Health: ನಿಮ್ಮ ಮೂಳೆಗಳಿಗೂ ಕೋಪ ಬರುತ್ತದೆ, ಹಠಕ್ಕೆ ಬೀಳುತ್ತವೆ!
Bone Health : ದುಡಿಯುವುದೇ ಆರೋಗ್ಯವಾಗಿ ಜೀವನ ಸಾಗಿಸಲು ಅಲ್ಲವೆ? ಅನವಶ್ಯಕ ಪ್ರಭಾವ, ಸ್ಪರ್ಧೆ, ಪ್ರತಿಷ್ಠೆಗೆ ಬಿದ್ದು ಸಹಜ ಜೀವನಶೈಲಿಯನ್ನು ಮುರಿದು ಕಟ್ಟಿಕೊಳ್ಳುವ ಆಸೆ ಏತಕೆ? ನಾಳೆಯ ಊಟದ ತಟ್ಟೆಯಲ್ಲಿ ಏನೆಲ್ಲ ಇರಬೇಕೆನ್ನುವೆಡೆ ಸಮಯ ತೊಡಗಿಸಿ.
Bone Health : ನಮ್ಮ ಮೂಳೆಗಳಲ್ಲಿ ತೊಂದರೆ ಕಾಣಿಸಿಕೊಳ್ಳುತ್ತಿದೆ ಎಂದು ನಮ್ಮಷ್ಟಕ್ಕೆ ನಮಗೆ ಅರಿವು ಬರುವುದು ಯಾವಾಗ? ಕತ್ತು, ಬೆನ್ನು, ಕೆಳಸೊಂಟ, ಭುಜದಲ್ಲಿ ಇದ್ದಕ್ಕಿದ್ದಂತೆ ನೋವು ಕಾಣಿಸಿಕೊಂಡು ಅದು ತೀವ್ರವಾಗುತ್ತಾ ಕೊನೆಗೆ ಎಡೆಬಿಡದೆ ಕಾಡುವಾಗಲೇ. ಇದು ವಯಸ್ಸಾಗುತ್ತಾ ಹೋದಂತೆ ಪ್ರತಿಯೊಬ್ಬರಿಗೂ ಉಂಟಾಗುವ ಸಾಮಾನ್ಯ ಪ್ರಕ್ರಿಯೆ. ಆದರೆ ನಿತ್ಯ ಜೀವನಶೈಲಿಯಿಂದಾಗಿ ಉಂಟಾಗುತ್ತಿರುವ ಮೂಳೆಸಮಸ್ಯೆಗೆ ವಯಸ್ಸಿನ ಹಂಗಿಲ್ಲ. ಥಟ್ಟನೆ ವೈದ್ಯರ ಬಳಿ ಓಡಿಹೋಗುತ್ತೇವೆ ಅದಕ್ಕೊಂದಿಷ್ಟು ಚಿಕಿತ್ಸೆ ಪಡೆಯುತ್ತೇವೆ. ಚಿಕಿತ್ಸೆ ನಂತರ ನೋವು ಮತ್ತೆ ಪುನರಾವರ್ತನೆಯಾಗುತ್ತದೆ. ಹಾಗಾಗಿ ನಿತ್ಯ ಆಹಾರ ಕ್ರಮದಲ್ಲಿಯೇ ಮೂಳೆಗಳನ್ನು ಸದೃಢಗೊಳಿಸಿಕೊಳ್ಳಬಹುದಾದ ಸುಲಭ ಉಪಾಯಗಳನ್ನು ವೈದ್ಯರು ಹೆಚ್ಚೆಚ್ಚು ಶಿಫಾರಸು ಮಾಡುತ್ತಿದ್ದಾರೆ. ಈ ಬಗ್ಗೆ ಹೆಚ್ಚು ತಿಳಿವಳಿಕೆ ಕೊಡುವಲ್ಲಿ ಪ್ರಯತ್ನಿಸುತ್ತಿದ್ದಾರೆ.
ಸೋಶಿಯಲ್ ಮೀಡಿಯಾದಲ್ಲಿ, ಟಿವಿ ನೋಡುವಲ್ಲಿ, ಶಾಪಿಂಗ್ನಲ್ಲಿ, ಹಾಳುಹರಟೆಯಲ್ಲಿ, ಇನ್ನೊಬ್ಬರ ಕೆಲಸದಲ್ಲಿ ಇಣುಕಿ ಹಾಕುವಲ್ಲಿ ಸಮಯವನ್ನು ತೊಡಗಿಸಿಕೊಳ್ಳುವುದನ್ನು ಬಿಟ್ಟು ನಾಳೆಗೆ ನಮ್ಮ ಊಟದ ಮೆನುವಿನಲ್ಲಿ ಏನಿರಬೇಕು ಎಂಬುದರ ಗಮನ ಕೊಟ್ಟರೆ ಎಷ್ಟೊಂದು ಆರೋಗ್ಯ ಸಮಸ್ಯೆಗಳು ಕಡಿಮೆಯಾಗುತ್ತವೆ. ಉತ್ತಮ ಆರೋಗ್ಯವಿದ್ದಲ್ಲಿ ಉತ್ತಮ ಮನಸ್ಸೂ ನಮ್ಮದಾಗಿರುತ್ತದೆ. ಇದು ಮೂಳೆಗಳ ಆರೋಗ್ಯಕ್ಕೂ ಹೊರತಾಗಿಲ್ಲ. ಆಹಾರದಲ್ಲಿಯೇ ಆರೋಗ್ಯವಿರುವುದು.
ಸುಲಭಕ್ಕೆ ಸಿಗುವ ಎಳ್ಳಿನಲ್ಲಿ ರಂಜಕ ಮತ್ತು ಕ್ಯಾಲ್ಸಿಯಂನ ಅಂಶಗಳು ಸಮೃದ್ಧವಾಗಿವೆ. ಹಾಗೆಯೇ ಬೀನ್ಸ್ನಲ್ಲಿ ಮ್ಯಾಗ್ನೀಷಿಯಮ್, ಕ್ಯಾಲ್ಶಿಯಂ, ರಂಜಕದ ಅಂಶಗಳಿವೆ. ಹಾಗಾಗಿ ಕಿಡ್ನಿ ಬೀನ್ಸ್ ಹೆಚ್ಚು ಪ್ರಯೋಜನಕಾರಿ. ಇನ್ನು ರಾಗಿಯಲ್ಲಿ ಹೇರಳವಾಗಿ ಕ್ಯಾಲ್ಶಿಯಂ ಇದೆ. ರಾಗಿ ರೊಟ್ಟಿ, ಚಿಲ್ಲಾ, ಪ್ಯಾನ್ಕೇಕ್, ಗಂಜಿ, ಹಾಲುಬಾಯಿ ಮಾಡಬಹುದಾಗಿದೆ. ಮಕ್ಕಳಿಗೂ ಇದನ್ನು ಕೊಡಬಹುದು.
ಇದನ್ನೂ ಓದಿ : Kidney Health: ಮಳೆಗಾಲದಲ್ಲಿ ಕಿಡ್ನಿ ಆರೈಕೆ ಹೇಗಿರಬೇಕು? ಇಲ್ಲಿವೆ ಟಿಪ್ಸ್
ಹಣ್ಣುಗಳ ವಿಷಯಕ್ಕೆ ಬಂದರೆ, ಅನಾನಸ್ನಲ್ಲಿ ಪೊಟ್ಯಾಶಿಯಂ ಮತ್ತು ವಿಟಮಿನ್ ಎ ಇರುವುದರಿಂದ ದೇಹದಲ್ಲಿರುವ ಆಮ್ಲವನ್ನು ಸಮತೋಲನಗೊಳಿಸುವಲ್ಲಿ ಇದು ಹೆಚ್ಚು ಪ್ರಯೋಜನಕಾರಿ. ಜೊತೆಗೆ ಕ್ಯಾಲ್ಶಿಯಂ ವೃದ್ಧಿಗೂ ಇದು ಸಹಾಯಕಾರಿ. ಇನ್ನು ಸೊಪ್ಪುಗಳಲ್ಲಿ ಪಾಲಕ್ ಬಹಳ ಒಳ್ಳೆಯದು. ಇದರಲ್ಲಿ ಫೈಬರ್, ಕಬ್ಬಿಣಾಂಶ ಮತ್ತು ವಿಟಮಿನ್ ಎ ಅಂಶಗಳಿರುವುದರಿಂದ ಹಲ್ಲು, ಮೂಳೆಗೆ ಉಪಯುಕ್ತ. ಕಡಲೆ, ಶೇಂಗಾ, ಉದ್ದು ಮುಂತಾದ ಧಾನ್ಯಗಳಲ್ಲಿ ಅಗತ್ಯವಾದ ಕ್ಯಾಲ್ಶಿಯಂ ಜೊತೆ ಮ್ಯಾಗ್ನೀಶಿಯಮ್, ರಂಜಕದ ಅಂಶಗಳೂ ಇವೆ. ಹಣ್ಣುಗಳಲ್ಲಿ ಬಾಳೆಹಣ್ಣು ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ, ಮ್ಯಾಗ್ನೀಷಿಯಂ ಅನ್ನು ಹೇರಳವಾಗಿ ದೇಹಕ್ಕೆ ಸೇರಿಸುತ್ತದೆ. ಅಲ್ಲದೆ, ಮೂಳೆಗಳು ಮತ್ತು ಹಲ್ಲುಗಳ ಸದೃಢತೆಯನ್ನೂ ಹೆಚ್ಚಿಸುತ್ತದೆ. 100 ಗ್ರಾಂ ಪಪ್ಪಾಯಿಯಲ್ಲಿ 20 ಮಿ.ಗ್ರಾಂ ಕ್ಯಾಲ್ಸಿಯಂ ಇರುತ್ತದೆ.
ಇದನ್ನೂ ಓದಿ : Health : ನಿತ್ಯವೂ ಎಳನೀರು ಕುಡಿಯುವುದರಿಂದ ಏನು ಪ್ರಯೋಜನ
ಸ್ವಲ್ಪ ವ್ಯವಧಾನದಿಂದ ನಮ್ಮ ಆಹಾರಕ್ರಮದ ಬಗ್ಗೆ ಗಮನವಹಿಸಿದರೆ ನಮ್ಮ ಮನಸ್ಸು ದೇಹವನ್ನು ಆದಷ್ಟು ಸದೃಢವಾಗಿಟ್ಟುಕೊಳ್ಳಬಹುದು. ಎಲ್ಲದಕ್ಕೂ ವೈದ್ಯರ ಮೊರೆ ಹೋಗುವುದನ್ನು ತಪ್ಪಿಸಬಹುದು. ದುಡಿಯುವುದೇ ಆರೋಗ್ಯವಾಗಿ ಜೀವನ ಸಾಗಿಸಲು ಅಲ್ಲವೆ? ಅನವಶ್ಯಕ ಪ್ರಭಾವ, ಸ್ಪರ್ಧೆ, ಪ್ರತಿಷ್ಠೆಗೆ ಬಿದ್ದು ಸಹಜವಾದ ಜೀವನಶೈಲಿಯನ್ನು ಮುರಿದು ಕಟ್ಟಿಕೊಳ್ಳಲು ಹೋದರೆ ಅಪಾಯ ಯಾರಿಗೆ? ಯೋಚಿಸಿ.
ಹಾಗೆಂದು ಎಲ್ಲವೂ ಆಹಾರಕ್ರಮದಿಂದಲೇ ಆರೋಗ್ಯ ಕಾಪಾಡಿಕೊಳ್ಳಬಹುದು ಎನ್ನಲಾಗದು. ಈಗಾಗಲೇ ಹಾನಿಗೊಳಗಾದ ದೇಹಕ್ಕೆ ಔಷಧಿಯೂ ಮುಖ್ಯ. ಹಾಗಾಗಿ ಏನೇ ಆದರೂ ಪ್ರಾಥಮಿಕವಾಗಿ ವೈದ್ಯರ ಸಲಹೆಯೊಂದಿಗೆ ಮುಂದುವರಿಯುವುದು ಸೂಕ್ತ. ನಂತರ ಆಹಾರ ಕ್ರಮದಲ್ಲಿ ಬದಲಾವಣೆಗಳು.
Published On - 1:29 pm, Thu, 23 June 22