Neeru tumbuva habba: ದೀಪಾವಳಿ ಹಬ್ಬದಲ್ಲಿ ನೀರು ತುಂಬುವ ಶಾಸ್ತ್ರ ಯಾವಾಗ ಆರಂಭಿಸಬೇಕು? ಉತ್ತರ ಕರ್ನಾಟಕದ ಎಳ್ಳಿನ ಅಮಾವಾಸ್ಯೆ ಮಹತ್ವವೇನು?
Deepavali 2022: ಬಚ್ಚಲು ಮನೆಗೂ ಒಂದು ದಿನ ಅಂತ ಮೀಸಲಿಟ್ಟಿದ್ದಾರೆ. ಎಂತಹ ಉದಾತ್ತ ಚಿಂತನೆ ಅಲ್ಲವಾ? ಅಲ್ಲಿನ ವಾರ್ಷಿಕ ಕೊಳೆಯನ್ನು ತೊಲಗಿಸಲು, ಅಲ್ಲಿನ ಹಂಡೆ, ಪಾತ್ರೆ ಇತ್ಯಾದಿಗಳ ಕಿಲುಬು ಕಳೆದು ಹೊಳೆಯಲು ಈ ದಿನ ಸಕಾರಣವಾಗುತ್ತದೆ.
ಮೂರು ದಿನಗಳ ದೀಪಾವಳಿ (Deepavali 2022) ಸಂಭ್ರಮದ ಕಾಲದಲ್ಲಿ ಮೊದಲ ದಿನವನ್ನು ನೀರು ತುಂಬುವ ಶಾಸ್ತ್ರ (Neeru tumbuva habba) ಎಂದು ಆಚರಿಸುತ್ತೇವೆ. ಇದಕ್ಕೆ ಉತ್ತರ ಭಾರತದವರು ಧನ್ ತೇರಾಸ್ (ಧನ್ ತ್ರಯೋದಶಿ –Ashwayuja Krishna trayodashi) ಎಂದು ಕರೆಯುತ್ತಾರೆ. ಅವರಿಗೆ ಅಂದು ಹೊಸ ಆರ್ಥಿಕ ವರ್ಷದ ಆರಂಭ ದಿನ.
ಪುರಾಣದ ಪ್ರಕಾರ ಸಮುದ್ರ ಮಥನ ಆದಾಗ ಲಕ್ಷ್ಮಿ ದೇವಿ ಉದ್ಭವಿಸಿದ ದಿನವೂ ಇಂದೇ ಆಗಿದೆ. ಅವಳೊಂದಿಗೆ ಅವಳ ಅಣ್ಣ-ತಮ್ಮಂದಿರು ಯಕ್ಷ, ಚಂದ್ರ, ಕಾಮಧೇನು, ಐರಾವತ, ಕಲ್ಪವೃಕ್ಷವೆಲ್ಲ ಬಂದ ದಿನವೂ ಹೌದು. ಮನುಷ್ಯನಿಗೆ ಲೌಕಿಕ ಮತ್ತು ಲೋಕೋತ್ತರ ಸುಖಸಮೃದ್ಧಿಯನ್ನು ಕೊಡುವ ಶಕ್ತಿಗಳು ಉದ್ಭವಿಸಿದ ದಿನ. ಹಾಗಾಗಿ ಧನತ್ರಯೋದಶಿ, ಧನ್ ತೇರಾಸ್ ಎಂದು ಉತ್ತರ ಭಾರತದಲ್ಲಿ ಕರೆಯುತ್ತಾರೆ.
ಆಚರಣೆ ಹೇಗೆ: ಧನ ತ್ರಯೋದಶಿ ದಿನ ಲಕ್ಷ್ಮಿ ಮತ್ತು ಅವಳೊಂದಿಗೆ ಉದ್ಭವಿಸಿದ ಎಲ್ಲ ಅಣ್ಣ-ತಮ್ಮಂದಿರ ಸಂಕೇತಗಳನ್ನು ಬರೆದು ಕಲಶವನ್ನಿಟ್ಟು ಪೂಜೆ ಮಾಡುತ್ತಾರೆ. ಕೆಲವರು ಬೃಂದಾವನದಂತಹ ಪ್ರಸಿದ್ಧ ಕ್ಷೇತ್ರಗಳಲ್ಲಿ ಹಿಂದಿನ ದ್ವಾದಶಿಯಿಂದ ಏಳು ದಿವಸಗಳ ದೀಪಾವಳಿ ಆಚರಣೆ ಮಾಡುತ್ತಾರೆ.
ಯಾವುದೇ ಹಬ್ಬ ಆಚರಿಸುವುದಕ್ಕೆ ಮೊದಲು ಮನೆಯಲ್ಲಿರುವ ಬಲೆ, ಕಸಗಳನ್ನು ಚೆನ್ನಾಗಿ ಹೊಡೆದು ಅಗತ್ಯವಿದ್ದರೆ ಸುಣ್ಣ ಬಣ್ಣ ಬಳಿದು ಇಡೀ ಮನೆಯನ್ನು, ಪಾತ್ರೆಗಳನ್ನು, ದೇವರ ಸಾಮಾನುಗಳನ್ನು ತೊಳೆದು ಹಬ್ಬಕ್ಕೆ ಅಣಿಯಾಗುವುದು ನಮ್ಮಲ್ಲಿ ವಾಡಿಕೆ.
ಇದನ್ನೇ… ನೀರು ತುಂಬುವ ಹಬ್ಬ ಎಂದು ಕರೆಯುವುದು:
ಅದೇ ರೀತಿ ತ್ರಯೋದಶಿ ದಿನ ಸಂಜೆ ಸ್ನಾನದ ಮನೆಯಲ್ಲಿ ಹಂಡೆ, ಪಾತ್ರೆಗಳನ್ನು ತೊಳೆದು ಚೆನ್ನಾಗಿ ಶುದ್ಧ ಮಾಡಿ, ಹಂಡೆಗೆ ಸುಣ್ಣ ಹಾಗೂ ಕೆಮ್ಮಣ್ಣು ಬಳಿದು, ರಂಗೋಲಿ ಹಾಕಿ, ಹೂ ಹಾಕಿ, ಹೊಸ ನೀರು ಹಂಡೆಗೆ ಹಾಕಿ ದೀಪ ಬೆಳಗಿ ಪೂಜೆ ಮಾಡುತ್ತಾರೆ. ಮರುದಿನ ಬೆಳಗ್ಗೆ ಈ ನೀರಿನಲ್ಲಿ ಸ್ನಾನ ಮಾಡಿ ಬಂದು ಹಬ್ಬಕ್ಕೆ ಅಣಿಯಾಗುವುದು. ಇದನ್ನೇ ನೀರು ತುಂಬುವ ಹಬ್ಬ ಎಂದು ಕರೆಯುವುದು.
ನೀರು ತುಂಬುವ ಶಾಸ್ತ್ರ ಹಿಂದಿನ ಕಾಲದಲ್ಲಿ ವಾಡಿಕೆಯಲ್ಲಿತ್ತು. ಹಿಂದಿನ ಕಾಲದಲ್ಲಿ ಈಗಿನಂತೆ ಮನೆಯಲ್ಲಿ ಕೊಳಾಯಿ, ನೀರಿನ ಇತರೆ ಸಂಪರ್ಕ ಇರಲಿಲ್ಲ. ಬಾವಿಯಿಂದಲೋ, ಕೆರೆಯಿಂದಲೋ ನೀರನ್ನು ಬಿಂದಿಗೆಯಲ್ಲಿ ಹೊತ್ತು ತಂದು ಹಂಡೆಯಲ್ಲಿ ತುಂಬಿಸುತ್ತಿದ್ದರು. ಈಗ ಹಳ್ಳಿಮನೆಗಳಲ್ಲಿಯೂ ಆ ಅವಶ್ಯಕತೆಯಿರುವುದಿಲ್ಲ. ಆದರೂ ಧಾರ್ಮಿಕ ಪದ್ಧತಿಯನ್ನು ಬಿಡಬಾರದು ಎಂದು ಜನರು ಆಚರಿಸುತ್ತಾರೆ.
ದೀ ಪಯತಿ ಸ್ವಂ ಪರಚ ಇತಿ ದೀಪ: ತಾನು ಬೆಳಗಿ ಬೇರೆಯವರನ್ನು ಬೆಳಗಿಸುವ ಶಕ್ತಿ ದೀಪಕ್ಕೆ ಇದೆ. ತ್ರಯೋದಶಿ ಹಬ್ಬದ ಮೊದಲ ದಿನ. ನೀರು ತುಂಬುವ ಹಬ್ಬವೆಂದು ಆಚರಿಸಲಾಗುತ್ತದೆ.
ಅಭ್ಯಂಜನ ಶಾಸ್ತ್ರ ಹೇಳುವುದೇನು?
ನರಕ ಚತುರ್ದಶಿಯು ದೀಪಾವಳಿಯ ಪ್ರಮುಖ ದಿನ. ಅಂದು ವಿಶೇಷವಾಗಿ ಅಭ್ಯಂಜನ ಮಾಡುವುದನ್ನು ಶಾಸ್ತ್ರವು ಹೇಳಿರುತ್ತದೆ. ತೈಲದಲ್ಲಿ ಲಕ್ಷ್ಮೀದೇವಿಯೂ, ನೀರಿನಲ್ಲಿ ಗಂಗೆಯೂ ದೀಪಾವಳಿಯ ಚತುರ್ದಶಿಯಂದು ವಿಶೇಷವಾಗಿ ಸನ್ನಿಹಿತರಾಗಿರುತ್ತಾರೆ ಎಂದು ಶಾಸ್ತ್ರ ತಿಳಿಸುತ್ತದೆ.
ತೈಲ ಅಭ್ಯಂಗ ಸ್ನಾನ: ಎಣ್ಣೆ ನೀರಿನ ಸ್ನಾನ ಎಂದರೆ ಹೇಳಲೇಬೇಕಿಲ್ಲ, ಸ್ವಲ್ಪ ಹೆಚ್ಚಿನ ನೀರು ಬೇಕಾಗುತ್ತದೆ. ಅದು ಎಳ್ಳೆಣ್ಣೆ ಸ್ನಾನ, ಉತ್ತರ ಕರ್ನಾಟಕದಲ್ಲಿ ಎಳ್ಳಿನ ಅಮಾವಾಸ್ಯೆ ಎಂದೇ ಖ್ಯಾತಿ. ಇನ್ನು ಕೊಡಗಿನ ಹುತ್ತರಿ ಹಬ್ಬವನ್ನೂ ಇದೆ ಸಂದರ್ಭದಲ್ಲಿ ಆಚರಿಸಲಾಗುತ್ತದೆ.
ಯಮದೀಪ ದಾನ:
ಆಶ್ವಯುಜ ಬಹುಳ ತ್ರಯೋದಶಿಯಂದು ಯಮದೀಪದಾನ ಮಾಡಬೇಕು. ಈ ದಿನ ಸಾಯಂಕಾಲ ದೀಪವನ್ನು ದಕ್ಷಿಣ ದಿಕ್ಕಿಗೆ ಮುಖಮಾಡಿ ಮಣ್ಣಿನ ಹಣತೆಯಲ್ಲಿ ಹಚ್ಚಬೇಕು. ಈ ದೀಪ ಮಾರನೇ ದಿನ ಅರುಣೋದಯ ಕಾಲದತನಕ ಉರಿಯುವಂತೆ ಹಚ್ಚಬೇಕು. ಮನೆಯ ಎತ್ತರದ ಭಾಗದಲ್ಲಿ ಇದನ್ನು ಹಚ್ಚುವುದರಿಂದ ಇದನ್ನು ಆಕಾಶ ದೀಪ ಎನ್ನುತ್ತಾರೆ. ಅಕಾಶದೀಪ ಮತ್ತು ಯಮ ದೀಪದಾನ ಮಾಡುವ ಉದ್ದೇಶ : 1. ಗಗನಮಾರ್ಗದಲ್ಲಿ ಸಂಚರಿಸುವ ಪಿತೃದೇವತೆಗಳಿಗೆ ದಾರಿ ತೀರಿಸುವುದು. 2. ಪಿತೃದೇವತೆಗಳ ತೃಪ್ತಿ 3. ದೀಪ ಬೆಳಗುವುದರಿಂದ ನಮ್ಮ ಸಂಸ್ಕೃತಿಯ ಪ್ರೋತ್ಸಾಹ. 4. ಯಮಧರ್ಮರಾಜನ ಪ್ರೀತಿಗಾಗಿ ಮಾಡುವ ದೀಪದಾನ. ಯಮರಾಜನ ಕಾರ್ಯವು ಪ್ರಾಣಹರಣ ಮಾಡುವುದಾಗಿದೆ. ಕಾಲಮೃತ್ಯುವು ಯಾರಿಗೂ ತಪ್ಪಿಲ್ಲ ಮತ್ತು ಅದನ್ನು ತಪ್ಪಿಸಲೂ ಆಗುವುದಿಲ್ಲ. ಆದರೆ ಅಕಾಲ ಮೃತ್ಯುವು ಯಾರಿಗೂ ಬರಬಾರದೆಂದು ಯಮಧರ್ಮನಿಗೆ ಕಣಕದಿಂದ ತಯಾರಿಸಿದ ಎಣ್ಣೆಯ ದೀಪವನ್ನು (ಹದಿಮೂರು ದೀಪಗಳನ್ನು) ತಯಾರಿಸಿ ಸಂಜೆಯ ಹೊತ್ತಿನಲ್ಲಿ ಮನೆಯ ಹೊರಗೆ ದಕ್ಷಿಣಕ್ಕೆ ಮುಖ ಮಾಡಿಡಬೇಕು.
ಇತರ ಯಾವುದೇ ದಿನದಂದು ದೀಪವನ್ನು ದಕ್ಷಿಣ ದಿಕ್ಕಿಗೆ ಮುಖ ಮಾಡಿ ಇಡುವುದಿಲ್ಲ. ಈ ದಿನ ಮಾತ್ರ ದೀಪವನ್ನು ದಕ್ಷಿಣಕ್ಕೆ ಮುಖ ಮಾಡಿ ಇಡಬೇಕು. ಆನಂತರ ಈ ಮಂತ್ರದಿಂದ ಪ್ರಾರ್ಥನೆಯನ್ನು ಮಾಡಬೇಕು.
ಮೃತ್ಯುನಾ ಪಾಶದಂಡಾಭ್ಯಾಂ ಕಾಲೇನ ಶ್ಯಾಮಯಾಸಹ | ತ್ರಯೋದಶ್ಯಾಂ ದೀಪದಾನಾತ್ ಸೂರ್ಯಜಃ ಪ್ರೀಯತಾಂ ಮಮ | ಹಸ್ತದಲ್ಲಿ ಪಾಶ ದಂಡಗಳನ್ನು ಹಿಡಿದ ಸೂರ್ಯಪುತ್ರ ಯಮ ಧರ್ಮರಾಜನು ಶ್ಯಾಮಲಾದೇವಿಯೊಂದಿಗೆ, ತ್ರಯೋದಶಿಯ ದೀಪದಾನದಿಂದ ಸಂತುಷ್ಟನಾಗಿ ಅನುಗ್ರಹಿಸಲಿ ಎಂದು ಪ್ರಾರ್ಥಿಸಬೇಕು.
ಕೃಷಿ ಮಾಡುವ ರೈತಾಪಿ ವರ್ಗಕ್ಕೆ ಗೊತ್ತು ಪೈರಿನ ಒಂದು ರೀತಿಯ ಜುಂಗು ಕೃಷಿ ಕಾರ್ಮಿಕರ ಮೈಗಂಟಿಕೊಂಡು ಒಂದು ರೀತಿಯಲ್ಲಿ ಚರ್ಮಕ್ಕೆ ನಾನಾ ರೀತಿಯ ತುರಿಕೆ, ನವೆ, ಕಜ್ಜಿ ಆಗಿರುತ್ತದೆ. ಅವು ದಿನಾ ನಿವಾರಿಸಿಕೊಳ್ಳಲು ಸಾಧ್ಯವಿಲ್ಲದ ಪೈರಿನ ಸೂಕ್ಷ್ಮ ಜುಂಗುಗಳು. ಕೊಯ್ಲಾದ ನಂತರ ಅದನ್ನು ನಿವಾರಿಸಿಕೊಳ್ಳುವ ಒಂದು ಚಿಕಿತ್ಸಾ ಪದ್ಧತಿಯೇ ಈ ನೀರು ತುಂಬುವ ಹಬ್ಬ. (ಅದು ನದಿ, ಕೆರೆ, ತಟಾಕಗಳು) ಆ ನೀರಿನಲ್ಲಿ ಸೊರಕೆ, ಯಗಚಿ, ಅಳಲೆ, ಕಂದಿಲೆ, ಸೊರೆ, ಲೋಳೆರಸವನ್ನು ಬೆರೆಸಿ ಚೆನ್ನಾಗಿ ಕಾಯಿಸಿ ಬೆಳಗ್ಗಿನ ಜಾವ ಮೈತುಂಬ ತೈಲ ಹಚ್ಚಿ (ಎಣ್ಣೆಯಲ್ಲ) ಸ್ನಾನ ಮಾಡಿದಾಗ ಆ ಬತ್ತದ ಜುಂಗುಗಳು, ಮೈಯಲಿ ನೆಟ್ಟವುಗಳು ಜಾರಿ ಹೋಗುತ್ತವೆ.
ಗಂಗೆ ಪೂಜೆ ಎಂದೇಕೆ?: ಬಲಿ ಚಕ್ರವರ್ತಿಯ ಸಂಹಾರಕ್ಕೆ, ವಾಮನನಾಗಿ ಭಗವಂತ ಅದಿತಿ-ಕಶ್ಯಪರಲ್ಲಿ ಅವತರಿಸಿದ. ಆತನ ಪದಕಮಲಗಳಲ್ಲಿ ಜನಿಸದವಳು ಗಂಗೆ. ಗಂಗೇ ಚ ಯಮುನೇ ಚೈವ ಗೋದಾವರೀ ಸರಸ್ವತಿ | ನರ್ಮದೇ ಸಿಂದು ಕಾವೇರಿ ಜಲೇಸ್ಮಿನ್ ಸನ್ನಿಧಿಂ ಕುರು |
ಅಂದೇ ಏಕೆ?: ಬಚ್ಚಲು ಮನೆಗೂ ಒಂದು ದಿನ ಅಂತ ಮೀಸಲಿಟ್ಟಿದ್ದಾರೆ. ಎಂತಹ ಉದಾತ್ತ ಚಿಂತನೆ ಅಲ್ಲವಾ? ಅಲ್ಲಿನ ವಾರ್ಷಿಕ ಕೊಳೆಯನ್ನು ತೊಲಗಿಸಲು, ಅಲ್ಲಿನ ಹಂಡೆ, ಪಾತ್ರೆ ಇತ್ಯಾದಿಗಳ ಕಿಲುಬು ಕಳೆದು ಹೊಳೆಯಲು ಈ ದಿನ ಸಕಾರಣವಾಗುತ್ತದೆ.
ಸಂಪ್ರದಾಯದಂತೆ ದೀಪಾವಳಿ ಹಬ್ಬ 5 ದಿನಗಳ ಕಾಲ ಆಚರಸಿಲಾಗುತ್ತದೆ: ಮೊದಲ ದಿನ -ನೀರು ತುಂಬುವ ಹಬ್ಬ. ನರಕ ಚತುರ್ದಶಿ: ದೀಪಗಳನ್ನು ಬೆಳಗಿಸಿ, ಆರತಿ ಬೆಳಗುವುದು. ಅಮಾವಾಸ್ಯೆ: ಲಕ್ಷ್ಮಿ ಪೂಜೆ ಮಾಡುತ್ತಾ, ಒಳಿತನ್ನು ಅವಾಹಿಸುವುದು. ಬಲಿಪಾಡ್ಯಮಿ: ಬಲೀಂದ್ರನ ಪೂಜೆ, ಗೋಪೂಜೆ. ಯಮ ದ್ವಿತೀಯ: ಸಹೋದರಿಯರ ಭೇಟಿ, ಸಿಹಿ ವಿನಿಮಯ (ಮಾಹಿತಿ: ವಿವಿಧ ಮೂಲಗಳಿಂದ)
ಈ ಸಂದರ್ಭದಲ್ಲಿ ನಮ್ಮ ವರಕವಿ ಬೇಂದ್ರೆ ಅಜ್ಜನ ಗಂಗಾವತರಣ ಸಾಲುಗಳನ್ನು ನೆನಪಿಸಿಕೊಳ್ಳುವುದು ಉಚಿತವಾದೀತು:
ಇಳಿದು ಬಾ ತಾಯಿ ಇಳಿದು ಬಾ ||ಪಲ್ಲವಿ||
ಹರನ ಜಡೆಯಿಂದ ಹರಿಯ ಅಡಿಯಿಂದ ಋಶಿಯ ತೊಡೆಯಿಂದ ನುಸುಳಿ ಬಾ; ದೇವದೇವರನು ತಣಿಸಿ ಬಾ ದಿಗ್ದಿಗಂತದಲಿ ಹಣಿಸಿ ಬಾ ಚರಾಚರಗಳಿಗೆ ಉಣಿಸಿ ಬಾ ಇಳಿದು ಬಾ ತಾಯಿ ಇಳಿದು ಬಾ.
Published On - 12:58 pm, Fri, 21 October 22