ಸ್ವಾಭಿಮಾನ ಬಿಟ್ಟು ಗೌತಮಿ ಜಾದವ್ ಹಿಂದೆ ಹೋಗುತ್ತಿರುವ ಉಗ್ರಂ ಮಂಜು
ಉಗ್ರಂ ಮಂಜು ಬಗ್ಗೆ ಗೌತಮಿ ಅವರಿಗೆ ಈಗ ಮೊದಲಿದ್ದ ಭಾವನೆ ಇಲ್ಲ. ಆ ಸ್ನೇಹ ಕೂಡ ಅವರಿಗೆ ಬೇಕಾಗಿಲ್ಲ. ಆದರೆ ಇದನ್ನು ಮಂಜು ಅರ್ಥ ಮಾಡಿಕೊಂಡಿಲ್ಲ. ಸ್ವಾಭಿಮಾನ ಬದಿಗಿಟ್ಟು ಮತ್ತೆ ಮತ್ತೆ ಗೌತಮಿಯ ಹಿಂದೆ ಮಂಜು ಹೋಗುತ್ತಿದ್ದಾರೆ. ಹಲವು ಬಾರಿ ಗೌತಮಿ ವಾರ್ನಿಂಗ್ ಕೊಟ್ಟಿದ್ದಾರೆ. ಹಾಗಿದ್ದರೂ ಕೂಡ ಮಂಜು ವರ್ತನೆ ಹಾಗೆಯೇ ಇದೆ.
ಉಗ್ರಂ ಮಂಜು ಅವರು ಬಿಗ್ ಬಾಸ್ ಮನೆಯಲ್ಲಿ ಗೆಲ್ಲುವ ಸಾಮರ್ಥ್ಯ ಇರುವ ವ್ಯಕ್ತಿ ಎಂಬುದು ಬಹುತೇಕರ ನಂಬಿಕೆ. ಆ ಕಾರಣದಿಂದಲೇ ಅವರು 80 ದಿನಗಳ ತನಕ ಚೆನ್ನಾಗಿ ಆಟ ಆಡಿಕೊಂಡು ಬಂದಿದ್ದಾರೆ. ಇನ್ನು ಉಳಿದಿರುವುದು ಕೆಲವೇ ದಿನಗಳು ಮಾತ್ರ. ಈ ಸಂದರ್ಭದಲ್ಲಿ ಪೈಪೋಟಿ ಜಾಸ್ತಿ ಇರುತ್ತದೆ. ಉಗ್ರಂ ಮಂಜು ಅವರು ವೈಯಕ್ತಿಕ ಆಟದ ಮೇಲೆ ಜಾಸ್ತಿ ಗಮನ ಹರಿಸಬೇಕಾಗುತ್ತದೆ. ಆದರೆ ಅವರು ಗೌತಮಿ ಜಾದವ್ ಜೊತೆ ಕಾಲ ಕಳೆಯುವುದರಲ್ಲೇ ಶಕ್ತಿ ಮತ್ತು ಸಮಯ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ಅಲ್ಲದೇ, ಸ್ವಾಭಿಮಾನವನ್ನೂ ಬದಿಗಿಟ್ಟು ಗೌತಮಿಯ ಹಿಂದೆ ಹೋಗುತ್ತಿದ್ದಾರೆ. ಇದು ಅವರ ಆಟದ ಮೇಲೆ ಖಂಡಿತಾ ಪರಿಣಾಮ ಬೀರುವ ಸಾಧ್ಯತೆ ಇದೆ.
ಗೌತಮಿ ಜಾದವ್ಗೆ ಈಗ ಮಂಜು ಸ್ನೇಹ ಕಿಂಚಿತ್ತೂ ಬೇಕಾಗಿಲ್ಲ. ಹಾಗಾಗಿ ಅವರು ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ‘ನನ್ನ ಜೊತೆ ಮಾತನಾಡಬೇಡಿ. ನನ್ನ ಹಿಂದೆ ಬರಬೇಡಿ. ನನ್ನನ್ನು ನನ್ನ ಪಾಡಿಗೆ ಬಿಟ್ಟುಬಿಡಿ. ನಿಮ್ಮ ಪಕ್ಕ ಕೂರುವುದೇ ನನಗೆ ದೊಡ್ಡ ಸಮಸ್ಯೆ’ ಎಂದು ಗೌತಮಿ ಜಾದವ್ ಅವರು ಮಂಜಗೆ ನೇರವಾಗಿ ಹೇಳಿದ್ದಾರೆ. ಈ ರೀತಿ ಮುಖಕ್ಕೆ ಹೊಡೆದಂತೆ ಹೇಳಿದರೂ ಕೂಡ ಮಂಜು ಅರ್ಥ ಮಾಡಿಕೊಳ್ಳುತ್ತಿಲ್ಲ.
ಇತ್ತೀಚೆಗಿನ ಪ್ರತಿ ಸಂಚಿಕೆಯಲ್ಲೂ ಗೌತಮಿ ಜಾದವ್ ಅವರು ಮಂಜುಗೆ ಎಚ್ಚರಿಕೆ ನೀಡುತ್ತಿದ್ದಾರೆ. ದಯವಿಟ್ಟು ದೂರ ಹೋಗಿ ಎಂದು ಮಂಜುಗೆ ಅವರು ನೇರವಾಗಿ ಹೇಳುತ್ತಿದ್ದಾರೆ. ಆದರೂ ಮಂಜು ಬದಲಾಗಿಲ್ಲ. ಪದೇ ಪದೇ ಬಂದು ಗೌತಮಿಯನ್ನು ಮಾತನಾಡಿಸಲು ಪ್ರಯತ್ನಿಸುತ್ತಿದ್ದಾರೆ. ಗೌತಮಿ ಬಳಸುವ ನೀರಿನ ಬಾಟಲಿಯಿಂದಲೇ ಮಂಜು ನೀರು ಕುಡಿದಿದ್ದಾರೆ. ಆಗಲೂ ಗೌತಮಿ ಅವರು ಸಖತ್ ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ‘ನಿಮ್ಮ ಪಕ್ಕ ಕೂರುವುದೇ ದೊಡ್ಡ ಸಮಸ್ಯೆ’: ಉಗ್ರಂ ಮಂಜು ವರ್ತನೆಗೆ ಗೌತಮಿ ಬೇಸರ
ಸ್ನೇಹ ಚೆನ್ನಾಗಿದ್ದಾಗ ಗೌತಮಿಯನ್ನು ಮಂಜು ಅವರು ಮೈಮುಟ್ಟಿ ಮಾತನಾಡಿಸುತ್ತಿದ್ದರು. ಈಗಲೂ ಅವರಿಗೆ ಆ ಅಭ್ಯಾಸ ಮುಂದುವರಿದಿದೆ. ಆದರೆ ಗೌತಮಿ ಇದನ್ನು ಸಹಿಸುತ್ತಿಲ್ಲ. ಆ ವಿಚಾರದಲ್ಲಿಯೂ ವಾರ್ನಿಂಗ್ ನೀಡಿದ್ದಾರೆ. ಇಷ್ಟಾದರೂ ಕೂಡ ಉಗ್ರಂ ಮಂಜು ಅವರು ಸ್ವಾಭಿಮಾನ ಇಲ್ಲದವರ ರೀತಿ ಗೌತಮಿಯ ಹಿಂದೆಯೇ ಹೋಗುತ್ತಿರುವುದು ಯಾಕೋ ನೋಡುಗರಿಗೆ ಸರಿ ಎನಿಸುತ್ತಿಲ್ಲ. ಅವರನ್ನು ಬೆಂಬಲಿಸಿ ವೋಟ್ ಮಾಡುವ ಪ್ರೇಕ್ಷಕರ ಕಡೆಗೂ ಮಂಜು ಗಮನ ನೀಡಬೇಕಿದೆ. ‘ಗೌತಮಿಯನ್ನು ಮೆಚ್ಚಿಸುತ್ತೇನೆ’ ಎಂದು ಮಂಜು ಹೇಳಿದ್ದಾಗಲೇ ಸುದೀಪ್ ಎಚ್ಚರಿಕೆ ನೀಡಿದ್ದರು. ಆದರೂ ಮಂಜು ಯಾಕೋ ಸರಿದಾರಿಗೆ ಬಂದಂತೆ ಕಾಣುತ್ತಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.