Kabza Movie: 7 ಭಾಷೆಗಳಲ್ಲಿ ಧೂಳೆಬ್ಬಿಸಲಿದೆ ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ; ಭರದಿಂದ ಸಾಗುತ್ತಿದೆ ಡಬ್ಬಿಂಗ್ ಕೆಲಸ
Upendra: ಉಪೇಂದ್ರ ನಟನೆಯ ‘ಕಬ್ಜ’ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿದೆ. ಕನ್ನಡ, ತಮಿಳು, ತೆಲುಗು, ಮಲಯಾಳಂ ಸೇರಿ 7 ಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ.
ಈಗ ಪ್ಯಾನ್ ಇಂಡಿಯಾ ಸಿನಿಮಾಗಳ ಹವಾ ಜೋರಾಗಿದೆ. ಕನ್ನಡದಿಂದ ಹಲವು ಚಿತ್ರಗಳು ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಆಗಲು ಸಿದ್ಧತೆ ಮಾಡಿಕೊಳ್ಳುತ್ತಿವೆ. ಆ ಪೈಕಿ ಉಪೇಂದ್ರ (Upendra) ಅಭಿನಯದ ‘ಕಬ್ಜ’ ಸಿನಿಮಾ ಕೂಡ ಪ್ರಮುಖವಾಗಿದೆ. ಈ ಸಿನಿಮಾಗೆ ಆರ್. ಚಂದ್ರು (R Chandru) ನಿರ್ದೇಶನ ಮಾಡುತ್ತಿದ್ದಾರೆ. ಅದ್ದೂರಿ ಬಜೆಟ್ನಲ್ಲಿ ಈ ಚಿತ್ರ ಮೂಡಿಬರುತ್ತಿದೆ. ಕನ್ನಡ ಮಾತ್ರವಲ್ಲದೇ ಹಿಂದಿ, ತಮಿಳು, ತೆಲುಗು ಸೇರಿ ಒಟ್ಟು 7 ಭಾಷೆಗಳಲ್ಲಿ ‘ಕಬ್ಜ’ ಬಿಡುಗಡೆ ಆಗಲಿದೆ. ಅದಕ್ಕಾಗಿ ಈಗಾಗಲೇ ಏಳೂ ಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯ ಆರಂಭಗೊಂಡಿದೆ. ಈ ಸುದ್ದಿಯನ್ನು ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಚಿತ್ರತಂಡ ಅಪ್ಡೇಟ್ ನೀಡಿದೆ. ಈ ಸಿನಿಮಾದಲ್ಲಿ ಕಿಚ್ಚ ಸುದೀಪ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿರುವುದು ವಿಶೇಷ. ಚಿತ್ರಮಂದಿರದಲ್ಲಿ ‘ಕಬ್ಜ’ (Kabza Movie) ನೋಡಲು ಫ್ಯಾನ್ಸ್ ಕಾದಿದ್ದಾರೆ. ಹಾಗಾದರೆ ಈ ಸಿನಿಮಾದ ಕೆಲಸಗಳು ಯಾವ ಹಂತದಲ್ಲಿವೆ? ಇಲ್ಲಿದೆ ಮಾಹಿತಿ..
‘ಕಬ್ಜ’ ಸಿನಿಮಾದ ಕೆಲಸಗಳು ತಡವಾಗುತ್ತಿವೆ ಎಂಬ ಬಗ್ಗೆ ಅಭಿಮಾನಿಗಳಿಗೆ ಕೊಂಚ ಬೇಸರ ಇರಬಹುದು. ಆದರೆ ನಿರ್ದೇಶಕ ಆರ್. ಚಂದ್ರು ಅವರು ಎಲ್ಲ ಕೆಲಸಗಳಿಗೂ ಹೆಚ್ಚು ಸಮಯ ತೆಗೆದುಕೊಂಡು ಎಲ್ಲವನ್ನೂ ಅಚ್ಚುಕಟ್ಟಾಗಿ ತೆರೆಗೆ ತರುವ ಪ್ರಯತ್ನದಲ್ಲಿದ್ದಾರೆ. ಹಾಗಾಗಿ ಸಹಜವಾಗಿಯೇ ಈ ಸಿನಿಮಾದ ಮೇಕಿಂಗ್ಗೆ ಸಮಯ ಹಿಡಿಯುತ್ತಿದೆ. ಬೃಹತ್ ಸೆಟ್ಗಳನ್ನು ಹಾಕಿ ಚಿತ್ರಿಸಲಾಗುತ್ತಿದೆ. ಖುಷಿ ವಿಚಾರ ಏನೆಂದರೆ ಒಂದು ಹಾಡಿನ ಶೂಟಿಂಗ್ ಹೊರತುಪಡಿಸಿ ಇಡೀ ಸಿನಿಮಾದ ಚಿತ್ರೀಕರಣ ಮುಕ್ತಾಯ ಆಗಿದೆ.
ಇದನ್ನೂ ಓದಿ: ‘ಕಬ್ಜ’ ತಂಡಕ್ಕೆ ಶಿವರಾಜ್ಕುಮಾರ್ ಕಿವಿಮಾತು; ಇದನ್ನು ಪಾಲಿಸ್ತಾರಾ ನಿರ್ದೇಶಕರು?
ಒಂದೆಡೆ ಶೂಟಿಂಗ್ ಬಹುತೇಕ ಮುಗಿದಿದ್ದು, ಇನ್ನೊಂದೆಡೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಭರದಿಂದ ಸಾಗುತ್ತಿವೆ. ಕನ್ನಡ, ತಮಿಳು, ತೆಲುಗು, ಮಲಯಾಳಂ, ಹಿಂದಿ, ಮರಾಠಿ ಹಾಗೂ ಓರಿಯಾ ಭಾಷೆಗಳಲ್ಲಿ ಡಬ್ಬಿಂಗ್ ಕಾರ್ಯಕ್ಕೆ ಚಾಲನೆ ನೀಡಲಾಗಿದೆ. ಉಪೇಂದ್ರ ಮತ್ತು ಆರ್. ಚಂದ್ರು ಕಾಂಬಿನೇಷನ್ನಲ್ಲಿ ಈ ಹಿಂದೆ ಮೂಡಿಬಂದಿದ್ದ ‘ಐ ಲವ್ ಯೂ’ ಸಿನಿಮಾ ಹಿಟ್ ಆಗಿತ್ತು. ಈಗ ‘ಕಬ್ಜ’ ಮೂಲಕ ಮತ್ತೊಂದು ಗೆಲುವು ಪಡೆಯಲು ಚಿತ್ರತಂಡ ಪ್ರಯತ್ನಿಸುತ್ತಿದೆ.
ಇದನ್ನೂ ಓದಿ: ಹೊಸ ಫೋಟೋಶೂಟ್ನಲ್ಲಿ ಮಿಂಚಿದ ಶ್ರಿಯಾ ಶರಣ್; ಇಲ್ಲಿವೆ ‘ಕಬ್ಜ’ ಬೆಡಗಿಯ ಫೋಟೋಗಳು
ರವಿ ಬಸ್ರೂರು ಅವರು ಈ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡುತ್ತಿದ್ದಾರೆ. ಉಪೇಂದ್ರ ಜೊತೆ ನಾಯಕಿಯಾಗಿ ಶ್ರೀಯಾ ಶರಣ್ ಅಭಿನಯಿಸುತ್ತಿದ್ದಾರೆ. ಈಗಾಗಲೇ ಬಿಡುಗಡೆ ಆಗಿರುವ ಪೋಸ್ಟರ್ಗಳು ಗಮನ ಸೆಳೆಯುತ್ತಿವೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 8:24 am, Wed, 8 June 22