ಸಂಭ್ರಮದ ಜೊತೆ ಮುನ್ನೆಚ್ಚರಿಕೆ; ದೀಪಾವಳಿಯಲ್ಲಿ ಸುರಕ್ಷತೆ ಬಗ್ಗೆಯೂ ಇರಲಿ ಕಾಳಜಿ!

|

Updated on: Nov 01, 2024 | 9:25 AM

ದೀಪಾವಳಿ ಹಬ್ಬದ ಸಂಭ್ರಮ ಈಗಾಗಲೇ ಶುರುವಾಗಿದೆ. ಸಂಜೆಯಾಗುತ್ತಿದ್ದಂತೆ ಹಣತೆಯ ದೀಪಗಳು, ಪಟಾಕಿಯ ಸದ್ದಿನ ಸಡಗರ. ಆದರೆ, ಈ ದೀಪಾವಳಿಯಲ್ಲಿ ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸುವುದು ಅತ್ಯಗತ್ಯ. ದೀಪಾವಳಿಯಲ್ಲಿ ಸಂಭ್ರಮದ ಜೊತೆಗೆ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಮಾಹಿತಿ ಇಲ್ಲಿದೆ.

ಸಂಭ್ರಮದ ಜೊತೆ ಮುನ್ನೆಚ್ಚರಿಕೆ; ದೀಪಾವಳಿಯಲ್ಲಿ ಸುರಕ್ಷತೆ ಬಗ್ಗೆಯೂ ಇರಲಿ ಕಾಳಜಿ!
ಪಟಾಕಿ
Follow us on

ಬೆಂಗಳೂರು: ಎಲ್ಲೆಲ್ಲೂ ದೀಪಾವಳಿ ಸಂಭ್ರಮ ಮನೆ ಮಾಡಿದೆ. ಎಲ್ಲರ ಬದುಕಲ್ಲೂ ಬೆಳಕನ್ನು ತರುವ ದೀಪಗಳ ಹಬ್ಬ, ನಿರ್ಲಕ್ಷ್ಯ ಹಾಗೂ ಬೇರೆಯವರ ತಪ್ಪಿನಿಂದ ಬಹಳಷ್ಟು ಜನರ ಬದುಕಲ್ಲಿ ಕರಾಳ ಹಬ್ಬವಾಗಿದ್ದು ಇದೆ. ಪಟಾಕಿ ಇಲ್ಲದೇ ದೀಪಾವಳಿ ಸಂಪನ್ನ ಆಗುವುದಿಲ್ಲ. ಹಾಗಂತ ಅಪಾಯವನ್ನು ಆಹ್ವಾನಿಸಲು ಆಗುವುದಿಲ್ಲ. ದೀಪಾವಳಿಯ ಸಮಯದಲ್ಲಿ ಸಂಭ್ರಮದ ಜೊತೆಗೆ ನಮ್ಮ ಸುರಕ್ಷತೆ ಬಗ್ಗೆಯೂ ಎಚ್ಚರ ವಹಿಸುವುದು ಅತ್ಯಗತ್ಯ. ಅದಕ್ಕೆ ಕೆಲವು ಸಲಹೆಗಳು ಇಲ್ಲಿವೆ.

ಸುರಕ್ಷಿತ ದೀಪಾವಳಿ ಆಚರಣೆಗೆ ಬೆಂಗಳೂರಿನ ವಾಸವಿ ಆಸ್ಪತ್ರೆಯ ತುರ್ತು ನಿಗಾ ಘಟಕದ ಮುಖ್ಯಸ್ಥರಾದ ಡಾ. ಶೃತಿ ಭಾಸ್ಕರನ್ ಒಂದಿಷ್ಟು ಸಲಹೆಗಳನ್ನು ನೀಡಿದ್ದಾರೆ. ಅವುಗಳನ್ನು ಪಾಲಿಸಿದರೆ ನಿಮ್ಮ ದೀಪಾವಳಿ ಸುರಕ್ಷಿತವಾಗಿರುವುದರಲ್ಲಿ ಯಾವುದೇ ಅನುಮಾನವಿಲ್ಲ. ಸುರಕ್ಷಿತ ದೀಪಾವಳಿಗಾಗಿ ಜನರು ಯಾವ್ಯಾವ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂಬುದರ ಪಟ್ಟಿ ಇಲ್ಲಿದೆ. ಹಸಿರು ಪಟಾಕಿಗಳಿಗೆ ಮಾತ್ರ ಅನುಮತಿ ನೀಡಿರುವುದರಿಂದ ಜನ ಹಸಿರು ಪಟಾಕಿಗಳನ್ನೇ ಖರೀದಿಸಬೇಕು. ಬಹಳಷ್ಟು ಜನ ಮನೆಯ ಕಾಂಪೌಂಡ್‌ ಒಳಗಡೆ ಅಥವಾ ಹೆಚ್ಚು ಜನರು ಇರುವ ಸ್ಥಳಗಳಲ್ಲಿ ಪಟಾಕಿಗಳನ್ನು ಸಿಡಿಸುತ್ತಾರೆ. ಇದು ತುಂಬಾ ಅಪಾಯಕಾರಿಯಾಗಿದ್ದು, ಪಟಾಕಿಗಳನ್ನು ತೆರೆದ ಸ್ಥಳಗಳಲ್ಲಿ ಮಾತ್ರ ಸಿಡಿಸಬೇಕು. ಮಕ್ಕಳು ಸ್ವತಂತ್ರವಾಗಿ ಪಟಾಕಿಗಳನ್ನು ಸಿಡಿಸಲು ಬಿಡಬೇಡಿ, ಈ ವೇಳೆ ಪಾಲಕರು ಅಥವಾ ಹಿರಿಯರು ಮಕ್ಕಳ ಜೊತೆ ಇರಿ. ದೀಪಾವಳಿ ದೀಪಗಳ ಹಬ್ಬ ಆಗಿರುವುದರಿಂದ ದಹಿಸುವ ವಸ್ತುಗಳನ್ನು ದೀಪಗಳಿಂದ ದೂರವಿಡಿ.

ಇದನ್ನೂ ಓದಿ: ಬೆಂಗಳೂರಿನ ವಿವಿ ಪುರಂ ನಿವಾಸಿಗಳಿಗೆ ಶುರುವಾಯ್ತು ಪಾರಿವಾಳಗಳ ಕಾಟ; ಅಸ್ತಮಾ, ಉಸಿರಾಟದ ಸಮಸ್ಯೆಯಿಂದ ಸ್ಥಳೀಯರು ಹೈರಾಣು

ಶ್ವಾಸಕೋಶ ಕಾಯಿಲೆಯಿಂದ ಬಳಲುವವರ ಆರೋಗ್ಯವನ್ನು ಇದು ಮತ್ತಷ್ಟು ಹದಗೆಡಿಸಬಹುದು. ಜೊತೆಗೆ ಹೊಗೆಗೆ ಒಡ್ಡಿಕೊಳ್ಳುವುದರಿಂದ ಉಸಿರಾಟದ ತೊಂದರೆಗಳು ಉಂಟಾಗಬಹುದು. ದೀಪಾವಳಿ ವೇಳೆ ಏನಾದರೂ ಬೆಂಕಿ ಅವಘಡ ಉಂಟಾದರೆ, ಗಾಯ ಆದ ಜಾಗಕ್ಕೆ ಸುಮಾರು 15 ನಿಮಿಷಗಳ ಕಾಲ ತಂಪಾದ ನೀರನ್ನು ಹಾಕಿ. ಬೆಣ್ಣೆ, ಎಣ್ಣೆ ಅಥವಾ ಇತರೆ ಮನೆಮದ್ದುಗಳನ್ನು ಬಳಸಬೇಡಿ. ಚರ್ಮಕ್ಕೆ ಬಟ್ಟೆ ಅಂಟಿಕೊಂಡಿದ್ದರೆ ಅದನ್ನು ತೆಗೆಯಬೇಡಿ. ತಕ್ಷಣವೇ ವೈದ್ಯಕೀಯ ಸಹಾಯವನ್ನು ಪಡೆಯಿರಿ ಎಂದು ಸೂಚಿಸಿದ್ದಾರೆ.

ದೀಪಾವಳಿ ವೇಳೆ ಸಾಮಾನ್ಯವಾಗಿ ಪಟಾಕಿ ಸಿಡಿಸುವುದನ್ನು ನೋಡುತ್ತಿರುವ ಜನ ಹಾಗೂ ಮಕ್ಕಳು ಗಾಯಗೊಂಡ ಅನೇಕ ಉದಾಹರಣೆಗಳಿವೆ. ಅದರಲ್ಲೂ ಅನೇಕರಿಗೆ ಕಣ್ಣಿನ ಗಾಯಗಳು ಆಗಿರುತ್ತವೆ. ಒಂದು ವೇಳೆ ಪಟಾಕಿಯ ಮದ್ದು ಕಣ್ಣಿಗೆ ಬಿದ್ದರೆ, ಕಣ್ಣನ್ನು ತೊಳೆಯಲು ಶುದ್ಧ ನೀರನ್ನು ಬಳಸಬೇಕು. ಆದರೆ, ಯಾವುದೇ ಕಾರಣಕ್ಕೂ ಕಣ್ಣನ್ನು ಉಜ್ಜಬಾರದು. ಗಾಯಾಳುಗಳು ತಕ್ಷಣವೇ ವೈದ್ಯರ ಸಹಾಯವನ್ನು ಪಡೆಯಬೇಕು. ಒಂದು ವೇಳೆ ಅಲರ್ಜಿಯಿಂದ ಉಸಿರಾಟ ಸಮಸ್ಯೆ ಉಂಟಾದರೆ ವೈದ್ಯರು ಸೂಚಿಸಿರುವ ಇನ್‌ಹೇಲರ್‌ಗಳನ್ನು ಬಳಸಬಹುದು. ಮತ್ತು ಚೆನ್ನಾಗಿ ಗಾಳಿಯಾಡುವ ಕೋಣೆಗೆ ಹೋಗಿ ಅಥವಾ ಉತ್ತಮ ಗಾಳಿಗಾಗಿ ವಾಯು ಶುದ್ಧೀಕಾರಕವನ್ನು ಬಳಸಿ. ಆದರೆ, ಉಸಿರಾಟದ ಸಮಸ್ಯೆ ಹೆಚ್ಚಾದರೆ ವೈದ್ಯರ ಸಹಾಯವನ್ನು ಪಡೆಯಿರಿ ಎಂದು ಡಾ. ಶೃತಿ ಭಾಸ್ಕರನ್‌ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ದೀಪಾವಳಿಯಂದೇ ಆಂಧ್ರದಲ್ಲಿ ಭಾರೀ ದುರಂತ; ಪಟಾಕಿ ಸ್ಫೋಟವಾಗಿ ಓರ್ವ ಸಾವು, 6 ಮಂದಿಗೆ ಗಾಯ

ಇನ್ನು, ದೀಪಾವಳಿ ಸಮಯದಲ್ಲಿ, ಪಟಾಕಿಗಳನ್ನು ಸಿಡಿಸುವಾಗ ಬರುವ ಭಾರೀ ಶಬ್ಧಗಳು ಮಕ್ಕಳು, ವೃದ್ಧರು ಮತ್ತು ಸಾಕುಪ್ರಾಣಿಗಳಲ್ಲಿ ಒತ್ತಡವನ್ನು ಉಂಟುಮಾಡಬಹುದು. ಪಟಾಕಿ ಶಬ್ಧದಿಂದ ಯಾರಿಗಾದರೂ ಸಮಸ್ಯೆಯಾದರೆ ಅವರನ್ನು ನಿಶಬ್ಧ ಸ್ಥಳಕ್ಕೆ ಕರೆದುಕೊಂಡು ಹೋಗಿ, ಕುಡಿಯಲು ನೀರು ಕೊಡಿ. ನಂತರ ಅವರ ಒತ್ತಡವನ್ನು ಕಡಿಮೆ ಮಾಡಲು ಅವರಿಗೆ ದೀರ್ಘ ಉಸಿರಾಟದ ವ್ಯಾಯಾಮಗಳನ್ನು ಮಾಡಿಸಿ, ವಿಶ್ರಾಂತಿ ತೆಗೆದುಕೊಳ್ಳಲು ಸೂಚಿಸಿ.

ಈ ಎಲ್ಲಾ ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವ ಮೂಲಕ ಹಬ್ಬದ ಋತುವಿನಲ್ಲಿಯೂ ಸಹ ಸುರಕ್ಷಿತ ಮತ್ತು ಸಮೃದ್ಧ ದೀಪಾವಳಿಯನ್ನು ಆಚರಿಸಿ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ