AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Heart Attack: ಸಣ್ಣ ವಯಸ್ಸಿನವರಿಗೆ ಹೃದಯಾಘಾತ ಹೆಚ್ಚುತ್ತಿರುವುದಕ್ಕೆ ಕಾರಣವೇನು?; ಈ ಅಂಶಗಳನ್ನು ಮರೆಯದಿರಿ

ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

Heart Attack: ಸಣ್ಣ ವಯಸ್ಸಿನವರಿಗೆ ಹೃದಯಾಘಾತ ಹೆಚ್ಚುತ್ತಿರುವುದಕ್ಕೆ ಕಾರಣವೇನು?; ಈ ಅಂಶಗಳನ್ನು ಮರೆಯದಿರಿ
ಹೃದಯಾಘಾತImage Credit source: India.com
TV9 Web
| Updated By: ಸುಷ್ಮಾ ಚಕ್ರೆ|

Updated on: Aug 23, 2022 | 5:52 PM

Share

ಮೊದಲೆಲ್ಲ 65ರಿಂದ 70 ವರ್ಷ ದಾಟಿದವರಿಗೆ ಹೃದಯಾಘಾತ (Heart Attack) ಉಂಟಾಗುತ್ತಿತ್ತು. ಆದರೆ, ಇತ್ತೀಚಿನ ದಿನಗಳಲ್ಲಿ 25ರಿಂದ 45 ವರ್ಷದೊಳಗಿನವರು ಹೃದಯಾಘಾತದಿಂದ ಸಾವನ್ನಪ್ಪುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಅಚಾನಕ್ಕಾಗಿ ಕಾಣಿಸಿಕೊಳ್ಳುವ ಹೃದಯಾಘಾತ ಪ್ರಾಣವನ್ನೇ ಬಲಿ ಪಡೆಯುತ್ತಿದೆ. ಈ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ (MI) ವಯಸ್ಸಾದವರಿಗೆ ಹೆಚ್ಚು ಕಾಡುವ ಸಮಸ್ಯೆ ಎಂದು ಹಿಂದೆ ಭಾವಿಸಲಾಗಿತ್ತು. ಆದರೆ, ಈಗ ಪ್ರತಿ 5 ಹೃದಯಾಘಾತಕ್ಕೊಳಗಾಗುವ ರೋಗಿಗಳಲ್ಲಿ ಒಬ್ಬರು 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಹಾಗಾದರೆ, ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದ ಪ್ರಮಾಣ ಹೆಚ್ಚಾಗುತ್ತಿರುವುದಕ್ಕೆ ಕಾರಣವೇನು? ಇಲ್ಲಿದೆ ಮಾಹಿತಿ.

ಧೂಮಪಾನ, ಸ್ಥೂಲಕಾಯತೆ, ದೈಹಿಕ ವ್ಯಾಯಾಮದ ಕೊರತೆ ಮತ್ತು ಹೃದಯರಕ್ತನಾಳದ ವ್ಯವಸ್ಥೆಯ ಮೇಲೆ ಒತ್ತಡವನ್ನು ಉಂಟುಮಾಡುವ ಇತರ ಕಾರಣಗಳಿಂದಾಗಿ ಯುವಕ-ಯುವತಿಯರಲ್ಲಿ ಹೃದಯಾಘಾತ ಹೆಚ್ಚುತ್ತಿದೆ. ಹೃದಯವು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ಅದು ಇಲ್ಲದೆ ದೇಹಕ್ಕೆ ಯಾವುದೇ ಅರ್ಥವಿಲ್ಲ. ಆಮ್ಲಜನಕ ಹಾಗೂ ರಕ್ತವನ್ನು ಸಾಗಿಸುವ ಅಪಧಮನಿಗಳು ನಿರ್ಬಂಧಿಸಲ್ಪಟ್ಟಾಗ ಅದು ರಕ್ತದ ಹರಿವನ್ನು ಅಡ್ಡಿಪಡಿಸುತ್ತದೆ. ಕೆಲವೊಮ್ಮೆ ಅದು ರಕ್ತದ ಹರಿವನ್ನು ಸಂಪೂರ್ಣವಾಗಿ ನಿಲ್ಲಿಸುತ್ತದೆ. ಇದರಿಂದ ಹೃದಯಾಘಾತ ಉಂಟಾಗುತ್ತದೆ.

ಇದನ್ನೂ ಓದಿ: Heart Attack: ಹೃದಯಾಘಾತಕ್ಕೂ ಮುನ್ನ ದೇಹವು ನೀಡುವ ಈ ಸಂಕೇತಗಳ ಬಗ್ಗೆ ಎಚ್ಚರವಿರಲಿ

ಹೃದಯಾಘಾತಕ್ಕೆ ಮುಖ್ಯ ಕಾರಣಗಳೆಂದರೆ: 1. ಕಳಪೆ ಜೀವನಶೈಲಿ ದಿನಚರಿ 2. ಅತಿಯಾದ ಮದ್ಯಪಾನ ಮತ್ತು ಧೂಮಪಾನ 3. ಅಧಿಕ ತೂಕ 4. ಮಾನಸಿಕ ಒತ್ತಡ 5. ಅಧಿಕ ರಕ್ತದೊತ್ತಡ 6. ಮಧುಮೇಹ

ಚಿಕ್ಕ ವಯಸ್ಸಿನಲ್ಲಿ ಹೃದಯಾಘಾತದ ಅಪಾಯವನ್ನು ಕಡಿಮೆ ಮಾಡಲು ನಿಮಗೆ ಸಹಾಯ ಮಾಡುವ ಕೆಲವು ಸಲಹೆಗಳು ಇಲ್ಲಿವೆ. 1. ಫೈಬರ್ ಅಂಶ ಹೆಚ್ಚಾಗಿರುವ ಸಮತೋಲಿತ ಆಹಾರವನ್ನು ಸೇವಿಸಿ. 2. ಸೋಡಿಯಂ ಮತ್ತು ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ. 3. ಪ್ಯಾಕೇಜ್ ಮಾಡಿದ ಆಹಾರದ ಬಳಕೆ ಕಡಿಮೆ ಮಾಡಿ. 4. ನಿಮ್ಮ ರಕ್ತದ ಸಕ್ಕರೆಯ ಮಟ್ಟ, ರಕ್ತದೊತ್ತಡದ ಮಟ್ಟಗಳು ಮತ್ತು ಕೊಲೆಸ್ಟ್ರಾಲ್ ಆಗಾಗ ಪರೀಕ್ಷಿಸುತ್ತಿರಿ. 5. ಧೂಮಪಾನವನ್ನು ತ್ಯಜಿಸಿ. ನಿಮ್ಮ ಸುತ್ತಲೂ ಧೂಮಪಾನ ಮಾಡುವವರಿದ್ದರೆ ಆ ಹೊಗೆಯನ್ನು ಉಸಿರಾಡಬೇಡಿ. 6. ಸರಿಯಾದ ಜೀವನಶೈಲಿಯನ್ನು ರೂಢಿಸಿಕೊಳ್ಳಿ. 7. ಯಾವುದೇ ರೂಪದಲ್ಲಿ ತಂಬಾಕು ಸೇವನೆ ಮಾಡಬೇಡಿ. 8. ಯೋಗ, ಈಜು, ಸಂಗೀತ ಮುಂತಾದ ಮನರಂಜನಾ ಚಟುವಟಿಕೆಗಳ ಮೂಲಕ ಒತ್ತಡದ ಮಟ್ಟವನ್ನು ಕಡಿಮೆ ಮಾಡಿಕೊಳ್ಳಿ. 9. ಯೋಗ ಅಥವಾ ಧ್ಯಾನಕ್ಕಾಗಿ ಸ್ವಲ್ಪ ಸಮಯವನ್ನು ನಿಗದಿಪಡಿಸಿ. 10. ಆದಷ್ಟೂ ಚಟುವಟಿಕೆಯಿಂದಿರಿ. ಮನಸು ಜಡ ಹಿಡಿಯಲು ಬಿಡಬೇಡಿ.

ಇದನ್ನೂ ಓದಿ: ಹೃದಯಾಘಾತವನ್ನು ತಪ್ಪಿಸಲು ಈ ಪದಾರ್ಥಗಳನ್ನು ನಿಮ್ಮ ಆಹಾರದಲ್ಲಿ ಸೇರಿಸಿ

ನೊಯ್ಡಾದ ಫೋರ್ಟಿಸ್ ಆಸ್ಪತ್ರೆಯ ಹೃದಯ ವಿಜ್ಞಾನದ ನಿರ್ದೇಶಕ ಡಾ. ಸಂಜೀವ್ ಗೇರಾ ಯುವ ಜನರಲ್ಲಿ ಹೃದಯಾಘಾತ ಹೆಚ್ಚಾಗುತ್ತಿರುವ ಬಗ್ಗೆ ಮಾತನಾಡಿದ್ದು, ನಿಯಮಿತ ವ್ಯಾಯಾಮ ಬಹಳ ಮುಖ್ಯವಾದುದು. ಎದೆ ನೋವು, ಉಸಿರಾಟದ ತೊಂದರೆ, ಬೆವರು ಅಥವಾ ಅಸ್ವಸ್ಥತೆಯಂತಹ ರೋಗಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಈ ಲಕ್ಷಣಗಳು ಕಂಡುಬಂದರೆ ಇಸಿಜಿ, ಎಕೋಕಾರ್ಡಿಯೋಗ್ರಾಮ್ ಪರೀಕ್ಷೆ ಮಾಡಿಸಿಕೊಳ್ಳಬೇಕು. ಕುಟುಂಬದಲ್ಲಿ ಯಾರಿಗಾದರೂ ಹೃದಯದ ಸಮಸ್ಯೆ ಇದ್ದರೆ, ಅಧಿಕ ಬಿಪಿ, ಡಯಾಬಿಟಿಸ್ ಅಥವಾ ಮಧುಮೇಹ, ಅಧಿಕ ಕೊಲೆಸ್ಟ್ರಾಲ್ ಅಥವಾ ಸ್ಥೂಲಕಾಯತೆಯಂತಹ ಹೃದ್ರೋಗದ ಅಪಾಯದಲ್ಲಿರುವ ಜನರು ಆಗಾಗ ಬಿಪಿ, ಶುಗರ್ ಪರೀಕ್ಷೆ ಮಾಡಿಸಿಕೊಳ್ಳುತ್ತಿರಬೇಕು.

ಇನ್ನಷ್ಟು ಆರೋಗ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ