ವೀಕೆಂಡ್ ವಿಥ್ ರಮೇಶ್ ಮೊದಲ ಎಪಿಸೋಡ್ಗೆ ರಿಷಬ್ ಬದಲು ಬೇರೆ ಅತಿಥಿ? ಲಿಸ್ಟ್ನಲ್ಲಿ ಯಾರ್ಯಾರಿದ್ದಾರೆ?
ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ನ ಮೊದಲ ಎಪಿಸೋಡ್ಗೆ ಕಾಂತಾರ ನಾಯಕ ರಿಷಬ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈಗ ಮತ್ತೊಬ್ಬ ಸಾಧಕರ ಹೆಸರು ಮುನ್ನೆಲೆಗೆ ಬಂದಿದೆ.
ಭಾರಿ ಜನಪ್ರಿಯತೆ ಗಳಿಸಿದ್ದ ಟಿವಿ ಶೋ ವೀಕೆಂಡ್ ವಿತ್ ರಮೇಶ್ನ (Weekend With Ramesh) ಹೊಸ ಸೀಸನ್ ಶೀಘ್ರವೇ ಆರಂಭವಾಗಲಿದೆ. ಶೋನ ಪ್ರೋಮೋ ಇದಾಗಲೇ ಬಿಡುಗಡೆ ಆಗಿದ್ದು, ಕೆಲವೇ ದಿನಗಳಲ್ಲಿ ಎಪಿಸೋಡ್ ಪ್ರಸಾರ ಆರಂಭವಾಗಲಿದೆ. ಈ ಸೀಸನ್ನ ಮೊದಲ ಎಪಿಸೋಡ್ಗೆ ಕಾಂತಾರ ನಾಯಕ ರಿಷಬ್ ಶೆಟ್ಟಿ (Rishab Shetty) ಅತಿಥಿಯಾಗಿ ಭಾಗವಹಿಸಲಿದ್ದಾರೆ ಎನ್ನಲಾಗುತ್ತಿತ್ತು. ಆದರೆ ಈಗ ಮತ್ತೊಬ್ಬ ಸಾಧಕರ ಹೆಸರು ಮುನ್ನೆಲೆಗೆ ಬಂದಿದೆ.
ಈ ಸೀಸನ್ನ ಮೊದಲ ಎಪಿಸೋಡ್ಗೆ ರಿಷಬ್ ಶೆಟ್ಟಿ ಅತಿಥಿಯಾಗಿ ಭಾಗವಹಿಸಲಿದ್ದಾರೆ ಸಾಧಕರ ಕುರ್ಚಿಯನ್ನು ಅಲಂಕರಿಸಲಿದ್ದಾರೆ ಎನ್ನಲಾಗಿತ್ತು. ಆದರೆ ಕೆಲವು ಸುದ್ದಿಗಳ ಪ್ರಕಾರ ಮೊದಲ ಎಪಿಸೋಡ್ಗೆ ರಿಷಬ್ ಶೆಟ್ಟಿಯ ಬದಲಾಗಿ ಕರ್ನಾಟಕದವರೇ ಆದರೂ ಭಾರತದಾದ್ಯಂತ ಹೆಸರು ಮಾಡಿರುವ ಪ್ರಭುದೇವ ಅತಿಥಿಯಾಗಲಿದ್ದಾರೆ ಎನ್ನಲಾಗುತ್ತಿದೆ. ಅಬ್ಬಯ್ಯ ನಾಯ್ಡು ಸ್ಟುಡಿಯೋದಲ್ಲಿ ನಡೆದ ಚಿತ್ರೀಕರಣದಲ್ಲಿ ಪ್ರಭುದೇವ ಪಾಲ್ಗೊಂಡಿದ್ದರು ಎನ್ನಲಾಗುತ್ತಿದೆ.
ರಿಷಬ್ ಶೆಟ್ಟಿ ಸಹ ಈ ಬಾರಿ ಸಾಧಕರ ಕುರ್ಚಿಯಲ್ಲಿ ಕೂರುವುದು ಪಕ್ಕಾ ಆಗಿದೆ. ರಿಷಬ್ ಶೆಟ್ಟಿ ಮಾತ್ರವೇ ಅಲ್ಲದೆ ಹಿಂದಿನ ಸೀಸನ್ನಲ್ಲಿ ಸಾಧಕರ ಕುರ್ಚಿ ಏರದೇ ಇದ್ದ ಹಲವು ಸಾಧಕರು ಈ ಬಾರಿ ಕುರ್ಚಿ ಏರಲಿದ್ದಾರೆ. ಈ ಬಾರಿ ಸಿನಿಮಾ, ರಾಜಕೀಯ ಮಾತ್ರವೇ ಅಲ್ಲದೆ ಸಾಮಾನ್ಯರಾಗಿದ್ದು ಜನಸೇವೆ ಮಾಡಿದವರು ಸಹ ಅತಿಥಿಗಳಾಗಿ ಆಗಮಿಸಲಿದ್ದಾರೆ.
ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ನಟ ಡಾಲಿ ಧನಂಜಯ್, ನಟಿ ರಮ್ಯಾ, ಮಾಲಾಶ್ರೀ, ವಿಜಯ್ ಕಿರಗಂದೂರು, ರಕ್ಷಿತ್ ಶೆಟ್ಟಿ, ರಚಿತಾ ರಾಮ್, ನೀನಾಸಂ ಸತೀಶ್, ಆರ್ ಚಂದ್ರು ಇನ್ನೂ ಕೆಲವರನ್ನು ಈ ಬಾರಿ ವೀಕೆಂಡ್ ವಿತ್ ರಮೇಶ್ಗೆ ಕರೆತರಬೇಕೆಂಬ ಒತ್ತಾಯ ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬರುತ್ತಿದೆ. ಇವರಲ್ಲಿ ಎಷ್ಟು ಮಂದಿ ಸಾಧಕರ ಕುರ್ಚಿ ಏರುತ್ತಾರೆ ಕಾದು ನೋಡಬೇಕಿದೆ.
ಜೀ ಕನ್ನಡ ಚಾನೆಲ್ನವರು ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ನ ಚಿತ್ರೀಕರಣ ಈಗಾಗಲೇ ಪ್ರಾರಂಭಿಸಿದ್ದು, ಕೆಲವು ಎಪಿಸೋಡ್ಗಳ ಚಿತ್ರೀಕರಣ ಮುಗಿಸಿದೆ ಎನ್ನಲಾಗುತ್ತಿದೆ. ಕೆಲವೇ ದಿನಗಳಲ್ಲಿ ಕಾರ್ಯಕ್ರಮದ ಹೊಸ ಪ್ರೋಮೋ ಬಿಡುಗಡೆ ಆಗಲಿದ್ದು, ಹೊಸ ಸೀಸನ್ನ ಮೊದಲ ಎಪಿಸೋಡ್ನ ಪ್ರಸಾರದ ದಿನಾಂಕ ಹಾಗೂ ಅತಿಥಿಗಳ ಬಗ್ಗೆ ಸುಳಿವು ಸಿಗುವ ಸಾಧ್ಯತೆ ಇದೆ.