Vakeel saab Box Office Collection : ವಕೀಲ್​ ಸಾಬ್​ ಹಿಟ್​ ಅಥವಾ ಫ್ಲಾಪ್​? ಕಳಚಿತು ಪವನ್​ ಕಲ್ಯಾಣ್​ ಅಭಿಮಾನಿಗಳ ಭ್ರಮೆ

|

Updated on: Apr 19, 2021 | 10:02 AM

Pawan Kalyan: ಆರಂಭದಲ್ಲಿ ವಕೀಲ್​ ಸಾಬ್​ ಚಿತ್ರಕ್ಕೆ ಒಳ್ಳೆಯ ರೆಸ್ಪಾನ್ಸ್​ ಸಿಕ್ಕಿತ್ತು. ಅಭಿಮಾನಿಗಳು ಜೈಕಾರ ಹಾಕಿದ್ದರು. ಸಿನಿಮಾ ಗೆದ್ದೇಬಿಡ್ತು ಎಂದುಕೊಂಡರು. ಆದರೆ ಈಗ ಏನಾಗಿದೆ?

Vakeel saab Box Office Collection : ವಕೀಲ್​ ಸಾಬ್​ ಹಿಟ್​ ಅಥವಾ ಫ್ಲಾಪ್​? ಕಳಚಿತು ಪವನ್​ ಕಲ್ಯಾಣ್​ ಅಭಿಮಾನಿಗಳ ಭ್ರಮೆ
ಪವನ್​ ಕಲ್ಯಾಣ್​
Follow us on

ನಟ ಪವನ್​ ಕಲ್ಯಾಣ್​ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಅವರ ಸಿನಿಮಾ ರಿಲೀಸ್​ ಆದಾಗ ಜನರು ಮೊದಲ ದಿನವೇ ಮುಗಿಬಿದ್ದು ನೋಡುತ್ತಾರೆ. ವಕೀಲ್​ ಸಾಬ್​ ಸಿನಿಮಾ ವಿಚಾರದಲ್ಲೂ ಹಾಗೆಯೇ ಆಯಿತು. ಏ.9ರಂದು ಬಿಡುಗಡೆಯಾದ ಈ ಸಿನಿಮಾ ಮೊದಲ ದಿನವೇ ಅಂದಾಜು 40 ಕೋಟಿ ರೂ. ಕಮಾಯಿ ಮಾಡಿತ್ತು. ಆದರೆ 10 ದಿನ ಕಳೆಯುವುದರೊಳಗೆ ‘ವಕೀಲ್​ ಸಾಬ್​’ ಹಿಟ್​ ಅಥವಾ ಫ್ಲಾಪ್​ ಎಂಬ ಪ್ರಶ್ನೆ ಮೂಡಿದೆ.

ಪವನ್​ ಕಲ್ಯಾಣ್​ ಅವರಿಗೆ ಇದು ಕಮ್​ಬ್ಯಾಕ್​ ಸಿನಿಮಾ. ಹಾಗಾಗಿ ಅಭಿಮಾನಿಗಳು ಇದರ ಮೇಲೆ ಸಿಕ್ಕಾಪಟ್ಟೆ ನಿರೀಕ್ಷೆ ಇಟ್ಟುಕೊಂಡಿದ್ದರು. ಟ್ರೇಲರ್​ ರಿಲೀಸ್​ ಆದಾಗಲೇ ದೊಡ್ಡಮಟ್ಟದ ಕ್ರೇಜ್​ ಸೃಷ್ಟಿ ಆಗಿತ್ತು. ಏ.9ರಂದು ಬಹುತೇಕ ಕಡೆಗಳಲ್ಲಿ ಹೌಸ್​ಫುಲ್​ ಆಯಿತು. ಇನ್ನೇನು ಪವನ್ ಕಲ್ಯಾಣ್​​ ಗೆದ್ದೇಬಿಟ್ಟರು ಎಂಬ ಮಾತುಗಳು ಕೇಳಿಬಂದವು. ಆದರೆ ನಂತರದ ದಿನಗಳಲ್ಲಿ ವಕೀಲ್​ ಸಾಬ್​ ಚಿತ್ರಕ್ಕೆ ಆತಂಕ ಶುರು ಆಯಿತು. ಚಿತ್ರಮಂದಿರದಲ್ಲಿ ಜನರ ಸಂಖ್ಯೆ ಕುಸಿಯತೊಡಗಿತು.

ಮೊದಲ ದಿನ ಎಲ್ಲಡೆ ವಕೀಲ್​ ಸಾಬ್​ ಹೌಸ್​ಫುಲ್​ ಆಗಿದ್ದು ಅಭಿಮಾನಿಗಳ ಬಲದಿಂದ ಮಾತ್ರ! ಅಂದು ಚಿತ್ರಕ್ಕೆ ಮಿಶ್ರಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇನ್ನೊಂದು ವರ್ಗದ ಪ್ರೇಕ್ಷಕರು ಈ ಚಿತ್ರವನ್ನು ತೆಗಳಿದರು. ಒಂದು ವಾರ ಕಳೆಯುವುದರೊಳಗೆ ವಕೀಲ್​ ಸಾಬ್​ಗೆ ಹೀನಾಯ ಪರಿಸ್ಥಿತಿ ಬಂದಿದೆ. ಹಾಕಿದ ಬಂಡವಾಳವೇ ತಿರುಗಿ ಬಂದಿಲ್ಲ ಎನ್ನುತ್ತಿವೆ ಬಾಕ್ಸ್​ ಆಫೀಸ್​ ಮೂಲಗಳು. ಹಾಗಾಗಿ ಈ ಚಿತ್ರ ಬಹುತೇಕ ಸೋಲಿನ ಹಾದಿ ಹಿಡಿದಂತಾಗಿದೆ.

ಆರಂಭದಲ್ಲಿ ಚಿತ್ರಕ್ಕೆ ಸಿಕ್ಕ ರೆಸ್ಪಾನ್ಸ್​ ನೋಡಿದ ಅಭಿಮಾನಿಗಳು ಭಾರೀ ಜೈಕಾರ ಹಾಕಿದ್ದರು. ವಕೀಲ್​ ಸಾಬ್​ ಗೆದ್ದೇಬಿಡ್ತು ಎಂದುಕೊಂಡರು. ಆದರೆ ಅದು ಭ್ರಮೆ ಎಂಬುದು ಈಗ ಗೊತ್ತಾಗುತ್ತಿದೆ. ಚಿತ್ರದ ಸೋಲಿಗೆ ಕಾರಣ ಏನು ಎಂಬ ಪ್ರಶ್ನೆ ಈಗ ಎದುರಾಗಿದೆ. ಕೊರೊನಾ ಕಡೆಗೆ ನೇರವಾಗಿ ಕೈ ತೋರಿಸಲಾಗುತ್ತಿದೆ.

ಇತ್ತೀಚಿನ ದಿನಗಳಲ್ಲಿ ಕೊರೊನಾ ವೈರಸ್​ ಎರಡನೇ ಅಲೆ ಜೋರಾಗಿದೆ. ಹಾಗಾಗಿ ಹೆಚ್ಚಿನ ಜನರು ಚಿತ್ರಮಂದಿರದತ್ತ ಬರಲು ಹಿಂದೇಟು ಹಾಕುತ್ತಿದ್ದಾರೆ. ಜೊತೆಗೆ ಶೇ.50ರಷ್ಟು ಆಸನ ಮಿತಿ ನಿಯಮ ಹೇರಲಾಗಿದೆ. ಅತ್ತ ಪವನ್​ ಕಲ್ಯಾಣ್​ ಅವರಿಗೂ ಕೊರೊನಾ ವೈರಸ್​ ತಗುಲಿದೆ. ಹಾಗಾಗಿ ಅವರು ಚಿತ್ರದ ಪ್ರಚಾರದ ಕಡೆಗೆ ಗಮನ ಕೊಡಲು ಸಾಧ್ಯವಾಗಲಿಲ್ಲ. ಅವರಿಗೇ ಕೊವಿಡ್​ ಕಾಟ ಕೊಡುತ್ತಿರುವಾಗ ಅವರ ಅಭಿಮಾನಿಗಳು ಚಿತ್ರಮಂದಿರಕ್ಕೆ ಬರುವ ಧೈರ್ಯ ತೋರಿಸುವುದು ಕಷ್ಟ.

ಈ ಎಲ್ಲ ಕಾರಣದಿಂದಾಗಿ ವಕೀಲ್​ ಸಾಬ್​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ಸೋತಿದೆ. ಈವರೆಗೂ ಎಷ್ಟು ಕೆಲಕ್ಷನ್​ ಆಗಿದೆ ಎಂಬುದನ್ನು ನಿರ್ಮಾಪಕರು ಅಧಿಕೃತವಾಗಿ ಹೇಳಿಲ್ಲ. ಹಿಂದಿಯ ‘ಪಿಂಕ್​’ ಚಿತ್ರದ ತೆಲುಗು ರಿಮೇಕ್​ ಆಗಿ ಈ ಸಿನಿಮಾ ಮೂಡಿಬಂದಿದೆ. ಬಾಲಿವುಡ್​ನಲ್ಲಿ ಅಮಿತಾಭ್​ ಬಚ್ಚನ್​ ಮಾಡಿದ್ದ ಪಾತ್ರವನ್ನು ಟಾಲಿವುಡ್​ನಲ್ಲಿ ಪವನ್​ ಕಲ್ಯಾಣ್​ ಮಾಡಿದ್ದಾರೆ. ಇನ್ನೂ ಅನೇಕ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಆದರೆ ಪರಿಸ್ಥಿತಿ ನೀರಸವಾಗಿದೆ. ಕಲೆಕ್ಷನ್​ ಚೇತರಿಸಿಕೊಳ್ಳುವ ಯಾವ ಲಕ್ಷಣವೂ ಕಾಣಿಸುತ್ತಿಲ್ಲ.

ಇದನ್ನೂ ಓದಿ: ವಕೀಲ್​ ಸಾಬ್​ ಸಿನಿಮಾಗೆ ಮಹೇಶ್​ ಬಾಬು ವಿಮರ್ಶೆ! ಪವನ್​ ಕಲ್ಯಾಣ್​ ಚಿತ್ರದಲ್ಲಿ ಪ್ರಿನ್ಸ್​ ಮೆಚ್ಚಿದ್ದೇನು?