ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಗೆ ಆಹಾರ ಮಾತ್ರವಲ್ಲ, ನಿಮ್ಮ ಈ ಅಭ್ಯಾಸಗಳು ಕಾರಣವಾಗಿರಬಹುದು!
ಹೊಟ್ಟೆಯಲ್ಲಿ ಗ್ಯಾಸ್ ಆಗುವುದು ಅನೇಕರು ಅನುಭವಿಸುತ್ತಿರುವ ಸಾಮಾನ್ಯ ಸಮಸ್ಯೆಗಳಲ್ಲಿ ಒಂದಾಗಿದ್ದು ಉಬ್ಬುವುದು, ಭಾರವಾಗುವುದು ಮತ್ತು ಅಸ್ವಸ್ಥತೆಯಂತಹ ಲಕ್ಷಣಗಳು ಕಂಡುಬರಬಹುದು. ಅನೇಕರು ಈ ರೀತಿಯಾಗುವುದಕ್ಕೆ ಆಹಾರ ಮತ್ತು ಪಾನೀಯಗಳು ಮಾತ್ರ ಕಾರಣ ಎಂದು ಅಂದುಕೊಳ್ಳುತ್ತಾರೆ. ಆದರೆ ಹಲವು ಬಾರಿ ನಮ್ಮ ದೈನಂದಿನ ಅಭ್ಯಾಸಗಳು ಸಹ ಇದಕ್ಕೆ ಕಾರಣವಾಗಿರಬಹುದು. ಹಾಗಾದರೆ ಯಾವ ಅಭ್ಯಾಸಗಳು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ದೂರವಿರಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುತ್ತಾರೆ. ಹೆಚ್ಚಿನವರಿಗೆ ಗ್ಯಾಸ್ ಆಗುವುದು (Stomach Gas Problems), ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳಿಂದ ಬಳಲುತ್ತಾರೆ. ಸಾಮಾನ್ಯವಾಗಿ ಜನ ಈ ರೀತಿಯಾಗುವುದಕ್ಕೆ ಕೇವಲ ಆಹಾರ ಕಾರಣ ಎಂದು ಭಾವಿಸುತ್ತಾರೆ. ಆದರೆ ತಜ್ಞರ ಪ್ರಕಾರ, ನಮ್ಮ ದೈನಂದಿನ ಕೆಲವು ಕೆಟ್ಟ ಅಭ್ಯಾಸಗಳೂ ಕೂಡ ಈ ಸಮಸ್ಯೆಗೆ ಪ್ರಮುಖ ಕಾರಣವಾಗಬಹುದು. ಜೀರ್ಣಾಂಗ ವ್ಯವಸ್ಥೆ ನಮ್ಮ ದೇಹದ ಪ್ರಮುಖ ಭಾಗವಾಗಿದ್ದು, ಆಹಾರವನ್ನು ಜೀರ್ಣಿಸಿ ಪೋಷಕಾಂಶಗಳನ್ನು ದೇಹಕ್ಕೆ ತಲುಪಿಸುವ ಕೆಲಸ ಮಾಡುತ್ತದೆ. ಜೀರ್ಣಕ್ರಿಯೆಯಲ್ಲಿ ವ್ಯತ್ಯಯ ಉಂಟಾದರೆ ಗ್ಯಾಸ್, ಹೊಟ್ಟೆ ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಕಾಣಿಸಬಹುದು. ಹಲವರು ಈ ಲಕ್ಷಣಗಳನ್ನು ಸಾಮಾನ್ಯವೆಂದು ನಿರ್ಲಕ್ಷಿಸುತ್ತಾರೆ. ಆದರೆ ಈ ಸಮಸ್ಯೆ ಪದೇಪದೇ ಕಂಡುಬರುತ್ತಿದ್ದರೆ ಅದರ ಹಿಂದಿರುವ ಕಾರಣಗಳನ್ನು ಅರಿಯುವುದು ಅಗತ್ಯ. ಹಾಗಾದರೆ ಯಾವ ಅಭ್ಯಾಸಗಳು ಗ್ಯಾಸ್ಟ್ರಿಕ್ ಸಮಸ್ಯೆಗೆ ಕಾರಣವಾಗುತ್ತದೆ, ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ದೂರವಿರಲು ಏನು ಮಾಡಬಹುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಯಾವ ಅಭ್ಯಾಸಗಳಿಂದ ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಉಂಟಾಗಬಹುದು?
ನೋಯ್ಡಾದ ಫೋರ್ಟಿಸ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾಗದ ನಿರ್ದೇಶಕ ಡಾ. ಮಹೇಶ್ ಗುಪ್ತ ಅವರು ಹೇಳುವ ಪ್ರಕಾರ, ಅಸಮರ್ಪಕ ಜೀವನಶೈಲಿ ಮತ್ತು ಆಹಾರ ಪದ್ಧತಿ ಸರಿಯಾಗಿ ಇಲ್ಲದಿರುವುದು ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆಯನ್ನು ಹೆಚ್ಚಿಸಬಹುದು. ಸಮಯಕ್ಕೆ ಸರಿಯಾಗಿ ಊಟ ಮಾಡದೇ ಇರುವುದು, ಎರಡು ಊಟಗಳ ನಡುವೆ ಹೆಚ್ಚು ಅಂತರ ಮತ್ತು ಬೇಗ ಬೇಗನೆ ಊಟ ಮಾಡುವ ಅಭ್ಯಾಸಗಳು ಜೀರ್ಣಕ್ರಿಯೆಗೆ ತೊಂದರೆ ಉಂಟುಮಾಡಬಹುದು. ಇದಲ್ಲದೆ ಫಾಸ್ಟ್ ಫುಡ್, ಮೈದಾ ಪದಾರ್ಥಗಳು, ಅತಿಯಾಗಿ ಮಸಾಲೆ ಹಾಗೂ ಎಣ್ಣೆಯಲ್ಲಿ ತಯಾರಿಸಿದ ಆಹಾರಗಳನ್ನು ಹೆಚ್ಚಾಗಿ ಸೇವಿಸುವುದರಿಂದ ಕೆಲವರಲ್ಲಿ ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಹೆಚ್ಚಾಗಬಹುದು. ಜೊತೆಗೆ ಹೊಟ್ಟೆಯಲ್ಲಿರುವ ಒಳ್ಳೆಯ ಮತ್ತು ಕೆಟ್ಟ ಬ್ಯಾಕ್ಟೀರಿಯಾದ ಸಮತೋಲನ ಹದಗೆಡುವ “ಇಂಟೆಸ್ಟೈನಲ್ ಡಿಸ್ಬಯೋಸಿಸ್” ಸಮಸ್ಯೆಯೂ ಇದಕ್ಕೆ ಕಾರಣವಾಗಬಹುದು. ಗಟ್ ಮೈಕ್ರೋಬಿಯೊಮ್ ಸಮತೋಲನ ತಪ್ಪಿದಾಗ ಜೀರ್ಣಕ್ರಿಯೆ ದುರ್ಬಲವಾಗುತ್ತದೆ ಮತ್ತು ಹೊಟ್ಟೆ ಸಂಬಂಧಿತ ಸಮಸ್ಯೆಗಳು ಹೆಚ್ಚಾಗಬಹುದು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಗ್ಯಾಸ್ಟ್ರಿಕ್, ಅಸಿಡಿಟಿಯಿಂದ ದಿನಪೂರ್ತಿ ಹಿಂಸೆ ಪಡುತ್ತಿದ್ದೀರಾ? ಹಾಗಿದ್ರೆ ತಪ್ಪದೆ ಈ ಅಭ್ಯಾಸಗಳನ್ನು ಮಾಡಿ
ಯಾವ ಲಕ್ಷಣಗಳು ಕಂಡುಬಂದರೆ ವೈದ್ಯರನ್ನು ಸಂಪರ್ಕಿಸಬೇಕು?
ಹೊಟ್ಟೆಯಲ್ಲಿ ಗ್ಯಾಸ್ ಸಮಸ್ಯೆ ಪದೇಪದೇ ಕಾಣಿಸಿಕೊಂಡು ಅದರ ಜೊತೆಗೆ ನಿರಂತರ ಹೊಟ್ಟೆನೋವು, ತೀವ್ರ ಹೊಟ್ಟೆ ಉಬ್ಬರ, ತೂಕ ಇಳಿಯುವುದು, ವಾಂತಿ ಅಥವಾ ಮಲವಿಸರ್ಜನೆ ಕ್ರಮದಲ್ಲಿ ಬದಲಾವಣೆ ಕಂಡುಬಂದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಅಗತ್ಯ. ಸಮಸ್ಯೆ ದೀರ್ಘಕಾಲ ಮುಂದುವರಿದು ದೈನಂದಿನ ಜೀವನದ ಮೇಲೆ ಪರಿಣಾಮ ಬೀರುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಸಮಯಕ್ಕೆ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳುವುದರಿಂದ ಮೂಲ ಕಾರಣ ಪತ್ತೆಹಚ್ಚಲು ಸಹಾಯವಾಗುತ್ತದೆ.
ಗ್ಯಾಸ್ ಮತ್ತು ಹೊಟ್ಟೆ ಉಬ್ಬರ ಸಮಸ್ಯೆಯಿಂದ ಹೇಗೆ ದೂರವಿರಬಹುದು?
ಜೀರ್ಣಕ್ರಿಯೆ ಸುಧಾರಿಸಲು ಸಮಯಕ್ಕೆ ಸರಿಯಾಗಿ ಊಟ ಮಾಡುವುದು ಮತ್ತು ಆಹಾರವನ್ನು ಚೆನ್ನಾಗಿ ಜಗಿದು ತಿನ್ನುವುದು ಮುಖ್ಯ. ಸಾಕಷ್ಟು ನೀರು ಕುಡಿಯಬೇಕು ಮತ್ತು ಆಹಾರದಲ್ಲಿ ಹಣ್ಣು, ತರಕಾರಿ ಹಾಗೂ ಫೈಬರ್ ಸಮೃದ್ಧ ಆಹಾರಗಳ ಸೇವನೆ ಮಾಡಬೇಕು. ನಿಯಮಿತ ವ್ಯಾಯಾಮ ಮಾಡುವುದು, ಜಂಕ್ ಫುಡ್ ಮತ್ತು ಹೆಚ್ಚು ಮಸಾಲೆಯ ಆಹಾರವನ್ನು ಕಡಿಮೆ ಮಾಡುವುದು ಸಹ ಉಪಯುಕ್ತ. ಆರೋಗ್ಯಕರ ಜೀವನಶೈಲಿ ಮತ್ತು ಸಮತೋಲನ ಆಹಾರ ಪದ್ಧತಿ ಜೀರ್ಣಾಂಗ ವ್ಯವಸ್ಥೆಯನ್ನು ಉತ್ತಮವಾಗಿಡಲು ಸಹಾಯ ಮಾಡುತ್ತದೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




