
ಸ್ಟಾರ್ ನಟ ಆಗಿದ್ದ ದಳಪತಿ ವಿಜಯ್ (Thalapathy Vijay) ಇದೀಗ ರಾಜಕೀಯಕ್ಕೆ ಪ್ರವೇಶಿಸಿದ್ದಾರೆ. ಚುನಾವಣೆಗೆ ಕಾಲಿಡುವ ಮುನ್ನವೇ ಸಿನಿಮಾಗಿಂದ ನಿವೃತ್ತಿ ಪಡೆಯುತ್ತಿರುವುದಾಗಿ ನಟ ವಿಜಯ್ ಘೋಷಿಸಿದ್ದರು. ಈಗ ವಿಜಯ್, ಸಿನಿಮಾ ಬಿಟ್ಟು ರಾಜಕಾರಣಿ ಆಗಿದ್ದಾರೆ. ಆದರೆ ಅವರೊಳಗಿನ ಸೂಪರ್ ಸ್ಟಾರ್ ಇನ್ನೂ ಹಾಗೆಯೇ ಇದ್ದಾರೆ. ಇದಕ್ಕೆ ಸಾಕ್ಷಿ ಇಂದು (ಜೂನ್ 23) ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಮಾಡಿದ ಭಾಷಣ ಮತ್ತು ಭಾಷಣದ ಅಂತ್ಯದಲ್ಲಿ ಅವರು ಮಾಡಿದ ಸ್ಟೈಲ್.
ವಿಜಯ್, ಸಿನಿಮಾಗಳಲ್ಲಿ ತಮ್ಮ ಭಿನ್ನ ಸ್ಟೈಲ್ ಮೂಲಕವೇ ಜನಪ್ರಿಯರು. ಅವರು ಕೈ-ಕಾಲು ಕದಲಿಸಿದರೆ ಸಾಕು ಅಭಿಮಾನಿಗಳು ಅಬ್ಬರಿಸಲು ಆರಂಭಿಸುತ್ತಿದ್ದರು. ಇದೀಗ ವಿಜಯ್ ಅವರು ವಿಧಾನಸಭೆಯಲ್ಲಿಯೂ ಸ್ಟೈಲ್ ಮಾಡಿದ್ದಾರೆ. ಆದರೆ ಈ ಬಾರಿ ಅಭಿಮಾನಿಗಳನ್ನು ಮೆಚ್ಚಿಸಲು ಅಲ್ಲ ಬದಲಿಗೆ ಎದುರಾಳಿಗಳಿಗೆ ಖಡಕ್ ಆದ ಪ್ರತ್ಯುತ್ತರ ನೀಡಲು.
ತಮಿಳುನಾಡು ವಿಧಾನಸಭೆಯಲ್ಲಿ ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಿತು. ಈ ವೇಳೆ ವಿಪಕ್ಷಗಳವರು ವಿಜಯ್ ಸೇರಿದಂತೆ ಅವರ ಸರ್ಕಾರದ ಮೇಲೆ ತೀವ್ರ ವಾಗ್ದಾಳಿ ನಡೆಸಿದ್ದರು. ಬಳಿಕ ವಿಪಕ್ಷಗಳು ಒಟ್ಟಿಗೆ ಸಭಾತ್ಯಾಗ ಮಾಡಿದರು. ಅಂತಿಮವಾಗಿ ಮಾತನಾಡಿದ ಸಿಎಂ ವಿಜಯ್, ಎದುರಾಳಿಗಳ ಪ್ರಶ್ನೆಗಳಿಗೆ, ಟೀಕೆಗಳಿಗೆ ತಕ್ಕ ಪ್ರತ್ಯುತ್ತರವನ್ನು ನೀಡಿದರು.
ತಮ್ಮ ಪಕ್ಷವನ್ನು ‘ನಟರ ಪಕ್ಷ’ ಎಂದವರಿಗೆ ಹಾಗೂ ‘ಸಿನಿಮಾ ಸೆಟ್ನಿಂದ ಬಂದು ಸಿಎಂ ಆದವರು’ ಎಂಬೆಲ್ಲ ವಿಪಕ್ಷಗಳ ಟೀಕೆಗಳಿಗೆ ಉತ್ತರಿಸಿದ ವಿಜಯ್, ಸಕ್ರಿಯವಾಗಿ ರಾಜಕೀಯಕ್ಕೆ ಇಳಿಯುವ ಮುಂಚೆ ಹಾಗೂ ಚುನಾವಣೆ ಎದುರಿಸುವ ಮುಂಚೆ ತಮ್ಮ ಪಕ್ಷ ಯಾವ-ಯಾವ ಹೋರಾಟಗಳನ್ನು, ಸಾಮಾಜಿಕ ಕಾರ್ಯಗಳನ್ನು ಮಾಡಿದೆ ಎಂಬ ಪಟ್ಟಿಯನ್ನು ವಿಜಯ್ ನೀಡಿದರು. ಅಲ್ಲದೆ, ತಮ್ಮದು ‘ರೀಲ್’ ಪಕ್ಷವಲ್ಲ ಬದಲಿಗೆ ‘ರಿಯಲ್’ ಪಕ್ಷ ಎಂದರು.
ಇದನ್ನೂ ಓದಿ:ದಳಪತಿ ವಿಜಯ್ ಜನ್ಮದಿನಕ್ಕೆ ವಿಶ್ ಮಾಡಲೇ ಇಲ್ಲ ತ್ರಿಷಾ ಕೃಷ್ಣನ್
ಕೊನೆಯದಾಗಿ ವಿಜಯ್ ಅವರು ಸಭಾಧ್ಯಕ್ಷರ ಅನುಮತಿ ಪಡೆದುಕೊಂಡು ಸ್ಟೈಲ್ ಒಂದನ್ನು ಮಾಡಿದರು. ಅದು ನೇರವಾಗಿ ಮಾಜಿ ಸಿಎಂ ಸ್ಟಾಲಿನ್ ಅವರಿಗೆ ನೀಡಿದ ಸಂದೇಶವಾಗಿತ್ತು. ಚುನಾವಣೆಗೆ ಮುಂಚೆ ಸ್ಟಾಲಿನ್ ಅವರು ಮುಖ್ಯವಾದ ರಾಜಕೀಯ ಸಭೆಯೊಂದರ ಬಳಿಕ ‘ಮುಗಿಸಿ’ರುವುದಾಗಿ ಕೈಯಲ್ಲಿ ಅಡ್ಡವಾಗಿ ಆಡಿಸುತ್ತಾ ಸಜ್ಞೆಯೊಂದನ್ನು ಮಾಡಿದ್ದರು. ಸ್ಟಾಲಿನ್ ಅವರ ಆ ಸಂಜ್ಞೆ ಸಖತ್ ವೈರಲ್ ಆಗಿತ್ತು. ಸ್ಟಾಲಿನ್ ಅವರನ್ನು ಸೋಲಿಸಿದ ಟಿವಿಕೆ ಪಕ್ಷದ ಅಭ್ಯರ್ಥಿ ಸಹ ಅದೇ ಸಂಜ್ಞೆ ಮಾಡಿ ಸಂಭ್ರಮಿಸಿದ್ದರು. ಈಗ ವಿಜಯ್, ವಿಧಾನಸಭೆಯಲ್ಲಿಯೂ ಸಹ ಅದೇ ಸಂಜ್ಞೆ ಮಾಡಿದ್ದಾರೆ.
ವಿಜಯ್ ಅವರು ಸಂಜ್ಞೆ ಮಾಡುವ ಮೊದಲು, ತಾವು ಭ್ರಷ್ಟಾಚಾರ ಮಾಡುವುದಿಲ್ಲ, ಮಾಡುವುದಕ್ಕೆ ಬಿಡುವುದಿಲ್ಲ ಹಾಗೂ ಹಿಂದೆ ಮಾಡಿದವರನ್ನೂ ಬಿಡುವುದಿಲ್ಲ ಎಂದು ಹೇಳಿದ ಬಳಿಕ ಆ ಸಂಜ್ಞೆ ಮಾಡಿರುವುದು ಕುತೂಹಲಕರ. ಆ ಮೂಲಕ ತಾವು ಹಿಂದಿನ ಸರ್ಕಾರದ ಭ್ರಷ್ಟಾಚಾರಗಳ ತನಿಖೆ ನಡೆಸುವ ಸೂಕ್ಷ್ಮ ಎಚ್ಚಿರಿಕೆಯನ್ನು ನೀಡಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:12 pm, Tue, 23 June 26