
‘ತೆಲುಗು ಬಿಗ್ ಬಾಸ್ ಸೀಸನ್ 6’ ಆರಂಭ ಆಗಿದೆ. ಸೆಪ್ಟೆಂಬರ್ 4ರಂದು ಹೊಸ ಸೀಸನ್ಗೆ ಚಾಲನೆ ನೀಡಲಾಗಿದೆ. ಎಂದಿನ ಹುಮ್ಮಸ್ಸಿನಲ್ಲಿ ನಟ ಅಕ್ಕಿನೇನಿ ನಾಗಾರ್ಜುನ (Akkineni Nagarjuna) ಅರು ಸ್ಪರ್ಧಿಗಳನ್ನು ಬರಮಾಡಿಕೊಂಡಿದ್ದಾರೆ. ಸಾಮಾನ್ಯವಾಗಿ ಓಪನಿಂಗ್ ಡೇ ಎಪಿಸೋಡ್ಗೆ ಹೆಚ್ಚು ಬೇಡಿಕೆ ಇರುತ್ತದೆ. ಯಾವ ಸ್ಪರ್ಧಿಗಳು ಬಿಗ್ ಬಾಸ್ ಮನೆ ಒಳಗೆ ಹೋಗುತ್ತಾರೆ, ಅವರ ಹಿನ್ನೆಲೆ ಏನು ಎಂಬುದರ ಕುರಿತು ವೀಕ್ಷಕರಿಗೆ ಕುತೂಹಲ ಇರುತ್ತದೆ. ಆದರೆ, ತೆಲುಗು ಬಿಗ್ ಬಾಸ್ ಪಾಲಿಗೆ ಇದು ಸುಳ್ಳಾಗಿದೆ. ಮೊದಲ ದಿನ ಹೇಳಿಕೊಳ್ಳುವಂತಹ ಟಿಆರ್ಪಿ ಈ ಶೋಗೆ ಸಿಕ್ಕಿಲ್ಲ.
ಬಿಗ್ ಬಾಸ್ ರಿಯಾಲಿಟಿ ಶೋ ಪರಿಚಯ ಆದ ಸಂದರ್ಭದಲ್ಲಿ ಖ್ಯಾತ ನಾಮರು ಬಿಗ್ ಬಾಸ್ ಮನೆ ಒಳಗೆ ತೆರಳುತ್ತಿದ್ದರು. ಆದರೆ, ಇತ್ತೀಚೆಗೆ ಟ್ರೆಂಡ್ ಬದಲಾಗಿದೆ. ಸೋಶಿಯಲ್ ಮೀಡಿಯಾದಲ್ಲಿ ಖ್ಯಾತಿ ಗಳಿಸಿದ ಅನೇಕರಿಗೆ ಅವಕಾಶ ಸಿಗುತ್ತಿದೆ. ಒಂದು ವರ್ಗದ ಟಿವಿ ವೀಕ್ಷಕರಿಗೆ ಇದು ಹೆಚ್ಚು ಕನೆಕ್ಟ್ ಆಗುತ್ತಿಲ್ಲ. ಈ ಕಾರಣಕ್ಕೆ ಬಿಗ್ ಬಾಸ್ ಚಾರ್ಮ್ ದಿನ ಕಳೆದಂತೆ ಕುಗ್ಗುತ್ತಿದೆ. ತೆಲುಗು ಬಿಗ್ ಬಾಸ್ ಟಿಆರ್ಪಿ ನೋಡಿದ ಅನೇಕರಿಗೆ ಈ ಮಾತು ನಿಜ ಎನಿಸಿದೆ.
ತೆಲುಗು ಬಿಗ್ ಬಾಸ್ ಈಗಾಗಲೇ ಐದು ಸೀಸನ್ ಪೂರ್ಣಗೊಳಿಸಿದೆ. ಪ್ರತೀ ಸೀಸನ್ನ ಮೊದಲ ದಿನದ ಟಿಆರ್ಪಿ 15+ ಇತ್ತು. ಆದರೆ, ಈ ಬಾರಿ ಲೆಕ್ಕಾಚಾರ ಉಲ್ಟಾ ಆಗಿದೆ. ಸೆಪ್ಟೆಂಬರ್ 4ರಂದು ‘ಬಿಗ್ ಬಾಸ್ ತೆಲುಗು ಸೀಸನ್ 6’ಗೆ ಕೇವಲ 8.86 ಟಿಆರ್ಪಿ ಸಿಕ್ಕಿದೆ. ಅರ್ಧದಷ್ಟು ಟಿಆರ್ಪಿ ಕುಸಿದಿರುವುದು ವಾಹಿನಿಯ ಚಿಂತೆಗೆ ಕಾರಣವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಬಂತು ಕಿಸ್ ಶಬ್ದ; ಕೊಟ್ಟಿದ್ದು ಯಾರು, ತೆಗೆದುಕೊಂಡಿದ್ದು ಯಾರು?
ಸೆಪ್ಟೆಂಬರ್ 4ರ ಎಪಿಸೋಡ್ ಕುಸಿಯಲು ಹಲವು ಕಾರಣ ನೀಡಲಾಗುತ್ತಿದೆ. ಆ ದಿನ ಏಷ್ಯಾ ಕಪ್ನಲ್ಲಿ ಭಾರತ ಹಾಗೂ ಪಾಕಿಸ್ತಾನ ಪಂದ್ಯ ನಡೆಯುತ್ತಿತ್ತು. ಈ ಕಾರಣಕ್ಕೆ ಬಹುತೇಕರು ಆ ಪಂದ್ಯ ವೀಕ್ಷಣೆಗೆ ಆದ್ಯತೆ ನೀಡಿದ್ದರು. ಹೀಗಾಗಿ ತೆಲುಗು ಬಿಗ್ ಬಾಸ್ ಟಿಆರ್ಪಿ ಕುಸಿದಿರಬಹುದು ಎಂಬುದು ಒಂದು ಊಹೆ. ಇನ್ನು, ಹೇಳಿಕೊಳ್ಳುವಂತಹ ಸ್ಪರ್ಧಿಗಳು ಈ ಬಾರಿ ಇಲ್ಲ ಎಂಬ ಕಾರಣದಿಂದಲೂ ವೀಕ್ಷಕರು ಇತ್ತ ಹೆಚ್ಚು ಗಮನ ಹರಿಸುತ್ತಿಲ್ಲ. ಬಿಗ್ ಬಾಸ್ ಸ್ಪರ್ಧಿಗಳ ಪಟ್ಟಿ ಮೊದಲೇ ಲೀಕ್ ಆಗಿದ್ದು ಕೂಡ ಟಿಆರ್ಪಿ ಕುಸಿಯಲು ಕಾರಣ ಎನ್ನಲಾಗುತ್ತಿದೆ.
Published On - 10:54 am, Fri, 16 September 22