
ಕಾಲಿವುಡ್ ಸ್ಟಾರ್ ನಟ, ತಮಿಳುನಾಡು ಮುಖ್ಯಮಂತ್ರಿ ದಳಪತಿ ವಿಜಯ್ (Thalapathy Vijay) ಜೂನ್ 22ರಂದು ತಮ್ಮ 52ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ವಿಜಯ್‌ಗೆ ಶುಭಕೋರಿದ್ದರಾದರೂ, ಪ್ರತಿ ವರ್ಷದಂತೆ ಅವರ ಆಪ್ತ ಗೆಳತಿ, ನಟಿ ತ್ರಿಶಾ ಕೃಷ್ಣನ್ (Trisha Krishnan) ಮಾತ್ರ ಯಾವುದೇ ಪೋಸ್ಟ್ ಹಂಚಿಕೊಂಡಿರಲಿಲ್ಲ. ಇದು ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲದೆ, ತ್ರಿಶಾ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಜಯ್ ಅವರನ್ನು ಅನ್‌ಫಾಲೋ ಮಾಡಿದ್ದಾರೆ ಎಂಬ ವದಂತಿ ಕೂಡ ಹಬ್ಬಿತ್ತು. ಆದರೆ, ಈಗ ತಡವಾಗಿಯಾದರೂ ವಿಜಯ್‌ಗೆ ಪ್ರೀತಿಯಿಂದ ಹುಟ್ಟುಹಬ್ಬದ ಶುಭಕೋರುವ ಮೂಲಕ ತ್ರಿಶಾ ಅವರು ಎಲ್ಲಾ ವದಂತಿಗಳಿಗೂ ಬ್ರೇಕ್ ಹಾಕಿದ್ದಾರೆ.
ವಿಜಯ್ ಅವರೊಂದಿಗೆ ಕೇಕ್ ಕತ್ತರಿಸಿ ಬರ್ತ್‌ಡೇ ಸೆಲೆಬ್ರೇಟ್ ಮಾಡುತ್ತಿರುವ ಸುಂದರ ಫೋಟೋವೊಂದನ್ನು ತ್ರಿಶಾ ಕೃಷ್ಣನ್ ಅವರು ತಮ್ಮ ಅಧಿಕೃತ ಇನ್‌ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೋದಲ್ಲಿ ವಿಜಯ್ ಕೇಕ್ ಕತ್ತರಿಸುತ್ತಿದ್ದರೆ, ತ್ರಿಶಾ ಅವರು ವಿಜಯ್ ಮುಖವನ್ನು ಪ್ರೀತಿಯಿಂದ ದಿಟ್ಟಿಸಿ ನೋಡುತ್ತಿರುವುದನ್ನು ಕಾಣಬಹುದು. ಈ ಫೋಟೋ ವೈರಲ್ ಆಗಿದೆ.
ಈ ಪೋಸ್ಟ್‌ಗೆ, ‘ಎಲ್ಲದಕ್ಕೂ ಒಂದು ಮೌಲ್ಯ ತಂದುಕೊಡುವ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು ’ ಎಂದು ತ್ರಿಶಾ ಕೃಷ್ಣನ್ ಅವರು ಕ್ಯಾಪ್ಷನ್ ನೀಡಿದ್ದಾರೆ. ಈ ಪೋಸ್ಟ್ ನೋಡಿದ ಅಭಿಮಾನಿಗಳಿಗೆ ಖುಷಿ ಆಗಿದೆ. ವಿಜಯ್ ಮತ್ತು ತ್ರಿಶಾ ನಡುವೆ ಯಾವುದೇ ಮುನಿಸು ಇಲ್ಲ ಎಂಬುದು ಗೊತ್ತಾಗಿದೆ. ಆದರೂ ತ್ರಿಶಾ ಅವರು ತಡವಾಗಿ ಶುಭಕೋರಿದ್ದು ಯಾಕೆ ಎಂಬುದು ಮಾತ್ರ ಇನ್ನೂ ಸ್ಪಷ್ಟವಾಗಿಲ್ಲ.
ಕಳೆದ ವರ್ಷವೂ ತ್ರಿಶಾ ಅವರು ವಿಜಯ್ ಜೊತೆ ಇರುವ ಫೋಟೋ ಹಾಕಿ ‘ಹ್ಯಾಪಿ ಬರ್ತ್‌ಡೇ ಬೆಸ್ಟೆಸ್ಟ್’ ಎಂದು ಬರೆದುಕೊಂಡಿದ್ದರು. ಇನ್ನು 2024ರಲ್ಲಿ ಲಿಫ್ಟ್ ಸೆಲ್ಫಿ ಹಂಚಿಕೊಂಡು ಶುಭಕೋರಿದ್ದರು. ಇವರಿಬ್ಬರ ಆನ್-ಸ್ಕ್ರೀನ್ ಕೆಮಿಸ್ಟ್ರಿಗೆ ತಮಿಳು ಚಿತ್ರರಂಗದಲ್ಲಿ ಅಪಾರ ಅಭಿಮಾನಿಗಳಿದ್ದಾರೆ. ‘ಗಿಲ್ಲಿ’, ‘ತಿರುಪಾಚಿ’, ‘ಆತಿ’, ‘ಕುರುವಿ’, ‘ಲಿಯೋ’ ಮುಂತಾದ ಸಿನಿಮಾಗಳಲ್ಲಿ ಅವರು ಒಟ್ಟಿಗೆ ನಟಿಸಿದ್ದಾರೆ.
ಇದನ್ನೂ ಓದಿ: ವಿಜಯ್ ಜೊತೆಗಿನ ನಂಟಿನಿಂದ ಹೆಚ್ಚಿದ ತ್ರಿಶಾ ಕ್ರೇಜ್; ಗಗನಕ್ಕೇರಿದ ಸಂಭಾವನೆ
ಇತ್ತೀಚಿನ ತಿಂಗಳುಗಳಲ್ಲಿ ತ್ರಿಶಾ ಮತ್ತು ವಿಜಯ್ ಅವರ ವೈಯಕ್ತಿಕ ಸಂಬಂಧದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಹಲವು ವದಂತಿಗಳು ಹರಿದಾಡುತ್ತಿದ್ದವು. ವಿಜಯ್ ಅವರು ತಮಿಳುನಾಡಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಸಮಾರಂಭದಲ್ಲೂ ತ್ರಿಶಾ ಹಾಜರಾಗಿದ್ದರು. ಗಾಸಿಪ್‌ಗಳ ಬಗ್ಗೆ ಇಬ್ಬರೂ ಎಲ್ಲೂ ಅಧಿಕೃತವಾಗಿ ಪ್ರತಿಕ್ರಿಯಿಸದಿದ್ದರೂ, ಇವರಿಬ್ಬರ ಸ್ನೇಹ ಗಟ್ಟಿಯಾಗಿದೆ ಎಂಬುದಕ್ಕೆ ತ್ರಿಶಾ ಅವರ ಈ ಹೊಸ ಪೋಸ್ಟ್ ಸಾಕ್ಷಿಯಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.