
1980ರ ದಶಕದಲ್ಲಿ ದೂರದರ್ಶನದಲ್ಲಿ ರಮಾನಂದ ಸಾಗರ್ ಅವರ ‘ರಾಮಾಯಣ’ ಸರಣಿ ಇಡೀ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಈ ಪೌರಾಣಿಕ ಧಾರಾವಾಹಿಯ ಜನಪ್ರಿಯತೆಯನ್ನು ಗಮನದಲ್ಲಿಟ್ಟುಕೊಂಡು, ನಿರ್ಮಾಪಕರು ಕೆಲವು ವರ್ಷಗಳ ನಂತರ ‘ಉತ್ತರ ರಾಮಾಯಣ’ವನ್ನು ಪ್ರೇಕ್ಷಕರ ಮುಂದೆ ತಂದಿದ್ದರು. ಇದರಲ್ಲಿ ರೀರಾಮ ಮತ್ತು ಸೀತಾಮಾತೆಯ ಪುತ್ರರಾದ ಲವ ಮತ್ತು ಕುಶನ ಕಥೆಯನ್ನು ತೋರಿಸಲಾಗಿತ್ತು.
1988ರಲ್ಲಿ ಪ್ರಸಾರವಾದ ಈ ‘ಉತ್ತರ ರಾಮಾಯಣ’ದಲ್ಲಿ ಲವನ ಪಾತ್ರವನ್ನು ನಟ ಸ್ವಪ್ನಿಲ್ ಜೋಶಿ ನಿರ್ವಹಿಸಿದರೆ, ಕುಶನ ಪಾತ್ರವನ್ನು ಮಯೂರೇಶ್ ಕ್ಷೇತ್ರಮಾಡೆ ಮಾಡಿದ್ದರು. ಸ್ವಪ್ನಿಲ್ ಜೋಶಿ ಇಂದು ಚಿತ್ರರಂಗದ ಖ್ಯಾತ ನಟನಾಗಿ ಗುರುತಿಸಿಕೊಂಡಿದ್ದಾರೆ. ಆದರೆ ಕುಶನ ಪಾತ್ರ ಮಾಡಿದ್ದ ಮಯೂರೇಶ್ ಈಗ ಏನು ಮಾಡುತ್ತಿದ್ದಾರೆ ಗೊತ್ತಾ? ಅವರು ಇಂದು ಬರೋಬ್ಬರಿ 1400 ಕೋಟಿ ರೂಪಾಯಿಗಳ ಕಂಪನಿಯ ಮಾಲೀಕರಾಗಿದ್ದಾರೆ!
‘ಉತ್ತರ ರಾಮಾಯಣ’ದ ಮೂಲಕ ಭಾರಿ ಜನಪ್ರಿಯತೆ ಗಳಿಸಿದರೂ, ಮಯೂರೇಶ್ ತಮ್ಮ 13ನೇ ವಯಸ್ಸಿನಲ್ಲೇ ಅಭಿನಯಕ್ಕೆ ವಿದಾಯ ಹೇಳಿ ಸಂಪೂರ್ಣವಾಗಿ ಶಿಕ್ಷಣದ ಕಡೆಗೆ ಗಮನ ಹರಿಸಿದರು. ಐಎಂಡಿಬಿ (IMDb) ವರದಿಯ ಪ್ರಕಾರ, ಮಯೂರೇಶ್ ಉನ್ನತ ಶಿಕ್ಷಣಕ್ಕಾಗಿ ಅಮೆರಿಕಕ್ಕೆ ತೆರಳಿ ಅಲ್ಲಿ ಫೈನಾನ್ಸ್ ಮತ್ತು ಬ್ಯುಸಿನೆಸ್ ಶಿಕ್ಷಣವನ್ನು ಪಡೆದರು. ಮಯೂರೇಶ್ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಅವರು 2003 ರಿಂದ ವಿಶ್ವ ಬ್ಯಾಂಕ್‌ನಲ್ಲಿ ಸಂಶೋಧಕರಾಗಿ ಕೆಲಸ ಮಾಡಿದರು. ಆನಂತರ ಅವರು ಕಾರ್ಪೊರೇಟ್ ಜಗತ್ತಿನಲ್ಲಿ ಸಕ್ರಿಯರಾದರು.
ಮಯೂರೇಶ್ ಅವರಿಗೆ 2016 ನೇ ವರ್ಷವು ಬಹಳ ವಿಶೇಷವಾಗಿತ್ತು. ಯಾಕೆಂದರೆ ಅದೇ ವರ್ಷ ಅವರು ‘ಕಮಿಷನ್ ಜಂಕ್ಷನ್’ (Commission Junction) ಎಂಬ ಜಾಗತಿಕ ಮಾರ್ಕೆಟಿಂಗ್ ಪ್ಲಾಟ್‌ಫಾರ್ಮ್‌ನ ಸಿಇಒ ಆಗಿ ನೇಮಕಗೊಂಡರು. ಹಲವು ವರ್ಷಗಳ ಕಠಿಣ ಪರಿಶ್ರಮದಿಂದ ಮಯೂರೇಶ್ 2022ರ ವೇಳೆಗೆ ಈ ಕಂಪನಿಯನ್ನು 1400 ಕೋಟಿ ರೂಪಾಯಿಗಳ ಆದಾಯ ಗಳಿಸುವ ಮಟ್ಟಕ್ಕೆ ಬೆಳೆಸಿದರು. ಮಯೂರೇಶ್ ಇಂದು ಒಬ್ಬ ಯಶಸ್ವಿ ಉದ್ಯಮಿಯಾಗಿ ಗುರುತಿಸಿಕೊಂಡಿದ್ದು, ಪ್ರಸ್ತುತ ತಮ್ಮ ಕುಟುಂಬದೊಂದಿಗೆ ನ್ಯೂಯಾರ್ಕ್‌ನಲ್ಲಿ ವಾಸಿಸುತ್ತಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಜಪಾನಿಗೆ ಹೋದ ಆಸಕ್ತಿಕರ ಕತೆ ಗೊತ್ತೆ?
ರಮಾನಂದ ಸಾಗರ್ ಅವರ ‘ರಾಮಾಯಣ’ ಮತ್ತು ‘ಉತ್ತರ ರಾಮಾಯಣ’ ಧಾರಾವಾಹಿಗಳಿಗೆ ಅಂದಿನಿಂದ ಇಂದಿನವರೆಗೂ ಅಷ್ಟೇ ಜನಪ್ರಿಯತೆ ಇದೆ. ಲಾಕ್‌ಡೌನ್ ಸಮಯದಲ್ಲಿ ಈ ಧಾರಾವಾಹಿಗಳು ಮರುಪ್ರಸಾರವಾದಾಗಲೂ ಟಿಆರ್‌ಪಿ (TRP) ಯಲ್ಲಿ ಎಲ್ಲಾ ದಾಖಲೆಗಳನ್ನು ಮುರಿದಿದ್ದವು. ಆ ಸರಣಿಯಲ್ಲಿ ನಟಿಸಿದ ಕಲಾವಿದರನ್ನು ಇಂದಿಗೂ ಜನರು ದೇವರ ರೂಪದಲ್ಲಿ ಗೌರವಿಸುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.