ಗೌತಮಿ ಸ್ನೇಹವೇ ಮಂಜು ಸೋಲಿಗೆ ಕಾರಣ ಆಯ್ತಾ? ಪ್ರತಿಕ್ರಿಯೆ ನೀಡಿದ ತಂದೆ
ಬಿಗ್ ಬಾಸ್ ಮನೆಯಲ್ಲಿ ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಅವರು ಬಹಳ ಆಪ್ತವಾಗಿದ್ದರು. ಆದರೆ ಇಬ್ಬರಿಗೂ ಟ್ರೋಫಿ ಗೆಲ್ಲಲು ಸಾಧ್ಯವಾಗಲಿಲ್ಲ. ಇಬ್ಬರ ಸ್ನೇಹದ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಟ್ರೋಲ್ ಕೂಡ ಆಗಿತ್ತು. ಗೌತಮಿಯ ಸ್ನೇಹದಿಂದಲೇ ಮಂಜು ಆಟ ಡಲ್ ಆಯಿತು ಎಂಬ ಅನಿಸಿಕೆ ಕೆಲವರದ್ದು. ಅದಕ್ಕೆ ಉಗ್ರಂ ಮಂಜು ತಂದೆ ರಾಗಿ ರಾಮಣ್ಣ ಪ್ರತಿಕ್ರಿಯೆ ನೀಡಿದ್ದಾರೆ.
ನಟ ಉಗ್ರಂ ಮಂಜು ಅವರು ಬಿಗ್ ಬಾಸ್ ಗೆಲ್ಲಬಹುದು ಎಂಬ ನಿರೀಕ್ಷೆ ಹಲವರಿಗೆ ಇತ್ತು. ಮಗ ಗೆಲ್ಲುತ್ತಾನೆ ಎಂದು ರಾಗಿ ರಾಮಣ್ಣ ಅವರು ನಿರೀಕ್ಷಿಸಿದ್ದರು. ಆದರೆ ಆ ನಿರೀಕ್ಷೆ ನಿಜವಾಗಲಿಲ್ಲ. ಆ ಕುರಿತು ಈಗ ರಾಗಿ ರಾಮಣ್ಣ ಅವರು ‘ಟಿವಿ 9’ ಜೊತೆ ಮಾತನಾಡಿದ್ದಾರೆ. ‘ಮಂಜು ಬಿಗ್ ಬಾಸ್ಗೆ ಹೋದ ಬಳಿಕ ಜನಪ್ರಿಯತೆ ಹೆಚ್ಚಾಯಿತು. ಅದರಿಂದ ನಮಗೂ ಖುಷಿ ಇದೆ. ದೇವರು ಫಲ ಕೊಟ್ಟಿದ್ದನ್ನು ಸ್ವೀಕರಿಸಬೇಕು’ ಎಂದು ರಾಗಿ ರಾಮಣ್ಣ ಅವರು ಹೇಳಿದ್ದಾರೆ. ಈ ಸಂದರ್ಶನದಲ್ಲಿ ಅವರು ಗೌತಮಿ ಜಾದವ್ ಮತ್ತು ಮೋಕ್ಷಿತಾ ಜೊತೆಗಿನ ಸ್ನೇಹದ ಬಗ್ಗೆಯೂ ಮಾತಾಡಿದ್ದಾರೆ.
‘ಎಲ್ಲ ಮನುಷ್ಯರಿಗೂ ಹೆಚ್ಚು ಕಡಿಮೆ ಆಗುತ್ತದೆ. ಅದನ್ನೆಲ್ಲ ಪರಿಗಣಿಸೋಕೆ ಆಗಲ್ಲ. ಜನರೆಲ್ಲ ಮಂಜುನೇ ಗೆಲ್ಲೋದು ಅಂತ ಹೇಳಿದ್ದರು. ನಮಗೆ ಗೆದ್ದಷ್ಟೇ ಖುಷಿ ಆಗಿದೆ. ನಾನು ಬಿಗ್ ಬಾಸ್ ಮನೆ ಒಳಗೆ ಹೋಗಿದ್ದೇ ಪುಣ್ಯ. ಅಲ್ಲಿ ಹೋದಾಗ ರೈತನ ಮಗ ಎಂದು ಮಂಜು ತೋರಿಸಿಕೊಂಡಿದ್ದಾನೆ. ಅಲ್ಲಿ ಇದ್ದವರೆಲ್ಲ ನನ್ನ ಜೊತೆ ಚೆನ್ನಾಗಿ ಮಾತನಾಡಿದರು. ನಾವು ಸಾಯೋತನಕ ಮರೆಯದೇ ಇರುವಂತಹ ಕ್ಷಣ ಅದು’ ಎಂದು ರಾಗಿ ರಾಮಣ್ಣ ಹೇಳಿದ್ದಾರೆ.
‘ನಮ್ಮ ಮನೆಯಲ್ಲಿ ಅವರು ಹೆಣ್ಮಕ್ಕಳ ಜೊತೆ ಹೇಗೆ ಬೆರೆತಿದ್ದಾನೋ ಅದೇ ರೀತಿ ಅವನು ಬಿಗ್ ಬಾಸ್ ಮನೆಯಲ್ಲಿ ಬೆರೆತಿದ್ದಾನೆ. ಮೋಕ್ಷಿತಾ ಮತ್ತು ಗೌತಮಿ ಅವರನ್ನು ಬಿಟ್ಟು ಬಂದಿದ್ದರೆ ಚೆನ್ನಾಗಿ ಆಡುತ್ತಿದ್ದ ಎಂದು ಜನರು ಹಾಗೂ ಸುದೀಪ್ ಸರ್ ಹೇಳಿರಬಹುದು. ಅವರು ಬಿಟ್ಟು ಬಾರದೇ ಇರುವುದೇ ಒಳ್ಳೆಯದಾಯ್ತು. ಅದನ್ನು ಕೆಟ್ಟದ್ದು ಅಂತ ನಾವು ಹೇಳೋಕೆ ಆಗಲ್ಲ. ಅವನ ಆಟವನ್ನು ಆಡಿದ್ದಾನೆ. ಎಲ್ಲರ ಜೊತೆಗೂ ಬೆರೆತಿದ್ದಾನೆ’ ಎಂದು ರಾಮಣ್ಣ ಹೇಳಿದ್ದಾರೆ.
ಇದನ್ನೂ ಓದಿ: ಭಾವನೆಗೆ ಸೋತು ಬಿಗ್ ಬಾಸ್ ಟ್ರೋಫಿ ಕಳೆದುಕೊಂಡ ಉಗ್ರಂ ಮಂಜು
‘ಗೌತಮಿಯ ಸ್ನೇಹದಿಂದ ಮಂಜು ಆಟವನ್ನು ನಿರ್ಲಕ್ಷಿಸಿದ್ದಾನೆ ಅಂತ ಹೇಳೋಕೆ ನಮಗೆ ಇಷ್ಟ ಇಲ್ಲ. ಯಾಕೆಂದರೆ, ನಾವು ಅವನನ್ನು ಚಿಕ್ಕಂದಿನಿಂದ ನೋಡಿದ್ದೇವೆ. ಹೆಣ್ಮಕ್ಕಳನ್ನು ಅವನು ಹಚ್ಚಿಕೊಂಡರೆ ಸಡನ್ ಆಗಿ ಬಿಡಲ್ಲ. ಅದನ್ನೇ ಬಿಗ್ ಬಾಸ್ ಮನೆಯಲ್ಲೂ ಮಾಡಿದ್ದಾನೆ. ಅದು ಬಿಟ್ಟರೆ ಬೇರೆ ಏನೂ ಇಲ್ಲ. ಹೆಣ್ಮಕ್ಕಳು ಎಂದರೆ ಅವನಿಗೆ ತುಂಬ ಗೌರವ. ಅದನ್ನು ಬೇರೆಯವರು ಬೇರೆ ರೀತಿ ತಿಳಿದುಕೊಂಡರೆ ನಾವು ಜವಾಬ್ದಾರಲ್ಲ’ ಎಂದು ಉಗ್ರಂ ಮಂಜು ತಂದೆ ಹೇಳಿದ್ದಾರೆ. ಮಂಜುಗೆ ಮದುವೆ ಮಾಡಿಸಬೇಕು ಎಂಬ ಪ್ಲ್ಯಾನ್ ಕೂಡ ಮನೆಯಲ್ಲಿ ನಡೆಯುತ್ತಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.