ಮನುಷ್ಯನಿಗೆ ಹಂದಿ ಮೂತ್ರಪಿಂಡ ಕಸಿ; ಕಿಡ್ನಿ ರೋಗಿಗಳಿಗೆ ಭರವಸೆಯ ಬೆಳಕಾಗಬಹುದೇ ಈ ಪ್ರಯತ್ನ?
ಅಮೆರಿಕದಲ್ಲಿ ವ್ಯಕ್ತಿಯೊಬ್ಬರಿಗೆ ಹಂದಿಯ ಮೂತ್ರಪಿಂಡ ಕಸಿ ಮಾಡಲಾಗಿದೆ. ಮಾರ್ಪಡಿಸಿದ ಹಂದಿಯ ಮೂತ್ರಪಿಂಡವನ್ನು ಜೀವಂತ ಮನುಷ್ಯನಿಗೆ ಅಳವಡಿಸಿದ್ದು, ಆ ರೋಗಿ ಚೇತರಿಸಿಕೊಂಡಿದ್ದಾರೆ. ಇದು ಕ್ಸೆನೋಟ್ರಾನ್ಸ್ಪ್ಲಾಂಟೇಶನ್ನಲ್ಲಿ ಮೈಲುಗಲ್ಲು ಎಂದೇ ಹೇಳಬಹುದು. ಈ ರೀತಿಯ ಬೆಳವಣಿಗೆ ,ಮೂತ್ರಪಿಂಡದ ಕಾಯಿಲೆ ಹೊಂದಿರುವ, ಮೂತ್ರಪಿಂಡದ ಕಸಿಗಾಗಿ ಕಾಯುತ್ತಿರುವ ರೋಗಿಗಳಿಗೆ ಭರವಸೆಯಾಗಬಲ್ಲುದೇ? ಈ ಬಗ್ಗೆ ಇಲ್ಲಿದೆ ಮಾಹಿತಿ

ಮನುಷ್ಯನ ದೇಹಕ್ಕೆ ಇನ್ನೊಂದು ಪ್ರಾಣಿಯ ಅಂಗವನ್ನು ಕಸಿ ಮಾಡಬಹುದೆ? ಹಾಗೆ ಮಾಡಿದರೆ ತೊಂದರೆಯಾಗಲ್ವಾ ಎಂಬ ಪ್ರಶ್ನೆ ಮನಸ್ಸಿನಲ್ಲಿ ಮೂಡದೇ ಇರದು. ಆದರೆ ವೈದ್ಯ ಜಗತ್ತು ಇದು ಸಾಧ್ಯ ಎಂಬುದನ್ನು ತೋರಿಸಿಕೊಟ್ಟಿದೆ. ಇದನ್ನೇ ವೈದ್ಯಕೀಯ ಭಾಷೆಯಲ್ಲಿ ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್ ಅಂತಾರೆ. ಇತ್ತೀಚೆಗೆ ಮ್ಯಾಸಚೂಸೆಟ್ಸ್ ಜನರಲ್ ಆಸ್ಪತ್ರೆಯ ವೈದ್ಯರು ಯಶಸ್ವಿಯಾಗಿ ಹಂದಿಯ ಮೂತ್ರಪಿಂಡವನ್ನು (ಕಿಡ್ನಿ) 62 ವರ್ಷ ವಯಸ್ಸಿನ ರೋಗಿಗೆ ಕಸಿ ಮಾಡಿದ್ದಾರೆ. ಇದು ಕ್ಸೆನೋಟ್ರಾನ್ಸ್‌ಪ್ಲಾಂಟೇಶನ್ ಕ್ಷೇತ್ರದಲ್ಲಿನ ಮಹತ್ತರ ಹೆಜ್ಜೆಯಾಗಿದೆ. ತಳೀಯವಾಗಿ ಮಾರ್ಪಡಿಸಿದ ಹಂದಿಯ ಮೂತ್ರಪಿಂಡವನ್ನು ಜೀವಂತ ವ್ಯಕ್ತಿಗೆ ಕಸಿ ಮಾಡಿದ ಮೊದಲ ನಿದರ್ಶನ ಇದಾಗಿದ್ದು, ಕಸಿ ಸ್ವೀಕರಿಸಿದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಅವರ ಆರೋಗ್ಯವೂ ಚೆನ್ನಾಗಿದೆ ಎಂದು ಮೂಲಗಳು ಹೇಳಿವೆ. ಪ್ರಾಣಿಗಳಿಂದ ಪಡೆವ ಈ ಅಂಗಾಂಗ ‘ಕಸಿ’ ಬಗ್ಗೆ, ಸವಾಲು ಮತ್ತು ಸಾಧ್ಯತೆಗಳ ಬಗ್ಗೆ ಮತ್ತಷ್ಟು ತಿಳಿಯೋಣ ಬನ್ನಿ. ಮೊದ ಮೊದಲು ಈ ಕಸಿ ಮಾಡುವ ಪ್ರಕ್ರಿಯೆ ಹೇಗಿರುತ್ತಿತ್ತು ಎಂದರೆ ಹಂದಿಯ ಮೂತ್ರಪಿಂಡಗಳನ್ನು ತಾತ್ಕಾಲಿಕವಾಗಿ ಮಿದುಳು-ಸತ್ತ ರೋಗಿಗಳಿಗೆ ಕಸಿ ಮಾಡಲಾಗುತ್ತಿತ್ತು. ಆದರೆ ಇಲ್ಲಿ ಹಿಂದಿನ ಪ್ರಯತ್ನಗಳಿಗಿಂತ ಭಿನ್ನವಾಗಿ ಬದುಕಿರುವ ವ್ಯಕ್ತಿಗೇ ಕಸಿ ಮಾಡಲಾಗಿದೆ. ಈ ಪ್ರಾಯೋಗಿಕ ಕಸಿ ಸ್ವೀಕರಿಸಿದವರು ಮ್ಯಾಸಚೂಸೆಟ್ಸ್ ವೇಮೌತ್‌ನ ರಿಚರ್ಡ್ “ರಿಕ್” ಸ್ಲೇಮನ್. 2018 ರಲ್ಲಿ ಅದೇ ಆಸ್ಪತ್ರೆಯಲ್ಲಿ ಮೂತ್ರಪಿಂಡ ಕಸಿ ಮಾಡಿಸಿಕೊಂಡ ಸ್ಲೇಮನ್, ಕಳೆದ ವರ್ಷ ಸಮಸ್ಯೆಗಳನ್ನು ಎದುರಿಸಿದರು. ಸಾಂಪ್ರದಾಯಿಕ ಚಿಕಿತ್ಸಾ ಆಯ್ಕೆಗಳು ಕ್ಷೀಣಿಸಿದಾಗ, ಅವರ ವೈದ್ಯರು ಹಂದಿ ಮೂತ್ರಪಿಂಡ ಕಸಿ ಮಾಡುವ ಬಗ್ಗೆ ಪ್ರಸ್ತಾಪಿಸಿದ್ದರು. ತನ್ನ ನಿರ್ಧಾರದ ಕುರಿತು ಮಾತನಾಡುತ್ತಾ, ಸ್ಲೇಮನ್ ತನ್ನ ಸ್ವಂತ ಚೇತರಿಕೆಗೆ ಮಾತ್ರವಲ್ಲದೆ ಜೀವ ಉಳಿಸುವ ಕಸಿಗಾಗಿ ಕಾಯುತ್ತಿರುವ...



