
ಇತ್ತೀಚಿನ ದಿನಗಳಲ್ಲಿ ಮಲಬದ್ಧತೆ (Constipation) ಸಾಮಾನ್ಯ ಆರೋಗ್ಯ ಸಮಸ್ಯೆಯಾಗಿ ಪರಿಣಮಿಸಿದೆ. ಅನಿಯಮಿತ ಆಹಾರ ಪದ್ಧತಿ, ಕಡಿಮೆ ನೀರು ಕುಡಿಯುವುದು, ಫೈಬರ್ ಕೊರತೆ, ದೈಹಿಕ ಚಟುವಟಿಕೆ ಇಲ್ಲದಿರುವುದು ಹಾಗೂ ಒತ್ತಡದ ಜೀವನಶೈಲಿ ಇದಕ್ಕೆ ಪ್ರಮುಖ ಕಾರಣಗಳಾಗಿವೆ. ಬೆಳಗ್ಗೆ ಹೊಟ್ಟೆ ಸಂಪೂರ್ಣ ಖಾಲಿಯಾಗದಿದ್ದರೆ ದಿನವಿಡೀ ಹೊಟ್ಟೆ ಉಬ್ಬರ, ಅಸಹನೆ, ಗ್ಯಾಸ್ಟ್ರಿಕ್, ಆಯಾಸ ಮತ್ತು ಹಸಿವು ಕಡಿಮೆಯಾಗುವಂತಹ ಸಮಸ್ಯೆಗಳು ಕಾಣಿಸಬಹುದು. ಇದಕ್ಕೆ ಕೆಲವು ಔಷಧಿಗಳನ್ನು ಸೇವಿಸುವ ಬದಲು, ಕೆಲವು ನೈಸರ್ಗಿಕ ವಿಧಾನಗಳನ್ನು ಅನುಸರಿಸುವುದರಿಂದ ಜೀರ್ಣಾಂಗದ ಆರೋಗ್ಯವನ್ನು ಉತ್ತಮವಾಗಿಡಬಹುದು. ತಜ್ಞರ ಪ್ರಕಾರ, ಜೀವನಶೈಲಿಯಲ್ಲಿ ಸಣ್ಣ ಬದಲಾವಣೆಗಳೇ ಮಲಬದ್ಧತೆಯನ್ನು ಕಡಿಮೆ ಮಾಡಲು ಸಹಕಾರಿ.
ಬೆಚ್ಚಗಿನ ನೀರಿನೊಂದಿಗೆ ತ್ರಿಫಲಾ ಸೇವನೆ: ಯುರ್ವೇದದಲ್ಲಿ ತ್ರಿಫಲಾ ಚೂರ್ಣವನ್ನು ಜೀರ್ಣಾಂಗದ ಆರೋಗ್ಯಕ್ಕೆ ಉತ್ತಮ ಔಷಧಿಯೆಂದು ಪರಿಗಣಿಸಲಾಗುತ್ತದೆ. ಇದು ಕರುಳಿನ ಚಲನೆಯನ್ನು ಉತ್ತೇಜಿಸಿ ಬೆಳಗ್ಗೆ ಮಲ ವಿಸರ್ಜನೆ ಸುಲಭವಾಗುವಂತೆ ಮಾಡುತ್ತದೆ. ಆದರೆ ವೈದ್ಯರ ಸಲಹೆಯಂತೆ ರಾತ್ರಿ ಮಲಗುವ ಮುನ್ನ ಒಂದು ಟೀ ಸ್ಪೂನ್ ತ್ರಿಫಲಾ ಚೂರ್ಣವನ್ನು ಬೆಚ್ಚಗಿನ ನೀರಿನಲ್ಲಿ ಬೆರೆಸಿ ಸೇವಿಸಬಹುದು.
ಬೆಚ್ಚಗಿನ ನೀರು ಮತ್ತು ನಿಂಬೆ ರಸ: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಒಂದು ಗ್ಲಾಸ್ ಬೆಚ್ಚಗಿನ ನೀರಿಗೆ ಸ್ವಲ್ಪ ನಿಂಬೆ ರಸ ಸೇರಿಸಿ ಕುಡಿಯುವುದರಿಂದ ಜೀರ್ಣಕ್ರಿಯೆ ಚುರುಕಾಗುತ್ತದೆ. ಇದು ಕರುಳಿನ ಚಲನೆಯನ್ನು ಸುಧಾರಿಸಲು ನೆರವಾಗಬಹುದು.
ಫೈಬರ್‌ಯುಕ್ತ ಆಹಾರ ಹೆಚ್ಚಿಸಿ: ಮಲಬದ್ಧತೆಯ ಪ್ರಮುಖ ಕಾರಣಗಳಲ್ಲಿ ಫೈಬರ್ ಕೊರತೆಯೂ ಒಂದು. ಹಾಗಾಗಿ ಸೇವಿಸುವ ಆಹಾರದಲ್ಲಿ ಪಪ್ಪಾಯಿ, ಸೀಬೆಹಣ್ಣು, ಬಾಳೆಹಣ್ಣು, ಓಟ್ಸ್, ಸಂಪೂರ್ಣ ಧಾನ್ಯಗಳು, ಹಸಿರು ಸೊಪ್ಪು, ಬೀನ್ಸ್ ಹಾಗೂ ಬೇಳೆಕಾಳುಗಳು ಮತ್ತು ರಾತ್ರಿ ನೆನೆಸಿದ ಒಣದ್ರಾಕ್ಷಿ ಹಾಗೂ ಅಂಜೂರದಂತಹ ಆಹಾರಗಳನ್ನು ಸೇವಿಸಿ. ಇವು ಮಲವನ್ನು ಮೃದುವಾಗಿಸಿ ಸುಲಭವಾಗಿ ಹೊರಬರಲು ಸಹಾಯ ಮಾಡುತ್ತವೆ.
ಹರಳೆಣ್ಣೆ (Castor Oil) ವೈದ್ಯರ ಸಲಹೆಯೊಂದಿಗೆ ಮಾತ್ರ: ಹರಳೆಣ್ಣೆಯನ್ನು ಹಿಂದಿನಿಂದಲೂ ನೈಸರ್ಗಿಕ ಲ್ಯಾಕ್ಸೇಟಿವ್ ಆಗಿ ಬಳಸಲಾಗುತ್ತಿತ್ತು. ಆದರೆ ಗರ್ಭಿಣಿಯರು, ಮಕ್ಕಳು ಅಥವಾ ದೀರ್ಘಕಾಲದ ಆರೋಗ್ಯ ಸಮಸ್ಯೆಯಿರುವವರು ವೈದ್ಯರ ಸಲಹೆಯಿಲ್ಲದೆ ಇದನ್ನು ಬಳಸಬಾರದು.
ಇದನ್ನೂ ಓದಿ: ರಾತ್ರಿ ಊಟದ ನಂತರ ಈ ತಪ್ಪುಗಳನ್ನು ಮಾಡಬೇಡಿ; ಜೀರ್ಣಕ್ರಿಯೆ ಹಾಳಾಗಬಹುದು
ಸಾಕಷ್ಟು ನೀರು ಕುಡಿಯಿರಿ: ದಿನಕ್ಕೆ ಕನಿಷ್ಠ 2.5 ರಿಂದ 3 ಲೀಟರ್ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನ ಕೊರತೆ ಉಂಟಾಗುವುದಿಲ್ಲ. ಇದರಿಂದ ಮಲ ಗಟ್ಟಿಯಾಗುವುದನ್ನು ತಡೆಯಬಹುದು.
ಪ್ರತಿದಿನ ಸ್ವಲ್ಪ ವ್ಯಾಯಾಮ ಮಾಡಿ: ಪ್ರತಿದಿನ 20– 30 ನಿಮಿಷ ವೇಗದ ನಡಿಗೆ, ಯೋಗ ಅಥವಾ ಸಣ್ಣ ವ್ಯಾಯಾಮ ಮಾಡುವುದರಿಂದ ಕರುಳಿನ ಚಲನೆ ಉತ್ತಮಗೊಳ್ಳುತ್ತದೆ.
ಒಂದು ವಾರಕ್ಕಿಂತ ಹೆಚ್ಚು ಕಾಲ ಮಲಬದ್ಧತೆ ಮುಂದುವರಿದರೆ, ಮಲದಲ್ಲಿ ರಕ್ತ ಕಾಣಿಸಿದರೆ, ತೀವ್ರ ಹೊಟ್ಟೆನೋವು ಅಥವಾ ವಾಂತಿ ಕಂಡುಬಂದರೆ, ತೂಕ ಅನಿರೀಕ್ಷಿತವಾಗಿ ಕಡಿಮೆಯಾಗುತ್ತಿದ್ದರೆ, ನಿರಂತರವಾಗಿ ಲ್ಯಾಕ್ಸೇಟಿವ್ ಬಳಸಬೇಕಾದ ಪರಿಸ್ಥಿತಿಯಂತಹ ಲಕ್ಷಣಗಳು ಕಂಡುಬಂದರೆ ಗ್ಯಾಸ್ಟ್ರೋಎಂಟರಾಲಜಿಸ್ಟ್‌ರನ್ನು ಸಂಪರ್ಕಿಸುವುದು ಅಗತ್ಯ.
ಸೂಚನೆ: ಈ ಲೇಖನವು ಆರೋಗ್ಯ ಜಾಗೃತಿಗಾಗಿ ಮಾತ್ರ. ಯಾವುದೇ ಔಷಧಿ ಅಥವಾ ಆಯುರ್ವೇದ ಉತ್ಪನ್ನಗಳನ್ನು ವೈದ್ಯರ ಸಲಹೆಯಿಲ್ಲದೆ ನಿಯಮಿತವಾಗಿ ಸೇವಿಸಬೇಡಿ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 8:54 pm, Sun, 19 July 26