‘ನಿಮ್ಮ ಪಕ್ಕ ಕೂರುವುದೇ ದೊಡ್ಡ ಸಮಸ್ಯೆ’: ಉಗ್ರಂ ಮಂಜು ವರ್ತನೆಗೆ ಗೌತಮಿ ಬೇಸರ
ಒಂದು ಕಾಲದಲ್ಲಿ ಗೌತಮಿ ಜಾದವ್ ಅವರು ಉಗ್ರಂ ಮಂಜು ಜೊತೆಗೆ ಹೆಚ್ಚು ಕಾಲ ಕಳೆಯುತ್ತಿದ್ದರು. ಆದರೆ ಈಗ ಮಂಜು ಬಗ್ಗೆ ಗೌತಮಿ ಸಿಕ್ಕಾಪಟ್ಟೆ ತಕರಾರು ತೆಗೆಯುತ್ತಿದ್ದಾರೆ. ಮಂಗಳವಾರದ (ಡಿಸೆಂಬರ್ 17) ಸಂಚಿಕೆಯಲ್ಲಿ ಮಂಜು ಬಗ್ಗೆ ಗೌತಮಿ ಸಾಕಷ್ಟು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅವರ ಮಾತುಗಳಿಂದ ಎಲ್ಲರಿಗೂ ಶಾಕ್ ಆಗಿದೆ.
ಗೆಳೆಯ-ಗೆಳತಿ ಎಂದುಕೊಂಡು ಉಗ್ರಂ ಮಂಜು ಮತ್ತು ಗೌತಮಿ ಜಾದವ್ ಅವರು ತುಂಬ ಆಪ್ತತೆ ಬೆಳೆಸಿಕೊಂಡಿದ್ದರು. ಅವರ ಗೆಳೆತನದ ಬಗ್ಗೆ ಬಿಗ್ ಬಾಸ್ ಮನೆಯ ಬಹುತೇಕರು ಮಾತನಾಡಿಕೊಂಡಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಗೌತಮಿ ಅವರು ಮಂಜು ಬಗ್ಗೆ ಅಸಹನೆ ಬೆಳೆಸಿಕೊಂಡಿದ್ದಾರೆ. ಫಿನಾಲೆ ಹತ್ತಿರ ಆಗುತ್ತಿದ್ದಂತೆಯೇ ಗೌತಮಿ ಅವರು ವೈಯಕ್ತಿಕ ಆಟದ ಕಡೆಗೆ ಹೆಚ್ಚು ಗಮನ ನೀಡುತ್ತಿದ್ದಾರೆ. ಹಾಗಾಗಿ ಉಗ್ರಂ ಮಂಜು ಅವರಿಂದ ಅಂತರ ಕಾಯ್ದುಕೊಳ್ಳಲು ಗೌತಮಿ ಪ್ರಯತ್ನಿಸುತ್ತಿದ್ದಾರೆ.
ಉಗ್ರಂ ಮಂಜು ಏನೇ ಮಾತನಾಡಿದರೂ ಗೌತಮಿ ಜಾದವ್ ಅವರಿಗೆ ಈಗ ತಪ್ಪಾಗಿ ಕಾಣಿಸುತ್ತಿದೆ. ಮಂಗಳವಾರ (ಡಿ.17) ಕೂಡ ಹಾಗೆಯೇ ಆಯಿತು. ಟಾಸ್ಕ್ನ ಉಸ್ತುವಾರಿಗಳು ಮಾತನಾಡುವಾಗ ಉಗ್ರಂ ಮಂಜು ಮಧ್ಯ ಮಾತನಾಡಲು ಪ್ರಯತ್ನಿಸಿದರು. ಅದನ್ನು ಗೌತಮಿ ಜಾದವ್ ಖಂಡಿಸಿದರು. ‘ನೀವು ಯಾಕೆ ಮಾತನಾಡುತ್ತೀರಿ? ನಾನು ಕನ್ನಡದಲ್ಲಿ ಹೇಳಿದ್ದು ನಿಮಗೆ ಅರ್ಥ ಆಗುತ್ತಿಲ್ಲ ಎನಿಸುತ್ತದೆ’ ಎಂದು ಗೌತಮಿ ಅವರು ಮಂಜು ವಿರುದ್ಧ ಗುಡುಗಿದರು.
ಗೌತಮಿ ಜಾದವ್ ಈ ರೀತಿ ನೇರವಾಗಿ ಟೀಕಿಸಿದ್ದು ಕಂಡು ಮಂಜು ಅವರಿಗೆ ಕೋಪ ಬಂತು. ‘ಹಾಗಿದ್ದರೆ ನೀವು ಕೂಡ ಮಾತನಾಡಿಬೇಡಿ’ ಎಂದು ಮಂಜು ತಿರುಗೇಟು ನೀಡಿದರು. ‘ನಿಮ್ಮ ಪಕ್ಕ ಕೂರುವುದೇ ದೊಡ್ಡ ಪ್ಲಾಬ್ಲಮ್’ ಎಂದು ಗೌತಮಿ ಅವರು ಗೊಣಗಿದರು. ಇಷ್ಟರಮಟ್ಟಿಗೆ ಅವರಿಬ್ಬರ ಸ್ನೇಹ ಹಾಳಾಗಿದೆ. ಮುಂದಿನ ದಿನಗಳಲ್ಲಿ ಪೈಪೋಟಿ ಹೆಚ್ಚಿದರೆ ಇನ್ನಷ್ಟು ವೈಮನಸ್ಸು ಶುರುವಾಗುವುದು ಗ್ಯಾರಂಟಿ.
ಇದನ್ನೂ ಓದಿ: ಗೌತಮಿ ಅಪ್ಪ-ಅಮ್ಮನ ಬಗ್ಗೆ ಮಾತನಾಡಿ ನಾಲಿಗೆ ಹರಿಬಿಟ್ಟ ರಜತ್; ಅತಿಯಾಯ್ತು ಮಾತು
‘ನಾನು ಗೌತಮಿ ಅವರನ್ನು ಈ ಮನೆಯಲ್ಲಿ ಮೆಚ್ಚಿಸಬೇಕು’ ಎಂದು ಉಗ್ರಂ ಮಂಜು ಅವರು ಸುದೀಪ್ ಎದುರಲ್ಲೇ ಹೇಳಿದ್ದರು. ಆ ಮಾತಿಗೆ ಸುದೀಪ್ ಅವರು ಎಚ್ಚರಿಕೆ ನೀಡಿದ್ದರು. ಆ ಘಟನೆ ನಡೆದ ಬಳಿಕ ಗೌತಮಿ ಜಾದವ್ ಅವರ ವರ್ತನೆ ಬದಲಾಯಿತು. ಸಾಧ್ಯವಾದಷ್ಟು ಮಂಜು ಅವರಿಂದ ದೂರ ಇರಲು ಗೌತಮಿ ಪ್ರಯತ್ನಿಸುತ್ತಿದ್ದಾರೆ. ಇವರಿಬ್ಬರ ಪೈಕಿ ಯಾರು ಫಿನಾಲೆಗೆ ಬರುತ್ತಾರೆ? ಯಾರು ಮೊದಲೇ ಔಟ್ ಆಗುತ್ತಾರೆ ಎಂಬುದನ್ನು ತಿಳಿಯುವ ಕೌತುಕ ಪ್ರೇಕ್ಷಕರಿಗೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.