
ಬಿಡುಗಡೆಯಾದ ಮೊದಲ ದಿನವೇ ಉತ್ತಮ ಓಪನಿಂಗ್ ಪಡೆದುಕೊಂಡಿದ್ದ ‘ದಿ ಪ್ಯಾರಡೈಸ್’ ಸಿನಿಮಾಗೆ ಈಗ ನೆಗೆಟಿವ್ ವಿಮರ್ಶೆಗಳ ಬಿಸಿ ತಟ್ಟಿದೆ. ಪ್ರೇಕ್ಷಕರು ಹಾಗೂ ವಿಮರ್ಶಕರಿಂದ ಋಣಾತ್ಮಕ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ, ಎರಡನೇ ದಿನವೇ ಚಿತ್ರದ ಗಳಿಕೆಯಲ್ಲಿ ವಿಪರೀತ ಇಳಿಕೆ ಕಂಡುಬಂದಿದೆ. ಹೀಗೆಯೇ ಮುಂದುವರಿದರೆ ಸಿನಿಮಾ ಸಂಪೂರ್ಣವಾಗಿ ನೆಲಕಚ್ಚುವ ಎಲ್ಲಾ ಲಕ್ಷಣ ಗೋಚರವಾಗಿದೆ.
ಮೊದಲ ದಿನ ವಿಶ್ವಾದ್ಯಂತ 34.65 ಕೋಟಿ ನೆಟ್ ಕಲೆಕ್ಷನ್ ಮಾಡಿದ್ದ ‘ಪ್ಯಾರಡೈಸ್’, ಎರಡನೇ ದಿನ ಶೇ. 57 ರಷ್ಟು ಭಾರಿ ಕುಸಿತ ಕಂಡಿದೆ. ಎರಡನೇ ದಿನ ಒಟ್ಟು 7,049 ಶೋಗಳಿಂದ ಸಿನಿಮಾ ಕೇವಲ 14.90 ಕೋಟಿ ನೆಟ್ ಕಲೆಕ್ಷನ್ ಮಾಡಲಷ್ಟೇ ಶಕ್ತವಾಗಿದೆ. ನೆಗೆಟಿವ್ ರಿವ್ಯೂಗಳಿಂದಾಗಿ ಚಿತ್ರಮಂದಿರಗಳತ್ತ ಜನ ಬರುವುದು ಗಣನೀಯವಾಗಿ ಕಡಿಮೆಯಾಗಿದೆ.
ಎರಡು ದಿನಗಳ ಒಟ್ಟಾರೆ ಲೆಕ್ಕಾಚಾರ ನೋಡುವುದಾದರೆ, ಭಾರತದಲ್ಲಿ ‘ಪ್ಯಾರಡೈಸ್’ ಚಿತ್ರದ ಒಟ್ಟು ನೆಟ್ ಕಲೆಕ್ಷನ್ 61.15 ಕೋಟಿಗೆ ತಲುಪಿದೆ. ಇನ್ನು ಗ್ರಾಸ್ ಲೆಕ್ಕಾಚಾರದಲ್ಲಿ ಭಾರತದಲ್ಲೇ ಒಟ್ಟು 72.50 ಕೋಟಿ ರೂಪಾಯಿ ಗಳಿಕೆಯಾಗಿದೆ. ಮೊದಲ ದಿನ ಬಂದ ಭರ್ಜರಿ ಕಲೆಕ್ಷನ್‌ನಿಂದಾಗಿ ಈ ಮಟ್ಟದ ಮೊತ್ತ ಕಾಣಿಸುತ್ತಿದೆಯೇ ಹೊರತು, ಎರಡನೇ ದಿನದ ಮಟ್ಟಿಗೆ ಗಳಿಕೆ ತೀರಾ ಮಂದಗತಿಯಲ್ಲಿದೆ.
ಅತ್ತ ವಿದೇಶಗಳಲ್ಲೂ ಸಿನಿಮಾಗೆ ಹಿನ್ನಡೆಯಾಗಿದೆ. ಎರಡನೇ ದಿನ ವಿದೇಶಗಳಲ್ಲಿ ಸಿನಿಮಾ 4 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ್ದು, ಇದರೊಂದಿಗೆ ಓವರ್‌ಸೀಸ್ ಒಟ್ಟು ಗ್ರಾಸ್ ಗಳಿಕೆ 26 ಕೋಟಿ ರೂಪಾಯಿ ಆಗಿದೆ.
ಇದನ್ನೂ ಓದಿ: ‘ದಿ ಪ್ಯಾರಡೈಸ್’ ಸಿನಿಮಾನಲ್ಲಿ ನಟಿಸಿದ್ದ ದೃಶ್ಯಕ್ಕೆ ಕತ್ತರಿ, ನಟ ಬೇಸರ
ಭಾರತ ಹಾಗೂ ವಿದೇಶಿ ಮಾರುಕಟ್ಟೆ ಸೇರಿದಂತೆ ‘ಪ್ಯಾರಡೈಸ್’ ಚಿತ್ರವು ಎರಡು ದಿನಗಳಲ್ಲಿ ವಿಶ್ವಾದ್ಯಂತ ಒಟ್ಟು 98.50 ಕೋಟಿ ರೂಪಾಯಿ ಗ್ರಾಸ್ ಗಳಿಕೆ ಮಾಡಿದೆ. ಮೊದಲ ದಿನದ ಬಂಪರ್ ಗಳಿಕೆಯಿಂದ ಸಿನಿಮಾ 100 ಕೋಟಿ ಕ್ಲಬ್‌ನ ಹತ್ತಿರ ಬಂದಿದೆಯಾದರೂ, ನೆಗೆಟಿವ್ ಟಾಕ್ ಹೀಗೆಯೇ ಮುಂದುವರಿದರೆ ಮುಂದಿನ ದಿನಗಳಲ್ಲಿ ಕಲೆಕ್ಷನ್ ಮತ್ತಷ್ಟು ಕುಸಿಯುವ ಭೀತಿ ಎದುರಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.