ಕ್ಷಮೆ ಕೇಳದಿದ್ದರೆ ಪ್ರತಿಭಟನೆ, ಮನೆಗೆ ಮುತ್ತಿಗೆ: ಜಗ್ಗೇಶ್​ಗೆ ಎಚ್ಚರಿಕೆ

Jaggesh: ಹುಲಿ ಉಗುರಿನ ಪ್ರಕರಣದ ಬಗ್ಗೆ ಮಾತನಾಡುತ್ತಾ ವರ್ತೂರು ಸಂತೋಷ್ ಬಗ್ಗೆ ಪರೋಕ್ಷವಾಗಿ ಲಘುವಾದ ಪದ ಬಳಸಿ ಮಾತನಾಡಿದ್ದರು.

ಕ್ಷಮೆ ಕೇಳದಿದ್ದರೆ ಪ್ರತಿಭಟನೆ, ಮನೆಗೆ ಮುತ್ತಿಗೆ: ಜಗ್ಗೇಶ್​ಗೆ ಎಚ್ಚರಿಕೆ
Follow us
ಮಂಜುನಾಥ ಸಿ.
|

Updated on: Feb 18, 2024 | 7:58 PM

ನಟ ಜಗ್ಗೇಶ್ (Jaggesh) ತಮ್ಮ ಬಿಡು-ಬೀಸು ಮಾತಿನಿಂದ ಆಗಾಗ್ಗೆ ಅನವಶ್ಯಕ ವಿವಾದಗಳಲ್ಲಿ ಸಿಲುಕಿಕೊಳ್ಳುತ್ತಿರುತ್ತಾರೆ. ಅನಿಸಿದ್ದನ್ನು ಹೆಚ್ಚು ಯೋಚಿಸದೆ ಹೇಳಿ ಬಿಡುವ ಜಗ್ಗೇಶ್​ರ ಗುಣ ಕೆಲವೊಮ್ಮೆ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದ್ದಿದೆ. ಇದೀಗ ನಟ ಜಗ್ಗೇಶ್ ಮತ್ತೊಮ್ಮೆ ತಮ್ಮ ಬಿಡು-ಬೀಸು ಮಾತಿನ ಧಾಟಿಯಿಂದಾಗಿಯೇ ಸಮಸ್ಯೆಗೆ ಸಿಲುಕಿದ್ದಾರೆ. ಜಗ್ಗೇಶ್​ ಇತ್ತೀಚೆಗೆ ವೇದಿಕೆಯೊಂದರ ಮೇಲೆ ಜಗ್ಗೇಶ್ ಆಡಿದ ಮಾತಿನ ಬಗ್ಗೆ ವಹ್ನಿಕುಲ ಕ್ಷತ್ರಿಯ ಸಮುದಾಯದ ಕೆಲವು ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಕೂಡಲೇ ಅವರು ಕ್ಷಮೆ ಕೇಳದಿದ್ದರೆ ಪ್ರತಿಭಟನೆ ನಡೆಸುವುದಾಗಿಯೂ, ಮನೆಗೆ ಮುತ್ತಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ.

ತಮ್ಮ ನಟನೆಯ ‘ರಂಗನಾಯಕ’ ಸಿನಿಮಾದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಜಗ್ಗೇಶ್ ಹುಲಿ ಉಗುರು ಪ್ರಕರಣದ ಬಗ್ಗೆ ಮಾತನಾಡುತ್ತಾ ವರ್ತೂರು ಸಂತೋಷ್ ಹುಲಿ ಉಗುರು ಧರಿಸಿ ಬಂಧನಕ್ಕೆ ಒಳಗಾದ ವಿಷಯ ಮಾತನಾಡುತ್ತಾ, ‘ಯಾವನೋ ಕಿತ್ತೋದ್ ನನ್ ಮಗ ರಿಯಲ್ ಹುಲಿ ಉಗುರು ಹಾಕ್ಕೋಂಡ್ ಯಾವುದೋ ಟಿವಿಯಲ್ಲಿ ತಗಲಾಕ್ಕೊಂಡ’ ಎಂದಿದ್ದರು. ಈ ಬಗ್ಗೆ ಮಾತನಾಡಿದ್ದ ವರ್ತೂರು ಸಂತೋಷ್, ‘ಅವರು ದೊಡ್ಡವರು, ಎಲ್ಲದಕ್ಕೂ ಉತ್ತರ ಕೊಡಬೇಕಿಲ್ಲ, ನಾವು ಸುಮ್ಮನಿದ್ದರೆ ಅದೇ ಉತ್ತರ, ‘ಕಾಲಾಯ ತಸ್ಮೈ ನಮಃ’ ಎಂದಿದ್ದರು. ರಾಜ್ಯಸಭಾ ಸದಸ್ಯರೂ ಆಗಿರುವ ಜಗ್ಗೇಶ್ ಅವರು ವರ್ತೂರು ಸಂತು ಬಗ್ಗೆ ಕೀಳು ಪದಗಳ ಬಳಕೆ ಮಾಡಿದ ಬಗ್ಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದರು.

ಇದನ್ನೂ ಓದಿ:‘ಹುಲಿ ಉಗುರು’ ಪ್ರಕರಣದ ಬಗ್ಗೆ ನಗಿಸುತ್ತಲೇ ಬೇಸರ ಹೇಳಿಕೊಂಡ ಜಗ್ಗೇಶ್

ಇದೀಗ ವಹ್ಮಿಕುಲ ಕ್ಷತ್ರಿಯ ಸಮುದಾಯದ ಮುಖಂಡರೊಬ್ಬರು, ತಮ್ಮ ಸಮುದಾಯದ ಯುವಕನ ಬಗ್ಗೆ ಜಗ್ಗೇಶ್ ಲಘುವಾಗಿ ಮಾತನಾಡಿರುವುದನ್ನು ಖಂಡಿಸಿದ್ದಾರೆ. ಒಂದೊಮ್ಮೆ ಜಗ್ಗೇಶ್ ಕ್ಷಮೆ ಕೇಳದೇ ಇದ್ದರೆ ಅವರ ಮನೆಯ ಮುಂದೆ ಪ್ರತಿಭಟನೆ ಮಾಡುವುದಾಗಿಯೂ, ಮನೆಗೆ ಮುತ್ತಿಗೆ ಹಾಕುವುದಾಗಿಯೂ ಎಚ್ಚರಿಕೆ ನೀಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಬಿಟ್ಟಿರುವ ಹೆಬ್ಬಗೋಡಿ ಮಾಜಿ ನಗರಸಭೆ ಸದಸ್ಯ, ಹಾಗೂ ವಹ್ನಿಕುಲ ಕ್ಷತ್ರಿಯ ಸಮಯುದಾಯದ ಮುಖಂಡ ನಾರಾಯಣ ಸ್ವಾಮಿ, ‘ಬಿಗ್‌ಬಾಸ್ ಖ್ಯಾತಿಯ ಹಳ್ಳಿಕಾರ್ ಒಡೆಯ ವರ್ತೂರ್ ಸಂತೋಷ್ ಬಗ್ಗೆ ರಾಜ್ಯಸಭಾ ಸದಸ್ಯ, ಚಲನಚಿತ್ರ ನಟ ಜಗ್ಗೇಶ್ ಲಘುವಾಗಿ ಮಾತನಾಡಿದ್ದಾರೆ. ಸಂತೋಷ್ ಒಳ್ಳೆಯ ಮನುಷ್ಯ. ಸಣ್ಣ ಹುಡುಗನನ್ನು ಕೂಡ ಅಣ್ಣ ಎಂದು ಕರೆಯುವ ಒಳ್ಳೆ ಹೃದಯವಂತ, ಸ್ನೇಹಜೀವಿ. ಅಂತಹವರ ಬಗ್ಗೆ ಕೆಟ್ಟ ಪದಗಳನ್ನು ಬಳಸಲಾಗಿದೆ. ಇದರಲ್ಲೇ ನೀನು ಎಲ್ಲರಿಗೂ ಯಾವ ರೀತಿ ಮರ್ಯಾದೆ ಕೊಡುತ್ತೀಯ ಎನ್ನುವುದು ಗೊತ್ತಾಗುತ್ತಿದೆ. ಕೂಡಲೇ ಮಾಧ್ಯಮದ ಮುಂದೆ ಬಂದು ಕ್ಷಮೆಯಾಚಿಸಬೇಕು. ಇಲ್ಲದಿದ್ದರೆ ನಿಮ್ಮ ಮನೆಗೆ ಮುತ್ತಿಗೆ ಹಾಕಿ ಧರಣಿ ಕೂರುತ್ತೇವೆ’ ಎಂದು ಎಚ್ಚರಿಕೆ ನೀಡಿದ್ದಾರೆ.

ಸಂತೋಷ್, ಕ್ಷತ್ರಿಯ ವಂಶದಲ್ಲಿ ಹುಟ್ಟಿದ್ದಾನೆ. ವಹ್ನಿಕುಲದಲ್ಲಿ ಹುಟ್ಟಿ ಬೆಳವಣಿಗೆ ಆಗುತ್ತಿದ್ದಾನೆ. ಅಂತಹ ಹುಡುಗನ ಬಗ್ಗೆ ಕೀಳುಮಟ್ಟದ ಭಾಷೆ ಬಳಸಿದ್ದೀಯ. ವಹ್ನಿಕುಲ ಕ್ಷತ್ರಿಯರ ಹುಡುಗ ಆತ. ಈಗ ಅವನು ಬೆಳವಣಿಗೆ ಆಗುತ್ತಿದ್ದಾನೆ ಎಂದು ಹೊಟ್ಟೆ ಕಿಚ್ಚಿನಿಂದ ಈ ರೀತಿಯ ಪದಗಳನ್ನು ಬಳಸುತ್ತಿದ್ದೀಯಾ? ಕ್ಷಮೆ ಕೇಳದಿದ್ದರೆ ವರ್ತೂರು ಸಂತೋಷ್ ಅಭಿಮಾನಿಗಳು ನಿನಗೆ ತಕ್ಕ ಶಾಸ್ತಿ ಮಾಡಬೇಕಾಗುತ್ತದೆ ಎಂದು ಹೇಳಿರುವ ನಾರಾಯಣಸ್ವಾಮಿ, ಆ ಪ್ರಕರಣ ನಡೆದಾಗ ‘ನೀನು ಯಾಕೆ ಕೋರ್ಟ್‌ ಮೊರೆ ಹೋದೆ ಹೇಳು’ ಎಂದು ಏಕವಚನದಲ್ಲಿಯೇ ಪ್ರಶ್ನೆ ಮಾಡಿದ್ದಾರೆ.

ವರ್ತೂರು ಸಂತೋಷ್ ಬಿಗ್​ಬಾಸ್ ಮನೆಗೆ ಹೋಗಿದ್ದಾಗ ಅಲ್ಲಿ ಹುಲಿ ಉಗುರು ತೊಟ್ಟಿದ್ದ ಕಾರಣ ಅವರು ಬಂಧನಕ್ಕೆ ಒಳಗಾಗಿದ್ದರು. ಅದಾದ ಬಳಿಕ ಹುಲಿ ಉಗುರು ಧರಿಸಿದ್ದ ಸಿನಿಮಾ ಸೆಲೆಬ್ರಿಟಿಗಳ ಮನೆಗಳ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು. ಜಗ್ಗೇಶ್​ ಸಹ ಈ ಪ್ರಕರಣದಲ್ಲಿ ತಮ್ಮ ತಾಯಿ ತಮಗೆ ನೀಡಿದ್ದ ಹುಲಿ ಉಗುರಿನ ಪೆಂಡೆಂಟ್ ಅನ್ನು ಕಳೆದುಕೊಳ್ಳುವಂತಾಯ್ತು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ