
ಕಮಲ್ ಹಾಸನ್ ಅವರ ನಟನೆಯ ‘ಥಗ್ ಲೈಫ್’ ಚಿತ್ರ ಮೊದಲ ದಿನ ಹೀನಾಯ ಕಲೆಕ್ಷನ್ ಮಾಡಿದೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ನೆಗೆಟಿವ್ ವಿಮರ್ಶೆ ಸಿಕ್ಕಿದ್ದು ಒಂದು ಕಾರಣವಾದರೆ, ಕರ್ನಾಟಕದಲ್ಲಿ ಸಿನಿಮಾ ರಿಲೀಸ್ ಮಾಡದೇ ಇದ್ದಿದ್ದು ಚಿತ್ರಕ್ಕೆ ಆದ ದೊಡ್ಡ ನಷ್ಟ. ಕಮಲ್ (Kamal Haasan) ತಾವು ಕನ್ನಡದ ಬಗ್ಗೆ ನೀಡಿದ ಹೇಳಿಕೆಗೆ ಕ್ಷಮೆ ಕೇಳಿದ್ದರೆ ಇಷ್ಟೆಲ್ಲ ಸಮಸ್ಯೇ ಇರುತ್ತಿರಲಿಲ್ಲ. ಆದರೆ, ಕ್ಷಮೆ ಕೇಳದೆ ಮೊಂಡುತನ ತೋರಿಸಿದ ಅವರಿಗೆ ಹಿನ್ನಡೆ ಆಗಿದೆ.
‘ತಮಿಳಿನಿಂದಲೇ ಕನ್ನಡ ಹುಟ್ಟಿದ್ದು’ ಎಂದು ಅಪ್ರಬುದ್ಧವಾಗಿ ಮಾತನಾಡಿ ಕಮಲ್ ಹಾಸನ್ ಟೀಕೆಗೆ ಒಳಗಾದರು. ಈ ಚಿತ್ರವನ್ನು ಕರ್ನಾಟಕದಲ್ಲಿ ರಿಲೀಸ್ ಮಾಡಲು ಅವಕಾಶ ನೀಡುವುದಿಲ್ಲ ಎಂದು ಘೋಷಿಸಲಾಯಿತು. ಈ ವಿಚಾರವಾಗಿ ಕಮಲ್ ಹಾಸನ್ ಕೋರ್ಟ್ ಮೆಟ್ಟಿಲೇರಿದರು. ಕರ್ನಾಟಕ ಹೈಕೋರ್ಟ್ ಕಮಲ್ ಹಾಸನ್ಗೆ ಛೀಮಾರಿ ಹಾಕಿ, ಕರ್ನಾಟಕದ ಪರವೇ ಆದೇಶ ನೀಡಿತು. ಕರ್ನಾಟಕ ಹೊರತುಪಡಿಸಿ ಉಳಿದ ಕಡೆಗಳಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್ ಮಾಡೋದಾಗಿ ಅವರು ಕೋರ್ಟ್ಗೆ ತಿಳಿಸಿದರು.
‘ಥಗ್ ಲೈಫ್’ ಚಿತ್ರ ಮೊದಲ ದಿನದ ಕಲೆಕ್ಷನ್ ಕೇವಲ 17 ಕೋಟಿ ರೂಪಾಯಿ. ಈ ಮೊದಲು ರಿಲೀಸ್ ಆಗಿ ಹೀನಾಯ ಸೋಲು ಕಂಡ ‘ಇಂಡಿಯನ್ 2’ ಚಿತ್ರದ ಮೊದಲ ದಿನದ ಗಳಿಕೆಯನ್ನು ಹಿಂದಿಕ್ಕಲು ‘ಥಗ್ ಲೈಫ್’ ಸಿನಿಮಾ ಬಳಿ ಸಾಧ್ಯವಾಗಿಲ್ಲ. ಒಂದೊಮ್ಮೆ ಅವರು ಕ್ಷಮೆ ಕೇಳಿ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗಿದ್ದರೆ ಕಲೆಕ್ಷನ್ ಇನ್ನಷ್ಟು ಏರಿಕೆ ಆಗಿರುತ್ತೇನೋ.
ಇದನ್ನೂ ಓದಿ: ‘ಅತೀ ಕೆಟ್ಟ ಸಿನಿಮಾ’; ಕನ್ನಡಿಗರ ವಿರೋಧ ಕಟ್ಟಿಕೊಂಡ ‘ಥಗ್ ಲೈಫ್’ ಚಿತ್ರಕ್ಕೆ ತಮಿಳಿಗರಿಂದಲೇ ಛೀಮಾರಿ
ಇನ್ನು ‘ಥಗ್ ಲೈಫ್’ ಸಿನಿಮಾ ಬುಕ್ ಮೈ ಶೋನಲ್ಲಿ 5.2 ರೇಟಿಂಗ್ ಪಡೆದುಕೊಂಡಿದೆ. ಈ ಮೂಲಕ ಸಿನಿಮಾಗೆ ಹೀನಾಯ ವಿಮರ್ಶೆ ಸಿಕ್ಕಂತೆ ಆಗಿದೆ. ಮುಂದೊಂದು ದಿನ ಸಿನಿಮಾ ಕರ್ನಾಟಕದಲ್ಲಿ ರಿಲೀಸ್ ಆಗುವ ಪರಿಸ್ಥಿತಿ ಬಂದರೂ ಯಾರೊಬ್ಬರೂ ಹೋಗಿ ಚಿತ್ರ ನೋಡುವ ಸಾಹದ ಮಾಡೋದಿಲ್ಲ ಎಂಬುದು ಅನೇಕರ ಅಭಿಪ್ರಾಯ. ಸದ್ಯ ಪ್ರಕರಣ ಕೋರ್ಟ್ನಲ್ಲಿ ಇದ್ದು, ಜೂನ್ 10ರಂದು ಮುಂದಿನ ವಿಚಾರಣೆ ಇದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 8:40 am, Fri, 6 June 25