
ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay) ಅವರ ಬಹುನಿರೀಕ್ಷಿತ ಕೊನೆಯ ಸಿನಿಮಾ ‘ಜನ ನಾಯಗನ್’ (Jana Nayagan) ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಜುಲೈ 23ರಂದು ಜಗತ್ತಿನಾದ್ಯಂತ ಈ ಚಿತ್ರ ಅದ್ಧೂರಿಯಾಗಿ ತೆರೆಕಾಣುತ್ತಿದ್ದು, ಚಿತ್ರತಂಡ ಬಿಡುಗಡೆ ಮಾಡಿರುವ ಹೊಸ ಅನೌನ್ಸ್‌ಮೆಂಟ್ ಟೀಸರ್ ಸಾಮಾಜಿಕ ಜಾಲತಾಣಗಳಲ್ಲಿ ಧೂಳೆಬ್ಬಿಸುತ್ತಿದೆ. ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಯು ಸೋಮವಾರ (ಜುಲೈ 20) ಈ ಟೀಸರ್ ಹಂಚಿಕೊಂಡಿದೆ.
18 ಸೆಕೆಂಡುಗಳ ಕಿರು ಟೀಸರ್ ನೋಡಿದ ವಿಜಯ್ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ. ಟೀಸರ್‌ನಲ್ಲಿ ವಿಜಯ್ ಅವರು ಖಳರ ವಿರುದ್ಧ ಗನ್ ಹಿಡಿದು ಫೈಟ್ ಮಾಡುವ ಹಾಗೂ ಪೊಲೀಸ್ ಸಮುಸ್ತ್ರದಲ್ಲಿ ಅಬ್ಬರಿಸುವ ಆ್ಯಕ್ಷನ್ ದೃಶ್ಯಗಳಿವೆ. ಎಲ್ಲಕ್ಕಿಂತ ಹೆಚ್ಚಾಗಿ, ವಿಜಯ್ ಅವರು ಜೈಲಿನ ಕೈದಿ ಉಡುಪಿನಿಂದ ನೇರವಾಗಿ ಬಿಳಿ ಶರ್ಟ್ ಮತ್ತು ಕಪ್ಪು ಜಾಕೆಟ್ ಧರಿಸಿದ ಮುಖ್ಯಮಂತ್ರಿಯ ಲುಕ್‌ಗೆ ಬದಲಾಗುವ ದೃಶ್ಯಕ್ಕೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ವಿಜಯ್ ಅವರನ್ನು ಬೆಳ್ಳಿಪರದೆಯ ಮೇಲೆ ನಟನಾಗಿ ನೋಡಲು ಇದು ಕೊನೆಯ ಅವಕಾಶ ಆಗಿರುವುದರಿಂದ, ಕಾಮೆಂಟ್ ಸೆಕ್ಷನ್‌ನಲ್ಲಿ ಅಭಿಮಾನಿಗಳ ಭಾವನಾತ್ಮಕ ಸಂದೇಶಗಳು ಹರಿದುಬರುತ್ತಿವೆ. ‘ನಟ ವಿಜಯ್‌ನಿಂದ ಹಿಡಿದು ಸಿಎಂ ವಿಜಯ್ ವರೆಗಿನ ಟ್ರಾನ್ಸಿಶನ್ ಅದ್ಭುತವಾಗಿದೆ’, ‘ಕೊನೆಯ ಬಾರಿಗೆ ದಳಪತಿ ಅಬ್ಬರ ನೋಡಲು ಸಜ್ಜಾಗಿದ್ದೇವೆ’ ಹಾಗೂ ‘ಬಾಕ್ಸ್ ಆಫೀಸ್‌ನಲ್ಲಿ ದಾಖಲೆ ಬರೆಯುವುದು ಗ್ಯಾರಂಟಿ’ ಎಂದು ನೆಟ್ಟಿಗರು ಬರೆದುಕೊಳ್ಳುತ್ತಿದ್ದಾರೆ.
ಹೆಚ್. ವಿನೋದ್ ನಿರ್ದೇಶನದ ‘ಜನ ನಾಯಗನ್’ ಚಿತ್ರವು ಚಿತ್ರಮಂದಿರ ತಲುಪುವ ಮುನ್ನ ಹತ್ತಾರು ಸವಾಲುಗಳನ್ನು ಎದುರಿಸಿದೆ. ಈ ವರ್ಷದ ಜನವರಿಯಲ್ಲಿ ಸಂಕ್ರಾಂತಿ ಹಬ್ಬಕ್ಕೆ ಬಿಡುಗಡೆಯಾಗಬೇಕಿದ್ದ ಈ ಚಿತ್ರ, ಸೆನ್ಸಾರ್ ಮಂಡಳಿಯ ತಕರಾರಿನಿಂದಾಗಿ ಮುಂದೂಡಲ್ಪಟ್ಟಿತ್ತು. ಕಾನೂನು ಹೋರಾಟದ ಬಳಿಕ ಜುಲೈನಲ್ಲಿ ಚಿತ್ರಕ್ಕೆ ‘ಎ’ ಸರ್ಟಿಫಿಕೇಟ್ ಸಿಕ್ಕಿದೆ. ದುರದೃಷ್ಟವಶಾತ್, ಕಳೆದ ಏಪ್ರಿಲ್ ತಿಂಗಳಿನಲ್ಲಿ ಈ ಚಿತ್ರದ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್ ಆಗಿತ್ತು. ಈ ಸಂಬಂಧ ಪೊಲೀಸರು ಕೆಲವರನ್ನು ಬಂಧಿಸಿದ್ದರು.
ಇದನ್ನೂ ಓದಿ: ಲೀಕ್ ಬಳಿಕ ‘ಜನ ನಾಯಗನ್’ ಚಿತ್ರದಲ್ಲಿ ಭಾರಿ ಬದಲಾವಣೆ: ಪ್ರೇಕ್ಷಕರಿಗೆ ಸಿಗಲಿದೆ ಹೊಸ ಅನುಭವ
ಇದು 2023ರ ತೆಲುಗಿನ ಸೂಪರ್ ಹಿಟ್ ಸಿನಿಮಾ ‘ಭಗವಂತ್ ಕೇಸರಿ’ ಚಿತ್ರದ ಭಾಗಶಃ ರಿಮೇಕ್ ಎನ್ನಲಾಗಿದೆ. ರಾಜಕೀಯಕ್ಕೆ ಪ್ರವೇಶಿಸುವ ಮುನ್ನ ವಿಜಯ್ ಒಪ್ಪಿಕೊಂಡಿದ್ದ ಕೊನೆಯ ಸಿನಿಮಾ ಇದಾಗಿದ್ದು, ತಮಿಳುನಾಡು ಸಿಎಂ ಆದ ಬಳಿಕ ರಿಲೀಸ್ ಆಗುತ್ತಿರುವ ಅವರ ಮೊದಲ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಬಿಗ್ ಬಜೆಟ್ ಚಿತ್ರದಲ್ಲಿ ವಿಜಯ್ ಜೊತೆಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್ ಹಾಗೂ ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 9:01 pm, Mon, 20 July 26