
ತಲೆನೋವನ್ನು (Headache) ಎಲ್ಲರೂ ಒಂದಲ್ಲ ಒಂದು ಹಂತದಲ್ಲಿ ಅನುಭವಿಸಿರುತ್ತಾರೆ. ಇದೊಂದು ಸಾಮಾನ್ಯ ಸಮಸ್ಯೆ. ಈ ರೀತಿ ಆಗಾಗ, ಬರುವ ತಲೆನೋವು ಬಹಳ ಸಾಮಾನ್ಯ ಎಂದು ಅಂದುಕೊಳ್ಳುತ್ತಾರೆ. ಅದಕ್ಕಾಗಿಯೇ ನೋವು ನಿವಾರಕ ಮಾತ್ರೆ ತೆಗೆದುಕೊಂಡು ಅಥವಾ ಸ್ವಲ್ಪ ವಿಶ್ರಾಂತಿ ಪಡೆದು ಅದನ್ನು ಕಡಿಮೆ ಮಾಡಿಕೊಳ್ಳುತ್ತಾರೆ. ಆದರೆ ತಲೆನೋವು ಪದೇ ಪದೇ ಬಂದಾಗ, ತುಂಬಾ ತೀವ್ರವಾಗಿದ್ದರೆ ಅಥವಾ ದಿನನಿತ್ಯದ ಕೆಲಸಗಳನ್ನು ಮಾಡಲು ಸಾಧ್ಯವಾಗದಿದ್ದಾಗ ಈ ನೋವನ್ನು ಹಗುರವಾಗಿ ಪರಿಗಣಿಸುವುದು ಸರಿಯಲ್ಲ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಏಕೆಂದರೆ ಈ ರೀತಿಯ ನೋವು ಮೈಗ್ರೇನ್‌ನ (Migraine) ಒಂದು ರೂಪವೂ ಆಗಿರಬಹುದು. ಹಾಗಾದರೆ ಮೈಗ್ರೇನ್ ಮತ್ತು ಸಾಧಾರಣ ತಲೆನೋವಿಗೂ ಇರುವ ವ್ಯತ್ಯಾಸವೇನು, ಈ ರೀತಿ ಸಮಸ್ಯೆ ಕಂಡುಬರುವುದಕ್ಕೆ ಕಾರಣಗಳೇನು, ಇದನ್ನು ತಡೆಗಟ್ಟಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಲೇಡಿ ಹಾರ್ಡಿಂಗ್ ಆಸ್ಪತ್ರೆಯ ವೈದ್ಯಕೀಯ ವಿಭಾಗದ ನಿರ್ದೇಶಕರಾದ ಡಾ. ಎಲ್.ಎಚ್. ಘೋಟೇಕರ್ ಹೇಳುವ ಪ್ರಕಾರ, ಮೈಗ್ರೇನ್ ಮತ್ತು ಸಾಮಾನ್ಯ ತಲೆನೋವಿಗಿರುವ ದೊಡ್ಡ ವ್ಯತ್ಯಾಸವೆಂದರೆ ನೋವಿನ ಸ್ವರೂಪ ಮತ್ತು ಪರಿಣಾಮ. ಸಾಮಾನ್ಯ ತಲೆನೋವು ಸಾಮಾನ್ಯವಾಗಿ ಸೌಮ್ಯವಾಗಿದ್ದು ತಲೆ ಅಥವಾ ಹಣೆಯ ಮೇಲೆ ಒತ್ತಡವಾದಂತೆ ಅನಿಸುತ್ತದೆ. ಇದು ಆಯಾಸ, ಒತ್ತಡ, ನಿದ್ರೆಯ ಕೊರತೆ ಅಥವಾ ದೀರ್ಘಕಾಲದ ಸ್ಕ್ರೀನ್ ಸಮಯದಿಂದ ಉಂಟಾಗಬಹುದು. ಮತ್ತೊಂದೆಡೆ, ಮೈಗ್ರೇನ್ ನೋವು ಹೆಚ್ಚಾಗಿ ತೀಕ್ಷ್ಣವಾಗಿರುತ್ತದೆ ಮತ್ತು ತಲೆಯ ಒಂದು ಬದಿಯಲ್ಲಿ ನೋವಿರುತ್ತದೆ. ಮೈಗ್ರೇನ್ ತಲೆನೋವಿನ ಜೊತೆಗೆ ವಾಂತಿ, ವಾಕರಿಕೆಯನ್ನು ಉಂಟುಮಾಡಬಹುದು. ಅದಲ್ಲದೆ ಈ ನೋವು ಹಲವಾರು ದಿನಗಳವರೆಗೆ ಇರುತ್ತದೆ, ಆದರೆ ಸಾಮಾನ್ಯ ತಲೆನೋವನ್ನು ವಿಶ್ರಾಂತಿ ಅಥವಾ ಔಷಧಿಗಳಿಂದ ನಿವಾರಿಸಬಹುದು, ಮೈಗ್ರೇನ್‌ಗೆ ವಿಶೇಷ ಚಿಕಿತ್ಸೆ ಮತ್ತು ಮುನ್ನೆಚ್ಚರಿಕೆಗಳು ಬೇಕಾಗುತ್ತವೆ. ಅದಕ್ಕಾಗಿಯೇ ಎರಡರ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಜೀವನಶೈಲಿಯ ಬದಲಾವಣೆಗಳನ್ನು ಮಾಡಿಕೊಳ್ಳುವ ಮೂಲಕ ಮೈಗ್ರೇನ್ ತಡೆಗಟ್ಟಬಹುದು. ಪ್ರತಿನಿತ್ಯ ಸರಿಯಾಗಿ ನಿದ್ರೆ ಮಾಡುವ ಮೂಲಕ ಸರಿಯಾದ ವೇಳಾಪಟ್ಟಿಯನ್ನು ಕಾಪಾಡಿಕೊಳ್ಳಬೇಕಾಗುತ್ತದೆ. ಪ್ರಕಾಶಮಾನವಾದ ಬೆಳಕು, ಜೋರಾಗಿ ಬರುವ ಶಬ್ದ ಮತ್ತು ಅತಿಯಾಗಿ ಮೊಬೈಲ್ ಅಥವಾ ಟಿವಿ ನೋಡುವುದನ್ನು ಕಡಿಮೆ ಮಾಡಿ. ಹೆಚ್ಚಿನ ಒತ್ತಡ ಮೈಗ್ರೇನ್ ಹೆಚ್ಚಿಸುತ್ತದೆ, ಹಾಗಾಗಿ ಯೋಗ, ಧ್ಯಾನ ಮತ್ತು ಆಳವಾದ ಉಸಿರಾಟವನ್ನು ಅಭ್ಯಾಸ ಮಾಡಿ. ಅದೆಲ್ಲದರ ಜೊತೆಗೆ ದೀರ್ಘಕಾಲ ಹಸಿವಿನಿಂದ ಇರಬೇಡಿ. ಸಮತೋಲಿತ ಆಹಾರ ಸೇವನೆ ಮಾಡಿ. ಕೆಫೀನ್, ಕರಿದ ಮತ್ತು ಸಂಸ್ಕರಿಸಿದ ಆಹಾರಗಳ ಸೇವನೆಯನ್ನು ಕಡಿಮೆ ಮಾಡಿ. ಅಗತ್ಯವಿದ್ದರೆ ವೈದ್ಯರು ಸೂಚಿಸಿದಂತೆ ಔಷಧಿಗಳನ್ನು ತೆಗೆದುಕೊಳ್ಳಿ.
ಇದನ್ನೂ ಓದಿ: ಸಣ್ಣ ತಲೆನೋವು ಎಂದು ನಿರ್ಲಕ್ಷ್ಯ ಮಾಡಿದರೆ ದೃಷ್ಟಿ ಕಳೆದುಕೊಳ್ಳಬೇಕಾದೀತು ಎಚ್ಚರ!
ಸಾಮಾನ್ಯ ತಲೆನೋವನ್ನು ತಡೆಗಟ್ಟಲು, ದೈನಂದಿನ ಅಭ್ಯಾಸಗಳ ಬಗ್ಗೆ ಗಮನ ಹರಿಸುವುದು ಬಹಳ ಮುಖ್ಯ. ಜೊತೆಗೆ ನಿರ್ಜಲೀಕರಣವು ತಲೆನೋವಿಗೆ ಕಾರಣವಾಗುವುದರಿಂದ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಿ. ಮೊಬೈಲ್ ಅಥವಾ ಕಂಪ್ಯೂಟರ್ ಅನ್ನು ದೀರ್ಘಕಾಲ ನೋಡುವುದನ್ನು ತಪ್ಪಿಸಿ ಮತ್ತು ಕಣ್ಣುಗಳಿಗೆ ನಿಯಮಿತವಾಗಿ ವಿಶ್ರಾಂತಿ ನೀಡಿ. ಒತ್ತಡವನ್ನು ಕಡಿಮೆ ಮಾಡಿ ಮತ್ತು ಲಘು ವ್ಯಾಯಾಮ ಮಾಡಿ. ಸರಿಯಾದ ಭಂಗಿಯಲ್ಲಿ ಕುಳಿತುಕೊಳ್ಳಿ ಮತ್ತು ಕುತ್ತಿಗೆ, ಭುಜಗಳ ಮೇಲೆ ಹೆಚ್ಚು ಒತ್ತಡ ಹೇರುವುದನ್ನು ತಪ್ಪಿಸಿ. ಸಮಯಕ್ಕೆ ಸರಿಯಾಗಿ ಆಹಾರ ಸೇವನೆ ಮಾಡುವುದನ್ನು ಮತ್ತು ಸರಿಯಾಗಿ ನಿದ್ರೆ ಮಾಡುವುದರಿಂದ ತಲೆನೋವನ್ನು ತಡೆಯಬಹುದು. ತಲೆನೋವು ಆಗಾಗ ಬರುತ್ತಿದ್ದರೆ, ವೈದ್ಯರನ್ನು ಸಂಪರ್ಕಿಸುವುದು ಉತ್ತಮ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ