ಮಲಬದ್ಧತೆಯನ್ನು ನಿರ್ಲಕ್ಷಿಸಬೇಡಿ: ಮೂಲವ್ಯಾಧಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು

ಇತ್ತೀಚಿನ ದಿನಗಳಲ್ಲಿ ಅನೇಕರನ್ನು ಕಾಡುತ್ತಿರುವ ಆರೋಗ್ಯ ಸಮಸ್ಯೆಗಳಲ್ಲಿ ಮಲಬದ್ಧತೆ ಕೂಡ ಒಂದು. ಆದರೆ ಇದನ್ನು ಯಾವುದೇ ಕಾರಣಕ್ಕೂ ಸಾಮಾನ್ಯ ಎಂದು ಭಾವಿಸಿ ನಿರ್ಲಕ್ಷಿಸಬಾರದು, ಏಕೆಂದರೆ ನಿರಂತರ ಮಲಬದ್ಧತೆ ಮೂಲವ್ಯಾಧಿ ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾದರೆ ಮಲಬದ್ಧತೆಯಿಂದ ಉಂಟಾಗುವ ಸಮಸ್ಯೆಗಳು ಯಾವವು, ಈ ರೀತಿ ಸಮಸ್ಯೆ ಬರದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ವಿವರವಾಗಿ ತಿಳಿದುಕೊಳ್ಳಲು ಈ ಸ್ಟೋರಿ ಓದಿ.

ಮಲಬದ್ಧತೆಯನ್ನು ನಿರ್ಲಕ್ಷಿಸಬೇಡಿ: ಮೂಲವ್ಯಾಧಿ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು
Constipation And Gut Health: Hidden Complications You Need To Know
Image Credit source: Getty Images

Updated on: Jun 28, 2026 | 5:55 PM

ಮುಖ್ಯಾಂಶಗಳು

  • ಮಲಬದ್ಧತೆ ತಡೆಗಟ್ಟುವ ಸರಳ ಮತ್ತು ಪರಿಣಾಮಕಾರಿ ಮಾರ್ಗಗಳು
  • ದೀರ್ಘಕಾಲದ ಮಲಬದ್ಧತೆ ಯಾವ ರೋಗಗಳಿಗೆ ಕಾರಣವಾಗಬಹುದು?
  • ಮಲಬದ್ಧತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು

ಮಲಬದ್ಧತೆ (Constipation) ಸಾಮಾನ್ಯ ಜೀರ್ಣಕ್ರಿಯೆಯ ಸಮಸ್ಯೆಯಾಗಿದ್ದರೂ, ದೀರ್ಘಕಾಲ ಮುಂದುವರಿದರೆ ಹಲವು ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಮಲವಿಸರ್ಜನೆಗೆ ಕಷ್ಟವಾಗುವುದು, ಗಟ್ಟಿಯಾದ ಮಲ, ಹಲವು ದಿನಗಳವರೆಗೆ ಹೊಟ್ಟೆ ಸಂಪೂರ್ಣ ಖಾಲಿಯಾಗದಿರುವುದು ಇದರ ಪ್ರಮುಖ ಲಕ್ಷಣಗಳು. ಕಡಿಮೆ ಫೈಬರ್ ಇರುವ ಆಹಾರ, ನೀರು ಕಡಿಮೆ ಕುಡಿಯುವುದು, ವ್ಯಾಯಾಮದ ಕೊರತೆ ಮತ್ತು ಅನಾರೋಗ್ಯಕರ ಜೀವನಶೈಲಿ ಇದಕ್ಕೆ ಕಾರಣವಾಗಬಹುದು. ಹಾಗಾದರೆ ಮಲಬದ್ಧತೆಯಿಂದ ಉಂಟಾಗುವ ಸಮಸ್ಯೆಗಳು ಯಾವವು, ಈ ರೀತಿ ಸಮಸ್ಯೆ ಬರದಂತೆ ತಡೆಯಲು ಏನು ಮಾಡಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಮಲಬದ್ಧತೆಯಿಂದ ಉಂಟಾಗುವ ಸಮಸ್ಯೆಗಳು

ದೀರ್ಘಕಾಲ ಮಲಬದ್ಧತೆ ಇದ್ದರೆ ಮಲವಿಸರ್ಜನೆ ವೇಳೆ ಹೆಚ್ಚು ಒತ್ತಡ ಹಾಕಬೇಕಾಗುತ್ತದೆ. ಇದರಿಂದ ಮೂಲವ್ಯಾಧಿ (ಪೈಲ್ಸ್), ಗುದದ್ವಾರದ ಚರ್ಮದಲ್ಲಿ ಬಿರುಕು (ಅನಲ್ ಫಿಶರ್) ಹಾಗೂ ಕೆಲವರಲ್ಲಿ ರೆಕ್ಟಲ್ ಪ್ರೋಲಾಪ್ಸ್ ಅಪಾಯವೂ ಹೆಚ್ಚಬಹುದು. ಜೊತೆಗೆ ಹೊಟ್ಟೆ ಉಬ್ಬರ, ಗ್ಯಾಸ್, ಹೊಟ್ಟೆನೋವು, ಅಜೀರ್ಣ ಮತ್ತು ಗಟ್ಟಿಯಾದ ಮಲ ಕರುಳಿನಲ್ಲಿ ಸಿಲುಕುವ (ಫೀಕಲ್ ಇಂಪ್ಯಾಕ್ಷನ್) ಸಮಸ್ಯೆಯೂ ಕಾಣಿಸಬಹುದು.

ಇದನ್ನೂ ಓದಿ: ಫುಡ್ ಪಾಯ್ಸನಿಂಗ್‌ ಆಗದಂತೆ ತಡೆಯಲು ಉಳಿದ ಆಹಾರವನ್ನು ಈ ರೀತಿ ಸಂಗ್ರಹಿಸಿಡಿ!

ಈ ಲಕ್ಷಣಗಳನ್ನು ನಿರ್ಲಕ್ಷಿಸಬೇಡಿ

ಮಲಬದ್ಧತೆ ಹಲವು ದಿನಗಳವರೆಗೆ ಮುಂದುವರಿದರೆ, ಮಲದಲ್ಲಿ ರಕ್ತ ಕಾಣಿಸಿದರೆ, ತೀವ್ರ ಹೊಟ್ಟೆನೋವು, ಹೊಟ್ಟೆ ಉಬ್ಬರ, ಕಾರಣವಿಲ್ಲದೆ ತೂಕ ಇಳಿಕೆ, ವಾಂತಿ, ಮಲವಿಸರ್ಜನೆ ಸರಿಯಾಗಿ ಆಗದಿರುವುದು, ಜ್ವರ ಅಥವಾ ತೀವ್ರ ದೌರ್ಬಲ್ಯ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಇವು ಗಂಭೀರ ಆರೋಗ್ಯ ಸಮಸ್ಯೆಗಳ ಸೂಚನೆಯಾಗಿರಬಹುದು.

ತಡೆಗಟ್ಟಲು ಏನು ಮಾಡಬೇಕು?

ಪ್ರತಿದಿನ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯಿರಿ. ಹಣ್ಣು, ಹಸಿರು ತರಕಾರಿಗಳು, ಸಂಪೂರ್ಣ ಧಾನ್ಯಗಳು ಹಾಗೂ ಬೇಳೆಕಾಳುಗಳಂತಹ ಫೈಬರ್‌ಯುಕ್ತ ಆಹಾರ ಸೇವಿಸಿ. ನಿಯಮಿತವಾಗಿ ವ್ಯಾಯಾಮ ಮಾಡಿ ಮತ್ತು ಮಲವಿಸರ್ಜನೆಗೆ ಹೋಗಬೇಕು ಎಂದು ಅನಿಸಿದಾಗ ತಡೆಹಿಡಿಯಬೇಡಿ. ಜಂಕ್ ಫುಡ್ ಹಾಗೂ ಅತಿ ಸಂಸ್ಕರಿತ ಆಹಾರವನ್ನು ಕಡಿಮೆ ಮಾಡಿ. ಜೀವನಶೈಲಿಯಲ್ಲಿ ಬದಲಾವಣೆ ಮಾಡಿದರೂ ಮಲಬದ್ಧತೆ ಕಡಿಮೆಯಾಗದಿದ್ದರೆ ವೈದ್ಯರ ಸಲಹೆ ಪಡೆದು ಸೂಕ್ತ ಚಿಕಿತ್ಸೆ ಪಡೆಯುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us