ಸಿನಿಮಾ ಶೂಟಿಂಗ್ನಲ್ಲಿ ಕ್ಲ್ಯಾಪ್ ಬಳಸುವುದು ಏಕೆ? ಏನಿದರ ಮಹತ್ವ?
Movie Shooting: ಸಿನಿಮಾ ಚಿತ್ರೀಕರಣ ಸಮಯದಲ್ಲಿ ಕ್ಯಾಮೆರಾ ಮುಂದೆ ಕ್ಲ್ಯಾಪ್ ಬೋರ್ಡ್ ಹಿಡಿಯುವುದು ಏಕೆ? ಆ ಕ್ಲ್ಯಾಪ್ ಬೋರ್ಡ್ ಅನ್ನು ಶಬ್ದ ಬರುವಂತೆ ಹೊಡೆಯುವುದು ಅಥವಾ ಕ್ಲ್ಯಾಪ್ ಮಾಡುವುದು ಏಕೆ? ಆಸಕ್ತಿಕರ ಮಾಹಿತಿ ಇಲ್ಲಿದೆ.

ಸಿನಿಮಾ ಚಿತ್ರೀಕರಣ (Movie Shooting) ಎಂಬುದು ಬಹಳ ಸಂಕೀರ್ಣವಾದ, ಶ್ರಮದಾಯಕ, ಕ್ರಿಯಾಶೀಲತೆ, ಬುದ್ಧಿವಂತಿಗೆ ಬೇಡುವ ಕಾರ್ಯ. ನಟರನ್ನು ಮುಂದೆ ನಿಲ್ಲಿಸಿ ಕ್ಯಾಮೆರಾ ಆನ್ ಮಾಡಿ ಶೂಟ್ ಮಾಡುತ್ತಾ ಸಾಗಲು ಆಗುವುದಿಲ್ಲ, ಮೊಬೈಲ್ ವಿಡಿಯೋ ಚಿತ್ರೀಕರಣಕ್ಕೂ ಸಿನಿಮಾ ಚಿತ್ರೀಕರಣಕ್ಕೂ ಆಕಾಶ-ಭೂಮಿಯಷ್ಟು ಅಂತರ. ಸಿನಮಾ ಚಿತ್ರೀಕರಣಕ್ಕೆ ಅದರದ್ದೇ ಆದ ವಿಧಾನ, ಅನುಸರಿಸಬೇಕಾದ ನಿಯಮಗಳು ಇವೆ. ಅವುಗಳಲ್ಲಿ ಒಂದು ಕ್ಲ್ಯಾಪಿಂಗ್. ಸಿನಿಮಾ ಶೂಟಿಂಗ್ನಲ್ಲಿ ಪ್ರತಿ ಸೀನ್ನ ಚಿತ್ರೀಕರಣಕ್ಕೆ ಮುನ್ನ ಕ್ಯಾಮೆರಾದ ಮುಂದೆ ಅಥವಾ ನಟರ ಮುಂದೆ ಒಂದು ಸ್ಲೇಟ್ ಅಥವಾ ಕ್ಲ್ಯಾಪ್ ಬೋರ್ಡ್ ಇಟ್ಟು ಕೂಡಲೇ ತೆಗೆಯಲಾಗುತ್ತದೆ. ನೋಡಲು ಸರಳ ಕ್ರಿಯೆಯಂತೆ ಕಂಡರು ಅದರ ಮಹತ್ವ ಅರಿತವರಿಗಷ್ಟೆ ಗೊತ್ತು. ಕ್ಯಾಮೆರಾ ಆನ್ ಆದಾಗ ಈ ಸ್ಲೇಟ್ ಅಥವಾ ಕ್ಲ್ಯಾಪ್ ಬೋರ್ಡ್ (Clap Board) ಹಿಡಿಯುವುದು ಏಕೆ? ಶಬ್ದ ಬರುವಂತೆ ಅದನ್ನು ಹೊಡೆಯುವುದು ಅಥವಾ ಕ್ಲ್ಯಾಪ್ ಮಾಡುವುದು ಏಕೆ? ಎಲ್ಲ ಮಾಹಿತಿ ಇಲ್ಲಿದೆ.
ಕ್ಲ್ಯಾಪ್ ಬೋರ್ಡ್ ಇಲ್ಲದೆ ಶೂಟ್ ಮಾಡಿದ ಪೂರ್ಣ ಸಿನಿಮಾವನ್ನು ಎಡಿಟ್ ಮಾಡುವುದು ಕಷ್ಟಸಾಧ್ಯ. ಕ್ಲ್ಯಾಪ್ ಬೋರ್ಡ್, ಚಿತ್ರೀಕರಣವಾಗುತ್ತಿರುವ ಆ ಸೀನ್, ಶಾಟ್, ಟೇಕ್, ಕ್ಯಾಮೆರಾ ಆಂಗಲ್ (ಕೆಲವು ಸಂದರ್ಭದಲ್ಲಿ) ಇನ್ನಿತರೆ ಪ್ರಮುಖ ಮಾಹಿತಿಯನ್ನು ಒಳಗೊಂಡಿರುತ್ತದೆ. ಸಿನಿಮಾ ಒಂದನ್ನು ನಾವು ಚಿತ್ರಮಂದಿರದಲ್ಲಿ ನೋಡಿದ ಕ್ರಮದಲ್ಲಿಯೇ ಚಿತ್ರೀಕರಣ ಮಾಡಲಾಗಿರುವುದಿಲ್ಲ. ನಿರ್ದೇಶಕ ತನ್ನ ಅನುಕೂಲಕ್ಕೆ ತಕ್ಕಂತೆ ಚಿತ್ರೀಕರಣ ಮಾಡುತ್ತಾನೆ, ನಂತರ ಆ ಬಿಡಿ ಸೀನ್ಗಳನ್ನು ಕತೆಗೆ ಅನುಸಾರ ಜೋಡಿಸಿ ಎಡಿಟ್ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ಕ್ಲ್ಯಾಪ್ ಬೋರ್ಡ್ ಮಾಹಿತಿ ಅತ್ಯಂತ ಅವಶ್ಯಕವಾಗುತ್ತದೆ.
ಕ್ಲ್ಯಾಪ್ ಬೋರ್ಡ್ ಒಳಗೊಂಡಿರುವ ಮಾಹಿತಿ
ಕ್ಲ್ಯಾಪ್ ಬೋರ್ಡ್ ಮೇಲೆ ಸಿನಿಮಾದ ಹೆಸರು, ನಿರ್ಮಾಣ ಸಂಸ್ಥೆ, ನಿರ್ದೇಶಕನ ಹೆಸರು, ಕ್ಯಾಮೆರಾ ಮ್ಯಾನ್ ಹೆಸರು ನಮೂದಾಗಿರುತ್ತದೆ. ಅದರ ಜೊತೆಗೆ ಅತ್ಯಂತದ ಮಹತ್ವದ ಮಾಹಿತಿಯಾದ ಸೀನ್ ಸಂಖ್ಯೆ, ಶಾಟ್ ಮಾಹಿತಿ, ಎಷ್ಟನೇ ಟೇಕ್ ಎಂಬ ಮಾಹಿತಿಗಳನ್ನು ಬರೆಯಲಾಗಿರುತ್ತದೆ. ಉದಾಹರಣೆಗೆ ಯಾವುದೇ ಸಿನಿಮಾದ 10ನೇ ಸೀನ್ನ 15ನೇ ಶಾಟ್ನ ಮೂರನೇ ಟೇಕ್ ಚಿತ್ರೀಕರಣ ನಡೆಯುತ್ತಿದೆ ಎಂದರೆ ಕ್ರಮವಾಗಿ 10-15-3 ಎಂದು ಬರೆದಿರಲಾಗುತ್ತದೆ. ಒಂದೊಮ್ಮೆ ಆ ಟೇಕ್ ಓಕೆ ಆಗಲಿಲ್ಲವೆಂದರೆ ಸ್ಲೇಟ್ ಮೇಲಿನ ಟೇಕ್ ಸಂಖ್ಯೆ ಒಂದು ಹೆಚ್ಚಾಗಿ 4 ಎಂದು ಬರೆಯಲಾಗುತ್ತದೆ. ಮುಂದಿನ ಶಾಟ್ಗೆ ಹೋದಾಗ ಶಾಟ್ ಸಂಖ್ಯೆ ಹೆಚ್ಚಾಗುತ್ತದೆ, ಸೀನ್ ಬದಲಾದಾಗ ಸೀನ್ ಸಂಖ್ಯೆ ಬದಲಾಗುತ್ತದೆ. ಯಾವ ಟೇಕ್ ಓಕೆ ಆಗುತ್ತದೆಯೋ ಅದನ್ನು ಫಿಲ್ಮ್ ಕಂಟಿನ್ಯುಟಿ ಲಾಗ್ ಶೀಟ್ನಲ್ಲಿ ಬರೆಯಲಾಗುತ್ತದೆ.
ಹೀಗೆ ಚಿತ್ರೀಕರಣ ಆದ ಎಲ್ಲ ವಿಡಿಯೋಗಳು ಎಡಿಟರ್ ಬಳಿ ಬರುತ್ತವೆ. ಕ್ಲ್ಯಾಪ್ ಬೋರ್ಡ್ ಮೇಲಿನ ಸೀನ್ ಸಂಖ್ಯೆಗಳನ್ನು ನೋಡಿ ಮೊದಲು ಎಲ್ಲ ವಿಡಿಯೋಗಳನ್ನು ಅನುಕ್ರಮದಲ್ಲಿ ಜೋಡಿಸಿಕೊಳ್ಳಲಾಗುತ್ತದೆ. ಆದರೆ ಆ ಎಡಿಟರ್ಗೆ ಗೊತ್ತಿರುವುದಿಲ್ಲ ಯಾವ ಸೀನ್ನ ಯಾವ ಶಾಟ್ನ ಯಾವ ಟೇಕ್ ಅನ್ನು ನಿರ್ದೇಶಕ ಓಕೆ ಮಾಡಿದ್ದಾನೆ ಎಂಬುದು. ಆ ಲಾಗ್ ಶೀಟ್ ನೋಡಿದ ಎಡಿಟರ್ಗೆ ಅರ್ಥವಾಗುತ್ತದೆ ಯಾವ ಶಾಟ್ ಓಕೆ ಆಗಿದೆ ಎಂದು. ಆಗ ಆತ ವಿಡಿಯೋ ನೋಡಿ, ಕ್ಯಾಮೆರಾ ಮುಂದೆ ಹಿಡಿದಿದ್ದ ಸ್ಲೇಟ್ನಲ್ಲಿ ಬರೆದ ಮಾಹಿತಿಯನ್ನು ಲಾಗ್ ಶೀಟ್ನ ಮಾಹಿತಿಯೊಟ್ಟಿಗೆ ಹೋಲಿಕೆ ಮಾಡಿ ಓಕೆ ಆಗಿರುವ ಶಾಟ್ ಅನ್ನಷ್ಟೆ ಎಡಿಟಿಂಗ್ಗೆ ಆಯ್ಕೆ ಮಾಡಿಕೊಳ್ಳುತ್ತಾನೆ. ಇಲ್ಲವಾದರೆ ಯಾವ ಟೇಕ್ ಓಕೆ ಆಗಿದೆ ಎಂಬುದು ಎಡಿಟರ್ಗೆ ಗೊತ್ತಾಗುವುದಿಲ್ಲ, ಮಾತ್ರವಲ್ಲ ಎಷ್ಟು ಟೇಕ್ ಆಗಿರುತ್ತವೆಂದರೆ ಒಮ್ಮೊಮ್ಮೆ ಸ್ವತಃ ನಿರ್ದೇಶಕನಿಗೂ ತಾನು ಯಾವ ಟೇಕ್ ಓಕೆ ಮಾಡಿದ್ದೇನೆಂಬುದು ಗೊತ್ತಾಗುವುದಿಲ್ಲ.
ಶಬ್ದ ಬರುವಂತೆ ಕ್ಲ್ಯಾಪ್ ಮಾಡುವುದು ಏಕೆ?
ಇನ್ನು ಕ್ಲ್ಯಾಪ್ ಬೋರ್ಡ್ ಅನ್ನು ಶಬ್ದ ಬರುವಂತೆ ಹೊಡೆಯುವುದು ಅಥವಾ ಕ್ಲ್ಯಾಪ್ ಮಾಡುವುದು ಏಕೆ? ಸುಮ್ಮನೆ ಬೋರ್ಡ್ ಅನ್ನು ಕ್ಯಾಮೆರಾ ಮುಂದೆ ಹಿಡಿದು ತೆಗೆಯಬಹುದಲ್ಲ, ಶಬ್ದ ಬರುವಂತೆ ಕ್ಲ್ಯಾಪ್ ಮಾಡುವುದು ಏಕೆ ಎಂಬ ಪ್ರಶ್ನೆ ಮೂಡಬಹುದು, ಇದಕ್ಕೂ ಕಾರಣ ಇದೆ.
ಶೂಟಿಂಗ್ ಸೆಟ್ನಲ್ಲಿ ಶಬ್ದ ಮತ್ತು ದೃಶ್ಯ ಪ್ರತ್ಯೇಕವಾಗಿ ರೆಕಾರ್ಡ್ ಆಗುತ್ತದೆ. ನಿರ್ದೇಶಕ, ಲೈಟ್ಸ್, ಕ್ಯಾಮೆರಾ, ಸೌಂಡ್ ಆಕ್ಷನ್ ಎನ್ನುತ್ತಾನೆ ಹಾಗಾಗಿ ಕ್ಯಾಮೆರಾ ಹಾಗೂ ಸೌಂಡ್ ಒಟ್ಟಿಗೆ ರೆಕಾರ್ಡ್ ಆರಂಭಿಸುವುದಿಲ್ಲ. ಅಲ್ಲದೆ ದೃಶ್ಯ ಹಾಗೂ ಶಬ್ದ ಬೇರೆ ಬೇರೆಯಾಗಿ ರೆಕಾರ್ಡ್ ಆಗುವುದರಿಂದ ಕಂಪ್ಯೂಟರ್ನಲ್ಲಿ ಎರಡನ್ನೂ ಒಟ್ಟಿಗೆ ಸೇರಿಸುವುದು ಅಥವಾ ಸಿಂಕ್ ಮಾಡುವುದು ಸುಲಭವಲ್ಲ. ಸಿಂಕ್ ಆಗದಿದ್ದರೆ ದೃಶ್ಯ ಮೊದಲು ಬಂದು ಬಳಿಕ ಶಬ್ದ ಬರುವುದೋ ಅಥವಾ ಶಬ್ದ ಮೊದಲಾಗಿ ದೃಶ್ಯ ತಡವಾಗಿ ಪ್ಲೇ ಆಗುವುದು ಆಗುತ್ತದೆ. ಹೀಗೆ ಆಗುವುದನ್ನು ತಪ್ಪಿಸಲೆಂದು ಕ್ಲ್ಯಾಪ್ ಬೋರ್ಡ್ನಿಂದ ಕ್ಲ್ಯಾಪ್ ಮಾಡಲಾಗುತ್ತದೆ.

ಶಬ್ದ ತರಂಗಗಳ ರೀತಿ ರೆಕಾರ್ಡ್ ಆಗುತ್ತದೆ ಎಂಬುದು ಗೊತ್ತೇ ಇದೆ. ಕಂಪ್ಯೂಟರ್ನಲ್ಲಿಯೂ ಶಬ್ದ, ತರಂಗಗಳ ರೀತಿಯಲ್ಲಿಯೇ ಎಡಿಟರ್ಗೆ ಕಾಣುತ್ತದೆ. ಅಸಿಸ್ಟೆಂಟ್ ಡೈರೆಕ್ಟರ್ಗಳು ಕ್ಲ್ಯಾಪ್ ಬೋರ್ಡ್ನಿಂದ ಕ್ಲ್ಯಾಪ್ ಮಾಡಿದಾಗ ಆ ಶಬ್ದ ತೀಕ್ಷಣವಾದ ತರಂಗವನ್ನು (Spike wave) ಸೃಷ್ಟಿಸುತ್ತದೆ. ಆ ಸ್ಪೈಕ್ ರೆಕಾರ್ಡ್ ಆಗಿರುವ ಇತರೆ ಶಬ್ದಕ್ಕಿಂತಲೂ ತೀಕ್ಷಣವಾಗಿದ್ದು ಕಂಪ್ಯೂಟರ್ನಲ್ಲಿ ಎದ್ದು ಕಾಣುತ್ತಿರುತ್ತದೆ. ಹಾಗಾಗಿ ಎಡಿಟರ್ಗೆ ಅದನ್ನು ಗುರುತಿಸುವುದು ಸುಲಭ. ಅದನ್ನು ಗುರುತಿಸಿ ಸುಲಭವಾಗಿ ಶಬ್ದ ಮತ್ತು ದೃಶ್ಯವನ್ನು ಎಡಿಟರ್ ಸಿಂಕ್ ಮಾಡುತ್ತಾನೆ.
ಇದು ಮಾತ್ರವೇ ಅಲ್ಲದೆ ಒಮ್ಮೊಮ್ಮೆ ಒಂದೇ ಸೀನ್ಗೆ ಎರಡು ಮೂರು ಕ್ಯಾಮೆರಾ ಹಾಗೂ ಸೌಂಡ್ ರೆಕಾರ್ಡರ್ ಡಿವೈಸ್ಗಳನ್ನು ಬಳಸಿ ಚಿತ್ರೀಕರಣ ಮಾಡಲಾಗುತ್ತದೆ. ಎಲ್ಲ ಕ್ಯಾಮೆರಾ, ಸೌಂಡ್ ಡಿವೈಸ್ಗಳಲ್ಲಿ ರೆಕಾರ್ಡ್ ಆಗಿರುವ ಶಬ್ದವನ್ನು ಕಂಪ್ಯೂಟರ್ನಲ್ಲಿ ಒಟ್ಟಿಗೆ ಎಡಿಟ್ಗೆ ಎತ್ತಿಕೊಳ್ಳುವ ಎಡಿಟರ್ ಕ್ಲ್ಯಾಪ್ನ ಶಬ್ದ ಸೃಷ್ಟಿಸುವ ತೀಕ್ಷಣ ತರಂಗ (Spike wave) ಅನ್ನು ಮಾನದಂಡವಾಗಿ ಇಟ್ಟುಕೊಂಡು ಎಲ್ಲ ಕ್ಯಾಮೆರಾಗಳ ದೃಶ್ಯವನ್ನು ಹಾಗೂ ಶಬ್ದವನ್ನು ಒಂದು ಆರ್ಡರ್ಗೆ ತಂದು ಸಿಂಕ್ ಮಾಡಿ ಎಡಿಟಿಂಗ್ ಆರಂಭಿಸುತ್ತಾನೆ. ಕ್ಲ್ಯಾಪ್ನ ಶಬ್ದ ಇಲ್ಲದೇ ಹೋದರೆ ಎಡಿಟಿಂಗ್ ಬಹಳ ಕಷ್ಟವಾಗಿಬಿಡುತ್ತದೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 3:51 pm, Sat, 19 August 23




