Alalekayi: ಏನಿದು ಅಳಲೆ ಕಾಯಿ ಪಾಂಡಿತ್ಯ? ತಿಳಿಯಿರಿ, ಆಯುರ್ವೇದ ವೈದ್ಯಶಾಸ್ತ್ರದ ಸಂಪತ್ತು ಈ ಅಳಲೆ ಕಾಯಿ!

TV9 Digital Desk

| Edited By: ಸಾಧು ಶ್ರೀನಾಥ್​

Updated on: May 19, 2022 | 6:06 AM

ಅಳಲೆ ಕಾಯಿ ಆಯುರ್ವೇದ ದಲ್ಲಿ ಬಹಳ ಪ್ರಮುಖವಾದ ಸಸ್ಯವಾಗಿದೆ. ಇದನ್ನು ಉಪಯೋಗಿಸುವ ಕ್ರಮವನ್ನು ಚೆನ್ನಾಗಿ ತಿಳಿದವರನ್ನು "ಅಳಲೆ ಕಾಯಿ ಪಂಡಿತ " ಎಂದು ಕರೆಯುವರು. ದೇವೇಂದ್ರನು ಅಮೃತ ಪಾನ ಮಾಡುತ್ತಿದ್ದಾಗ ಬಿದ್ದ ಮೂರು ಹನಿಗಳೇ ಪೃಥ್ವಿಯ ಮೇಲೆ ತ್ರಿ ಫಲಾ (ಅಳಲೆ ಕಾಯಿ, ತಾರೆ ಕಾಯಿ, ನೆಲ್ಲಿ ಕಾಯಿ) ರೂಪ ತಾಳಿದವೆಂದು ವರ್ಣಿಸಲಾಗಿದೆ.

Alalekayi: ಏನಿದು  ಅಳಲೆ ಕಾಯಿ ಪಾಂಡಿತ್ಯ? ತಿಳಿಯಿರಿ, ಆಯುರ್ವೇದ ವೈದ್ಯಶಾಸ್ತ್ರದ ಸಂಪತ್ತು ಈ ಅಳಲೆ ಕಾಯಿ!
ಏನಿದು ಅಳಲೆ ಕಾಯಿ ಪಾಂಡಿತ್ಯ? ತಿಳಿಯಿರಿ, ಆಯುರ್ವೇದ ವೈದ್ಯಶಾಸ್ತ್ರದ ಸಂಪತ್ತು ಈ ಅಳಲೆ ಕಾಯಿ!

ಕನ್ನಡ ಭಾಷೆಯಲ್ಲಿ ಅಳಲೆ ಕಾಯಿ , ಅಣಲೆ ಕಾಯಿ, ಕರಕ ಕಾಯಿ , ಹರೀತಕಿ. ಹಿಂದಿ ಭಾಷೆಯಲ್ಲಿ ಹರಡ. ಸಂಸ್ಕೃತ ಭಾಷೆಯಲ್ಲಿ ಅಮೃತಾ, ಅಭಯಾ, ವಿಜಯಾ (Terminalia chebula, Black myrobalan)ಎಂದು ಕರೆಯುತ್ತಾರೆ. ಅಳಲೆ ಕಾಯಿ ಆಯುರ್ವೇದ ದಲ್ಲಿ ಬಹಳ ಪ್ರಮುಖವಾದ ಸಸ್ಯವಾಗಿದೆ. ಇದನ್ನು ಉಪಯೋಗಿಸುವ ಕ್ರಮವನ್ನು ಚೆನ್ನಾಗಿ ತಿಳಿದವರನ್ನು “ಅಳಲೆ ಕಾಯಿ ಪಂಡಿತ ” ಎಂದು ಕರೆಯುವರು. ಇದು ಹಸಿರು ಬಣ್ಣದಿಂದ ಕೂಡಿರುವುದರಿಂದ ಹರೀತಕಿ ಎಂದೂ ಕರೆಯುತ್ತಾರೆ.

ದೇವೇಂದ್ರನು ಅಮೃತ ಪಾನ ಮಾಡುತ್ತಿದ್ದಾಗ ಬಿದ್ದ ಮೂರು ಹನಿಗಳೇ ಪೃಥ್ವಿಯ ಮೇಲೆ ತ್ರಿ ಫಲಾ (ಅಳಲೆ ಕಾಯಿ, ತಾರೆ ಕಾಯಿ, ನೆಲ್ಲಿ ಕಾಯಿ) ರೂಪ ತಾಳಿದವೆಂದು ವರ್ಣಿಸಲಾಗಿದೆ. ಇದಲ್ಲದೇ ಪಾರಂಪರಿಕ ಚಿಕಿತ್ಸಕರು, ನುರಿತ ನಾಟಿ ವೈದ್ಯರು ಮೂಲವ್ಯಾಧಿ, ಗಳಗಂಡ, ಕಾಮಾಲೆ, ಬಾವು ನೋವು, ಕ್ಷಯ ರೋಗದಲ್ಲಿ ಅಳಲೆ ಕಾಯಿ ಬಳಸಿ ಔಷಧೋಪಚಾರ ನೀಡುತ್ತಾರೆ (Alalekayi fruit health benefits).

ಇದರಲ್ಲಿ “ಛೋಟಿ ಹರಡ” ಮತ್ತು “ಬಡಿ ಹರಡ” ಎಂಬ ಎರಡು ವಿಧದಲ್ಲಿರುತ್ತವೆ. ಇದು ಒಂದೇ ಹಣ್ಣಿನ ಎರಡು ಹಂತಗಳು ಛೋಟಿ ಅಂದರೆ ಎಳೆಯ ಅಳಲೆ ಕಾಯಿ ಔಷಧಿಯಲ್ಲಿ ಬಳಸುತ್ತಾರೆ. ಬಲಿತ ಕಾಯಿಗಳನ್ನು ಚರ್ಮವನ್ನು ಹದಗೊಳಿಸಲು ಬಳಸುತ್ತಾರೆ. ಒಗರು ಮಿಶ್ರಿತ ರುಚಿಯನ್ನು ಹೊಂದಿರುವ ಅಳಲೆ ಕಾಯಿ “ತ್ರಿ ಫಲಾ ಚೂರ್ಣ” ದಲ್ಲಿ ಪ್ರಮುಖ ಘಟಕವಾಗಿದೆ. ಅಳಲೆಕಾಯಿ ಸರ್ವ ರೋಗ ನಿವಾರಕ ವಾಗಿ ಕೆಲಸ ಮಾಡುತ್ತದೆ.

* ಅಳಲೆ ಕಾಯಿ ಅಗಿದು ತಿಂದರೆ ಜಠರಾಗ್ನಿಯನ್ನು ಉದ್ದೀಪನಗೊಳಿಸಿ ಹಸಿವನ್ನು ಹೆಚ್ಚಿಸುತ್ತದೆ. * ತೇಯ್ದು ಉಪಯೋಗಿಸಿದರೆ ಮಲಬದ್ಧತೆ ನಿವಾರಣೆಯಾಗುತ್ತದೆ. * ಬೆಲ್ಲದೊಂದಿಗೆ ಸೇವಿಸಿದರೆ ತ್ರಿದೋಷಗಳ ನಿವಾರಣೆ. * ಒಣ ಶುಂಠಿಯೊಂದಿಗೆ ಸೇವಿಸಿದರೆ ಕಫ ನಿವಾರಣೆ. * ತುಪ್ಪ ಬೆರೆಸಿ ಸೇವಿಸಿದರೆ ಪಿತ್ತ ನಿವಾರಣೆ. * ಸೈಂಧವಲವಣ ಸೇರಿಸಿ ಸೇವಿಸಿದರೆ ವಾತ ನಿವಾರಣೆ * ಅಳಲೆ ಕಾಯಿ ಬೇಯಿಸಿ ತಿಂದರೆ ಅತಿಸಾರ ನಿವಾರಣೆ ಆಗುತ್ತದೆ. * ಅಳಲೆ ಕಾಯಿ ಚೂರ್ಣ ಒಣ ಶುಂಠಿ ಸೇರಿಸಿ ಕಷಾಯ ತಯಾರಿಸಿ ಆರಿದ ನಂತರ ಜೇನು ಬೆರೆಸಿ ಕುಡಿದರೆ ಕೆಮ್ಮು ಕಫ ನಿವಾರಣೆ ಆಗುತ್ತದೆ. * ಕಾಲಿನ ಬೆರಳುಗಳ ನಡುವೆ ಕಾಲು ಉರಿಯಾದರೆ ಅಳಲೆ ಕಾಯಿ ಚೂರ್ಣ ಅಥವಾ ತ್ರಿ ಫಲಾ ಚೂರ್ಣ ಹಚ್ಚಬಹುದು. * ಅಳಲೆ ಕಾಯಿ ಚೂರ್ಣ, ನೆಗ್ಗಿಲು ಮುಳ್ಳಿನ ಚೂರ್ಣದ ಕಷಾಯ ತಯಾರಿಸಿ ಜೇನು ಬೆರೆಸಿ ಸೇವಿಸಿದರೆ ಮೂತ್ರ ಕೃಚ್ಛದಲ್ಲಿ ಉಪಯುಕ್ತ. * ಅಳಲೆ ಕಾಯಿ ಚೂರ್ಣ ಅಥವಾ ತ್ರಿ ಫಲಾ ಚೂರ್ಣ ದಿಂದ ಹಲ್ಲು ಉಜ್ಜಿದರೆ ಹಲ್ಲು ವಸಡುಗಳಿಗೆ ಉತ್ತಮ ಹಾಗೂ ಬಾಯಿಯ ದುರ್ಗಂಧ ದೂರವಾಗುತ್ತದೆ. (ಮಾಹಿತಿ ಸಂಗ್ರಹ- ಎಸ್ ​ಹೆಚ್​ ನದಾಫ್)

ಆರೋಗ್ಯ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada