ವಿಶಾಲ್ ನಟನೆಯ ‘ಮಾರ್ಕ್ ಆಂಟೊನಿ’ ಸಿನಿಮಾ ಬಿಡುಗಡೆಗೆ ಕೋರ್ಟ್ ತಡೆ
Mark Antony movie: ತಮಿಳು ನಟ ವಿಶಾಲ್ ನಟನೆಯ 'ಮಾರ್ಕ್ ಆಂಟೊನಿ' ಸಿನಿಮಾದ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ಸೆಪ್ಟೆಂಬರ್ 15 ರಂದು ಸಿನಿಮಾ ಬಿಡುಗಡೆ ಆಗಲಿತ್ತು. ತ್ವರಿತವಾಗಿ ಈಗ 15 ಕೋಟಿ ಹಣವನ್ನು ವಿಶಾಲ್ ಹೊಂದಿಸುವ ಒತ್ತಡಕ್ಕೆ ಸಿಲುಕಿದ್ದಾರೆ.
ತಮಿಳು ನಟ ವಿಶಾಲ್ (Vishal) ಹಾಗೂ ಎಸ್ಜೆ ಸೂರ್ಯಾ ಒಟ್ಟಿಗೆ ನಟಿಸಿರುವ ‘ಮಾರ್ಕ್ ಆಂಟೊನಿ’ ಸಿನಿಮಾ ಬಿಡುಗಡೆಗೆ ಮದ್ರಾಸ್ ಹೈಕೋರ್ಟ್ ತಡೆ ನೀಡಿದೆ. ‘ಮಾರ್ಕ್ ಆಂಟೊನಿ’ ಸಿನಿಮಾ ಸೆಪ್ಟೆಂಬರ್ 15ರಂದು ಬಿಡುಗಡೆ ಆಗುವುದಿತ್ತು. ಸಿನಿಮಾ ಬಿಡುಗಡೆಗೆ ಎಲ್ಲವೂ ರೆಡಿ ಇರುವಾಗ ಹಠಾತ್ತನೆ ಸಿನಿಮಾ ಬಿಡುಗಡೆಗೆ ಹೈಕೋರ್ಟ್ ತಡೆ ನೀಡಿದೆ. ಹಣಕಾಸಿಗೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ನಡೆಸಿದ ನ್ಯಾಯಾಲಯವು ಈ ತೀರ್ಪು ನೀಡಿದೆ.
ತಮಿಳಿನ ಜನಪ್ರಿಯ ಸಿನಿಮಾ ನಿರ್ಮಾಣ ಸಂಸ್ಥೆ ಲೈಕಾ ಪ್ರೊಡಕ್ಷನ್, ನಟ ವಿಶಾಲ್ ವಿರುದ್ಧ ಪ್ರಕರಣ ದಾಖಲಿಸಿತ್ತು. ಲೈಕಾ ನಿರ್ಮಾಣ ಸಂಸ್ಥೆಗೆ ವಿಶಾಲ್ 21.29 ಕೋಟಿ ರೂಪಾಯಿ ಹಣ ಪಾವತಿಮಾಡಬೇಕಿದೆ. ಅದರಲ್ಲಿ 15 ಕೋಟಿ ಮೊತ್ತವನ್ನು ನಿಗದಿತ ಸಮಯದ ಒಳಗಾಗಿ ಪಾವತಿ ಮಾಡುವಂತೆ ನ್ಯಾಯಾಲಯ ಸೂಚಿಸಿತ್ತು. ಆದರೆ ವಿಶಾಲ್ 15 ಕೋಟಿ ಹಣವನ್ನು ಲೈಕಾಗೆ ನೀಡಿಲ್ಲವಾದ್ದರಿಂದ ಇದೀಗ ನ್ಯಾಯಾಲಯವು ‘ಮಾರ್ಕ್ ಆಂಟೊನಿ’ ಸಿನಿಮಾ ಬಿಡುಗಡೆಗೆ ತಡೆ ನೀಡಿರುವ ಜೊತೆಗೆ ಸೆಪ್ಟೆಂಬರ್ 12 ರಂದು ವಿಶಾಲ್ ಖುದ್ದು ನ್ಯಾಯಾಲಯಕ್ಕೆ ಹಾಜರಾಗಬೇಕೆಂದು ಆದೇಶಿಸಿದೆ.
ಸೆಪ್ಟೆಂಬರ್ 15ರಂದು ಬೇರೆ ಯಾವುದೇ ತಮಿಳು ಸಿನಿಮಾಗಳ ಬಿಡುಗಡೆ ಇಲ್ಲದ ಕಾರಣ, ವಿಶಾಲ್ರ ‘ಮಾರ್ಕ್ ಆಂಟೊನಿ’ ಸಿನಿಮಾ ಸೋಲೋ ರಿಲೀಸ್ ಆಗಿತ್ತು. ಸಿನಿಮಾಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆಯುವ ನಿರೀಕ್ಷೆ ಇತ್ತು. ಆದರೆ ನ್ಯಾಯಾಲಯದ ಆದೇಶದಿಂದಾಗಿ ಕೊನೆಯ ಕ್ಷಣದಲ್ಲಿ ಚಿತ್ರತಂಡದ ಯೋಜನೆಗಳು ಉಲ್ಟಾ ಆಗಿದೆ. ಒಂದೊಮ್ಮೆ ಸೆಪ್ಟೆಂಬರ್ 15ರ ಒಳಗಾಗಿ ವಿಶಾಲ್ 15 ಕೋಟಿ ಪಾವತಿ ಮಾಡಿದರೆ ನ್ಯಾಯಾಲಯ ಹೇರಿರುವ ತಡೆಯನ್ನು ತೆರವು ಮಾಡುವ ಸಾಧ್ಯತೆ ಇದೆ.
ಇದನ್ನೂ ಓದಿ:ಸಿಂಬು, ವಿಶಾಲ್ ಸೇರಿ ಐವರು ನಟರಿಗೆ ರೆಡ್ ಕಾರ್ಡ್; ಇವರು ಮಾಡಿದ ತಪ್ಪೇನು?
ಲೈಕಾ ಪ್ರೊಡಕ್ಷನ್ ಸಂಸ್ಥೆ ಹಾಗೂ ವಿಶಾಲ್ ನಡುವೆ ಕಳೆದ ಕೆಲವು ವರ್ಷಗಳಿಂದಲೂ ಹಣಕಾಸಿಗೆ ಸಂಬಂಧಿಸಿದಂತೆ ತಿಕ್ಕಾಟ ನಡೆಯುತ್ತಲೇ ಇದೆ. ಸಿನಿಮಾ ಮಾಡಲು ಗೋಪುರಂ ಫಿಲ್ಮ್ಸ್ಟೋ ನಿರ್ಮಾಣ ಸಂಸ್ಥೆಯ ಅನ್ಬುಚೆಳಿಯನ್ ಅವರಿಂದ 21.29 ಕೋಟಿ ಸಾಲ ಪಡೆದಿದ್ದರು. ಆ ಸಾಲವನ್ನು ನಿರ್ಮಾಣ ಸಂಸ್ಥೆ ಲೈಕಾ ತೀರಿಸಿತ್ತು. ಆದರೆ ವಿಶಾಲ್, ಲೈಕಾ ಸಂಸ್ಥೆಗೆ ಹಣ ಮರುಪಾವತಿ ಮಾಡಿಲ್ಲ ಮಾತ್ರವಲ್ಲದೆ, ನೀಡಿದ್ದ ಗ್ಯಾರೆಂಟಿ ಹಾಗೂ ಒಪ್ಪಂದಗಳನ್ನು ವಿಶಾಲ್ ಉಲ್ಲಂಘಿಸಿದ್ದರು. ಹಾಗಾಗಿ ಲೈಕಾ ಸಂಸ್ಥೆಯು ನ್ಯಾಯಾಲಯದ ಮೊರೆ ಹೋಯ್ತು. ಅಲ್ಲಿ ನಿಗದಿತ ಸಮಯದೊಳಗಾಗಿ 15 ಕೋಟಿ ಗ್ಯಾರೆಂಟಿ ಮೊತ್ತವನ್ನು ನೀಡಬೇಕೆಂದು ನ್ಯಾಯಾಲಯ ಆದೇಶಿಸಿತು. ಆದರೆ ಆ ಮೊತ್ತವನ್ನು ವಿಶಾಲ್ ನೀಡಿಲ್ಲ.
‘ಮಾರ್ಕ್ ಆಂಟೊನಿ’ ಸಿನಿಮಾದಲ್ಲಿ ವಿಶಾಲ್ ಜೊತೆಗೆ ಎಸ್ಜೆ ಸೂರ್ಯ ಸಹ ನಟಿಸಿದ್ದಾರೆ. ರಿತು ವರ್ಮಾ ಸಿನಿಮಾದ ನಾಯಕಿ. ಸಿನಿಮಾವನ್ನು ಅಧಿಕ್ ರವಿಚಂದ್ರನ್ ನಿರ್ದೇಶನ ಮಾಡಿದ್ದಾರೆ. ಜಿವಿ ಪ್ರಕಾಶ್ ಸಂಗೀತ ನೀಡಿದ್ದಾರೆ. ಸಿನಿಮಾವು ಸೈನ್ಸ್ ಫಿಕ್ಷನ್ ಕತೆಯನ್ನು ಒಳಗೊಂಡಿದೆ. ಸಿನಿಮಾದಲ್ಲಿ ಹಾಸ್ಯವೂ ಭರಪೂರವಾಗಿದೆ. ಸಿನಿಮಾದ ಬಗ್ಗೆ ಚಿತ್ರತಂಡ ಬಹಳ ಒಳ್ಳೆಯ ನಿರೀಕ್ಷೆಗಳನ್ನು ಇರಿಸಿಕೊಂಡಿತ್ತು, ಆದರೆ ಸಿನಿಮಾ ಬಿಡುಗಡೆ ತಡೆಯಾಗಿದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ