ನಟ ಆರ್. ಮಾಧವನ್ ಅವರಿಗೆ ಬಹುಭಾಷೆಯಲ್ಲಿ ಬೇಡಿಕೆ ಇದೆ. ಹಲವು ಹಿಟ್ ಸಿನಿಮಾಗಳನ್ನು ನೀಡಿದ ಅವರು ಪಕ್ಕಾ ಫ್ಯಾಮಿಲಿ ಮ್ಯಾನ್ ಕೂಡ ಹೌದು. ಚಿತ್ರರಂಗಕ್ಕೆ ಕಾಲಿಟ್ಟ ಆರಂಭದ ದಿನಗಳಲ್ಲೇ ಅವರು ಮದುವೆ ಆದರು. ಆದರೆ ಬಹುತೇಕರಿಗೆ ಈ ವಿಷಯ ತಿಳಿದಿರಲಿಲ್ಲ. ಆ ಸಂದರ್ಭದಲ್ಲಿ ಎದುರಾದ ಒಂದು ಸಂದಿಗ್ಧ ಪರಿಸ್ಥಿತಿ ಬಗ್ಗೆ ಸಂದರ್ಶನವೊಂದರಲ್ಲಿ ಮಾಧವನ್ ಹೇಳಿಕೊಂಡಿದ್ದಾರೆ. ತಾವು ಮದುವೆ ಆಗಿರುವ ವಿಚಾರವನ್ನೇ ಮುಚ್ಚಿಡಬೇಕು ಎಂದು ಸಿನಿಮಾದ ಪಿಆರ್ (ಪ್ರಚಾರ) ತಂಡದವರು ಮಾಧವನ್ ಮೇಲೆ ಒತ್ತಡ ಹೇರಿದ್ದರು.
ಅದು 2000ನೇ ಇಸವಿ ಸಂದರ್ಭ. ಮಾಧವನ್ ಯಾರು ಎಂಬುದು ಹೆಚ್ಚಿನ ಜನರಿಗೆ ತಿಳಿದಿರಲಿಲ್ಲ. ಕಾಲಿವುಡ್ನಲ್ಲಿ ಮಣಿರತ್ನಂ ನಿರ್ದೇಶನದ ‘ಅಲೈಪಯುತಿ’ ಚಿತ್ರದಲ್ಲಿ ನಟಿಸುವ ಅವಕಾಶ ಅವರಿಗೆ ಸಿಕ್ಕಿತ್ತು. ಕೆಲವೇ ತಿಂಗಳ ಹಿಂದೆ ಮದುವೆ ಆಗಿದ್ದ ಅವರು ಸಿನಿಮಾದ ಶೂಟಿಂಗ್ನಲ್ಲಿ ಭಾಗವಹಿಸಿದ್ದರು. ಆ ವೇಳೆ ಸುದ್ದಿಗೋಷ್ಠಿ ನಡೆದಾಗ ತಮಗೆ ಮದುವೆ ಆಗಿರುವ ವಿಚಾರವನ್ನು ಮಾಧ್ಯಮದವರ ಎದುರು ಬಾಯಿ ಬಿಡಬಾರದು. ಮದುವೆ ಆಗಿಲ್ಲ ಅಂತ ಸುಳ್ಳು ಹೇಳಬೇಕು ಎಂದು ಪಿಆರ್ ತಂಡದವರು ಒತ್ತಡ ಹೇರಿದರಂತೆ. ಅದಕ್ಕೆ ಕಾರಣ ಕೂಡ ಇತ್ತು.
ಮದುವೆ ಆದ ನಟರ ಮೇಲೆ ಮಹಿಳಾ ಪ್ರೇಕ್ಷಕರು ಹೆಚ್ಚು ಆಸಕ್ತಿ ತೋರಿಸುವುದಿಲ್ಲ ಎಂದು ಆ ಪಿಆರ್ ತಂಡದವರು ಭಾವಿಸಿದ್ದರು. ಹಾಗಾಗಿ ಮದುವೆ ಆಗಿದೆ ಎಂಬುದನ್ನು ಮುಚ್ಚಿಟ್ಟರೆ ಅದರಿಂದ ಮಾಧವನ್ಗೆ ಒಳಿತಾಗಲಿದೆ ಎಂದು ಅವರು ಸಲಹೆ ನೀಡಿದರು. ಆದರೆ ಮದುವೆ ವಿಚಾರದಲ್ಲಿ ಆ ರೀತಿ ಸುಳ್ಳು ಹೇಳಲು ಮಾಧವನ್ ಮನಸ್ಸು ಒಪ್ಪಲಿಲ್ಲ. ಆಗ ಅವರು ನಿರ್ದೇಶಕ ಮಣಿರತ್ನಂ ಬಳಿ ಸಲಹೆ ಕೇಳಿದರು. ‘ನಿಮಗೆ ಯಾವುದು ಸರಿ ಎನಿಸುತ್ತದೆಯೋ ಹಾಗೆ ಮಾಡಿ’ ಎಂದು ಮಣಿರತ್ನಂ ಹೇಳಿದರು.
ಸುಳ್ಳು ಹೇಳಲು ಮಾಧವನ್ ಸಿದ್ಧರಿರಲಿಲ್ಲ. ಸುದ್ದಿಗೋಷ್ಠಿಯಲ್ಲಿ ತಮ್ಮ ಮದುವೆ ಬಗ್ಗೆ ಅವರು ಸತ್ಯವನ್ನೇ ಹೇಳಿದರು. ‘9 ವರ್ಷ ಡೇಟಿಂಗ್ ಮಾಡಿದ ಹುಡುಗಿಯನ್ನೇ ನಾಲ್ಕು ತಿಂಗಳ ಹಿಂದೆ ಮದುವೆ ಆಗಿದ್ದೇನೆ. ಆಕೆ ಹೆಸರು ಸರಿತಾ’ ಎಂದು ಮಾಧವನ್ ನೇರವಾಗಿ ಎಲ್ಲವನ್ನೂ ಬಹಿರಂಗಪಡಿಸಿದರು. ಆ ಸತ್ಯದಿಂದ ಅವರಿಗೆ ಏನೂ ತೊಂದರೆ ಆಗಲಿಲ್ಲ. ಆ ಚಿತ್ರಕ್ಕೆ ಮಾಧವನ್ ಫಿಲ್ಮ್ ಫೇರ್ ಪ್ರಶಸ್ತಿ ಪಡೆದುಕೊಂಡರು. ಬಾಲಿವುಡ್ನಲ್ಲೂ ಸ್ಟಾರ್ ಆಗಿ ಮಿಂಚಿದರು. ಈಗಲೂ ಅವರಿಗೆ ಸಖತ್ ಬೇಡಿಕೆ ಇದೆ.
ಮಾಧವನ್ ನಟಿಸಿರುವ ‘ರಾಕೆಟ್ರಿ: ದಿ ನಂಬಿ ಎಫೆಕ್ಟ್’ ಚಿತ್ರ ಬಿಡುಗಡೆ ಸಜ್ಜಾಗಿದೆ. ಈ ಬಹುನಿರೀಕ್ಷಿತ ಚಿತ್ರವನ್ನು ಅವರೇ ನಿರ್ಮಿಸಿ, ನಿರ್ದೇಶನ ಮಾಡಿದ್ದಾರೆ. ವೆಬ್ ಸಿರೀಸ್ ಲೋಕದಲ್ಲಿ ಅವರು ಸಕ್ರಿಯರಾಗಿದ್ದಾರೆ. ಹಲವು ವೆಬ್ ಸರಣಿಗಳಲ್ಲಿ ಮಾಧವನ್ ನಟಿಸುತ್ತಿದ್ದಾರೆ.
ಇದನ್ನೂ ಓದಿ:
Madhavan: ಹೆಂಡತಿ ಎದುರು ನಾನು ಅಸಮರ್ಥ; ನಟ ಮಾಧವನ್ ಬಹಿರಂಗವಾಗಿ ಹೀಗೆ ಹೇಳಲು ಕಾರಣ ಏನು?
ನಿಮ್ಮ ಮೇಲೆ ಕ್ರಶ್ ಆಗಿದೆ ಎಂದ ಅಭಿಮಾನಿಗಳಿಗೆ ಮಾಧವನ್ ಕೊಟ್ಟ ಉತ್ತರವೇನು ಗೊತ್ತಾ?