ಜನರಿಗೆ ಬೇಕು ಆರೋಗ್ಯವಂತ ದೀರ್ಘಾಯಸ್ಸು; ವೈದ್ಯಕೀಯ ಕ್ಷೇತ್ರದಿಂದ ಸಿಗುವ ನೆರವೇನು? ದಕ್ಷಿಣ್ ಹೆಲ್ತ್​ಕೇರ್ ಸಮಿಟ್ ಮುಖ್ಯಾಂಶಗಳಿವು

Dakshin Healthcare Summit 2024: ಟಿವಿ9 ನೆಟ್ವರ್ಕ್, ಸೌತ್ ಫಸ್ಟ್ ಸಂಸ್ಥೆಗಳು ಜಂಟಿಯಾಗಿ ‘ದಕ್ಷಿಣ್ ಹೆಲ್ತ್​ಕೇರ್ ಸಮಿಟ್ 2024’ ಕಾರ್ಯಕ್ರಮ ಆಯೋಜಿಸಿದ್ದವು. ಜನರು ಕಾಯಿಲೆಗಳಿಂದ ಮುಕ್ತರಾಗಿ, ಆರೋಗ್ಯವಂತ ಜೀವನದೊಂದಿಗೆ ಸುದೀರ್ಘವಾಗಿ ಬದುಕಲು ವೈದ್ಯಕೀಯ ಕ್ಷೇತ್ರದ ಪಾತ್ರವೇನು, ಜನರ ಜವಾಬ್ದಾರಿಗಳೇನು, ಜೀವನಶೈಲಿಯಲ್ಲಿ ಆಗಬೇಕಾದ ಬದಲಾವಣೆಗಳೇನು ಎಂಬಿತ್ಯಾದಿ ಅಂಶಗಳನ್ನು ಈ ಸಮಿಟ್​ನಲ್ಲಿ ಚರ್ಚಿಸಲಾಯಿತು.

ಜನರಿಗೆ ಬೇಕು ಆರೋಗ್ಯವಂತ ದೀರ್ಘಾಯಸ್ಸು; ವೈದ್ಯಕೀಯ ಕ್ಷೇತ್ರದಿಂದ ಸಿಗುವ ನೆರವೇನು? ದಕ್ಷಿಣ್ ಹೆಲ್ತ್​ಕೇರ್ ಸಮಿಟ್ ಮುಖ್ಯಾಂಶಗಳಿವು
ದಕ್ಷಿಣ್ ಹೆಲ್ತ್​ಕೇರ್ ಸಮಿಟ್​
Follow us
|

Updated on:Aug 23, 2024 | 4:06 PM

ನವದೆಹಲಿ, ಆಗಸ್ಟ್ 22: ಹೆಚ್ಚಿನ ಭಾರತೀಯರು ಪೂರ್ಣ ಬದುಕು ಹೊಂದುವ ಆಸೆ ಇಟ್ಟುಕೊಂಡಿದ್ದಾರೆ. ಆರೋಗ್ಯಂತ ದೀರ್ಘಾಯಸ್ಸು ಬಯಸುತ್ತಾರೆ ಎಂಬುದು ಇತ್ತೀಚಿನ ಗ್ಲೋಬಲ್ ಲಾಂಗೆವಿಟಿ ಸರ್ವೆಯಿಂದ ತಿಳಿದುಬಂದಿದೆ. ಆರೋಗ್ಯಯುತವಾಗಿ ಹೆಚ್ಚು ಕಾಲ ಬಯಸುವುದು ಮನುಷ್ಯನ ಸಹಜ ಆಸೆ ಕೂಡ. ಇವತ್ತಿನ ಮುಂದುವರಿದ ವೈದ್ಯಕೀಯ ತಂತ್ರಜ್ಞಾನವು ಜನರ ಆಯಸ್ಸನ್ನು ಕ್ರಮೇಣ ಹೆಚ್ಚಿಸುತ್ತಿರುವುದು ಹೌದು. ಮನುಷ್ಯನ ಆರೋಗ್ಯ ಬಯಕೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಟಿವಿ9 ನೆಟ್ವರ್ಕ್ ಮತ್ತು ಸೌತ್ ಫಸ್ಟ್ ಸಂಸ್ಥೆಗಳು ಆಗಸ್ಟ್ 3ರಂದು ದಕ್ಷಿಣ್ ಹೆಲ್ತ್​ಕೇರ್ ಸಮಿಟ್ 2024 ಶೃಂಗಸಭೆಯನ್ನು ಜಂಟಿಯಾಗಿ ಆಯೋಜಿಸಿದ್ದವು. ಹೈದರಾಬಾದ್​ನ ತಾಜ್ ಕೃಷ್ಣದಲ್ಲಿ ನಡೆದ ಈ ಕಾರ್ಯಕ್ರಮದ ಉದ್ಘಾಟನಾ ಭಾಷಣವನ್ನು ಅಪೋಲೋ ಆಸ್ಪತ್ರೆಯ ಜಂಟಿ ಎಂಡಿಯಾಗಿರುವ ಡಾ. ಸಂಗೀತಾ ರೆಡ್ಡಿ ಮಾಡಿದರು. ದೀರ್ಘಾಯಸ್ಸು ಹೊಂದಲು ವೈಜ್ಞಾನಿಕವಾಗಿ ಏನು ದಾರಿಗಳಿವೆ, ಅಧ್ಯಯನಗಳಿವೆ, ತಂತ್ರಜ್ಞಾನಗಳಿವೆ ಎಂಬುದನ್ನು ಚರ್ಚಿಸುವ ಉದ್ದೇಶದಿಂದ ಸಮಿಟ್ ಏರ್ಪಡಿಸಲಾಗಿತ್ತು. ಆ ವಿಶೇಷ ಸಭೆಯಲ್ಲಿ ನಡೆದ ಚಿಂತನ ಮಂಥನ, ವಿಚಾರ ಮಂಡನೆಗಳಲ್ಲಿ ಒಂದಷ್ಟು ಮುಖ್ಯಾಂಶಗಳು ಇಲ್ಲಿವೆ…

ಉತ್ತಮ ಜೀವನಶೈಲಿಯಿಂದ ಸುದೀರ್ಘ ಬದುಕಲು ಸಾಧ್ಯ

ದಕ್ಷಿಣ್ ಹೆಲ್ತ್​ಕೇರ್ ಸಮಿಟ್​ನ ಮೊದಲ ಚರ್ಚಿತ ವಿಚಾರ ‘ವೈಜ್ಞಾನಿಕವಾಗಿ ದೀರ್ಘಾಯಸ್ಸಿನ ರಹಸ್ಯಗಳು’. ಗುರುಗ್ರಾಮ್​ನ ಮೇದಾಂತ ಆಸ್ಪತ್ರೆಯ ಇನ್ಸ್​ಟಿಟ್ಯೂಟ್ ಆಫ್ ಲಿವರ್ ಟ್ರಾನ್ಸ್​ಪ್ಲಾಂಟೇಶನ್ ಅಂಡ್ ರೀಜನರೇಟಿವ್ ಮೆಡಿಸಿನ್ ಸಂಸ್ಥೆಯ ಛೇರ್ಮನ್ ಡಾ. ಅರವಿಂದರ್ ಸಿಂಗ್ ಸೋಯಿನ್, ಫೋರ್ಟಿಸ್ ಕ್ಯಾನ್ಸರ್ ಇನ್ಸ್​ಟಿಟ್ಯೂಟ್ಸ್​ನ ಪ್ರೋಗ್ರಾಮ್ ಹೆಡ್ ಆಗಿರುವ ಡಾ. ವೃತ್ತಿ ಲುಂಬ, ಲಂಡನ್​ನ ಹೂಕ್ ಆಸ್ಪತ್ರೆಯ ಮುಖ್ಯ ವೈದ್ಯ ಡಾ. ಉಮರ್ ಖಾದೀರ್, ನ್ಯೂರಾಲಜಿ ಮತ್ತು ಸ್ಲೀಪ್ ಸೆಂಟರ್​ನ ಸಂಸ್ಥಾಪಕ ಡಾ. ಮನವೀರ್ ಭಾಟಿಯಾ ಅವರು ಚರ್ಚೆಯಲ್ಲಿ ಭಾಗವಹಿಸಿದ್ದರು. ಹಲವು ಪ್ರಮುಖ ವೈದ್ಯರು ಈ ವೇಳೆ ಉಪಸ್ಥಿತರಿದ್ದರು.

‘ಹೃದಯಾಘಾತ, ಕಿಡ್ನಿ ತೊಂದರೆ ಮತ್ತಿತರ ರೋಗಗಳನ್ನು ನಿಯಂತ್ರಿಸಬಹುದು’ ಎಂದು ಡಾ. ಅರವಿಂದರ್ ಸಿಂಗ್ ಹೇಳಿದರು.

ಜೀವನ ಶೈಲಿ ಬಗ್ಗೆ ಮಾತನಾಡಿದ ಡಾ. ಉಮರ್ ಖಾದೀರ್, ‘ನಮ್ಮ ದೇಹಕ್ಕೆ ಏನನ್ನು ಸ್ವೀಕರಿಸುತ್ತೇವೆ ಎಂಬುದನ್ನು ಮೊದಲು ಚೆನ್ನಾಗಿ ಅರಿಯುವುದು ಮುಖ್ಯ. ಸ್ಯಾಚುರೇಟೆಡ್ ಫ್ಯಾಟ್ ಅಥವಾ ಕೊಬ್ಬನ್ನು ಕಡಿಮೆ ಮಾಡುವುದು, ಪ್ರೋಟೀನ್ ಪಡೆಯುವುದು, ಫೈಬರ್ ಪಡೆಯುವುದು ಇವು ತುಂಬಾ ಉಪಯುಕ್ತ. ಪೌಷ್ಟಿಕಾಂಶ ಮತ್ತು ಫಿಟ್ನೆಸ್ ಇಲ್ಲದೇ ಇದ್ದರೆ ಜನರು ಬೊಜ್ಜು ಬೆಳೆಸಿಕೊಳ್ಳುತ್ತಾರೆ’ ಎಂದು ಎಚ್ಚರಿಸಿದರು.

ಇದನ್ನೂ ಓದಿ: ಶವಾಸನ ಮಾಡುವುದರಿಂದ ಎಷ್ಟೆಲ್ಲಾ ಲಾಭಗಳಿವೆ ಗೊತ್ತಾ?

ಆರೋಗ್ಯಯುತ ದೇಹಕ್ಕೆ ನಿದ್ರೆ ಎಷ್ಟು ಮುಖ್ಯ ಎಂಬುದನ್ನು ಡಾ. ಮನವೀರ್ ಭಾಟಿಯಾ ತಿಳಿಸಿದರು. ‘ನಾವು ನಿದ್ರಿಸುವಾಗ ಕನಿಷ್ಠ 4-5 ಹಂತಗಳಲ್ಲಿ ನಿದ್ರಿಸುತ್ತೇವೆ. ನಮ್ಮ ಕಾರ್ಟಿಸಾಲ್ ಸಿಸ್ಟಂ ಪೂರ್ಣ ವಿರಮಿಸಿರುತ್ತದೆ. ನಿದ್ರೆ ಸರಿಯಾಗಿ ಆಗಲಿಲ್ಲವೆಂದರೆ ಈ ಕಾರ್ಟಿಸಾಲ್​ಗಳು ದೇಹಕ್ಕೆ ಹೆಚ್ಚು ಹೋಗಿಬಿಡುತ್ತವೆ. ಇದರಿಂದ ನಮ್ಮ ದೇಹದ ತೂಕ ಹೆಚ್ಚುತ್ತದೆ, ಕೋಪಿಷ್ಠರಾಗುತ್ತೇವೆ’ ಎಂದು ವಿವರಿಸಿದರು.

ಎಐ ತಂತ್ರಜ್ಞಾನದ ಪಾತ್ರ ಏನು?

ದೀರ್ಘಾಯಸ್ಸು ಕೊಡುವಂತಹ ವೈದ್ಯಕೀಯ ವ್ಯವಸ್ಥೆಯ ಆರ್ಟಿಫಿಶಿಯಲ್ ಟೆಕ್ನಾಲಜಿ ಇತ್ಯಾದಿ ತಂತ್ರಜ್ಞಾನಗಳ ಪಾತ್ರ ಏನು ಎಂಬುದರ ಬಗ್ಗೆ ಚಿಂತನ ಮಂಥನ ನಡೆಯಿತು. ಸ್ಟ್ರಾಂಡ್ ಲೈಫ್ ಸೈನ್ಸಸ್​​ನ ಸಂಸ್ಥಾಪಕ ಡಾ. ವಿಜಯ್ ಚಂದ್ರು, ಡಾ. ಸಯದ್ ಎಂ ಘೌಸ್ ಮೊದಲಾದವರು ಮಾತನಾಡಿದರು. ಜನರೇಟಿವ್ ಎಐ ಮೂಡಿಸಿರುವ ಕುತೂಹಲ, ಅದು ವೈದ್ಯಕೀಯ ವ್ಯವಸ್ಥೆಯಲ್ಲಿ ಹೊಂದಿರುವ ಪಾತ್ರ, ರೋಗಗಳ ತಪಾಸಣೆ, ಚಿಕಿತ್ಸೆಯಲ್ಲಿ ಎಐನ ಪಾತ್ರ ಎಂಬಿತ್ಯಾದಿ ವಿಚಾರಗಳ ಚರ್ಚೆಯಾಯಿತು.

‘ಈ ಮೊದಲು ಔಷಧ ಸಂಶೋಧನೆ ಮ್ಯಾನುಯಲ್ ಆಗಿ ನಡೆಯುತ್ತಿತ್ತು. ಈಗ ಎಐ ಅಲ್ಗಾರಿದಂಗಳು ಸಹಾಯವಾಗಿವೆ. ಹೀಗಾಗಿ, ಔಷಧವನ್ನು ಕಂಡುಹಿಡಿಯುವ ಸಮಯ ಬಹಳ ಕಡಿಮೆ ಆಗಿದೆ. ತಪಾಸಣೆ ಕಾರ್ಯದಲ್ಲಿ ಇಮೇಜಿಂಗ್ ಮತ್ತು ಪ್ಯಾಥಾಲಜಿಗೂ ಎಐ ಅಲ್ಗಾರಿದಂಗಳು ಬಹಳ ಉಪಯುಕ್ತವಾಗುತ್ತವೆ. ಈಗಿನ ಬಹುತೇಕ ಸರ್ಜರಿಗಳಲ್ಲಿ ರೋಬೋಟ್ ನೆರವು ಪಡೆಯಲಾಗುತ್ತಿದೆ. ಮನುಷ್ಯರ ಕೈಗಳು ಹೋಗಲು ಆಗದೇ ಇರೋ ಜಾಗಕ್ಕೆ ಈ ರೋಬೋಟಿಕ್ ಉಪಕರಣಗಳು ಹೋಗಬಲ್ಲುವು. ಹೀಗಾಗಿ ನಿಖರವಾಗಿ ಸರ್ಜರಿ ನಡೆಸಬಹುದು’ ಎಂದು ಡಾ. ಸೋಯಿನ್ ವಿವರಿಸಿದರು.

ಇದನ್ನೂ ಓದಿ: ದಿನಕ್ಕೆ ಒಂದು ಹಿಡಿ ಗೋಡಂಬಿ ತಿಂದರೆ ಸಾಕು; ಪ್ರಯೋಜನ ಸಾಕಷ್ಟಿವೆ

ಈಗಿರುವ ಮಾದರಿಯ ವ್ಯಾಕ್ಸಿನ್ ತಯಾರಿಕೆ ಮತ್ತು ಸಂಶೋಧನೆಗಳು ಎಐನಿಂದ ಬಹಳ ಉತ್ತಮಗೊಳ್ಳುತ್ತವೆ. ಪ್ರಯೋಗಕ್ಕೆ ಆಗುವ ಕಾಲವೆಚ್ಚ ಕಡಿಮೆ ಆಗುತ್ತದೆ. ತಪ್ಪುಗಳು ಕಡಿಮೆ ಆಗುತ್ತವೆ ಎಂದು ಬಿಲ್ ಮತ್ತು ಮೆಲಿಂದಾ ಗೇಟ್ಸ್ ಫೌಂಡೇಶನ್​ನ ಎಫ್​ಆರ್​ಎಸ್ ಆಗಿರುವ ಡಾ. ಗಗನದೀಪ್ ಕಾಂಗ್ ಅವರು ಹೇಳಿದರು. ದಕ್ಷಿಣ ಕೊರಿಯಾದಲ್ಲಿ ಲಸಿಕೆ ತಯಾರಿಕೆಯಲ್ಲಿ ಎಐ ನೆರವಾಗುತ್ತಿರುವ ನಿದರ್ಶನವನ್ನು ಅವರು ಉಲ್ಲೇಖಿಸಿದರು.

ಬೊಜ್ಜು, ಬಂಜೆತನ, ನಿರ್ವೀರ್ಯತೆ

ದಕ್ಷಿಣ್ ಹೆಲ್ತ್​ಕೇರ್ ಸಮಿಟ್​ನಲ್ಲಿ ಸಂವಾದ ನಡೆಸಲಾದ ಮತ್ತೊಂದು ವಿಷಯವೆಂದರೆ ಬೊಜ್ಜು, ನಪುಂಸಕತೆ, ಜೀವನಶೈಲಿ ಕಾಯಿಲೆಗಳ ನಿರ್ವಹಣೆ ಕುರಿತಾದುದು. ಪುರುಷರಾಗಲೀ, ಮಹಿಳೆಯರಾಗಲೀ ಬೊಜ್ಜು ಹೊಂದಿರುವವರಿಗೆ ಬಂಜೆತನ, ನಿರ್ವೀರ್ಯತೆ ಸಮಸ್ಯೆ ಎದುರಾಗಬಹುದು ಎಂದು ಡಾ. ಅನುರಾಧ ಕತ್ರಗದ್ದ ಅಭಿಪ್ರಾಯಪಟ್ಟರು. ‘ಪುರುಷರಲ್ಲಿ ಇದು ವೀರ್ಯದ ಸಂಖ್ಯೆ ಮತ್ತು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಮಹಿಳೆಯರಿಗೆ ಗರ್ಭಧಾರಣೆ ಸಂಬಂಧ ಸಮಸ್ಯೆಗಳಾಗಬಹುದು. ಮಹಿಳೆ 35 ವರ್ಷದೊಳಗಿನ ವಯಸ್ಸಿನವಳಾಗಿದ್ದು ಒಂದು ವರ್ಷವಾದರೂ ಗರ್ಭಧರಿಸಲು ಆಗುತ್ತಿಲ್ಲ ಎಂದರೆ ಆಕೆಗೆ ಇನ್​ಫರ್ಟಿಲಿಟಿ ಸಮಸ್ಯೆ ಇರಬಹುದು. 35 ವರ್ಷಕ್ಕೂ ಮೇಲ್ಪಟ್ಟ ವಯಸ್ಸಿನ ಮಹಿಳೆಯಾದರೆ ಆರು ತಿಂಗಳಲ್ಲಿ ಗರ್ಭವತಿ ಆಗಲಿಲ್ಲವೆಂದರೆ ತಪಾಸಣೆ ನಡೆಸಬೇಕು. 40 ವರ್ಷ ಮೇಲ್ಪಟ್ಟ ವಯಸ್ಸಿನ ಮಹಿಳೆಯರು 4 ತಿಂಗಳ ಬಳಿಕ ತಪಾಸಣೆ ಹೊಂದಬೇಕು,’ ಎಂದು ಡಾ. ಅನುರಾಧ ಸಲಹೆ ನೀಡಿದರು.

ಸರಿಯಾದುದನ್ನು ತಿನ್ನಿರಿ, ಜಂಕ್ ಫೂಡ್ ದೂರಗೊಳಿಸಿ

ಬೊಜ್ಜಿನ ಸಮಸ್ಯೆಗೆ ಪ್ರಮುಖ ಕಾರಣ ಜಂಕ್ ಫೂಡ್. ಅತಿಯಾದ ಸಕ್ಕರೆ, ರೀಫೈನ್ಡ್ ಎಣ್ಣೆ ಮತ್ತು ಪ್ರೋಟೀನ್ ಸೇವನೆಯನ್ನು ನಿಲ್ಲಿಸಿ. ನಾವು ಹೆಚ್ಚು ಪ್ರೋಟೀನ್ ಸೇವಿಸಿದರೆ ಬೇರೆ ಅಂಶಗಳು ಕಡಿಮೆ ಆಗಿಬಿಡುತ್ತವೆ. ಪ್ರೋಟೀನ್ ಹೆಚ್ಚು ಪಡೆದಲ್ಲಿ ಅದಕ್ಕೆ ತಕ್ಕಂತೆ ವ್ಯಾಯಾಮ, ನಿದ್ರೆ ಎಲ್ಲಾ ಅವಶ್ಯ ಎಂದು ಡಾ. ಶಶಿಕಾಂತ್ ಅಯ್ಯಂಗ್ ಅಭಿಪ್ರಾಯಪಟ್ಟರು.

ಇದನ್ನೂ ಓದಿ: ಮಿತಿ ಮೀರಿದ ಮಿಲನ ಕ್ರಿಯೆಯಿಂದ ಆರೋಗ್ಯಕ್ಕೆ ಕುತ್ತು ಖಂಡಿತ

ಡಾ. ಎಸ್ತರ್ ಸತ್ಯರಾಜ್, ಡಾ. ಕೆ.ಡಿ. ಮೋದಿ ಮೊದಲಾದ ವೈದ್ಯಕೀಯ ತಜ್ಞರು ಈ ವಿಚಾರದ ಬಗ್ಗೆ ವಿಚಾರ ಮಂಡನೆ ಮಾಡಿದರು.

ದಕ್ಷಿಣ್ ಹೆಲ್ತ್​ಕೇರ್ ಸಮಿಟ್ 2024 ಕಾರ್ಯಕ್ರಮದ ವಿಡಿಯೋವನ್ನು ವಿಶ್ವದ ಮೊದಲ ನ್ಯೂಸ್ ಒಟಿಟಿ ಪ್ಲಾಟ್​ಫಾರ್ಮ್ ಆದ ನ್ಯೂಸ್9 ಪ್ಲಸ್​ನಲ್ಲಿ ವೀಕ್ಷಿಸಬಹುದು. ಅದರ ಲಿಂಕ್ ಇಲ್ಲಿದೆ: www.news9plus.com/player/shortvideo/dakshin-healthcare-summit-2024

ಇನ್ನಷ್ಟು ಆರೋಗ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:08 am, Fri, 23 August 24