ಒತ್ತಡ, ಸ್ಕ್ರೀನ್‌ ಸಮಯದ ಹೆಚ್ಚಳದಿಂದ ಉಂಟಾಗುತ್ತಿದೆ ನಿದ್ರೆ ಸಮಸ್ಯೆ: ನಗರದ ಜನರಿಗೆ ವೈದ್ಯರ ಎಚ್ಚರಿಕೆ

ಮನುಷ್ಯ ನಿದ್ರೆ ಸರಿಯಾಗಿ ಮಾಡದಿದ್ದರೆ ಅವನ ಆರೋಗ್ಯ ಹದಗೆಡುತ್ತದೆ. ಆಹಾರ ಪದ್ಧತಿ ಎಷ್ಟು ಮುಖ್ಯವಾಗುತ್ತದೆಯೋ ನಿದ್ರೆಯೂ ಕೂಡ ಅಷ್ಟೇ ಮಹತ್ವದ್ದಾಗಿದೆ. ಆದರೆ ಈ ಬಗ್ಗೆ ಯಾರೂ ಕೂಡ ಅಷ್ಟಾಗಿ ಯೋಚಿಸುವುದಿಲ್ಲ. ಕೆಲಸದ ಒತ್ತಡ, ಅತಿಯಾಗಿ ಮೊಬೈಲ್, ಟಿವಿ, ಲ್ಯಾಪ್ ಟಾಪ್ ನೋಡುವುದು ಹೀಗೆ ನಾನಾ ರೀತಿಯ ಕಾರಣಗಳಿಂದ ನಗರಗಳಲ್ಲಿ ವಾಸ ಮಾಡುವವರು ನಿದ್ರೆ ಸರಿಯಾಗಿ ಮಾಡುವುದಿಲ್ಲ. ಆದರೆ ಈ ರೀತಿ ಮಾಡಬಾರದು. ಅಷ್ಟು ಮಾತ್ರವಲ್ಲ, ಇದರಿಂದ ದೇಹದಲ್ಲಿ ಎಷ್ಟೆಲ್ಲಾ ಸಮಸ್ಯೆಗಳಾಗುತ್ತವೆ, ಇದನ್ನು ತಡೆಯಲು ಏನು ಮಾಡಬಹುದು ಎಂಬುದರ ಬಗ್ಗೆ ತಿಳಿಯಬೇಕಾಗುತ್ತದೆ.

ಒತ್ತಡ, ಸ್ಕ್ರೀನ್‌ ಸಮಯದ ಹೆಚ್ಚಳದಿಂದ ಉಂಟಾಗುತ್ತಿದೆ ನಿದ್ರೆ ಸಮಸ್ಯೆ: ನಗರದ ಜನರಿಗೆ ವೈದ್ಯರ ಎಚ್ಚರಿಕೆ
Sleep Deprivation in Cities: Causes, Risks, and Solutions
Image Credit source: Getty Images

Updated on: Mar 13, 2026 | 6:45 PM

ನಿದ್ರೆ (Sleep) ದೇಹಕ್ಕೆ ಎಷ್ಟು ಮುಖ್ಯ ಎಂಬುದು ತಿಳಿದಿರುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಎಲ್ಲರಲ್ಲಿಯೂ ಹೆಚ್ಚುತ್ತಿರುವ ಒತ್ತಡ, ಅತಿಯಾದ ಸ್ಕ್ರೀನ್‌ ಬಳಕೆ ಮತ್ತು ಜೀವನಶೈಲಿಯಲ್ಲಿ ಮಾಡಿಕೊಂಡಿರುವ ಬದಲಾವಣೆಗಳಿಂದ ನಿದ್ರೆ ಹಾಳಾಗುತ್ತಿದೆ. ಅಷ್ಟೇಅಲ್ಲ, ಬೆಂಗಳೂರು ಸೇರಿದಂತೆ ಮಹಾನಗರಗಳಲ್ಲಿ ದೈನಂದಿನ ಅಭ್ಯಾಸಗಳಲ್ಲಿ ಮಾಡಿಕೊಂಡ ಬದಲಾವಣೆ, ರಾತ್ರಿ ಹೊತ್ತು ಕೆಲಸ ಮಾಡುವುದು ಮತ್ತು ಡಿಜಿಟಲ್ ಅಭ್ಯಾಸಗಳಿಂದ ಎಲ್ಲಾ ವಯೋಮಾನದವರಲ್ಲಿಯೂ ನಿದ್ರೆ ಸಂಬಂಧಿತ ಸಮಸ್ಯೆಗಳ ಹೆಚ್ಚಳಕ್ಕೆ ಕಾರಣವಾಗುತ್ತಿದೆ. ಅದರಲ್ಲಿಯೂ ಈ ರೀತಿಯ ಸಮಸ್ಯೆ ನಗರ ನಿವಾಸಿಗಳಲ್ಲಿಯೇ ಹೆಚ್ಚಾಗಿ ಕಂಡುಬರುತ್ತಿದೆ. ಅದಕ್ಕಾಗಿಯೇ ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಲು ಮಾರ್ಚ್ 13ರಂದು ವಿಶ್ವ ನಿದ್ರೆ ದಿನವನ್ನು ಕೂಡ ಆಚರಣೆ ಮಾಡಲಾಗುತ್ತದೆ.

ರಾತ್ರಿ ವೇಳೆ ದೀರ್ಘಕಾಲ ಸ್ಕ್ರೀನ್‌ ಎದುರು ಸಮಯ ಕಳೆಯುವುದರಿಂದ ನಿದ್ರೆ ಸರಿಯಾಗಿ ಆಗುವುದಿಲ್ಲ ಎಂದು ನಾರಾಯಣ ಹೆಲ್ತ್‌ನ ಸ್ಲೀಪ್ ಮೆಡಿಸಿನ್ ವಿಭಾಗದ ಕ್ಲಿನಿಕಲ್ ಲೀಡ್ ರವಿಚಂದ್ರ ಎಂಆರ್‌ಕೆ ಹೇಳಿದ್ದಾರೆ. ಟೆಲಿವಿಷನ್‌, ಸ್ಮಾರ್ಟ್‌ಫೋನ್‌ ಮತ್ತು ಲ್ಯಾಪ್‌ಟಾಪ್‌ಗಳಿಂದ ಹೊರಹೊಮ್ಮುವ ನೀಲಿ ಬೆಳಕು ನಿದ್ರೆ ನಿಯಂತ್ರಿಸುವ ಮೆಲಟೊನಿನ್ ಹಾರ್ಮೋನ್‌ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಇದರಿಂದ ದೇಹದ ಸರ್ಕೇಡಿಯನ್ ರಿದಮ್ ಅಸ್ತವ್ಯಸ್ತವಾಗಿ, ನಿದ್ರೆ ಬರುವ ಸಮಯ ತಡವಾಗುತ್ತದೆ. ಜೊತೆಗೆ ಒಟಿಟಿ ವೇದಿಕೆಗಳಲ್ಲಿ ನಿರಂತರವಾಗಿ ಧಾರಾವಾಹಿ ಅಥವಾ ಸಿನಿಮಾಗಳನ್ನು ವೀಕ್ಷಿಸುವುದು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ನಿರಂತರ ಸ್ಕ್ರೋಲಿಂಗ್ ಮಾಡುವುದರಿಂದ ಮೆದುಳು ವಿಶ್ರಾಂತ ಸ್ಥಿತಿಗೆ ಹೋಗುವುದಿಲ್ಲ. ಇದರಿಂದ ಸುಲಭವಾಗಿ ನಿದ್ರೆ ಬರುವುದಕ್ಕೆ ಅಡಚಣೆ ಉಂಟಾಗುತ್ತದೆ.

ಇದನ್ನೂ ಓದಿ: ರಾತ್ರಿ ಬ್ರಾ ಧರಿಸಿ ಮಲಗಿದ್ರೆ ಬ್ರೆಸ್ಟ್ ಕ್ಯಾನ್ಸರ್ ಬರುತ್ತಾ? ವೈದ್ಯರು ಏನ್ ಹೇಳ್ತಾರೆ?

ನಿದ್ರೆ ಕೊರತೆಯಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳು:

ವೈದ್ಯರ ಪ್ರಕಾರ, ತಲೆನೋವು, ದೌರ್ಬಲ್ಯ ಮತ್ತು ಯಾವುದೇ ಕೆಲಸದ ಬಗ್ಗೆ ಗಮನ ಕೇಂದ್ರೀಕರಿಸಲು ಆಗದಿರುವುದು ಸೇರಿದಂತೆ ನಾನಾ ರೀತಿಯ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತಿದ್ದು, ಈ ಲಕ್ಷಣಗಳು ಹೆಚ್ಚಾಗಿ ನಿದ್ರೆ ಸರಿಯಾಗಿ ಆಗದೆಯೇ ಅದರ ಕೊರತೆ ಉಂಟಾಗಿರುವುದರ ಸೂಚನೆಯಾಗಿರುತ್ತದೆ. ವಾಸವಿ ಆಸ್ಪತ್ರೆಯ ಒಳರೋಗ ವಿಭಾಗದ ಸಲಹೆಗಾರ ಡಾ. ಶ್ರೀಧರ್ ಶ್ರೀನಿವಾಸನ್ ಜಿ ಹೇಳುವ ಪ್ರಕಾರ, ಅನಿಯಮಿತ ನಿದ್ರೆ ಸಮಯ, ರಾತ್ರಿ ಹೊತ್ತು ಅತಿಯಾಗಿ ಮೊಬೈಲ್ ಬಳಕೆ ಮಾಡುವುದು ಮತ್ತು ತಡವಾಗಿ ಊಟ ಮಾಡುವ ಅಭ್ಯಾಸಗಳು ಈಗ ಎಲ್ಲಾ ವಯೋಮಾನದವರಲ್ಲಿಯೂ ಸಾಮಾನ್ಯವಾಗಿವೆ. ವಿಶೇಷವಾಗಿ ಯುವಜನರಲ್ಲಿ ಅತಿಯಾದ ಸ್ಮಾರ್ಟ್‌ಫೋನ್ ಬಳಕೆಯಿಂದ ಉಂಟಾಗುವ ನಿದ್ರೆ ಕೊರತೆ ಮೈಗ್ರೇನ್ ಮತ್ತು ಹೈಪರ್‌ಟೆನ್ಶನ್‌ ಮೊದಲಾದ ಕಾಯಿಲೆಗಳಿಗೆ ಕಾರಣವಾಗಬಹುದು. ಮಾತ್ರವಲ್ಲ, ಕೆಲಸದ ಒತ್ತಡ ಮತ್ತು ಸರಿಯಾದ ನಿದ್ರೆ ಅಭ್ಯಾಸಗಳ ಕೊರತೆ 25 ರಿಂದ 40 ವರ್ಷದ ವಯಸ್ಸಿನ ಉದ್ಯೋಗಿಗಳಲ್ಲಿ ನಿದ್ರೆ ಸರಿಯಾಗಿ ಮಾಡಲು ಸಾಧ್ಯವಾಗದಂತಹ ಸಮಸ್ಯೆಗೆ ಪ್ರಮುಖ ಕಾರಣವಾಗುತ್ತಿದೆ. ತಡ ರಾತ್ರಿ ಊಟ ಮತ್ತು ಅಸಮರ್ಪಕ ನಿದ್ರೆ ಪದ್ಧತಿ ಗ್ಯಾಸ್ಟ್ರೋಈಸೊಫೆಜಿಯಲ್ ರಿಫ್ಲಕ್ಸ್ ರೋಗ (GERD)ಕ್ಕೂ ಕಾರಣವಾಗಿದೆ.

ವೈದ್ಯರು ಎಚ್ಚರಿಸುವಂತೆ, ದೀರ್ಘಕಾಲವರೆಗೆ ನಿದ್ರೆ ಸರಿಯಾಗಿ ಮಾಡದಿದ್ದರೆ ಒಬೆಸಿಟಿ, ಮಧುಮೇಹ, ರಕ್ತದೊತ್ತಡ ಮತ್ತು ಹೃದಯ ಸಂಬಂಧಿ ಕಾಯಿಲೆಗಳ ಅಪಾಯ ಹೆಚ್ಚಾಗುತ್ತದೆ. ಜೊತೆಗೆ ಸ್ಮರಣೆ, ಏಕಾಗ್ರತೆ ಮತ್ತು ಕೆಲಸದ ಉತ್ಪಾದಕತೆಯ ಮೇಲೂ ದುಷ್ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರತಿದಿನ ಒಂದೇ ಸಮಯಕ್ಕೆ ಮಲಗಿ ಮತ್ತು ಎದ್ದೇಳುವ ಅಭ್ಯಾಸ ಮಾಡಿಕೊಳ್ಳಿ, ಮಲಗುವ ಮೊದಲು ಸ್ಕ್ರೀನ್ ಬಳಕೆಯನ್ನು ಕಡಿಮೆ ಮಾಡಿ ಜೊತೆಗೆ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವ ಮೂಲಕ ನಿದ್ರೆ ಚೆನ್ನಾಗಿ ಮಾಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us