AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’

ಭಾರಿ ನಿರೀಕ್ಷೆ ಮೂಡಿಸಿರುವ ‘ಜನ ನಾಯಗನ್’ ಸಿನಿಮಾ ಜುಲೈ 23ಕ್ಕೆ ಬಿಡುಗಡೆ ಆಗಲಿದೆ ಎಂದು ‘ಕೆವಿಎನ್ ಪ್ರೊಡಕ್ಷನ್’ ಘೋಷಿಸಿದೆ. ಚಿತ್ರದ ಬಿಡುಗಡೆ ಯಾವಾಗ ಎಂದು ಕೇಳುತ್ತಿದ್ದ ಅಭಿಮಾನಿಗಳಿಗೆ ಈ ಮೂಲಕ ಉತ್ತರ ಸಿಕ್ಕಿದೆ. ಬಹಳ ಅದ್ದೂರಿಯಾಗಿ ರಿಲೀಸ್ ಮಾಡಲು ಸಿದ್ಧತೆ ನಡೆಯುತ್ತಿದೆ.

ಜುಲೈ 23ಕ್ಕೆ ಬಿಡುಗಡೆ ಆಗಲಿದೆ ದಳಪತಿ ವಿಜಯ್ ಕೊನೆಯ ಸಿನಿಮಾ ‘ಜನ ನಾಯಗನ್’
Jana Nayagan Poster
ಮದನ್​ ಕುಮಾರ್​
|

Updated on: Jul 15, 2026 | 4:31 PM

Share

ಮುಖ್ಯಾಂಶಗಳು

  • ಏಳು ತಿಂಗಳ ಹೋರಾಟದ ಬಳಿಕ ಬಿಡುಗಡೆ ಆಗುತ್ತಿದೆ ‘ಜನ ನಾಯಗನ್’.
  • ಅಧಿಕೃತವಾಗಿ ರಿಲೀಸ್ ದಿನಾಂಕ ತಿಳಿಸಿದ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆ.
  • ದಳಪತಿ ವಿಜಯ್ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ ಇದೆ.

ಕಾಲಿವುಡ್ ಸ್ಟಾರ್ ನಟ ಹಾಗೂ ತಮಿಳುನಾಡಿನ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ (Thalapathy Vijay) ಅವರ ಅಭಿನಯದ ಕೊನೆಯ ಚಿತ್ರ ‘ಜನ ನಾಯಗನ್’ ಬಿಡುಗಡೆ ದಿನಾಂಕ (Jana Nayagan Release Date) ಘೋಷಣೆ ಆಗಿದೆ. ಈ ಬಹುನಿರೀಕ್ಷಿತ ಸಿನಿಮಾಗೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆ ಬಂಡವಾಳ ಹೂಡಿದ್ದು, ಈಗ ಚಿತ್ರದ ಬಿಡುಗಡೆಗೆ ಸಕಲ ತಯಾರಿ ಮಾಡಿಕೊಂಡಿದೆ. ಕಳೆದ ಏಳು ತಿಂಗಳಿನಿಂದ ಎದುರಿಸುತ್ತಿದ್ದ ಎಲ್ಲಾ ಕಾನೂನು ಹೋರಾಟಗಳು ಮತ್ತು ಸೆನ್ಸಾರ್ ಮಂಡಳಿ ಜೊತೆಗಿನ ವಿವಾದಗಳಿಗೆ ತೆರೆ ಬಿದ್ದಿದ್ದು, ‘ಜನ ನಾಯಕನ್’ ಚಿತ್ರವು ಜುಲೈ 23ರಂದು ವಿಶ್ವಾದ್ಯಂತ ಗ್ರ್ಯಾಂಡ್ ಆಗಿ ತೆರೆಕಾಣಲಿದೆ.

ಈ ಮೂಲಕ ಅಭಿಮಾನಿಗಳ ತಿಂಗಳುಗಳ ಕಾಯುವಿಕೆಗೆ ಚಿತ್ರತಂಡ ಅಧಿಕೃತವಾಗಿ ತೆರೆ ಎಳೆದಿದೆ. ನಟ ವಿಜಯ್ ಅವರು ತಮ್ಮ ಅಧಿಕೃತ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಚಿತ್ರದ ಪೋಸ್ಟರ್ ಹಂಚಿಕೊಳ್ಳುವ ಮೂಲಕ ‘ಜನ ನಾಯಗನ್’ ಬಿಡುಗಡೆ ದಿನಾಂಕ ಘೋಷಿಸಿದ್ದಾರೆ. ಇತ್ತೀಚೆಗಷ್ಟೇ ಸೆನ್ಸಾರ್ ಮಂಡಳಿಯಿಂದ ‘ಎ’ ಸರ್ಟಿಫಿಕೇಟ್ ಪಡೆದುಕೊಂಡಿರುವ ಈ ಚಿತ್ರವು ಜುಲೈ 23ರಂದು ಚಿತ್ರಮಂದಿರಗಳಲ್ಲಿ ಅಬ್ಬರಿಸಲಿದೆ.

ಕಿಚ್ಚು ಹಚ್ಚಿದ ಕೆವಿಎನ್ ಪ್ರೊಡಕ್ಷನ್ಸ್ ಪೋಸ್ಟ್:

ಕನ್ನಡದ ಹೆಸರಾಂತ ನಿರ್ಮಾಣ ಸಂಸ್ಥೆಯಾದ ‘ಕೆವಿಎನ್ ಪ್ರೊಡಕ್ಷನ್ಸ್’ ಈ ಚಿತ್ರವನ್ನು ಅತ್ಯಂತ ಅದ್ಧೂರಿಯಾಗಿ ನಿರ್ಮಿಸಿದೆ. ಚಿತ್ರದ ಬಿಡುಗಡೆ ದಿನಾಂಕವನ್ನು ಖಚಿತಪಡಿಸಿ ಟ್ವೀಟ್ ಮಾಡಿರುವ ಸಂಸ್ಥೆ, ‘ಬೆಂಕಿಯಿಂದ ಪರೀಕ್ಷಿಸಲ್ಪಟ್ಟಿದೆ. ಸಮಯದಿಂದ ರೂಪಿಸಲ್ಪಟ್ಟಿದೆ. ಇತಿಹಾಸ ನಿರ್ಮಿಸಲು ಸಜ್ಜಾಗಿದೆ. ಹೋರಾಟ ಎಷ್ಟು ಕಠಿಣವಾಗಿರುತ್ತದೆಯೋ, ಜಯ ಅಷ್ಟೇ ಭರ್ಜರಿಯಾಗಿರುತ್ತದೆ’ ಎಂದು ಬರೆದುಕೊಂಡು ಅಭಿಮಾನಿಗಳಲ್ಲಿ ರೋಮಾಂಚನ ಉಂಟುಮಾಡಿದೆ.

ಏಳು ತಿಂಗಳ ಸುದೀರ್ಘ ಹೋರಾಟ:

ವಾಸ್ತವವಾಗಿ ‘ಜನ ನಾಯಗನ್’ ಸಿನಿಮಾ ಈ ವರ್ಷದ ಆರಂಭದಲ್ಲಿ, ಅಂದರೆ ಜನವರಿ 9ರಂದು ಸಂಕ್ರಾಂತಿ ಹಬ್ಬದ ಸಂದರ್ಭದಲ್ಲೇ ಬಿಡುಗಡೆಯಾಗಬೇಕಿತ್ತು. ಆದರೆ, ಸೆನ್ಸಾರ್ ಪ್ರಮಾಣಪತ್ರದ ವಿವಾದ ಹಾಗೂ ಮದ್ರಾಸ್ ಹೈಕೋರ್ಟ್ ಮೆಟ್ಟಿಲೇರಿದ್ದ ಕಾನೂನು ಪ್ರಕ್ರಿಯೆಗಳಿಂದಾಗಿ ಸಿನಿಮಾ ಬಿಡುಗಡೆ ತಡವಾಗಿತ್ತು. ಇಷ್ಟೇ ಅಲ್ಲದೆ, ಚಿತ್ರದ ಕೆಲವು ಪ್ರಮುಖ ದೃಶ್ಯಗಳು ಆನ್‌ಲೈನ್‌ನಲ್ಲಿ ಲೀಕ್ ಆಗಿದ್ದು ಚಿತ್ರತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿತ್ತು. ಆದರೆ ಈಗ ಎಲ್ಲಾ ಅಡೆತಡೆಗಳನ್ನು ದಾಟಿ ಸಿನಿಮಾ ರಿಲೀಸ್ ಆಗುತ್ತಿರುವುದು ವಿಜಯ್ ಅಭಿಮಾನಿಗಳಲ್ಲಿ ಹಬ್ಬದ ವಾತಾವರಣ ಸೃಷ್ಟಿಸಿದೆ.

ಕೊನೆಯ ಸಿನಿಮಾ; ನಿರೀಕ್ಷೆ ಅಪಾರ:

ದಳಪತಿ ವಿಜಯ್ ಅವರು ರಾಜಕೀಯಕ್ಕೆ ಪ್ರವೇಶಿಸಿ, ತಮಿಳುನಾಡಿನ ಸಿಎಂ ಆದ ಬಳಿಕ ತೆರೆಗೆ ಬರುತ್ತಿರುವ ಚಿತ್ರ ಇದಾಗಿದೆ. ಅಲ್ಲದೇ ಅವರು ನಟಿಸಿರುವ ಕೊನೆಯ ಸಿನಿಮಾ ಕೂಡ ಹೌದು. ಆ ಕಾರಣದಿಂದ ಸಿನಿಮಾ ಮೇಲಿನ ಜನರ ಕ್ರೇಜ್ ದುಪ್ಪಟ್ಟಾಗಿದೆ. ಈ ಮೊದಲೇ ಈ ಚಿತ್ರವು ಆನ್​ಲೈನ್​ನಲ್ಲಿ ಲೀಕ್ ಆಗಿತ್ತು. ಹಾಗಾಗಿ ಬಾಕ್ಸ್ ಆಫೀಸ್ ಭವಿಷ್ಯ ಏನಾಗಬಹುದು ಎಂಬುದನ್ನು ಕಾದುನೋಡಬೇಕು.

ಇದನ್ನೂ ಓದಿ: ‘ಜನ ನಾಯಗನ್’ ಚಿತ್ರದಿಂದ ದಳಪತಿ ವಿಜಯ್ ಮಗ ಜೇಸನ್ ಸಿನಿಮಾಗೆ ಸಂಕಷ್ಟ

ಎಚ್. ವಿನೋದ್ ನಿರ್ದೇಶನದ ಈ ಬಿಗ್ ಬಜೆಟ್ ರಾಜಕೀಯ ಆ್ಯಕ್ಷನ್ ಡ್ರಾಮಾದಲ್ಲಿ ವಿಜಯ್​ಗೆ ಜೋಡಿಯಾಗಿ ಪೂಜಾ ಹೆಗ್ಡೆ ಕಾಣಿಸಿಕೊಂಡಿದ್ದಾರೆ. ಬಾಬಿ ಡಿಯೋಲ್, ಮಮಿತಾ ಬೈಜು, ಪ್ರಕಾಶ್ ರಾಜ್, ಗೌತಮ್ ವಾಸುದೇವ್ ಮೆನನ್, ಪ್ರಿಯಾಮಣಿ ಮತ್ತು ನರೇನ್ ಮುಖ್ಯ ಭೂಮಿಕೆಯಲ್ಲಿದ್ದಾರೆ. ಅನಿರುದ್ಧ್ ರವಿಚಂದರ್ ಅವರು ಈ ಸಿನಿಮಾಗೆ ಸಂಗೀತ ನೀಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us