AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೇಸಿಗೆಯಲ್ಲಿ ಮಕ್ಕಳು ಡಿಹೈಡ್ರೇಟ್ ಆಗುವುದನ್ನು ತಡೆಯಲು ಡಾ. ಹರೀಶ್ ನೀಡಿರುವ ಸಲಹೆ ತಪ್ಪದೆ ಪಾಲಿಸಿ

ಮಕ್ಕಳು ಹೊರಗೆ ಆಟವಾಡುವಾಗ ಹೆಚ್ಚು ಬೆವರುವುದು ಡಿಹೈಡ್ರೇಶನ್‌ಗೆ ಕಾರಣವಾಗಬಹುದು. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯದಿದ್ದರೆ ಬಾಯಿ ಒಣಗುವುದು, ದೌರ್ಬಲ್ಯ ಮತ್ತು ಮೂತ್ರ ಕಡಿಮೆಯಾಗುವುದು ಕಾಣಿಸಬಹುದು. ಶಿಶುಗಳಲ್ಲಿ ಈ ಅಪಾಯ ಹೆಚ್ಚಾಗಿರುವುದರಿಂದ ಪೋಷಕರು ವಿಶೇಷ ಗಮನ ನೀಡಬೇಕಾಗುತ್ತದೆ. ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಯೆಲಹಂಕ ಮಣಿಪಾಲ್ ಆಸ್ಪತ್ರೆಯ ಡಾ. ಹರೀಶ್ ಕುಮಾರ್ ನೀಡಿದ್ದು ಪೋಷಕರು ಯಾವ ರೀತಿಯ ಸಲಹೆಗಳನ್ನು ಅನುಸರಿಸಬೇಕು ಎಂಬುದನ್ನು ತಿಳಿಸಿದ್ದಾರೆ.

ಬೇಸಿಗೆಯಲ್ಲಿ ಮಕ್ಕಳು ಡಿಹೈಡ್ರೇಟ್ ಆಗುವುದನ್ನು ತಡೆಯಲು ಡಾ. ಹರೀಶ್ ನೀಡಿರುವ ಸಲಹೆ ತಪ್ಪದೆ ಪಾಲಿಸಿ
Keep Kids Hydrated in Hot Weather: Expert Advice by Dr. Harish
ಪ್ರೀತಿ ಭಟ್​, ಗುಣವಂತೆ
|

Updated on:Apr 28, 2026 | 9:44 PM

Share

ಮಕ್ಕಳು ಹೊರಾಂಗಣದಲ್ಲಿ ಆಟವಾಡುವಾಗ ಸಹಜವಾಗಿಯೇ ಹೆಚ್ಚು ಬೆವರುತ್ತಾರೆ, ಇದರಿಂದ ದೇಹ ಬೇಗ ಡಿಹೈಡ್ರೇಟ್ ಆಗುತ್ತದೆ. ಸರಿಯಾದ ಪ್ರಮಾಣದಲ್ಲಿ ನೀರು ಮತ್ತು ಅನ್ಯ ದ್ರವ್ಯಗಳ ಸೇವನೆಯಿಂದ ನಷ್ಟವಾದ ದ್ರವಗಳನ್ನು ಸಮರ್ಪಕವಾಗಿ ಮರುಪೂರಣಗೊಳಿಸದಿದ್ದರೆ ಮಕ್ಕಳಲ್ಲಿ ನಿರ್ಜಲೀಕರಣ (Dehydration) ಉಂಟಾಗುವ ಸಾಧ್ಯತೆ ಇರುತ್ತದೆ. ಇದರ ಪರಿಣಾಮವಾಗಿ ಬಾಯಿ ಒಣಗುವುದು, ಮೂತ್ರ ಪ್ರಮಾಣ ಕಡಿಮೆಯಾಗುವುದು, ದೌರ್ಬಲ್ಯ, ಕಿರಿಕಿರಿ ಮುಂತಾದ ಲಕ್ಷಣಗಳು ಕಾಣಿಸಬಹುದು. ವಿಶೇಷವಾಗಿ ಶಿಶು ಮತ್ತು ಚಿಕ್ಕ ಮಕ್ಕಳಿಗೆ ಬಾಯಾರಿಕೆಯಾಗುವುದನ್ನು ಸರಿಯಾಗಿ ವ್ಯಕ್ತಪಡಿಸಲು ಸಾಧ್ಯವಿಲ್ಲ, ಆದ್ದರಿಂದ ಡಿಹೈಡ್ರೇಷನ್ ಬೇಗ ಉಂಟಾಗುವ ಸಾಧ್ಯತೆ ಹೆಚ್ಚು. ಹಾಗಾಗಿ ಈ ವಿಷಯವಾಗಿ ಪೋಷಕರು ಹೆಚ್ಚಿನ ಗಮನ ಹರಿಸುವುದು ಮುಖ್ಯವಾಗುತ್ತದೆ. ಅದಕ್ಕಾಗಿಯೇ ಯಲಹಂಕ ಮಣಿಪಾಲ್ ಆಸ್ಪತ್ರೆಯ ಲೀಡ್ ಕನ್ಸಲ್ಟೆಂಟ್ – ಪೀಡಿಯಾಟ್ರಿಕ್ಸ್ ಮತ್ತು ಪೀಡಿಯಾಟ್ರಿಕ್ ನಿಯೋನೇಟಲ್ ಇಂಟೆನ್ಸಿವಿಸ್ಟ್ ಡಾ. ಹರೀಶ್ ಕುಮಾರ್ ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ್ದಾರೆ.

ಪೋಷಕರಿಗಾಗಿ ಸರಳ ಸಲಹೆ;

  • ಡಾ. ಹರೀಶ್ ಕುಮಾರ್ ಹೇಳುವ ಪ್ರಕಾರ ಮೊದಲು, ಮಕ್ಕಳಿಗೆ ನೀರು ಯಾವಾಗಲೂ ಸುಲಭವಾಗಿ ದೊರೆಯುವಂತೆ ನೋಡಿಕೊಳ್ಳಬೇಕು. ಶಾಲೆಯ ಬ್ಯಾಗ್, ಆಟದ ಸ್ಥಳ ಮತ್ತು ಹಾಸಿಗೆಯ ಬಳಿಯಲ್ಲಿ ನೀರಿನ ಬಾಟಲ್ ಇಡಿ. ಬಣ್ಣಬಣ್ಣದ ಬಾಟಲ್‌ಗಳು ಅಥವಾ ಸ್ಟ್ರಾ ಬಳಸಿ ಮಕ್ಕಳಿಗೆ ನೀರು ಕುಡಿಯುವ ಆಸಕ್ತಿ ಹೆಚ್ಚಿಸಿ. ಸಾಧ್ಯವಾದಷ್ಟು ಪ್ಲಾಸ್ಟಿಕ್ ಬಾಟಲ್‌ಗಳನ್ನು ಬಳಕೆ ಮಾಡುವುದನ್ನು ತಪ್ಪಿಸಿ.
  • ಬರಿ ದಾಹವಾದಾಗ ಮಾತ್ರವಲ್ಲ, ಪ್ರತಿ 30– 60 ನಿಮಿಷಗಳಿಗೊಮ್ಮೆ ನೀರು ಕುಡಿಯಲು ಮಕ್ಕಳನ್ನು ಉತ್ತೇಜಿಸಿ. ಜೊತೆಗೆ, ಕಲ್ಲಂಗಡಿ, ಕರಬೂಜ, ಕಿತ್ತಳೆ, ಸೌತೆಕಾಯಿ, ಟೊಮೇಟೊ ಮುಂತಾದ ನೀರಿನಾಂಶ ಹೆಚ್ಚು ಇರುವ ಹಣ್ಣು, ತರಕಾರಿಗಳನ್ನು ಆಹಾರದಲ್ಲಿ ಸೇರಿಸುವುದನ್ನು ಮರೆಯಬೇಡಿ.
  • ದೇಹ ಹೈಡ್ರೇಟ್ ಆಗಿರಲು ಎಳನೀರು, ಮಜ್ಜಿಗೆ, ಲಿಂಬು ನೀರು (ಸ್ವಲ್ಪ ಉಪ್ಪಿನೊಂದಿಗೆ) ಮುಂತಾದ ದ್ರವಗಳ ಸೇವನೆಯ ರೂಢಿಮಾಡಿಸಿ. ಸಕ್ಕರೆಪೂರಿತ ಅಥವಾ ಪ್ಯಾಕೇಜ್ ಪಾನೀಯಗಳು, ಸೋಡಾ ಮುಂತಾದವುಗಳ ಸೇವನೆಯನ್ನು ಆದಷ್ಟು ತಪ್ಪಿಸಿ.
  • ತೀವ್ರವಾದ ಬಿಸಿಲಿನ ಸಮಯವಾದ ಮಧ್ಯಾಹ್ನ 11 ರಿಂದ 4 ಗಂಟೆಯ ವರೆಗೆ ಮಕ್ಕಳು ಹೊರಾಂಗಣ ಚಟುವಟಿಕೆಯಲ್ಲಿ ತೊಡಗದಂತೆ ನೋಡಿಕೊಳ್ಳಿ. ಈ ಸಮಯದಲ್ಲಿ ಮಕ್ಕಳು ಆದಷ್ಟು ಮನೆಯ ಒಳಗಡೆ ಅಥವಾ ನೆರಳಿನ ಸ್ಥಳಗಳಲ್ಲಿ ಇರುವುದು ಒಳ್ಳೆಯದು.
  • ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ವಾತಾವರಣಕ್ಕೆ ಸೂಕ್ತವಾದ ಬಟ್ಟೆಗಳನ್ನು ಬಳಸಿ, ಉದಾಹರಣೆಗೆ ಸಡಿಲವಾದ, ಹಗುರವಾದ, ಮತ್ತು ಗಾಳಿಯಾಡುವ ಹತ್ತಿ (ಕಾಟನ್) ಬಟ್ಟೆಗಳನ್ನು ಬಳಸಿ.
  • ಮಕ್ಕಳಲ್ಲಿ ಡಿಹೈಡ್ರೇಷನ್ ಲಕ್ಷಣಗಳಾದ ಒಣ ತುಟಿ, ಕಡಿಮೆ ಮೂತ್ರ, ತಲೆಸುತ್ತು ಅಥವಾ ದೌರ್ಬಲ್ಯ ಕಂಡುಬಂದರೆ ತಕ್ಷಣ ದ್ರವರೂಪದ ಆಹಾರಗಳ ಸೇವನೆಯನ್ನು ಹೆಚ್ಚಿಸಿ, ತಂಪಾದ ಸ್ಥಳದಲ್ಲಿ ವಿಶ್ರಾಂತಿ ಕೊಡಿಸಿ. ಶಿಶು ಮತ್ತು ಚಿಕ್ಕ ಮಕ್ಕಳಿಗೆ ವಿಶೇಷ ಕಾಳಜಿ ಅಗತ್ಯ. ತಾಯಿ ಹಾಲು ಅಥವಾ ಫಾರ್ಮುಲಾ ಆಹಾರವನ್ನು ನಿಯಮಿತವಾಗಿ ನೀಡುತ್ತಿರಿ.

ಈ ಸರಳ ಕ್ರಮಗಳಿಂದ ಬೇಸಿಗೆಯಲ್ಲೂ ಮಕ್ಕಳ ಆರೋಗ್ಯವನ್ನು ಸುರಕ್ಷಿತವಾಗಿ ಕಾಪಾಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 8:53 pm, Tue, 28 April 26

Follow Us