‘ವಿಲ್ ಸ್ಮಿತ್ ಒಳ್ಳೆಯ ವ್ಯಕ್ತಿ’; ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ ಮೆಚ್ಚುಗೆಯ ಮಾತು
ವಿಲ್ ಸ್ಮಿತ್ ಅವರನ್ನು ಹತ್ತಿರದಿಂದ ಕಂಡಿದ್ದಾರೆ ರೆಹಮಾನ್. ಇಬ್ಬರೂ ಒಮ್ಮೆ ಭೇಟಿ ಆಗಿದ್ದರು. ಆ ಸಂದರ್ಭದಲ್ಲಿ ಅವರು ವಿಲ್ ಸ್ಮಿತ್ ಜತೆ ಫೋಟೋ ತೆಗೆಸಿಕೊಂಡಿದ್ದರು.
ನಟ ವಿಲ್ ಸ್ಮಿತ್ (Will Smith) ಅವರು ಸಖತ್ ಸುದ್ದಿಯಲ್ಲಿದ್ದಾರೆ. ಅವರು ಇತ್ತೀಚೆಗೆ ವಿವಾದವನ್ನು ಮೈಮೇಲೆ ಎಳೆದುಕೊಂಡರು. ಆಸ್ಕರ್ ಅವಾರ್ಡ್ ಕಾರ್ಯಕ್ರಮದಲ್ಲಿ ಹಾಸ್ಯ ನಟ ಕ್ರಿಸ್ ರಾಕ್ (Chris Rock) ಕೆನ್ನೆಗೆ ಹೊಡೆದಿದ್ದರು. ಈ ಮೂಲಕ ಅವರು 10 ವರ್ಷಗಳ ಕಾಲ ಅಕಾಡೆಮಿಯಿಂದ ಬ್ಯಾನ್ ಆಗಿದ್ದಾರೆ. ಈ ಘಟನೆ ವಿಲ್ ಸ್ಮಿತ್ ಅವರ ವೃತ್ತಿ ಜೀವನಕ್ಕೆ ದೊಡ್ಡ ಕಪ್ಪು ಚುಕ್ಕೆ. ವಿಲ್ ಸ್ಮಿತ್ ಅವರು ನಡೆದುಕೊಂಡ ರೀತಿ ಸರಿ ಇಲ್ಲ ಎಂದು ಅನೇಕರು ಹೇಳುತ್ತಿದ್ದಾರೆ. ಅದೇ ರೀತಿ ಈ ಒಂದು ಘಟನೆಯಿಂದ ವಿಲ್ ಸ್ಮಿತ್ ಬಗ್ಗೆ ಈ ರೀತಿಯ ನಿರ್ಧಾರಕ್ಕೆ ಬರೋದು ಸರಿ ಅಲ್ಲ ಎನ್ನುವ ಮಾತುಗಳು ಕೇಳಿ ಬಂದಿವೆ. ಈಗ ವಿಲ್ ಸ್ಮಿತ್ ಬಗ್ಗೆ ಸಂಗೀತ ನಿರ್ದೇಶಕ ಎ.ಆರ್. ರೆಹಮಾನ್ (AR Rahman) ಹೇಳಿದ್ದಾರೆ.
2009ರಲ್ಲಿ ತೆರೆಗೆ ಬಂದ ‘ಸ್ಲಮ್ಡಾಗ್ ಮಿಲಿಯನೇರ್’ ಸಿನಿಮಾಗಾಗಿ ರೆಹಮಾನ್ಗೆ ಎರಡು ಅಕಾಡೆಮಿ ಅವಾರ್ಡ್ಸ್ ಬಂದಿದೆ. ಇದು ಅವರ ಪಾಲಿಗೆ ನಿಜಕ್ಕೂ ವಿಶೇಷವಾಗಿದೆ. ವಿಲ್ ಸ್ಮಿತ್ ಅವರನ್ನು ಹತ್ತಿರದಿಂದ ಕಂಡಿದ್ದಾರೆ ರೆಹಮಾನ್. ಇಬ್ಬರೂ ಒಮ್ಮೆ ಭೇಟಿ ಆಗಿದ್ದರು. ಆ ಸಂದರ್ಭದಲ್ಲಿ ಅವರು ವಿಲ್ ಸ್ಮಿತ್ ಜತೆ ಫೋಟೋ ತೆಗೆಸಿಕೊಂಡಿದ್ದರು. ಈ ವಿಚಾರದ ಬಗ್ಗೆ ರೆಹಮಾನ್ ಅವರು ‘ದಿ ಕಪಿಲ್ ಶರ್ಮಾ ಶೋ’ ಕಾರ್ಯಕ್ರಮದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ‘ವಿಲ್ ಸ್ಮಿತ್ಗೆ ಒಳ್ಳೆಯ ಹೃದಯ ಇದೆ. ಅವರು ಒಳ್ಳೆಯ ವ್ಯಕ್ತಿ. ಕೆಲವೊಮ್ಮೆ ಈ ರೀತಿಯ ಘಟನೆಗಳು ನಡೆಯುತ್ತವೆ’ ಎಂದು ಹೇಳಿದ್ದಾರೆ ರೆಹಮಾನ್.
ಏಪ್ರಿಲ್ 23ರಂದು ವಿಲ್ ಸ್ಮಿತ್ ಅವರು ಮುಂಬೈ ಏರ್ಪೋರ್ಟ್ನಲ್ಲಿ ಕಾಣಿಸಿಕೊಂಡಿದ್ದರು. ನಗುನಗುತ್ತಾ ಕಾರಿನಿಂದ ಇಳಿಯುತ್ತಿರುವ ಫೋಟೋ ವೈರಲ್ ಆಗಿತ್ತು . ಅವರು ಭಾರತಕ್ಕೆ ಬಂದಿದ್ದು ಏಕೆ ಎನ್ನುವ ವಿಚಾರ ಹೊರಬಿದ್ದಿಲ್ಲ.
ವಿಲ್ ಸ್ಮಿತ್ ಭಾರತಕ್ಕೆ ಬಂದಿದ್ದು ಇದೇ ಮೊದಲೇನಲ್ಲ. 2019ರಲ್ಲಿ ವಿಲ್ ಸ್ಮಿತ್ ಅವರು ಹರಿದ್ವಾರಕ್ಕೆ ಭೇಟಿ ನೀಡಿದ್ದರು. ‘ಫೇಸ್ಬುಕ್ ವಾಚ್ ಸೀರಿಸ್’ ಉದ್ದೇಶದಿಂದ ಅವರು ಇಲ್ಲಿಗೇ ಭೇಟಿ ನೀಡಿದ್ದರು. ‘ದೇವರು ಅನುಭವದ ಮೂಲಕ ಕಲಿಸುತ್ತಾನೆ ಎಂದು ನನ್ನ ಅಜ್ಜಿ ಯಾವಾಗಲೂ ಹೇಳುತ್ತಿದ್ದರು. ಭಾರತಕ್ಕೆ ಭೇಟಿ ನೀಡುವುದು ಮತ್ತು ಇಲ್ಲಿನ ಬಣ್ಣಗಳು, ಜನರು ಮತ್ತು ನೈಸರ್ಗಿಕ ಸೌಂದರ್ಯವನ್ನು ಅನುಭವಿಸುವುದರಿಂದ ನನ್ನ, ನನ್ನ ಕಲೆಯ ಹೊಸ ತಿಳುವಳಿಕೆಯು ಜಾಗೃತಗೊಂಡಿದೆ ಎಂದು’ ಅವರು ಹೇಳಿದ್ದರು. ‘ಸ್ಟುಡೆಂಟ್ ಆಫ್ ದಿ ಇಯರ್ 2’ ಚಿತ್ರದಲ್ಲಿ ಅವರು ಅತಿಥಿ ಮಾಡಿದ್ದರು. ಇದರ ಶೂಟಿಂಗ್ಗಾಗಿ ಅವರು ಮುಂಬೈಗೆ ಬಂದಿದ್ದರು. ಭಾರತದ ಹಲವು ಸ್ಟಾರ್ಗಳು ವಿಲ್ ಸ್ಮಿತ್ ಜತೆ ಫೋಟೊ ಕ್ಲಿಕ್ಕಿಸಿಕೊಂಡಿದ್ದಾರೆ. ವಿವಾದದ ಬಳಿಕ ಈ ಫೋಟೋಗಳು ವೈರಲ್ ಆಗಿದ್ದವು.
ಇದನ್ನೂ ಓದಿ: ಪತ್ನಿಗಾಗಿ ನಟನ ಕೆನ್ನೆಗೆ ಬಾರಿಸಿದ್ದ ವಿಲ್ ಸ್ಮಿತ್ಗೆ ಆಸ್ಕರ್ನಿಂದ 10 ವರ್ಷ ಬ್ಯಾನ್; ಅಕಾಡೆಮಿ ನಿರ್ಧಾರ
ಆಸ್ಕರ್ ವೇದಿಕೆಯ ಕಪಾಳಮೋಕ್ಷಕ್ಕೆ ಅಲೋಪೆಸಿಯಾ ಕಾರಣ?! ವಿಲ್ ಸ್ಮಿತ್ ಪತ್ನಿಯ ಕೂದಲು ಹಾಗಿರುವುದೇಕೆ?
Published On - 5:02 pm, Tue, 26 April 22