆಗೆ ಪ್ರೇರಣೆ ನೀಡಿದ ಆರೋಪದ ಮೇಲೆ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಡಿಸೆಂಬರ್ 30ರ ತನಕ ಪೊಲೀಸ್ ಕಸ್ಟಡಿಗೆ ಅವರನ್ನು ಒಪ್ಪಿಸಲಾಗಿದೆ. ಹೈ ಪ್ರೊಫೈಲ್ ಕೇಸ್ ಆದ್ದರಿಂದ ತನಿಖೆ ಚುರುಕಾಗಿದ್ದು, ಹಲವು ವಿವರಗಳು ಹೊರಬರುತ್ತಿವೆ. ಅಚ್ಚರಿ ಏನೆಂದರೆ ತುನಿಶಾ ಶರ್ಮಾ (Tunisha Sharma) ಅವರು ಆತ್ಮಹತ್ಯೆ ಮಾಡಿಕೊಳ್ಳುವುದಕ್ಕೂ ಕೆಲವೇ ನಿಮಿಷಗಳ ಮುಂಚೆ ಶೀಜಾನ್ ಖಾನ್ (Sheezan Khan) ಜೊತೆ ಮಾತನಾಡಿದ್ದರು ಎಂಬುದು ಈಗ ತಿಳಿದುಬಂದಿದೆ.
ಡಿ.24ರಂದು ‘ಅಲಿಬಾಬಾ’ ಧಾರಾವಾಹಿಯ ಚಿತ್ರೀಕರಣದ ಸ್ಟುಡಿಯೋದಲ್ಲಿ ತುನಿಶಾ ಶರ್ಮಾ ನೇಣಿಗೆ ಶರಣಾದರು. ಅದಕ್ಕೂ ಕೇವಲ 15 ದಿನ ಮುಂಚೆ ಅವರ ಜೊತೆ ಶೀಜಾನ್ ಖಾನ್ ಬ್ರೇಕಪ್ ಮಾಡಿಕೊಂಡಿದ್ದರು. ಆದರೂ ನೇಣು ಬಿಗಿದುಕೊಳ್ಳುವ ಕೆಲವೇ ನಿಮಿಷಗಳ ಮುನ್ನ ಶೀಜಾನ್ ಖಾನ್ ಜೊತೆ ತುನಿಶಾ ಶರ್ಮಾ ಮಾತುಕತೆ ನಡೆಸಿದ್ದರು ಎಂಬುದು ತನಿಖೆ ವೇಳೆ ತಿಳಿದುಬಂದಿದೆ. ಅವರಿಬ್ಬರ ನಡುವೆ ಯಾವ ವಿಚಾರ ಚರ್ಚೆ ಆಯಿತು ಎಂಬುದು ಇನ್ನಷ್ಟೇ ಗೊತ್ತಾಗಬೇಕಿದೆ.
ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಶೀಜಾನ್ ಖಾನ್ ಅವರು ಪದೇಪದೇ ತಮ್ಮ ಹೇಳಿಕೆ ಬದಲಿಸುತ್ತಿದ್ದರು ಎಂಬ ಮಾಹಿತಿ ಕೇಳಿಬಂದಿದೆ. ಅವರಿಗೆ ಮತ್ತೋರ್ವ ಹುಡುಗಿ ಜೊತೆ ಆಪ್ತತೆ ಬೆಳೆದಿತ್ತು. ಆ ಯುವತಿಗೆ ಕಳಿಸಿದ್ದ ವಾಟ್ಸಪ್ ಮೆಸೇಜ್ಗಳನ್ನು ಡಿಲೀಟ್ ಮಾಡಿಕೊಂಡಿದ್ದಾರೆ. ಅದಕ್ಕೆ ಕಾರಣ ಏನು ಎಂಬುದನ್ನು ಕೂಡ ಪೊಲೀಸರು ಪತ್ತೆ ಹಚ್ಚುತ್ತಿದ್ದಾರೆ. ವಿಚಾರಣೆಗೆ ಶೀಜಾನ್ ಖಾನ್ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಕೂಡ ವರದಿ ಆಗಿದೆ.
ಇದನ್ನೂ ಓದಿ: Tunisha Sharma: ಶ್ರದ್ಧಾ ವಾಕರ್ ಕೊಲೆ ಕೇಸ್ ಪ್ರಭಾವದಿಂದ ತುನಿಶಾ ಶರ್ಮಾ, ಶೀಜಾನ್ ಖಾನ್ ನಡುವೆ ನಡೆದಿತ್ತು ಬ್ರೇಕಪ್
‘ಅಲಿಬಾಬಾ’ ಧಾರಾವಾಹಿಯಲ್ಲಿ ತುನಿಶಾ ಶರ್ಮಾ ಮತ್ತು ಶೀಜಾನ್ ಖಾನ್ ಅವರು ಒಟ್ಟಾಗಿ ನಟಿಸುತ್ತಿದ್ದರು. ಆ ಕಾರಣದಿಂದ ಇಬ್ಬರ ನಡುವೆ ಸಲುಗೆ ಬೆಳೆದಿತ್ತು. ನಂತರ ಅದು ಪ್ರೀತಿಗೆ ತಿರುಗಿತ್ತು. ಬೇರೆ ಬೇರೆ ಧರ್ಮಕ್ಕೆ ಸೇರಿದ ಇವರು ಪರಸ್ಪರ ಪ್ರೀತಿಸಲು ಆರಂಭಿಸಿದ್ದರು. ‘ಶೀಜಾನ್ ಖಾನ್ ಜೊತೆ ಪ್ರೀತಿ ಚಿಗುರಿದ ಬಳಿಕ ತುನಿಶಾ ಶರ್ಮಾ ಅವರು ಹಿಜಾಬ್ ಧರಿಸಲು ಆರಂಭಿಸಿದ್ದರು’ ಎಂದು ನಟಿಯ ಸಂಬಂಧಿಯೊಬ್ಬರು ಇತ್ತೀಚೆಗೆ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: Tunisha Sharma: ಪಂಚಭೂತಗಳಲ್ಲಿ ಲೀನವಾದ ತುನಿಶಾ ಶರ್ಮಾ; ಇಲ್ಲಿದೆ ಅಂತ್ಯಕ್ರಿಯೆಯ ಫೋಟೋ ಗ್ಯಾಲರಿ..
ತುನಿಶಾ ಶರ್ಮಾ ಸಾವಿಗೆ ನ್ಯಾಯ ಸಿಗಬೇಕು ಎಂದು ಕುಟುಂಬದವರು ಮತ್ತು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ನಡುವೆ ಕೆಲವರು ಶೀಜಾನ್ ಖಾನ್ ಪರವಾಗಿಯೂ ವಾದ ಮಂಡಿಸುತ್ತಿದ್ದಾರೆ. ತನಿಖೆ ಪೂರ್ಣಗೊಂಡ ಬಳಿಕವಷ್ಟೇ ತುನಿಶಾ ಶರ್ಮಾ ಅವರ ಆತ್ಮಹತ್ಯೆಗೆ ನಿಜವಾದ ಕಾರಣ ಏನೆಂಬುದು ಗೊತ್ತಾಗಲಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 1:56 pm, Thu, 29 December 22