ನಟಿ ಸಮಂತಾ ಬಗ್ಗೆ, ಅಕ್ಕಿನೇನಿ ಕುಟುಂಬದ ಬಗ್ಗೆ ಅತ್ಯಂತ ನೀಚ ಹೇಳಿಕೆ ನೀಡಿ ತೆಲಂಗಾಣ ಸಚಿವೆ ಕೊಂಡ ಸುರೇಖ ಸುದ್ದಿಯಾಗಿದ್ದಾರೆ. ಅಸಲಿಗೆ ತೆಲಂಗಾಣ, ಆಂಧ್ರ ರಾಜಕೀಯದ ಪರಿಚಯ ಇಲ್ಲದವರಿಗೆ ಕೊಂಡ ಸುರೇಖ ಹೊಸಬರಷ್ಟೆ, ಆದರೆ ತೆಲಂಗಾಣ, ಆಂಧ್ರ ವಿಶೇಷವಾಗಿ ವರಾಂಗಲ್ ಮತ್ತು ಅದರ ಸುತ್ತ ಮುತ್ತಲ ಜಿಲ್ಲೆಯವರಿಗೆ ಈ ಕೊಂಡ ಕುಟುಂಬದ ಭೀಕರತೆಯ ಇಂಚಿಂಚೂ ಗೊತ್ತು. ಎಷ್ಟೋ ಕುಟುಂಬಗಳು ಇವರ ಆರ್ಭಟಕ್ಕೆ ಬಲಿ ಆಗಿರುವುದೂ ಸಹ ಇದೆ. ತೆಲುಗಿನ ರಾಯಲ ಸೀಮ ದ್ವೇಷದ ಸಿನಿಮಾಗಳಿಗೆ ಸಾಕಷ್ಟು ಸರಕು ಕೊಟ್ಟಿರುವ ಕುಟುಂಬ ಇವರದ್ದು.
ಈಗ ವಿವಾದಕ್ಕೆ ಕಾರಣವಾಗಿರುವ ಕೊಂಡ ಸುರೇಖ ಕೇವಲ ಉತ್ಸವ ಮೂರ್ತಿಯಷ್ಟೆ, ಆಕೆಯ ಹಿಂದಿರುವುದು ಆಕೆಯ ಪತಿ, ನಟೋರಿಯಸ್ ರಾಜಕೀಯ ಕ್ರಿಮಿನಲ್, ಎರಡು ಬಾರಿ ಎಂಎಲ್ಸಿ ಆಗಿರುವ ಕೊಂಡ ಮುರಳಿ. ಅಸಲಿಗೆ ಈ ವ್ಯಕ್ತಿಯ ಹೆಸರು ಮುರಳೀಧರ ರಾವ್ ಪಟೇಲ್. ವರಾಂಗಲ್ನಲ್ಲಿ ಶ್ರೀಮಂತ ಕುಟುಂಬ ಇವರದ್ದು, ಅವಿಭಜಿತ ಆಂಧ್ರ ಪ್ರದೇಶದಲ್ಲಿ ತೀವ್ರವಾಗಿ ಹೆಚ್ಚಾಗಿದ್ದ ನಕ್ಸಲಿಸಂ, ಮಾವೋಯಿಸಂನ ಸೆಳೆತಕ್ಕೆ ಸಿಕ್ಕಿ ಕೊಂಡ ಎಂದು ಹೆಸರು ಬದಲಾಯಿಸಿಕೊಂಡು ಕಾಲೇಜು ದಿನಗಳಲ್ಲಿ ನಕ್ಸಲ್ ಹಾಗೂ ಮಾವೋಯಿಸ್ಟ್ ಗಳ ಸಂಘ ಮಾಡಿದರು. ಪೀಪಲ್ಸ್ ವಾರ್ ಗ್ರೂಪ್, ರ್ಯಾಡಿಕಲ್ ಸ್ಟೂಡೆಂಟ್ ಯೂನಿಯನ್ಗಳನ್ನು ಕಟ್ಟಿ ಆ ಭಾಗದಲ್ಲಿ ಪೊಲೀಸರಿಗೆ ಸರ್ಕಾರಗಳಿಗೆ ದೊಡ್ಡ ತಲೆ ನೋವಾಗಿದ್ದರು ಈ ಮುರಳಿ.
ಆದರೆ ಈ ನಕ್ಸಲ್ ಗುಂಪುಗಳು, ಸ್ಟೂಡೆಂಟ್ ಯೂನಿಯನ್ಗಳು ಪರಸ್ಪರ ವಿಭೇದಗಳು ಶುರುವಾಗಿ ಒಡೆದು ಚೂರು-ಚೂರಾಗಿ ಹೋದವು, ಆದರೆ ಹೀಗೆ ಒಡೆದ ಗುಂಪುಗಳು ಇತರೆ ಗುಂಪುಗಳ ಮೇಲೆ ದ್ವೇಷ ಸಾಧಿಸಲು ಪ್ರಾರಂಭವಾದವು. ಕೆಲವರು ಹೇಳುವ ಪ್ರಕಾರ, 1985-90ರ ಅವಧಿಯಲ್ಲಿ ಇದೇ ಮುರಳಿ ಮೊದಲ ಬಾರಿಗೆ ವರಾಂಗಲ್ ಭಾಗಕ್ಕೆ ಅತ್ಯಾಧುನಿಕ ಬಂದೂಕುಗಳನ್ನು ಸ್ಮಗಲ್ ಮಾಡಿಸಿ, ವಿರೋಧಿಗಳ ಗುಂಪುಗಳನ್ನು ಅಟ್ಟಾಡಿಸಿ ಕೊಂದಿದ್ದರಂತೆ.
ಇದನ್ನೂ ಓದಿ:ಸಮಂತಾ, ನಾಗಾರ್ಜುನ ಬಗ್ಗೆ ಅಶ್ಲೀಲ ಹೇಳಿಕೆ ನೀಡಿ ವಿವಾದ ಎಬ್ಬಿಸಿದ ಸಚಿವೆ ಕೊಂಡ ಸುರೇಖಾ
ರಾಜಕೀಯಕ್ಕೆ ಬಂದ ಬಳಿಕ ಈತ ತನ್ನ ರೌಡಿಸಂ ಬಲದಿಂದಲೇ ರಾಜಕೀಯ ಮಾಡಿದಾತ, 1987 ರಲ್ಲಿ ಪಂಚಾಯಿತಿ ಚುನಾವಣೆ ಸಂದರ್ಭದಲ್ಲಿ ವರಾಂಗಲ್ನ ವಂಚನಗಿರಿ ಹೆಸರಿನ ಹಳ್ಳಿಗೆ ಹೋಗಿದ್ದ ಕೊಂಡ ಮುರಳಿ, ಅಲ್ಲಿ ಊರವರ ಮುಂದೆ ನಾಯಿಯೊಂದಕ್ಕೆ ಗುಂಡು ಹೊಡೆದು, ನನ್ನ ವಿರುದ್ಧ ಯಾರಾದರೂ ಚುನಾವಣೆಗೆ ಸ್ಪರ್ಧಿಸಿದರೆ ಇದೇ ಗತಿ ನೋಡಬೇಕಾಗುತ್ತದೆ ಎಂದಿದ್ದರಂತೆ. ಅಲ್ಲಿ ಮಾತ್ರವಲ್ಲ ಆತ ಚುನಾವಣೆಗೆ ನಿಂತಿದ್ದ ಎಲ್ಲ ಹಳ್ಳಿಗಳಿಗೂ ಹೋಗಿ ಇದೇ ರೀತಿ ಬೆದರಿಕೆ ಹಾಕಿ, ಅವಿರೋಧವಾಗಿ ಗೆದ್ದಿದ್ದ ಮುರಳಿ.
ಮುರಳಿಗೆ ವಿರೋಧಿಗಳು ಸಹ ದೊಡ್ಡ ಮಟ್ಟದಲ್ಲಿಯೇ ಇದ್ದರು, ಈಗಲೂ ಇದ್ದಾರೆ. ಹಲವು ಬಾರಿ ಮುರಳಿ ಮೇಲೆ ಸುರೇಖಾ ಮೇಲೆ ಸಶ್ತ್ರ ದಾಳಿಗಳಾಗಿವೆ. ಒಂದು ಬಾರಿಯಂತೂ ನಾಲ್ಕು ಮಂದಿ ಬಂದೂಕುಧಾರಿಗಳು ಮುರಳಿ ಮೇಲೆ ದಾಳಿ ಮಾಡಿ ನಡು ರಸ್ತೆಯಲ್ಲಿ ಹೊಡೆದು ಹಾಕಿದ್ದರು, ಆ ದಾಳಿಯಲ್ಲಿ ಮುರಳಿ ಬದುಕಿದ್ದು ಮಾತ್ರವಲ್ಲ ತನ್ನ ಮೇಲೆ ದಾಳಿಗೆ ಬಂದಿದ್ದ ನಾಲ್ವರಲ್ಲಿ ಒಬ್ಬನನ್ನು ಅಲ್ಲೇ ಕೊಂದು ಹಾಕಿದ್ದ. ಈಗಲೂ ಸಹ ಮುರಳಿ ದೇಹದಲ್ಲಿ ಮೂರು ಗುಂಡುಗಳಿವೆ. ಅವುಗಳನ್ನು ಹೊರತೆಗೆಯಲು ಸಾಧ್ಯವಾಗಿಲ್ಲ. ಗುಂಡು ತಗುಲಿ ನಿತ್ರಾಣವಾಗಿ ಬಿದ್ದಿದ್ದ ಪತಿಯನ್ನು ಆಸ್ಪತ್ರೆಗೆ ಸೇರಿಸಿ ಜೀವ ಉಳಿಸಿಕೊಂಡಿದ್ದರು ಸುರೇಖಾ. ಆಸ್ಪತ್ರೆಯಿಂದ ಬಂದ ಮೇಲೆ ವರಾಂಗಲ್ನಲ್ಲಿ ರಕ್ತಪಾತವನ್ನೇ ಮಾಡಿಸಿದ್ದರಂತೆ ಈ ದಂಪತಿ.
ಇದನ್ನೂ ಓದಿ:‘ರಾಜಕೀಯ ಕೆಸರೆರೆಚಾಟದಿಂದ ನನ್ನ ದೂರ ಇಡಿ’; ಸುರೇಖಾ ಹೇಳಿಕೆಗೆ ಸಮಂತಾ ಖಡಕ್ ಉತ್ತರ
ಕೊಂಡ ಮುರಳಿ ಮೇಲೆ ದಾಳಿಗೆ ಪ್ರಮುಖ ಕಾರಣ ಆತನಷ್ಟೆ ಕ್ರೂರ, ಹಿಂಸಾತ್ಮಕ ಇತಿಹಾಸ ಹೊಂದಿರುವಾತ ಎರ್ರಬೆಲ್ಲಿ ದಯಾಕರ್ ರಾವ್. ಇವರಿಬ್ಬರ ನಡುವಿನ ವೈಷಮ್ಯದ ಕತೆಗಳು ವರಾಂಗಲ್ನಲ್ಲಿ ಸಾಕಷ್ಟಿವೆ. ಇಬ್ಬರೂ ಸಹ ಪರಸ್ಪರರ ಬಗ್ಗೆ ನೇರವಾಗಿ ಹಗೆ ಸಾಧಿಸುತ್ತಿದ್ದಾರೆ. ಆತನಿಗೊಂದು ಗತಿ ಕಾಣಿಸಿಯೇ ಸಾಯುತ್ತೇನೆಂದು ಮುರಳಿ ಸಹ ಹೇಳಿಕೊಂಡಿದ್ದಾರೆ. ಎರ್ರಬೆಲ್ಲಿ ದಯಾಕರ್ ಹಾಗೂ ಕೊಂಡ ಮುರಳಿ ಒಂದು ಕಾಲದಲ್ಲಿ ಗೆಳೆಯರಾಗಿದ್ದವರು. ಆದರೆ ಆ ನಂತರ ಪರಸ್ಪರ ವಿರೋಧಿಗಳಾದರು. ಕೊಂಡ ಮುರಳಿ ಹಾಗೂ ಕೊಂಡ ಸುರೇಖಾ ಅವರ ಜೀವನದ ಕತೆ ಆಧರಿಸಿ ರಾಮ್ ಗೋಪಾಲ್ ವರ್ಮಾ ‘ಕೊಂಡ’ ಹೆಸರಿನ ಸಿನಿಮಾ ಮಾಡಿದ್ದಾರೆ. ಅಂದಹಾಗೆ ಈ ಸಿನಿಮಾ ಬಿಡುಗಡೆ ಆದ ಬಳಿಕ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಕೊಂಡ ಮುರಳಿ, ‘ರಾಮ್ ಗೋಪಾಲ್ ವರ್ಮಾ ನನ್ನ ದ್ವೇಷದ ಕತೆಯ ಭಾಗವನ್ನಷ್ಟೆ ತೋರಿಸಿದ್ದಾರೆ’ ಎಂದಿದ್ದರು ಮುರಳಿ.
ಮುರಳಿ ಮೇಲೆ ಹಲವು ಹತ್ಯೆ, ಬೆದರಿಕೆ ಪ್ರಕರಣಗಳು 80ರ ದಶಕದಲ್ಲಿಯೇ ಇದ್ದವು. ಅದೇ ಕಾರಣಕ್ಕೆ ಆತನನ್ನು ಹತ್ತಿರ ಇಟ್ಟುಕೊಂಡಿದ್ದರೂ ಸಹ ವೈಎಸ್ ರಾಜಶೇಖರ ರೆಡ್ಡಿ ಆತನಿಗೆ ಟಿಕೆಟ್ ಕೊಡದೆ ಆತನ ಪತ್ನಿಗೆ ಟಿಕೆಟ್ ಕೊಟ್ಟರು, ಸುರೇಖ ಚುನಾವಣೆಗೆ ಸ್ಪರ್ಧಿಸಿದರಾದರೂ ಆಕೆಯನ್ನು ಗೆಲ್ಲಿಸಿಕೊಂಡು ಬಂದಿದ್ದು ಕೊಂಡ ಮುರಳಿ. ವೈಎಸ್ ಜಗನ್, ವೈಎಸ್ಆರ್ಸಿಪಿ ಪಕ್ಷ ಸ್ಥಾಪನೆ ಮಾಡಿದಾಗ ಅವರಿಗೆ ಬೆಂಬಲ, ಪಾದಯಾತ್ರೆಗೆ ‘ಭದ್ರತೆ’ ಕೊಟ್ಟಿದ್ದು ಇದೇ ಕೊಂಡ ದಂಪತಿ. ಆದರೆ ಕಾಲಾಂತರದಲ್ಲಿ ಕೊಂಡ ದಂಪತಿಯನ್ನು ಜಗನ್ ಮೂಲೆಗುಂಪು ಮಾಡಿದರಂತೆ. ಅಲ್ಲದೆ, ತೆಲಂಗಾಣದಲ್ಲಿ ವೈಎಸ್ಆರ್ಸಿಪಿ ಅಷ್ಟಾಗಿ ಜನಪ್ರಿಯವಾಗಲಿಲ್ಲವಾದ್ದರಿಂದ ಈ ದಂಪತಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ