AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲೀಕ್ ಬಳಿಕ ‘ಜನ ನಾಯಗನ್’ ಚಿತ್ರದಲ್ಲಿ ಭಾರಿ ಬದಲಾವಣೆ: ಪ್ರೇಕ್ಷಕರಿಗೆ ಸಿಗಲಿದೆ ಹೊಸ ಅನುಭವ

ನಟ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ‘ಜನ ನಾಯಗನ್’ ಬಿಡುಗಡೆಗೆ ಸಕಲ ಸಿದ್ಧತೆ ನಡೆದಿದೆ. ಈಗಾಗಲೇ ಈ ಸಿನಿಮಾ ಲೀಕ್ ಆಗಿದ್ದರೂ ಕೂಡ ಚಿತ್ರಮಂದಿರದಲ್ಲಿ ಪ್ರೇಕ್ಷಕರು ಬೇರೆಯದೇ ಅನುಭವ ಪಡೆಯಲಿದ್ದಾರೆ ಎಂದು ನಿರ್ಮಾಪಕರು ಹೇಳಿದ್ದಾರೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಲೀಕ್ ಬಳಿಕ ‘ಜನ ನಾಯಗನ್’ ಚಿತ್ರದಲ್ಲಿ ಭಾರಿ ಬದಲಾವಣೆ: ಪ್ರೇಕ್ಷಕರಿಗೆ ಸಿಗಲಿದೆ ಹೊಸ ಅನುಭವ
CM Vijay
ಮದನ್​ ಕುಮಾರ್​
|

Updated on: Jul 19, 2026 | 8:55 AM

Share

ಮುಖ್ಯಾಂಶಗಳು

  • ಸಿಎಂ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಜುಲೈ 23ರಂದು ತೆರೆಗೆ.
  • ಸಿನಿಮಾ ಲೀಕ್ ಆದ ಕಾರಣ ಚಿತ್ರಕ್ಕೆ ಹೊಸ ಹಾಡು ಹಾಗೂ ದೃಶ್ಯಗಳ ಸೇರ್ಪಡೆ.
  • 7 ತಿಂಗಳ ವಿಳಂಬದ ನಂತರ ‘ಎ’ ಪ್ರಮಾಣಪತ್ರ ನೀಡಿರುವ ಸೆನ್ಸಾರ್ ಮಂಡಳಿ.

ಕಾಲಿವುಡ್ ಸ್ಟಾರ್ ನಟ ದಳಪತಿ ವಿಜಯ್ (CM Vijay) ನಟನೆಯ ಕೊನೆಯ ಹಾಗೂ ಬಹುನಿರೀಕ್ಷಿತ ಚಿತ್ರ ‘ಜನ ನಾಯಗನ್’ (Jana Nayagan) ಜುಲೈ 23ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ಆದರೆ, ಸೆನ್ಸಾರ್ ಮಂಡಳಿ (CBFC) ಜೊತೆಗಿನ ಸುದೀರ್ಘ ಹೋರಾಟ ಮತ್ತು ಕಳೆದ ಏಪ್ರಿಲ್‌ನಲ್ಲಿ ಎಚ್‌ಡಿ ಪ್ರಿಂಟ್ ಆನ್‌ಲೈನ್‌ನಲ್ಲಿ ಲೀಕ್ ಆದ ಬೆನ್ನಲ್ಲೇ ಚಿತ್ರದಲ್ಲಿ ಹಲವು ಪ್ರಮುಖ ಬದಲಾವಣೆಗಳನ್ನು ಮಾಡಲಾಗಿದೆ ಎಂದು ಚಿತ್ರದ ನಿರ್ಮಾಪಕರು ಬಹಿರಂಗಪಡಿಸಿದ್ದಾರೆ.

ಕನ್ನಡಿಗ ಕೆ. ವೆಂಕಟ್ ನಾರಾಯಣ್ ಅವರು ‘ಕೆವಿಎನ್ ಪ್ರೊಡಕ್ಷನ್ಸ್’ ಬ್ಯಾನರ್ ಮೂಲಕ ‘ಜನ ನಾಯಗನ್’ ಚಿತ್ರವನ್ನು ನಿರ್ಮಿಸಿದ್ದು, ಎಚ್. ವಿನೋದ್ ನಿರ್ದೇಶಿಸಿದ್ದಾರೆ. ಇತ್ತೀಚೆಗೆ ಮಾಧ್ಯಮವೊಂದಕ್ಕೆ ನೀಡಿದ ಸಂದರ್ಶನದಲ್ಲಿ ನಿರ್ಮಾಪಕರು ಚಿತ್ರದ ಸೆನ್ಸಾರ್ ವಿವಾದ ಮತ್ತು ಲೀಕ್ ಆದ ಬಳಿಕ ಆಗಿರುವ ಬದಲಾವಣೆಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

ಥಿಯೇಟರ್‌ನಲ್ಲಿ ಪ್ರೇಕ್ಷಕರಿಗೆ ಸಿಗಲಿದೆ ಹೊಸ ಸಿನಿಮಾ:

ಚಿತ್ರದ ಲೀಕ್ ಮತ್ತು ಸೆನ್ಸಾರ್ ಕಟ್‌ಗಳ ಬಗ್ಗೆ ಮಾತನಾಡಿದ ನಿರ್ಮಾಪಕ ವೆಂಕಟ್ ನಾರಾಯಣ್, ‘ಈಗ ಚಿತ್ರಮಂದಿರಕ್ಕೆ ಬರುವ ಪ್ರೇಕ್ಷಕರು ಸಂಪೂರ್ಣವಾಗಿ ಒಂದು ಹೊಸ ಸಿನಿಮಾವನ್ನು ನೋಡಲಿದ್ದಾರೆ. ಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳು ಮತ್ತು ಹೊಸ ಸೇರ್ಪಡೆಗಳನ್ನು ಮಾಡಲಾಗಿದೆ. ಕೆಲವು ಹೊಸ ಹಾಡುಗಳು ಮತ್ತು ಹೊಸ ದೃಶ್ಯಗಳನ್ನು ಜೋಡಿಸಲಾಗಿದೆ. ಹಾಗಾಗಿ ಪ್ರೇಕ್ಷಕರಿಗೆ ಇದು ವಿಭಿನ್ನ ಅನುಭವ ನೀಡಲಿದೆ. ಈ ವರ್ಷದ ಆರಂಭದಿಂದಲೇ ಸಿನಿಮಾ ಬಿಡುಗಡೆಗೆ ಹಲವು ಸವಾಲುಗಳನ್ನು ಎದುರಿಸಿದ್ದೇವೆ. ಆದರೆ ಚಿತ್ರದ ಯಾವುದೇ ಸಸ್ಪೆನ್ಸ್ ಅನ್ನು ನಾನಿಲ್ಲಿ ಬಿಟ್ಟುಕೊಡುವುದಿಲ್ಲ’ ಎಂದಿದ್ದಾರೆ.

ಸೆನ್ಸಾರ್ ಮಂಡಳಿಯಿಂದ ‘ಎ’ ಪ್ರಮಾಣಪತ್ರ:

ಚಿತ್ರದಲ್ಲಿ ವಿಜಯ್ ಅವರ ರಾಜಕೀಯ ಪಕ್ಷವಾದ ಟಿವಿಕೆ ಮತ್ತು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಉಲ್ಲೇಖವಿರುವ ಸಂಭಾಷಣೆಗಳಿಗೆ ಸೆನ್ಸಾರ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತ್ತು. ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ದೇಶದ ಕಾನೂನು ಮತ್ತು ಸೆನ್ಸಾರ್ ಮಂಡಳಿಯ ನಿಯಮಗಳಿಗೆ ನಾವು ಗೌರವ ನೀಡುತ್ತೇವೆ. ಅವರು ಸೂಚಿಸಿದ ಜಾಗದಲ್ಲಿ ಸೂಕ್ತ ಬದಲಾವಣೆಗಳನ್ನು ಮಾಡಿದ್ದೇವೆ’ ಎಂದು ಸ್ಪಷ್ಟಪಡಿಸಿದ್ದಾರೆ. ಸುಮಾರು 7 ತಿಂಗಳ ಸುದೀರ್ಘ ವಿಳಂಬದ ನಂತರ ಚಿತ್ರಕ್ಕೆ ಸೆನ್ಸಾರ್ ಮಂಡಳಿಯು ಹಲವು ಕಟ್‌ಗಳೊಂದಿಗೆ ‘ಎ’ (Adults Only) ಪ್ರಮಾಣಪತ್ರ ನೀಡಿದೆ.

ಸಾಮಾಜಿಕ ಕಳಕಳಿಯ ಕಥಾಹಂದರ:

ವಿಜಯ್ ಅವರ ಹಿಂದಿನ ಚಿತ್ರಗಳಂತೆಯೇ ‘ಜನ ನಾಯಗನ್’ ಕೂಡ ಒಂದು ಬಲವಾದ ಸಾಮಾಜಿಕ ಸಮಸ್ಯೆಯ ಸುತ್ತ ಸಾಗುತ್ತದೆ. ಇದು ಎಲ್ಲಾ ವಯೋಮಾನದ ಪ್ರೇಕ್ಷಕರನ್ನು ಸೆಳೆಯುವಂತಹ ಶಕ್ತಿಯುತ ಮತ್ತು ರೋಮಾಂಚಕಾರಿ ಕಥೆಯನ್ನು ಹೊಂದಿದೆ ಎಂದು ನಿರ್ಮಾಪಕರು ಭರವಸೆ ನೀಡಿದ್ದಾರೆ. ಈ ಸಿನಿಮಾ ಜನವರಿಯಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ ಸೆನ್ಸಾರ್ ವಿವಾದದಿಂದಾಗಿ ಮುಂದೂಡಲ್ಪಟ್ಟಿತ್ತು. ವಿಜಯ್ ರಾಜಕೀಯ ಜೀವನ ಆರಂಭಿಸಿದ್ದು, ಇದು ಅವರ ಕೊನೆಯ ಸಿನಿಮಾ ಆಗಿರುವುದರಿಂದ ಅಭಿಮಾನಿಗಳಲ್ಲಿ ಭಾರಿ ಕುತೂಹಲ ಮೂಡಿಸಿದೆ.

ಇದನ್ನೂ ಓದಿ: ಸೆನ್ಸಾರ್ ಕಟ್ ಇಲ್ಲದೆ ಜನ ನಾಯಗನ್ ಸಿನಿಮಾ ನೋಡಲು ವಿಜಯ್ ಅಭಿಮಾನಿಗಳಿಗೆ ಸುವರ್ಣಾವಕಾಶ

ತೆಲುಗಿನಲ್ಲಿ ನಂದಮೂರಿ ಬಾಲಕೃಷ್ಣ ನಟನೆಯ ಸೂಪರ್ ಹಿಟ್ ಸಿನಿಮಾ ‘ಭಗವಂತ್ ಕೇಸರಿ’ ಚಿತ್ರದ ಅಧಿಕೃತ ರಿಮೇಕ್ ಇದಾಗಿದೆ. ಚಿತ್ರದಲ್ಲಿ ತಮಿಳುನಾಡು ಮುಖ್ಯಮಂತ್ರಿ ವಿಜಯ್ ಜೊತೆಗೆ ಮಮಿತಾ ಬೈಜು, ಬಾಬಿ ಡಿಯೋಲ್, ಪೂಜಾ ಹೆಗ್ಡೆ, ಪ್ರಕಾಶ್ ರಾಜ್ ಮತ್ತು ಪ್ರಿಯಾಮಣಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅನಿರುದ್ಧ್ ರವಿಚಂದರ್ ಅವರ ಸಂಗೀತ ಚಿತ್ರಕ್ಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us