ಬಿಗ್ ಬಾಸ್ನಲ್ಲಿ ಈ ಬಾರಿ ನಡೆದ ದೊಡ್ಡ ವಿವಾದಗಳು; ಇಲ್ಲಿದೆ ವಿವರ..
ವರ್ತೂರು ಸಂತೋಷ್ ಅವರ ಹುಲಿ ಉಗುರು ಪ್ರಕರಣ, ವಿನಯ್ ಬಳಕೆ ಮಾಡಿದ ಬಳೆ ವಿಚಾರ ಸೇರಿ ಅನೇಕ ವಿಚಾರಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದವು. ಈ ಬಾರಿ ಭರ್ಜರಿ ಚರ್ಚೆ ಆದ ವಿಚಾರಗಳು ಯಾವವು?
‘ಬಿಗ್ ಬಾಸ್ ಕನ್ನಡ ಸೀಸನ್ 10’ (BBK 10) ಕೊನೆ ಆಗುವ ಹಂತಕ್ಕೆ ಬಂದಿದೆ. ಇಂದು (ಜನವರಿ 27) ಹಾಗೂ ಭಾನುವಾರ (ಜನವರಿ 28) ಫಿನಾಲೆ ನಡೆಯಲಿದೆ. ಈ ಬಾರಿ ವಿವಾದಗಳಿಂದಲೇ ‘ಬಿಗ್ ಬಾಸ್’ ಸುದ್ದಿ ಆಯಿತು. ವರ್ತೂರು ಸಂತೋಷ್ ಅವರ ಹುಲಿ ಉಗುರು ಪ್ರಕರಣ, ವಿನಯ್ ಬಳಕೆ ಮಾಡಿದ ಬಳೆ ವಿಚಾರ ಸೇರಿ ಅನೇಕ ವಿಚಾರಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದವು. ಈ ಬಾರಿ ಭರ್ಜರಿ ಚರ್ಚೆ ಆದ ವಿಚಾರಗಳು ಯಾವವು? ಫಿನಾಲೆಗೂ ಮೊದಲು ಆ ಬಗ್ಗೆ ಇಲ್ಲಿದೆ ವಿವರ.
ವರ್ತೂರು ಸಂತೋಷ್ ಹುಲಿ ಉಗುರು..
ವರ್ತೂರು ಸಂತೋಷ್ ಅವರು ಚಿನ್ನ ಧರಿಸಿ ಬಿಗ್ ಬಾಸ್ ಮನೆಗೆ ಬಂದಿದ್ದರು. ಅವರ ಕತ್ತಿನಲ್ಲಿ ಇದ್ದ ಹುಲಿ ಉಗುರು ಕೆಲವರ ಕಣ್ಣು ಕುಕ್ಕಿತು. ಅರಣ್ಯ ಇಲಾಖೆಯಲ್ಲಿ ಈ ಸಂಬಂಧ ಕೇಸ್ ದಾಖಲಾಯಿತು. ಕೇಸ್ ದಾಖಲಾದ ಬಳಿಕ ಅವರನ್ನು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆತಂದು ಬಂಧಿಸಲಾಯಿತು. ಇದು ಎಲ್ಲರಿಗೂ ಶಾಕ್ ತಂದಿತ್ತು. ಅವರು ಜೈಲು ಸೇರಿದರು. ನಂತರ ಜಾಮೀನು ಪಡೆದು ಅವರು ಮರಳಿ ದೊಡ್ಮನೆಗೆ ಬಂದರು. ಈ ವಿಚಾರ ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು.
ಬಳೆಯ ವಿಚಾರ..
ಹಳ್ಳಿಯ ಟಾಸ್ಕ್ ಆಡುವಾಗ ವಿನಯ್ ಗೌಡ ಅವರು ‘ಬಳೆ ಹಾಕ್ಕೊಂಡವರ ರೀತಿ ಆಡಬೇಡ, ಗಂಡಸರ ತರ ಆಡು’ ಎಂದು ಹೇಳಿದ್ದರು. ಇದು ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದನ್ನು ಸಂಗೀತಾ ವಿರೋಧಿಸಿದ್ದರು. ‘ಮಹಿಳೆಯರನ್ನು ಅವಮಾನಿಸಲಾಗಿದೆ’ ಎನ್ನುವ ಚರ್ಚೆ ನಡೆಯಿತು. ವಿನಯ್ ಹೇಳಿಕೆಯನ್ನು ಸುದೀಪ್ ಕೂಡ ಖಂಡಿಸಿದ್ದರು. ವಿನಯ್ಗೆ ಕ್ಲಾಸ್ ತೆಗೆದುಕೊಂಡಿದ್ದರು..
ತನಿಷಾ ಕುಪ್ಪಂಡ..
ತನಿಷಾ ಕುಪ್ಪಂಡ ಬಳಕೆ ಮಾಡಿದ ಒಂದು ಶಬ್ದದಿಂದ ವಿವಾದ ಸೃಷ್ಟಿ ಆಗಿತ್ತು. ಜಾತಿ ಬಗ್ಗೆ ಅವರು ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎನ್ನುವ ಆರೋಪ ಕೇಳಿ ಬಂತು. ಅವರ ವಿರುದ್ಧ ಕೇಸ್ ಕೂಡ ದಾಖಲಾಯಿತು.
ಕಣ್ಣಿಗೆ ಹಾನಿ..
ಟಾಸ್ಕ್ ಆಡುವ ವೇಳೆ ಸ್ಪರ್ಧಿಗಳು ಎಲ್ಲೆ ಮೀರಿದ್ದರು. ನೀರಿಗೆ ಸಾಕಷ್ಟು ರಾಸಾಯನಿಕ ಬಳಕೆ ಮಾಡಿ ಮುಖಕ್ಕೆ ಎರಚ್ಚಿದ್ದರಿಂದ ಸಂಗಿತಾ ಶೃಂಗೇರಿ ಹಾಗೂ ಡ್ರೋನ್ ಪ್ರತಾಪ್ ಕಣ್ಣಿಗೆ ಹಾನಿ ಉಂಟಾಗಿತ್ತು. ಇದು ಸಾಕಷ್ಟು ವಿವಾದ ಸೃಷ್ಟಿ ಮಾಡಿತ್ತು. ವೀಕೆಂಡ್ ಎಪಿಸೋಡ್ನಲ್ಲಿ ಸುದೀಪ್ ಅವರು ಎಲ್ಲರನ್ನು ತಿದ್ದುವ ಕೆಲಸ ಮಾಡಿದ್ದರು.
ಚಪ್ಪಲಿ ಎಸೆತ..
ವಿನಯ್ ಗೌಡ ಅವರು ಸಿಟ್ಟಲ್ಲಿ ಕಾರ್ತಿಕ್ ಮುಖಕ್ಕೆ ಹಿಟ್ಟು ಎಸೆದಿದ್ದರು. ಇದರಿಂದ ಸಿಟ್ಟಾದ ಕಾರ್ತಿಕ್ ಅವರು ಚಪ್ಪಲಿಯನ್ನು ಬೀಸಿ ನೆಲಕ್ಕೆ ಎಸೆದಿದ್ದರು. ಅದು ಹೋಗಿ ವಿನಯ್ಗೆ ತಾಗಿತ್ತು. ಇದರಿಂದ ವಿನಯ್ ಸಿಟ್ಟಾಗಿದ್ದರು. ಅವರು ಕೋಪದಲ್ಲಿ ಕಿರುಚಾಡಿದ್ದರು. ಇದು ಕೂಡ ಚರ್ಚೆ ಹುಟ್ಟುಹಾಕಿತ್ತು.
ವಿನಯ್ ಶಬ್ದ ಬಳಕೆ
ವಿನಯ್ ಗೌಡ ಅವರು ಅನೇಕ ಬಾರಿ ಕೆಟ್ಟ ಶಬ್ದ ಬಳಕೆ ಮಾಡಿದ್ದಿದೆ. ಇದನ್ನು ಅನೇಕರು ಖಂಡಿಸಿದ್ದಾರೆ. ಪ್ರತಾಪ್ ಬಗ್ಗೆ ಅವರು ಬಳಕೆ ಮಾಡಿದ ಅನೇಕ ಶಬ್ದ ಟೀಕೆಗೆ ಒಳಗಾಗಿತ್ತು. ಇದನ್ನು ಅನೇಕರು ಟೀಕಿಸಿದ್ದಾರೆ.
ರಕ್ಷಕ್..
ಬಿಗ್ ಬಾಸ್ನಿಂದ ಔಟ್ ಆದ ಬಳಿಕ ಬುಲೆಟ್ ರಕ್ಷಕ್ ಅವರು ಹಲವು ಮಾಧ್ಯಮಗಳಿಗೆ ಸಂದರ್ಶನ ನೀಡಿದ್ದಾರೆ. ಈ ವೇಳೆ ಅವರು ಬಿಗ್ ಬಾಸ್ ಬಗ್ಗೆ ಹಾಗೂ ಸುದೀಪ್ ಬಗ್ಗೆ ಬಾಯಿಗೆ ಬಂದಂತೆ ಮಾತನಾಡಿದ್ದರು. ಈ ಮೂಲಕ ಟೀಕೆಗೆ ಒಳಗಾಗಿದ್ದರು.
ಇದನ್ನೂ ಓದಿ: ಸಂಗೀತಾ, ಕಾರ್ತಿಕ್, ಡ್ರೋನ್ ಪ್ರತಾಪ್ ಇವರಲ್ಲಿ ಯಾರು ಫೇಕ್: ಅವಿನಾಶ್ ಹೇಳಿದ್ದು ಹೀಗೆ
ಆತ್ಮಹತ್ಯೆ ಪ್ರಯತ್ನ ವದಂತಿ..
ಡ್ರೋನ್ ಪ್ರತಾಪ್ ಅವರು ಬಿಗ್ ಬಾಸ್ ಮನೆಯಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದಾರೆ ಎಂದು ಸುದ್ದಿ ಆಗಿತ್ತು. ಆದರೆ, ಇದನ್ನು ಅಲ್ಲಗಳೆಯಲಾಯಿತು. ಅನಾರೋಗ್ಯ ಕಾರಣದಿಂದ ಅವರು ಆಸ್ಪತ್ರೆ ಸೇರಿದ್ದರು. ಇದು ಫುಡ್ ಪಾಯ್ಸನ್ ಎಂದು ವೈದ್ಯರು ಕೂಡ ಖಚಿತಪಡಿಸಿದರು.
ಇನ್ನಷ್ಟು ಸಿನಿಮಾ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:14 am, Sat, 27 January 24