AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಜಯ್ ಪ್ರಮಾಣವಚನವನ್ನು ನೋಡಿ ‘ಬಾಹುಬಲಿ’ ದೃಶ್ಯ ನೆನೆದ ಫ್ಯಾನ್ಸ್

ದಳಪತಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಈ ಕ್ಷಣವನ್ನು ಅನೇಕರು 'ಬಾಹುಬಲಿ' ಚಿತ್ರದಲ್ಲಿ ಮಹೇಂದ್ರ ಬಾಹುಬಲಿಯ ಪಟ್ಟಾಭಿಷೇಕಕ್ಕೆ ಹೋಲಿಸಿದ್ದಾರೆ. ವಿಜಯ್ ಅವರ ಪ್ರಮಾಣ ವಚನ ಸಮಾರಂಭಕ್ಕೆ ಅಪಾರ ಜನಸ್ತೋಮ ಸಾಕ್ಷಿಯಾಗಿದ್ದು, ಅಭಿಮಾನಿಗಳು ಹರ್ಷೋದ್ಗಾರ ವ್ಯಕ್ತಪಡಿಸಿದರು. ಇದು ತಮಿಳುನಾಡಿನ ರಾಜಕೀಯದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಲಿದೆ ಎಂದು ಅಭಿಮಾನಿಗಳು ಭರವಸೆ ವ್ಯಕ್ತಪಡಿಸಿದ್ದಾರೆ.

ವಿಜಯ್ ಪ್ರಮಾಣವಚನವನ್ನು ನೋಡಿ ‘ಬಾಹುಬಲಿ’ ದೃಶ್ಯ ನೆನೆದ ಫ್ಯಾನ್ಸ್
ಬಾಹುಬಲಿ-ವಿಜಯ್
 ಶ್ರೀಲಕ್ಷ್ಮೀ ಎಚ್
| Edited By: |

Updated on: May 11, 2026 | 8:01 AM

Share

ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಕೆಲವು ದೃಶ್ಯಗಳು ಕೇವಲ ಸಿನಿಮಾ ಆಗಿ ಉಳಿಯದೆ, ಜನರ ಭಾವನೆಯಾಗಿ ಬದಲಾಗುತ್ತವೆ. ಅಂತಹ ಒಂದು ದೃಶ್ಯ ‘ಬಾಹುಬಲಿ’ ಚಿತ್ರದಲ್ಲಿ ಮಹೇಂದ್ರ ಬಾಹುಬಲಿ ಪಟ್ಟಾಭಿಷೇಕ ಮಾಡಿಕೊಳ್ಳುವ ಕ್ಷಣ. ಇಂದು ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ ಅವರು ‘ತಮಿಳಗ ವೆಟ್ರಿ ಕಳಗಂ’ (TVK) ಮೂಲಕ ರಾಜಕೀಯಕ್ಕೆ ಅಡಿಯಿಟ್ಟು ಸಿಎಂ ಆಗಿದ್ದಾರೆ. ಅವರು ಪ್ರಮಾಣ ವಚನ ದೃಶ್ಯವನ್ನು ಅನೇಕರು ಬಾಹುಬಲಿ ದೃಶ್ಯಕ್ಕೆ ಹೋಲಿಕೆ ಮಾಡಿದ್ದಾರೆ.

ಮೇ 10ರಂದು ನಡೆದ ಸಮಾರಂಭದಲ್ಲಿ ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಅತ್ಯಂತ ಗಂಭೀರ ಹಾಗೂ ಔಪಚಾರಿಕವಾಗಿ ನಡೆದ ಈ ಕಾರ್ಯಕ್ರಮದಲ್ಲಿ, ಅವರು ಸಂವಿಧಾನದ ಹೆಸರಿನಲ್ಲಿ ಪ್ರಮಾಣ ಮಾಡಿದರು. ನೆರೆದಿದ್ದ ಅಪಾರ ಜನಸ್ತೋಮವು ಈ ಘಟನೆಗೆ ಸಾಕ್ಷಿಯಾಯಿತು. ವಿಜಯ್ ಅವರು ಪ್ರಮಾಣವಚನ ಸ್ವೀಕರಿಸುತ್ತಿದ್ದಂತೆ ಅಲ್ಲಿ ನೆರೆದಿದ್ದ ಲಕ್ಷಾಂತರ ಬೆಂಬಲಿಗರು ಹರ್ಷೋದ್ಗಾರ ವ್ಯಕ್ತಪಡಿಸಿದರು.

ಬಾಹುಬಲಿ ಚಿತ್ರದಲ್ಲಿ ರಾಜಮೌಳಿಯವರು ತೋರಿಸಿದಂತೆ, ಮಹೇಂದ್ರ ಬಾಹುಬಲಿ ಪ್ರಮಾಣವಚನ ಸ್ವೀಕರಿಸುವಾಗ ಇಡೀ ಸಾಮ್ರಾಜ್ಯದ ಜನತೆ “ಬಾಹುಬಲಿ… ಬಾಹುಬಲಿ…” ಎಂದು ಕೂಗುವ ಘೋಷಣೆ ಭೂಮಿಯನ್ನು ನಡುಗಿಸುತ್ತದೆ. ಅದೇ ರೀತಿ, ವಿಜಯ್ ಅವರು ‘ನಾನು ಸಿ ವಿಜಯ್ ಜೋಸೆಫ್’ ಎಂದು ಹೇಳುವಾಗ ಅಭಿಮಾನಿ ಸಾಗರ ಜೋರಾಗಿ ಕೂಗಿದೆ. ಎರಡನ್ನೂ ಈಗ ಹೋಲಿಕೆ ಮಾಡುತ್ತಿದ್ದಾರೆ. ಸಿನಿಮಾ ತೆರೆಯ ಮೇಲೆ ಜನನಾಯಕನಾಗಿ ಮೆರೆದ ವಿಜಯ್, ಈಗ ನಿಜ ಜೀವನದಲ್ಲಿ ಜನರ ಧ್ವನಿಯಾಗಲು ಹೊರಟಿರುವುದು ಈ ಹೋಲಿಕೆಗೆ ಮುಖ್ಯ ಕಾರಣ.

ಇದನ್ನೂ ಓದಿ: ಕಪ್ಪು ಕೋಟು ಧರಿಸಿ ಪ್ರಮಾಣ ವಚನ ಸ್ವೀಕರಿಸಿದ್ದೇಕೆ ದಳಪತಿ ವಿಜಯ್

ಬಾಹುಬಲಿಗೆ ಜನರ ಮೇಲಿದ್ದ ಪ್ರೀತಿ ಮತ್ತು ವಿಜಯ್ ಅವರಿಗೆ ತಮ್ಮ ಅಭಿಮಾನಿಗಳ (ತಮಿಳು ಜನತೆ) ಮೇಲಿರುವ ಕಳಕಳಿ ಒಂದೇ ತೆರನಾದ ಭಾವನೆಯನ್ನು ಮೂಡಿಸುತ್ತದೆ ಎಂದು ಅನೇಕರು ಹೇಳಿದ್ದಾರೆ. ವಿಜಯ್ ಅವರ ರಾಜಕೀಯ ಜರ್ನಿಯನ್ನು ಅನೇಕರು ಯಾವ ಚಿತ್ರಕ್ಕೂ ಕಡಿಮೆ ಇಲ್ಲ ಎಂದಿದ್ದಾರೆ. ‘ಮಹೇಂದ್ರ ಬಾಹುಬಲಿಯ ಆಗಮನ ಹೇಗೆ ಮಾಹಿಷ್ಮತಿ ಸಾಮ್ರಾಜ್ಯಕ್ಕೆ ಹೊಸ ಭರವಸೆ ನೀಡಿತೋ, ಅದೇ ರೀತಿ ವಿಜಯ್ ಅವರ ರಾಜಕೀಯ ಪ್ರವೇಶ ತಮಿಳುನಾಡಿನ ರಾಜಕಾರಣದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸಲಿದೆ’ ಎಂದು ಅಭಿಮಾನಿಗಳು ವಿಡಿಯೋಗೆ ಕಮೆಂಟ್ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us