ಕಂಗನಾ ‘ತಲೈವಿ’ಗೆ ಸಂಕಷ್ಟ; ನಡೆದೇ ಇರದ ದೃಶ್ಯ ತೋರಿಸಿ ಸಂಕಷ್ಟಕ್ಕೆ ಸಿಲುಕಿದ ನಿರ್ದೇಶಕ
ಎಐಎಡಿಎಮ್ಕೆ ನಾಯಕ ಮತ್ತು ಮಾಜಿ ಸಚಿವ ಡಿ. ಜಯಕುಮಾರ್ ಚೆನ್ನೈನಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾವನ್ನು ಉತ್ತಮವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ.
ಕಂಗನಾ ರಣಾವತ್ ನಟನೆಯ ‘ತಲೈವಿ’ಗೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ತಮಿಳುನಾಡು ಮಾಜಿ ಮುಖ್ಯಮಂತ್ರಿ ಜಯಲಲಿತಾ ಜೀವನ ಆಧರಿಸಿ ಸಿದ್ಧಗೊಂಡ ಈ ಚಿತ್ರದಲ್ಲಿ ಕಂಗನಾ ಉತ್ತಮವಾಗಿ ನಟಿಸಿದ್ದಾರೆ. ಆದರೆ, ಸಿನಿಮಾದಲ್ಲಿ ಬರುವ ಕೆಲ ದೃಶ್ಯಗಳು ಈಗ ವಿವಾದ ಹೊತ್ತಿಸುವ ಸೂಚನೆ ನೀಡಿದೆ. ನಡೆದೇ ಇರದ ದೃಶ್ಯಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ. ಆ ದೃಶ್ಯಗಳಿಗೆ ಕತ್ತರಿ ಹಾಕುವಂತೆ ಎಐಎಡಿಎಮ್ಕೆ ನಾಯಕರು ಆಗ್ರಹಿಸಿದ್ದಾರೆ.
ಎಐಎಡಿಎಮ್ಕೆ ನಾಯಕ ಮತ್ತು ಮಾಜಿ ಸಚಿವ ಡಿ. ಜಯಕುಮಾರ್ ಚೆನ್ನೈನಲ್ಲಿ ಸಿನಿಮಾ ವೀಕ್ಷಣೆ ಮಾಡಿದ್ದಾರೆ. ಸಿನಿಮಾವನ್ನು ಉತ್ತಮವಾಗಿ ಮಾಡಲಾಗಿದೆ ಎಂದು ಹೇಳಿದ್ದಾರೆ. ಆದರೆ, ಸಿನಿಮಾದಲ್ಲಿನ ಕೆಲ ದೃಶ್ಯಗಳು ನಡೆದೇ ಇರಲಿಲ್ಲ, ಅವು ವಾಸ್ತವಕ್ಕೆ ದೂರವಾಗಿದೆ ಎಂದು ಹೇಳಿದ್ದಾರೆ.
ಅಣ್ಣಾ ದೊರೈ ನಿಧನ ಹೊಂದಿದ ನಂತರ ಕರುಣಾನಿಧಿ ಮುಖ್ಯಮಂತ್ರಿ ಆಗುತ್ತಾರೆ. ಈ ವೇಳೆ ಎಂಜಿಆರ್ ಬಂದು ತಮಗೆ ಮಂತ್ರಿ ಸ್ಥಾನ ನೀಡುವಂತೆ ಕೇಳಿಕೊಳ್ಳುತ್ತಾರೆ. ಕರುಣಾನಿಧಿ ಈ ಮನವಿಯನ್ನು ತಿರಸ್ಕರಿಸುತ್ತಾರೆ. ನಿಜ ಘಟನೆಯಲ್ಲಿ ಎಂಜಿಆರ್ ಆ ರೀತಿ ಬೇಡಿಕೆಯನ್ನೇ ಇಟ್ಟಿರಲಿಲ್ಲ ಎಂದಿದ್ದಾರೆ ಜಯಕುಮಾರ್.
ಕಾಂಗ್ರೆಸ್ ಜತೆ ಮೈತ್ರಿ ಮಾಡಿಕೊಳ್ಳಲು ಜಯಲಲಿತಾ ದೆಹಲಿಗೆ ತೆರಳುತ್ತಾರೆ. ಈ ವೇಳೆ ರಾಜೀವ್ ಗಾಂಧಿ ಹಾಗೂ ಇಂದಿರಾ ಗಾಂಧಿ ಅವರನ್ನು ಭೇಟಿ ಆಗುತ್ತಾರೆ ಜಯಾ. ಈ ವೇಳೆ ಎಂಜಿಆರ್ ಇಚ್ಛೆಗೆ ವಿರುದ್ಧವಾಗಿ ಜಯಲಲಿತಾ ನಡೆದುಕೊಳ್ಳುತ್ತಾರೆ ಎಂದು ಸಿನಿಮಾದಲ್ಲಿ ತೋರಿಸಲಾಗಿದೆ. ಇದರಲ್ಲೂ ಸತ್ಯವಿಲ್ಲ ಎಂಬುದು ಜಯಕುಮಾರ್ ಮಾತು. ‘ಈ ದೃಶ್ಯಗಳನ್ನು ಸಿನಿಮಾ ತಂಡ ತೆಗೆದು ಹಾಕಬೇಕು. ಉಳಿದಂತೆ ಈ ಸಿನಿಮಾವನ್ನು ನಾವು ಮೆಚ್ಚಿಕೊಳ್ಳುತ್ತೇವೆ’ ಎಂದು ಅವರು ಹೇಳಿದ್ದಾರೆ.
ಸೆ.10ರಂದು ಬಿಡುಗಡೆ ಆಗಿರುವ ‘ತಲೈವಿ’ ಚಿತ್ರಕ್ಕೆ ಎ.ಎಲ್. ವಿಜಯ್ ನಿರ್ದೇಶನ ಮಾಡಿದ್ದಾರೆ. ಅರವಿಂದ್ ಸ್ವಾಮಿ, ನಾಸರ್, ಭಾಗ್ಯಶ್ರೀ, ಸಮುದ್ರಖಣಿ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ನೈಟ್ ಕರ್ಫ್ಯೂ ಮತ್ತು ಥಿಯೇಟರ್ನಲ್ಲಿ ಶೇ.50ರಷ್ಟು ನಿರ್ಬಂಧದ ನಡುವೆಯೂ ‘ತಲೈವಿ’ ಬಿಡುಗಡೆ ಆಗಿದೆ.
ಇದನ್ನೂ ಓದಿ: Thalaivii Movie Review: ‘ತಲೈವಿ’.. ಇದು ಕೇವಲ ಜಯಲಲಿತಾ ಕತೆಯಲ್ಲ
ಕಂಗನಾ ರಣಾವತ್ ಮುಂದಿನ ನಿಲ್ದಾಣ ರಾಜಕೀಯ; ‘ತಲೈವಿ’ ಬೆನ್ನಲ್ಲೇ ಮಹತ್ವದ ನಿರ್ಧಾರ, ಯಾವ ಪಕ್ಷ?