
ಕಳೆದ ಐದು ವರ್ಷಗಳಿಂದ ಮೈಸೂರನ್ನು ಕೇಂದ್ರವಾಗಿರಿಸಿಕೊಂಡು ಸಿನಿಮಾ ಕ್ಷೇತ್ರದಲ್ಲಿ ನಿರಂತರವಾಗಿ ಕೆಲಸ ಮಾಡುತ್ತಿರುವ ‘ಮೈಸೂರು ಸಿನಿಮಾ ಸೊಸೈಟಿ’, ಈ ಬಾರಿ ಬೆಂಗಳೂರಿನಲ್ಲಿ ‘ಗಂಧದಗುಡಿ ಸಿನಿಹಬ್ಬ’ ಎಂಬ ಹೆಸರಿನಲ್ಲಿ ಎರಡು ದಿನಗಳ ಕಿರುಚಿತ್ರೋತ್ಸವವನ್ನು ಆಯೋಜಿಸಿತ್ತು. ನವೆಂಬರ್ 21 ಮತ್ತು 22ರಂದು ಬೆಂಗಳೂರಿನ ಎಫ್.ಕೆ.ಸಿ.ಸಿ.ಐ. ಆವರಣದಲ್ಲಿರುವ ‘ಸರ್.ಎಂ. ವಿಶ್ವೇಶ್ವರಯ್ಯ ಆಡಿಟೋರಿಯಂ’ನಲ್ಲಿ ನಡೆದ ‘ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವವನ್ನು ನಟ ಶ್ರೀಮುರಳಿ, ನಟಿ ಕಾರುಣ್ಯಾ ರಾಮ್, ಹಿರಿಯ ನಟ ಶ್ರೀನಿವಾಸ ಮೂರ್ತಿ ಉದ್ಘಾಟಿಸಿದರು.
‘ಗಂಧದಗುಡಿ ಸಿನಿಹಬ್ಬ’ ಕಿರುಚಿತ್ರೋತ್ಸವದಲ್ಲಿ ಅಂತಿಮ ಹಂತಕ್ಕೆ ಆಯ್ಕೆಯಾದ ಸುಮಾರು 30ಕ್ಕೂ ಹೆಚ್ಚು ಕಿರುಚಿತ್ರಗಳು ಪ್ರದರ್ಶನಗೊಂಡವು. ಸಮಾರೋಪ ಸಮಾರಂಭದಲ್ಲಿ ತೀರ್ಪುಗಾರರಿಂದ ಸುಮಾರು 12 ವಿಭಾಗಗಳಿಗೆ ಆಯ್ಕೆಯಾದ ಕಿರುಚಿತ್ರಗಳಿಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ಇದೇ ವೇಳೆ ಕನ್ನಡ ಚಿತ್ರರಂಗದ ಹಿರಿಯ ನಟಿ ಸುಧಾರಾಣಿ ಅವರಿಗೆ ‘ಜೀವಮಾನದ ಸಾಧನೆ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸಮಾರೋಪ ಸಮಾರಂಭದಲ್ಲಿ ಮಾಜಿ ಡಿಸಿಎಂ ಡಾ. ಸಿ.ಎನ್. ಅಶ್ವಥ್ ನಾರಾಯಣ, ನಿರ್ದೇಶಕರಾದ ಪ್ರವೀಣ್ ಕೃಪಾಕರ್, ನಂದಕಿಶೋರ್, ಚೇತನ್ ಕುಮಾರ್, ಮಯೂರ ರಾಘವೇಂದ್ರ, ನಟಿಯರಾದ ಹರಿಣಿ ಶ್ರೀಕಾಂತ್, ಐಶ್ವರ್ಯಾ ನಾಗ್, ರೆಮೋಲಾ, ಸಂಗೀತ ನಿರ್ದೇಶಕ ಅನೂಪ್ ಸೀಳಿನ್, ‘ಮೈಸೂರು ಸಿನಿಮಾ ಸೊಸೈಟಿ’ ಅಧ್ಯಕ್ಷ ಚೇತನ್ ಮುಂತಾದವರು ಹಾಜರಿದ್ದರು.
ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಮಾಜಿ ಡಿಸಿಎಂ ಅಶ್ವಥ್ ನಾರಾಯಣ್, ‘ಸಿನಿಮಾ ಎಂಬುದು ಸಮಾಜ ಹಾಗೂ ಜನರ ಮೇಲೆ ತುಂಬ ಪರಿಣಾಮ ಬೀರುವಂತಹ ಪ್ರಭಾವಶಾಲಿ ಮಾಧ್ಯಮ. ಚಿತ್ರರಂಗವನ್ನು ನಮ್ಮಲ್ಲಿ ವಿಸ್ತರಿಸಲು ಸಾಕಷ್ಟು ಅವಕಾಶವಿದೆ. ನಮ್ಮ ಸಂಸ್ಕೃತಿ, ಜನಪದ, ಸಾಹಿತ್ಯವನ್ನು ಇಡೀ ವಿಶ್ವಕ್ಕೆ ಸಿನಿಮಾ ಮೂಲಕ ತಲುಪಿಸಬಹುದು. ‘ಮೈಸೂರು ಸಿನಿಮಾ ಸೊಸೈಟಿ’ ಇಂಥ ಪರಿಣಾಮಕಾರಿ ಮಾಧ್ಯಮವನ್ನು ಬಳಸಿಕೊಂಡು ಸಮಾಜಮುಖಿ ಕೆಲಸಗಳನ್ನು ಮಾಡಲು ಹೊರಟಿರುವುದು ನಿಜಕ್ಕೂ ಶ್ಲಾಘನೀಯ’ ಎಂದು ಹೇಳಿದರು.
‘ಮೈಸೂರು ಸಿನಿಮಾ ಸೊಸೈಟಿ’ಯ ‘ಜೀವಮಾನ ಸಾಧನೆ ಪ್ರಶಸ್ತಿ’ಯನ್ನು ಸ್ವೀಕರಿಸಿ ಮಾತನಾಡಿದ ಹಿರಿಯ ನಟಿ ಸುಧಾರಾಣಿ, ‘ಮೈಸೂರು ಮತ್ತು ಸಿನಿಮಾ ಈ ಎರಡಕ್ಕೂ ಮೊದಲಿನಿಂದಲೂ ಒಂದು ನಿಕಟ ಸಂಬಂಧವಿದೆ. ಮೈಸೂರು ಸಿನಿಮಾ ಸೊಸೈಟಿ ಮೂಲಕ ಇಂಥದ್ದೊಂದು ಗೌರವ ಸಿಗುತ್ತಿರುವುದಕ್ಕೆ ತುಂಬ ಖುಷಿಯಾಗುತ್ತಿದೆ. ನಾನು ಮಾಡಿದ ಪ್ರತಿಯೊಂದು ಪಾತ್ರಗಳು ನನಗೆ ಜೀವ ತುಂಬಿದೆ. ನನ್ನ ಜೀವನಕ್ಕೆ ಹೊಸ ಅಧ್ಯಾಯ ಕೊಟ್ಟಿವೆ. ಚಿತ್ರರಂಗಕ್ಕೆ ಬಾಲನಟಿಯಾಗಿ ಬಂದು ನಲವತ್ತು ವರ್ಷವಾದರೂ, ಪ್ರೇಕ್ಷಕರಿಂದ ಸಿಗುತ್ತಿರುವ ಪ್ರೀತಿ, ಅಭಿಮಾನ ಹೆಚ್ಚಾಗುತ್ತಿದೆ. ಅದಕ್ಕೆ ನಾನು ಯಾವಾಗಲೂ ಚಿರಋಣಿ. ಇದನ್ನು ಕಾಪಾಡಿಕೊಂಡು ಹೋಗಬೇಕಾದ ಜವಾಬ್ದಾರಿ ನಮ್ಮ ಮೇಲಿದೆ’ ಎಂದು ಹೇಳಿದರು.
ಇದನ್ನೂ ಓದಿ: ಬೆಂಗಳೂರು ಬದುಕಿನ ಕಷ್ಟ-ನಷ್ಟ ತಿಳಿಸುವ ಕನ್ನಡದ ಕಿರುಚಿತ್ರ ‘ಐಡೆಂಟಿಟಿ ಕಾರ್ಡ್’
ನಿರ್ದೇಶಕ ಪ್ರವೀಣ್ ಕೃಪಾಕರ್ ಮಾತನಾಡಿ, ‘ಸಮಾಜದ ಬೆಳವಣಿಗೆಗೆ ಸಿನಿಮಾ ಸೊಸೈಟಿಗಳು ಸಹಾಯಕವಾಗುತ್ತಿವೆ. ಸಿನಿಮಾ ಸೊಸೈಟಿಯಿಂದ ಸದಭಿರುಚಿಯ ಪ್ರೇಕ್ಷಕ ವರ್ಗ ಸೃಷ್ಟಿಯಾಗುತ್ತಿದೆ. ಇದೊಂದು ಸಕಾರಾತ್ಮಕ ಅಂಶ. ಕಿರುಚಿತ್ರಗಳನ್ನು ಗುರುತಿಸಿ, ಅದಕ್ಕೆ ಸೂಕ್ತ ವೇದಿಕೆ ಕಲ್ಪಿಸಿಕೊಡುತ್ತಿರುವ ಮೈಸೂರು ಸಿನಿಮಾ ಸೊಸೈಟಿಯ ಕಾರ್ಯ ಪ್ರಶಂಸನೀಯ’ ಎಂದು ಹೇಳಿದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.