
ಆಹಾರ ಸರಿಯಾಗಿ ಜೀರ್ಣವಾಗದಿದ್ದರೆ, ರೋಗಗಳು ಬೇಡ ಎಂದರೂ ಬರುತ್ತದೆ. ಆದರೆ ಜನರು ಈ ಸಮಸ್ಯೆಯ ಬಗ್ಗೆ ಹೆಚ್ಚಿನ ಗಮನ ಕೊಡುವುದರ ಬದಲಾಗಿ ಅದನ್ನು ನಿರ್ಲಕ್ಷಿಸುತ್ತಾರೆ. ದೇಹದಲ್ಲಿ ಅಜೀರ್ಣವಾದಾಗ (Digestive Issues) ಕೆಲವು ಲಕ್ಷಣಗಳು ಕಂಡುಬರುತ್ತದೆ ಆದರೆ ಇವು ಸಾಮಾನ್ಯ ಸಮಸ್ಯೆಗಳೆಂದು ಜನ ತಳ್ಳಿಹಾಕುತ್ತಾರೆ. ನಿಮಗೆ ತಿಳಿದಿರಲಿ, ಉತ್ತಮ ಆರೋಗ್ಯಕ್ಕಾಗಿ ದೇಹದಲ್ಲಿ ಆಹಾರ ಸರಿಯಾಗಿ ಜೀರ್ಣವಾಗುತ್ತಿದೆಯೇ ಅಥವಾ ಇಲ್ಲವೇ ಎಂಬುದನ್ನು ತಿಳಿದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಹಾಗಾದರೆ ಇದನ್ನು ಹೇಗೆ ಗುರುತಿಸುವುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ವ್ಯಕ್ತಿ ತಿಂದ ಆಹಾರ ಹೊಟ್ಟೆಯಲ್ಲಿ ಭಾರ ಅಥವಾ ಉರಿಯ ಅನುಭವವಾದರೆ ಅದನ್ನು ಹಗುರವಾಗಿ ಪರಿಗಣಿಸಬಾರದು ಎಂದು ಏಮ್ಸ್ ದೆಹಲಿಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ಮಾಜಿ ವೈದ್ಯೆ ಡಾ. ಅನನ್ಯ ಗುಪ್ತಾ ಹೇಳಿದ್ದಾರೆ. ಇದು ವಾರಕ್ಕೆ ಒಂದು ಅಥವಾ ಎರಡು ಬಾರಿ ಅಥವಾ ಹದಿನೈದು ದಿನಗಳಿಗೊಮ್ಮೆ ಕಂಡುಬಂದರೆ, ಕಳವಳ ಪಡಬೇಕಾಗಿಲ್ಲ. ಆದರೆ ಪ್ರತಿನಿತ್ಯವೂ ಈ ಸಮಸ್ಯೆ ಕಂಡುಬಂದರೆ ಆಹಾರವು ಜೀರ್ಣವಾಗುತ್ತಿಲ್ಲ ಎಂದರ್ಥ.
ಸಾಮಾನ್ಯವಾಗಿ ಆಹಾರ ಸರಿಯಾಗಿ ಜೀರ್ಣವಾಗದಿರಲು ಹಲವಾರು ಕಾರಣಗಳಿವೆ ಎಂದು ಡಾ. ಗುಪ್ತಾ ಹೇಳುತ್ತಾರೆ. ಮೊದಲನೆಯದು ಯಕೃತ್ತಿನಲ್ಲಿ ಸಮಸ್ಯೆ. ತಡರಾತ್ರಿ ಆಹಾರ ಸೇವಿಸುವುದು, ಹೊಟ್ಟೆ ಬಿರಿಯುವಷ್ಟು ಊಟ ಮಾಡುವುದು, ಚಹಾ ಅಥವಾ ಕಾಫಿಯ ಅತಿಯಾದ ಸೇವನೆ ಮತ್ತು ಫಾಸ್ಟ್ ಫುಡ್ ತಿನ್ನುವುದರಿಂದ ಈ ರೀತಿಯ ಸಮಸ್ಯೆ ಕಂಡುಬರಬಹುದು. ಕೆಲವರಲ್ಲಿ, ಪಿತ್ತಕೋಶವು ಅಗತ್ಯಕ್ಕಿಂತ ಹೆಚ್ಚು ಪಿತ್ತರಸವನ್ನು ಉತ್ಪಾದಿಸುತ್ತದೆ. ಇದರಿಂದಲೂ ಕೂಡ ಅಜೀರ್ಣ ಸಮಸ್ಯೆ ಕಂಡುಬರಬಹುದು. ಕೆಲವು ಸಂದರ್ಭಗಳಲ್ಲಿ, ಮೇದೋಜ್ಜೀರಕ ಗ್ರಂಥಿಯ ಕಿಣ್ವಗಳ ಕೊರತೆ ಅಥವಾ ಕರುಳಿನಲ್ಲಿ ಸೋಂಕು ಕೂಡ ಈ ಸಮಸ್ಯೆಗೆ ಕಾರಣವಾಗಬಹುದು. ಅದರಲ್ಲಿಯೂ ಇತ್ತೀಚಿನ ವರ್ಷಗಳಲ್ಲಿ, ಅಜೀರ್ಣ ಸಂಬಂಧಿತ ಸಮಸ್ಯೆಗಳ ಪ್ರಕರಣಗಳು ಗಮನಾರ್ಹವಾಗಿ ಹೆಚ್ಚುತ್ತಿದ್ದು. ಇದಕ್ಕೆ ಮುಖ್ಯ ಕಾರಣ ಕಳಪೆ ಆಹಾರ ಮತ್ತು ಜೀವನಶೈಲಿ. ಈಗ, ಈ ಸಮಸ್ಯೆ ಎಲ್ಲಾ ವಯಸ್ಸಿನವರಲ್ಲಿಯೂ ಕಂಡುಬರುತ್ತಿದ್ದು, ದೀರ್ಘಕಾಲದಿಂದ ಕಂಡುಬರುವ ಅಜೀರ್ಣ ಸಮಸ್ಯೆ ಅನೇಕ ಸಂದರ್ಭಗಳಲ್ಲಿ ಮಲಬದ್ಧತೆಗೆ ಕಾರಣವಾಗುತ್ತದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.
ಇದನ್ನೂ ಓದಿ: ಈ ಆಹಾರಗಳು ಅಜೀರ್ಣಕ್ಕೆ ಕಾರಣವಾಗಬಹುದು; ಸೇವನೆ ಮಾಡುವಾಗ ಇರಲಿ ಎಚ್ಚರ
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ