
ಕನ್ನಡ ಚಿತ್ರರಂಗದ ಸ್ಟಾರ್ ನಟ ಯಶ್ ಅವರು ನಟಿ ಸಾಯಿ ಪಲ್ಲವಿ ಜೊತೆ ‘ರಾಮಾಯಣ’ ಸಿನಿಮಾದಲ್ಲಿ ನಟಿಸಿದ್ದಾರೆ. ‘ರಾಮಾಯಣ’ ಸಿನಿಮಾದಲ್ಲಿ ಸೀತೆಯಾಗಿ ಸಾಯಿ ಪಲ್ಲವಿ ನಟಿಸಿದ್ದು, ಯಶ್ ಅವರದ್ದು ರಾವಣಣ ಪಾತ್ರ. ಸಾಯಿ ಅವರ ವ್ಯಕ್ತಿತ್ವ ಹಾಗೂ ‘ರಾಮಾಯಣ’ ಚಿತ್ರದಲ್ಲಿ ಸೀತಾ ಮಾತೆಯ ಪಾತ್ರದ ಕುರಿತು ಯಶ್ ಮಾತನಾಡಿದ್ದು, ಆ ಬಗ್ಗೆ ಇಲ್ಲಿದೆ ವಿವರ.
ಕನ್ನಡ ಚಿತ್ರರಂಗದ ಹೆಮ್ಮೆಯ ನಟ ‘ರಾಕಿಂಗ್ ಸ್ಟಾರ್’ ಯಶ್ ಅವರು ಇತ್ತೀಚಿನ ಸಂದರ್ಶನವೊಂದರಲ್ಲಿ ಪ್ರತಿಭಾವಂತ ನಟಿ ಸಾಯಿ ಪಲ್ಲವಿ ಅವರನ್ನು ಮುಕ್ತಕಂಠದಿಂದ ಪ್ರಶಂಸಿಸಿದ್ದಾರೆ. ಸಾಯಿ ಪಲ್ಲವಿ ಅವರ ವ್ಯಕ್ತಿತ್ವ ಮತ್ತು ಅವರ ನಡವಳಿಕೆ ಬಗ್ಗೆ ಮಾತನಾಡಿರುವ ಯಶ್, ಅವರನ್ನು ಒಬ್ಬ ಅದ್ಭುತ ಮಹಿಳೆ ಎಂದು ಬಣ್ಣಿಸಿದ್ದಾರೆ.
ಸಾಯಿ ಪಲ್ಲವಿ ಅವರ ಒಡನಾಟ ಹಾಗೂ ಅವರ ವೈಬ್ ಬಗ್ಗೆ ಮಾತನಾಡುತ್ತಾ ಯಶ್, ಅವರಲ್ಲಿ ಸ್ತ್ರೀ ಸಹಜವಾದ ನೈಜ ಒಳಶಕ್ತಿ ಹಾಗೂ ಮನಸ್ಸಿಗೆ ಮುಟ್ಟುವ ಪ್ರಶಾಂತತೆ ಇದೆ ಎಂದಿದ್ದಾರೆ. ಅವರು ತಮ್ಮ ಜೀವನದಲ್ಲಿ ಅತ್ಯಂತ ಸ್ಪಷ್ಟತೆ ಹೊಂದಿರುವ ಗಟ್ಟಿಗಿತ್ತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ನಟಿ ಸಾಯಿ ಪಲ್ಲವಿ ಅವರಲ್ಲಿ ಸೀತಾ ಮಾತೆಯ ತರಹದ ಒಂದು ದೈವಿಕ ಭಾವನೆ ಹಾಗೂ ಸ್ಪಷ್ಟತೆ ಇದೆ ಎಂದು ಯಶ್ ತಿಳಿಸಿದ್ದಾರೆ. ಅವರ ಒಟ್ಟು ವ್ಯಕ್ತಿತ್ವವು ತೆರೆಯ ಮೇಲಿನ ಸೀತಾ ದೇವಿಯ ಪಾತ್ರಕ್ಕೆ ಸಂಪೂರ್ಣವಾಗಿ ಒಗ್ಗಿಕೊಳ್ಳುತ್ತದೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ.
ಸಾಯಿ ಪಲ್ಲವಿ ಅವರು ಅತ್ಯಂತ ಧಾರ್ಮಿಕ ಮನೋಭಾವದವರು ಎಂಬುದು ತಮಗೆ ತಿಳಿದು ಅಚ್ಚರಿಯಾಯಿತೆಂದು ಯಶ್ ಹೇಳಿದ್ದಾರೆ. ಅವರ ಸರಳತೆ ಹಾಗೂ ಆಧ್ಯಾತ್ಮಿಕ ಒಲವು ಇಂದಿನ ದಿನಗಳಲ್ಲಿ ಅಪರೂಪದ್ದು ಎಂದು ತಿಳಿಸಿ, ಅವರ ಆಂತರಿಕ ಸೌಂದರ್ಯವನ್ನು ಕೊಂಡಾಡಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಸಿನಿಮಾದ ಜಟಾಯು ದೃಶ್ಯ ಮಾಡಲು ಬೇಕಾಯ್ತು ಆರೂವರೆ ವರ್ಷ
ತೆರೆಯ ಮೇಲೆ ಸೀತಾ ದೇವಿಯ ಪಾತ್ರವನ್ನು ನಿರ್ವಹಿಸುವುದು ಸುಲಭವಲ್ಲ ಎಂದಿರುವ ಯಶ್, ಸಾಯಿ ಪಲ್ಲವಿ ಅವರ ಮುಖದಲ್ಲಿರುವ ವಿಶೇಷ ತೇಜಸ್ಸು ಹಾಗೂ ಕಾಂತಿ ಈ ಮಹತ್ವದ ಪಾತ್ರಕ್ಕೆ ನ್ಯಾಯ ಒದಗಿಸುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.