ಪ್ಯಾನ್ ಇಂಡಿಯಾ ಸಿನಿಮಾಗಳಿಂದಾಗಿ (Pan India Movies) ಬೇರೆ ಬೇರೆ ಭಾಷೆಯ ಚಿತ್ರರಂಗದ ನಡುವೆ ಉತ್ತಮ ಒಡನಾಡ ಶುರುವಾಗಿದೆ. ಆದರೆ 2023ರ ಆರಂಭದಲ್ಲಿ ಬೇರೆ ಬೇರೆ ಚಿತ್ರರಂಗಗಳ ನಡುವೆ ಬಿರುಕು ಮೂಡುವ ಸಾಧ್ಯತೆ ಗೋಚರಿಸುತ್ತಿದೆ. ಡಬ್ಬಿಂಗ್ ಸಿನಿಮಾಗಳ ವಿಷಯದಲ್ಲಿ ಟಾಲಿವುಡ್ (Tollywood) ನಿರ್ಮಾಪಕರು ಕಠಿಣ ನಿರ್ಧಾರಕ್ಕೆ ಬಂದಿದ್ದಾರೆ. 2023ರ ಸಂಕ್ರಾಂತಿಯಲ್ಲಿ ಆಂಧ್ರ ಮತ್ತು ತೆಲಂಗಾಣದಲ್ಲಿ ತೆಲುಗು ಚಿತ್ರಗಳನ್ನು ಹೊರತು ಪಡಿಸಿ ಬೇರೆ ಭಾಷೆಯ ಡಬ್ಬಿಂಗ್ ಸಿನಿಮಾಗಳಿಗೆ ಚಿತ್ರಮಂದಿರ ನೀಡಬಾರದು ಎಂದು ತೆಲುಗು ನಿರ್ಮಾಪಕರ ಸಂಘವು (Telugu Film Producers Council) ಎಲ್ಲ ವಿತರಕರಿಗೆ ಮತ್ತು ಪ್ರದರ್ಶಕರಿಗೆ ಸೂಚನೆ ನೀಡಿದೆ. ಇದು ದೊಡ್ಡ ಮಟ್ಟದಲ್ಲಿ ಚರ್ಚೆ ಹುಟ್ಟುಹಾಕಿದೆ.
ಡಬ್ಬಿಂಗ್ ಸಿನಿಮಾಗಳು ಎಲ್ಲ ರಾಜ್ಯಗಳಲ್ಲಿ ರಾರಾಜಿಸುತ್ತಿವೆ. ಕನ್ನಡದ ‘ಕಾಂತಾರ’ ಸಿನಿಮಾ ತೆಲುಗಿಗೆ ಡಬ್ ಆಗಿ ಧೂಳೆಬ್ಬಿಸಿದೆ. ಹಲವು ತೆಲುಗು ಚಿತ್ರಗಳಿಗೆ ಗಲ್ಲಾಪೆಟ್ಟಿಗೆಯಲ್ಲಿ ರಿಷಬ್ ಶೆಟ್ಟಿಯ ಈ ಕನ್ನಡ ಸಿನಿಮಾ ಪೈಪೋಟಿ ನೀಡಿದೆ. ಈಗ ತಮಿಳಿನ ‘ವಾರಿಸು’ ಸಿನಿಮಾ ಕೂಡ ತೆಲುಗಿಗೆ ಡಬ್ ಆಗಿ ತೆರೆಕಾಣಲು ಸಜ್ಜಾಗಿದೆ. ಆದರೆ ಸಂಕ್ರಾಂತಿ ಸಂದರ್ಭದಲ್ಲಿ ಡಬ್ಬಿಂಗ್ ಸಿನಿಮಾಗಳ ಬಿಡುಗಡೆಗೆ ಆಂಧ್ರ ಮತ್ತು ತೆಲಂಗಾಣದಲ್ಲಿ ಆದತ್ಯೆ ನೀಡಬಾರದು ಎಂದು ಅಲ್ಲಿನ ನಿರ್ಮಾಪಕರ ಸಂಘ ತೀರ್ಮಾನಿಸಿದೆ.
ತೆಲುಗಿನ ಖ್ಯಾತ ನಿರ್ಮಾಪಕ ದಿಲ್ ರಾಜು ಅವರು ತಮಿಳಿನ ‘ವಾರಿಸು’ ಚಿತ್ರದ ತೆಲುಗು ವರ್ಷನ್ ಅನ್ನು ಆಂಧ್ರ ಮತ್ತು ತೆಲಂಗಾಣದಲ್ಲಿ ಬಿಡುಗಡೆ ಮಾಡಲು ಮುಂದಾಗಿದ್ದಾರೆ. ಆದರೆ ಕೆಲವೇ ವರ್ಷಗಳ ಹಿಂದೆ ಇದೇ ದಿಲ್ ರಾಜು ಅವರು ಡಬ್ಬಿಂಗ್ ಚಿತ್ರಗಳ ವಿರುದ್ಧ ಮಾತನಾಡಿದ್ದರು. ಅಂದಿನ ಅವರ ಹೇಳಿಕೆಯನ್ನು ಈಗ ಮತ್ತೆ ನೆನಪಿಸುವ ಕಾರ್ಯ ಆಗುತ್ತಿದೆ. ಒಟ್ಟಾರೆಯಾಗಿ ಈ ವಿಚಾರ ಚಿತ್ರರಂಗದಲ್ಲಿ ದೊಡ್ಡ ಚರ್ಚೆ ಹುಟ್ಟುಹಾಕಿದೆ.
ಒಂದು ವೇಳೆ ಸಂಕ್ರಾಂತಿ, ದಸರಾ ಮುಂತಾದ ಹಬ್ಬದ ಸಂದರ್ಭದಲ್ಲಿ ಆಂಧ್ರ ಮತ್ತು ತೆಲಂಗಾಣದ ಥಿಯೇಟರ್ಗಳಲ್ಲಿ ತೆಲುಗು ಚಿತ್ರಗಳಿಗೆ ಮಾತ್ರ ಆದ್ಯತೆ ನೀಡಬೇಕು ಎಂದು ಅಲ್ಲಿನ ನಿರ್ಮಾಪಕರು ಕಠಿಣ ತೀರ್ಮಾನ ತೆಗೆದುಕೊಂಡರೆ ಬೇರೆ ಭಾಷೆಯ ಚಿತ್ರಗಳಿಗೆ ತೊಂದರೆ ಆಗಲಿದೆ. ಅದೇ ರೀತಿ, ಕರ್ನಾಟಕ, ತಮಿಳುನಾಡು ಮತ್ತು ಉತ್ತರ ಭಾರತದಲ್ಲೂ ಇಂಥ ಪರಿಸ್ಥಿತಿ ನಿರ್ಮಾಣವಾದರೆ ಪ್ಯಾನ್ ಇಂಡಿಯಾ ಚಿತ್ರಗಳ ಮಾರುಕಟ್ಟೆಗೆ ದೊಡ್ಡ ಪೆಟ್ಟು ಬೀಳುವುದು ಖಚಿತ.
ಡಬ್ಬಿಂಗ್ ಸಿನಿಮಾಗಳಿಗೆ ತೆಲುಗು ಮಂದಿ ಕಡಿವಾಣ ಹಾಕುವುದು ನಿಜವೇ ಹೌದಾದರೆ ಕರ್ನಾಟಕದಲ್ಲೂ ತೆಲುಗು ಸಿನಿಮಾಗಳ ರಿಲೀಸ್ಗೆ ಅವಕಾಶ ನೀಡಬಾರದು ಎಂದು ಸೋಶಿಯಲ್ ಮೀಡಿಯಾದಲ್ಲಿ ಕನ್ನಡದ ಪ್ರೇಕ್ಷಕರಿಂದ ಒತ್ತಾಯ ಕೇಳಿಬರುತ್ತಿದೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 9:19 pm, Sun, 13 November 22