ಒಂದು ಸಮುದಾಯಕ್ಕೆ ನೋವಾಗುವಂತೆ ನಡೆದುಕೊಂಡ ವಿಚಾರ; ಕ್ಷಮೆ ಕೇಳಿದ ಯಶಸ್

ಬಿಗ್ ಬಾಸ್ ಮನೆಯಲ್ಲಿ ಗಗನ್ ಜೊತೆಗಿನ ಜಗಳದ ವೇಳೆ ವಿವಾದಿತ '9' ಪದ ಬಳಸಿದ್ದ ಯಶಸ್ ವಿರುದ್ಧ ಕಿಚ್ಚ ಸುದೀಪ್ ತೀವ್ರವಾಗಿ ಕಿಡಿಕಾರಿದ್ದಾರೆ. ಯಾವುದೇ ನಿರ್ದಿಷ್ಟ ಸಮುದಾಯಕ್ಕೆ ಅವಮಾನ ಮಾಡುವುದು ತಪ್ಪು ಎಂದು ಎಚ್ಚರಿಸಿದ ಬೆನ್ನಲ್ಲೇ, ಯಾರಿಗೂ ನೋವುಂಟು ಮಾಡುವ ಉದ್ದೇಶವಿಲ್ಲ ಎಂದು ಯಶಸ್ ಬೇಷರತ್ ಕ್ಷಮೆ ಕೋರಿದ್ದಾರೆ.

ಒಂದು ಸಮುದಾಯಕ್ಕೆ ನೋವಾಗುವಂತೆ ನಡೆದುಕೊಂಡ ವಿಚಾರ; ಕ್ಷಮೆ ಕೇಳಿದ ಯಶಸ್
ಯಶಸ್-ಸುದೀಪ್

Updated on: Oct 31, 2026 | 11:04 PM

‘ಬಿಗ್ ಬಾಸ್ ಕನ್ನಡ’ ಶನಿವಾರದ ‘ಕಿಚ್ಚನ ಪಂಚಾಯ್ತಿ’ ಸಂಚಿಕೆಯಲ್ಲಿ ಸ್ಪರ್ಧಿ ಯಶಸ್ ಆಡಿದ ವಿವಾದಿತ ಮಾತುಗಳ ವಿಷಯ ತೀವ್ರ ಚರ್ಚೆಗೆ ಗ್ರಾಸವಾಯಿತು. ಟಿವಿಯ ಮುಖ್ಯ ಎಪಿಸೋಡ್‌ನಲ್ಲಿ ತೋರಿಸದಿದ್ದರೂ, 24/7 ಲೈವ್‌ನಲ್ಲಿ ಪ್ರಸಾರವಾಗಿದ್ದ ಗಂಭೀರ ವಿಚಾರವೊಂದನ್ನು ಕಿಚ್ಚ ಸುದೀಪ್ ವೀಕೆಂಡ್ ಸಂಚಿಕೆಯಲ್ಲಿ ಎತ್ತಿಕೊಟ್ಟರು. ಅದುವೇ ಯಶಸ್ ಬಳಸಿದ ‘ಒಂಭತ್ತು’ ಎಂಬ ಪದ ಬಳಕೆ.

ಸಾಮಾಜಿಕ ಜಾಲತಾಣಗಳಲ್ಲಿ ಯಶಸ್ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದಲ್ಲದೆ, ಅವರು ಕೂಡಲೇ ಸಂಬಂಧಿಸಿದ ಕಮ್ಯೂನಿಟಿಗೆ ಕ್ಷಮೆ ಕೇಳಬೇಕು ಎಂಬ ಒತ್ತಾಯ ಜೋರಾಗಿತ್ತು. ಈ ವಿಷಯವನ್ನು ವೇದಿಕೆ ಮೇಲೆ ಪ್ರಸ್ತಾಪಿಸಿದ ನಿರೂಪಕ ಕಿಚ್ಚ ಸುದೀಪ್, ಯಶಸ್ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ‘ಕಮ್ಯೂನಿಟಿಯನ್ನು ಎಳೆದು ತರುವುದು ಸಂಪೂರ್ಣ ತಪ್ಪು. ನಮ್ಮ ದೇಶದಲ್ಲಿ ನಾನಾ ರೀತಿಯ ಕಮ್ಯೂನಿಟಿಗಳು ಜೀವಿಸುತ್ತಿವೆ. ಯಾರೊಬ್ಬರಿಗೂ ಇನ್ನೊಬ್ಬರನ್ನು ಕೀಳಾಗಿ ಕಾಣುವ ಅಥವಾ ಅವಮಾನಿಸುವ ಹಕ್ಕು ಇಲ್ಲ’ ಎಂದು ಖಡಕ್ಕಾಗಿ ಹೇಳಿದರು.

ಯಶಸ್ ಅವರ ಈ ಹಗುರವಾದ ನಡೆಗೆ ಕ್ಲಾಸ್ ತಗೆದುಕೊಂಡ ಸುದೀಪ್, ‘ಯಾವುದೋ ಒಂದು ವರ್ಗವನ್ನು ನಿರ್ದಿಷ್ಟ ನಂಬರ್‌ಗಳಿಗೆ ಹೋಲಿಸಿ ಮಾತನಾಡುವುದು ಅತ್ಯಂತ ಕೆಟ್ಟ ಸಂಸ್ಕೃತಿ. ನ್ಯಾಷನಲ್ ಟೆಲಿವಿಷನ್‌ನಲ್ಲಿ ಈ ರೀತಿಯ ಜವಾಬ್ದಾರಿರಹಿತ ಪದಗಳನ್ನು ಬಳಸುವುದು ನಿಮ್ಮ ಇಡೀ ಜೀವನ ಮತ್ತು ವೃತ್ತಿಬದುಕನ್ನೇ ಹಾಳು ಮಾಡಿಬಿಡುತ್ತದೆ’ ಎಂದು ಸುದೀಪ್ ಯಶಸ್ ಅವರಿಗೆ ಎಚ್ಚರಿಕೆಯ ಸಂದೇಶ ನೀಡಿದರು. ಸುದೀಪ್ ಅವರ ಈ ಕಟು ಮಾತುಗಳು ಮನೆಯ ಇತರೆ ಸ್ಪರ್ಧಿಗಳಿಗೂ ಎಚ್ಚರಿಕೆಯ ಗಂಟೆಯಾಗಿ ಪರಿಣಮಿಸಿತು.

ಸುದೀಪ್ ಅವರು ವಿಷಯದ ಗಂಭೀರತೆಯನ್ನು ಬಿಚ್ಚಿಡುತ್ತಿದ್ದಂತೆ ತಮ್ಮ ತಪ್ಪಿನ ಅರಿವಾದ ಯಶಸ್, ವೇದಿಕೆಯಲ್ಲೇ ಸಾರ್ವಜನಿಕವಾಗಿ ಕ್ಷಮೆ ಕೇಳಿದರು. ‘ಯಾವುದೇ ಒಂದು ನಿರ್ದಿಷ್ಟ ಕಮ್ಯೂನಿಟಿಗೆ ಅಥವಾ ಸಮುದಾಯಕ್ಕೆ ಹರ್ಟ್ ಮಾಡುವ ಅಥವಾ ಅಪಮಾನ ಮಾಡುವ ಯಾವುದೇ ಉದ್ದೇಶ ನನಗೆ ಖಂಡಿತ ಇರಲಿಲ್ಲ. ಆ ಕ್ಷಣದ ಸಿಟ್ಟು ಹಾಗೂ ಆಕ್ರೋಶದಲ್ಲಿ ನನಗೆ ಇದ್ದ ಒಂದೇ ಉದ್ದೇಶ ಗಗನ್ ಅವರನ್ನು ಮಾತ್ರ ಹರ್ಟ್ ಮಾಡುವುದಾಗಿತ್ತು. ನನ್ನ ಮಾತುಗಳಿಂದ ಯಾರಿಗಾದರೂ ನೋವಾಗಿದ್ದರೆ ನಾನು ಬೇಷರತ್ ಕ್ಷಮೆ ಕೋರುತ್ತೇನೆ’ ಎಂದು ಯಶಸ್ ಸ್ಪಷ್ಟಪಡಿಸಿದರು.

ಇದನ್ನೂ ಓದಿ: ಊಟಕ್ಕೋಸ್ಕರ ಏನು ಮಾಡೋಕೂ ರೆಡಿ ಇದೀರಾ?; ಗಗನ್​ಗೆ ಸುದೀಪ್ ಛೀಮಾರಿ

ಕೊನೆಗೂ ಯಶಸ್ ತಮ್ಮ ತಪ್ಪನ್ನು ಒಪ್ಪಿಕೊಂಡು ಕ್ಷಮೆ ಯಾಚಿಸುವುದರೊಂದಿಗೆ ಈ ವಿವಾದಕ್ಕೆ ತೆರೆ ಬಿದ್ದಂತಾಗಿದೆ. ಆದರೆ ಬಿಗ್ ಬಾಸ್‌ನಂತಹ ದೊಡ್ಡ ವೇದಿಕೆಯಲ್ಲಿ ಆಡುವ ಪ್ರತಿಯೊಂದು ಮಾತು ಎಷ್ಟು ಜವಾಬ್ದಾರಿಯುತವಾಗಿರಬೇಕು ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮುಂಬರುವ ದಿನಗಳಲ್ಲಿ ಸ್ಪರ್ಧಿಗಳು ತಮ್ಮ ನಾಲಿಗೆಯ ಮೇಲೆ ನಿಗ್ರಹವಿಟ್ಟುಕೊಂಡು ಆಟವಾಡಬೇಕಾದ ಅಗತ್ಯವನ್ನು ಈ ಸಂಚಿಕೆ ಸ್ಪಷ್ಟಪಡಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

 

ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
Loading...
Unable to load recommendations.
Follow Us