AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಕೀಯದ ಕಾರಣಕ್ಕೆ ತಂದೆ-ತಾಯಿ ಮೇಲೆ ದೂರು ನೀಡಿದ್ದ ವಿಜಯ್

Thalapaty Vijay parents: ವಿಜಯ್ ಸಿಎಂ ಆಗಲು ಕೆಲವೇ ಸೀಟುಗಳ ಅವಶ್ಯಕತೆ ಇದೆ. ಪಕ್ಷ ಕಟ್ಟಿದ ಕೇವಲ ಎರಡು ವರ್ಷದಲ್ಲಿ ವಿಜಯ್ ಜಯ ಗಳಿಸಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ತಂದಿದೆ. ಅವರ ಪೋಷಕರು ಹಾಗೂ ಕುಟುಂಬದವರಿಗೂ ಖುಷಿ ತಂದಿದೆ. ಆದರೆ ಆರು ವರ್ಷದ ಹಿಂದೆ ಇದೇ ವಿಜಯ್ ಅವರು ರಾಜಕೀಯದ ಕಾರಣಕ್ಕೆ ತಮ್ಮ ಸ್ವಂತ ಪೋಷಕರ ವಿರುದ್ಧವೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ರಾಜಕೀಯದ ಕಾರಣಕ್ಕೆ ತಂದೆ-ತಾಯಿ ಮೇಲೆ ದೂರು ನೀಡಿದ್ದ ವಿಜಯ್
Thalapathy Vijay
ಮಂಜುನಾಥ ಸಿ.
|

Updated on: May 08, 2026 | 12:46 PM

Share

ತಮಿಳು ಚಿತ್ರರಂಗದ ಸ್ಟಾರ್ ನಟ ದಳಪತಿ ವಿಜಯ್ (Thalapathy Vijay), ತಮಿಳುನಾಡಿನ ಸಿಎಂ ಆಗುವ ಹೊಸ್ತಿಲಲ್ಲಿದ್ದಾರೆ. ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ವಿಜಯ್ ಅವರ ಟಿವಿಕೆ (ತಮಿಳ್ ವೆಟ್ರಿ ಕಳಗಂ) ಪಕ್ಷ 108 ಸೀಟುಗಳಲ್ಲಿ ಜಯಗಳಿಸಿದೆ. ಕಾಂಗ್ರೆಸ್ ಪಕ್ಷದ ಐದು ಸದಸ್ಯರು ಟಿವಿಕೆಗೆ ಬೆಂಬಲ ಘೋಷಿಸಿದ್ದಾರೆ. ವಿಜಯ್ ಸಿಎಂ ಆಗಲು ಇನ್ನೈದು ಸೀಟುಗಳ ಅವಶ್ಯಕತೆ ಇದೆ. ಪಕ್ಷ ಕಟ್ಟಿದ ಕೇವಲ ಎರಡು ವರ್ಷದಲ್ಲಿ ವಿಜಯ್ ಜಯ ಗಳಿಸಿರುವುದು ಸಹಜವಾಗಿಯೇ ಅಭಿಮಾನಿಗಳಿಗೆ ಖುಷಿ ತಂದಿದೆ. ಅವರ ಪೋಷಕರು ಹಾಗೂ ಕುಟುಂಬದವರಿಗೂ ಖುಷಿ ತಂದಿದೆ. ಆದರೆ ಆರು ವರ್ಷದ ಹಿಂದೆ ಇದೇ ವಿಜಯ್ ಅವರು ರಾಜಕೀಯದ ಕಾರಣಕ್ಕೆ ತಮ್ಮ ಸ್ವಂತ ಪೋಷಕರ ವಿರುದ್ಧವೇ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ವಿಜಯ್ ಅವರ ತಂದೆ ಎಸ್​​ಎ ಚಂದ್ರಶೇಖರ್ ತಮಿಳು ಚಿತ್ರರಂಗದ ಜನಪ್ರಿಯ ನಿರ್ದೇಶಕ, ನಿರ್ಮಾಪಕ ಮತ್ತು ನಟ ಸಹ. ತಮ್ಮ ಮಗ ಸ್ಟಾರ್ ಆಗುವಲ್ಲಿ ಎಸ್​​ಎ ಚಂದ್ರಶೇಖರ್ ಅವರ ಪಾಲು ದೊಡ್ಡದಿದೆ. ಆರಂಭದ ದಿನಗಳಲ್ಲಿ ವಿಜಯ್ ಅವರಿಗೆ ಸಿನಿಮಾ ನಿರ್ದೇಶನ, ನಿರ್ಮಾಣ ಮಾಡುವ ಜೊತೆಗೆ ಮಗನ ಸಿನಿಮಾಗಳ ಚಿತ್ರಕತೆ, ಶೂಟಿಂಗ್ ಇನ್ನಿತರೆಗಳ ನಿರ್ವಹಣೆಯನ್ನು ಎಸ್​​ಎ ಚಂದ್ರಶೇಖರ್ ಅವರೇ ಖುದ್ದಾಗಿ ಮಾಡುತ್ತಿದ್ದರು.

ವಿಜಯ್ ಅವರ ಇಂದಿನ ರಾಜಕೀಯ ಯಶಸ್ಸಿಗೆ ಕಾರಣವಾದ ವಿಜಯ್ ಅವರ ಅಭಿಮಾನಿ ಸಂಘ ‘ವಿಜಯ್ ಮಕ್ಕಳ್ ಇಯಕ್ಕಂ’ ಸ್ಥಾಪನೆ ಮತ್ತು ಅದರ ಕಾರ್ಯಚಟುವಟಿಕೆಯಲ್ಲಿಯೂ ಎಸ್​​ಎ ಚಂದ್ರಶೇಖರ್ ಸಕ್ರಿಯವಾಗಿ ತೊಡಗಿಕೊಂಡಿದ್ದರು. ವಿಜಯ್ ಅವರು ರಾಜಕೀಯಕ್ಕೆ ಬರಬೇಕು ಎಂಬ ಕೂಗು ದೊಡ್ಡದಾಗುತ್ತಿದ್ದ ಸಮಯದಲ್ಲಿ ಅಂದರೆ 2020ರ ಸಮಯದಲ್ಲಿ ಎಸ್​​ಎ ಚಂದ್ರಶೇಖರ್ ‘ಆಲ್ ಇಂಡಿಯಾ ದಳಪತಿ ವಿಜಯ್ ಮಕ್ಕಳ್ ಇಯಕ್ಕಂ’ ಹೆಸರಿನ ರಾಜಕೀಯ ಪಕ್ಷವನ್ನು ನೊಂದಣಿ ಮಾಡಿಸಿದ್ದರು. ಅದರಲ್ಲಿ ಸ್ವತಃ ತಾವು ಹಾಗೂ ವಿಜಯ್ ಅವರ ತಾಯಿ ಶೋಭಾ ಚಂದ್ರಶೇಖರ್ ಅವರು ಆಫೀಸ್ ಬೇರರ್ ಆಗಿದ್ದರು.

ಇದನ್ನೂ ಓದಿ:ದಳಪತಿ ವಿಜಯ್ 80 ಕೋಟಿ ರೂ. ನಿವಾಸಕ್ಕೆ ಹಾಲಿವುಡ್​ ನಟನ ಈ ಮನೆಯೇ ಸ್ಫೂರ್ತಿ

ಆದರೆ ಇದು ವಿಜಯ್ ಅವರಿಗೆ ಸರಿ ಬರಲಿಲ್ಲ, ಬಹಿರಂಗ ಪ್ರಕಟಣೆ ಹೊರಡಿಸಿದ ವಿಜಯ್, ತಮ್ಮ ತಂದೆ ಕಟ್ಟಿರುವ ಪಾರ್ಟಿಗೂ ತಮಗೂ ಸಂಬಂಧವಿಲ್ಲ ಎಂದರು. ಬಳಿಕ ವಿಜಯ್ ಅವರು ಚೆನ್ನೈ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ, ತಮ್ಮ ತಂದೆ ಪ್ರಾರಂಭಿಸಿರುವ ಪಕ್ಷವನ್ನು ರದ್ದು ಮಾಡಬೇಕೆಂದು ಹಾಗೂ ಆ ಪಕ್ಷದಲ್ಲಿ ತಮ್ಮ ಹೆಸರು ಹಾಗೂ ಚಿತ್ರವನ್ನು ಬಳಸಬಾರದೆಂದು ಆದೇಶ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿದ್ದರು. ಅಂತೆಯೇ ನ್ಯಾಯಾಲಯ ಸಹ ವಿಜಯ್ ಪರವಾಗಿಯೇ ಆದೇಶ ನೀಡಿತ್ತು. ಬಳಿಕ ಎಸ್​​ಎ ಚಂದ್ರಶೇಖರ್ ಅವರು ನ್ಯಾಯಾಲಯಕ್ಕೆ ಅಪಿಢವಿಟ್ ಸಲ್ಲಿಸಿ, ಪಕ್ಷಕ್ಕೆ ಸಂಬಂಧಿಸಿದಂತೆ ವಿಜಯ್ ಅವರ ಚಿತ್ರ, ಹೆಸರು ಬಳಸುವುದಿಲ್ಲ ಎಂದರು. ಅದರ ಮರು ವರ್ಷ ಅಂದರೆ 2021 ರಲ್ಲಿ ಆ ಪಕ್ಷವನ್ನು ರದ್ದು ಸಹ ಮಾಡಿದರು.

ವಿಜಯ್ ಮೊದಲಿನಿಂದಲೂ ಬಹಿರಂಗವಾಗಿ ಮಾತನಾಡಿದವರಲ್ಲ, ಆದರೆ ವಿಜಯ್ ಅವರ ತಂದೆ ಮಗನ ಪರವಾಗಿ ಮಾಧ್ಯಮಗಳಲ್ಲಿ ಹೇಳಿಕೆಗಳನ್ನು ನೀಡುತ್ತಲೇ ಬರುತ್ತಿದ್ದರು. ‘ಮರ್ಸೆಲ್’ ಸಿನಿಮಾ ವಿವಾದ ಸೇರಿದಂತೆ ವಿಜಯ್ ಬಗ್ಗೆ ಯಾವುದೇ ವಿವಾದಗಳು ಬಂದಾಗಲೆಲ್ಲ ಎಸ್​ಎ ಚಂದ್ರಶೇಖರ್ ಮಗನ ಪರವಾಗಿ ಸಮರ್ಥನೆಗಳನ್ನು ನೀಡುತ್ತಿದ್ದರು. ವಿಜಯ್ ರಾಜಕೀಯಕ್ಕೆ ಬರಬೇಕೆಂಬುದು ಅವರ ತಂದೆಯ ಆಸೆಯಾಗಿತ್ತು. ಅದರಂತೆ ಈಗ ವಿಜಯ್ ರಾಜಕೀಯ ಪಕ್ಷ ಕಟ್ಟಿ ಭಾರಿ ಯಶಸ್ಸು ಸಾಧಿಸಿದ್ದಾರೆ. ಈಗ ವಿಜಯ್ ಅವರಿಗೆ ಸಿಎಂ ಆಗಲು ಇನ್ನೈದು ಸೀಟುಗಳ ಅವಶ್ಯಕತೆ ಇದೆ. ವಿಜಯ್ ಸಿಎಂ ಆಗುತ್ತಾರಾ? ಕಾದು ನೋಡಬೇಕಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us